ಬೆಂಗಳೂರು
ನಮ್ಮ ನಾಡು ಕರ್ನಾಟಕ ಎಂದು ಹೆಸರಾಗಿ ೫೦ ವರ್ಷ ಮುಗಿಯುವ ಹೊತ್ತಿನಲ್ಲಿ,ನಮ್ಮ ನಾಡು ಕಟ್ಟಿದ ಹಿರಿಯರನ್ನು ಸ್ಮರಿಸುತ್ತಾ, ಸಂಭ್ರಮಿಸುವ ಕನ್ನಡ ನಾಡೋತ್ಸವ ಪ್ರಯುಕ್ತ, “ನಮ್ಮ ನಾಡು ನಮ್ಮ ಆಳ್ವಿಕೆ” ವೇದಿಕೆ ಮತ್ತು ಕನ್ನಡಪರ ಸಮಾನ ಮನಸ್ಕರೆಲ್ಲಾ ಸೇರಿ ನಡೆಸುತ್ತಿರುವ ಬೈಕ್ ರ‍್ಯಾಲಿ, ಇದೆ ನವೆಂಬರ್ ೧ ಬೆಳಿಗ್ಗೆ ೯:೩೦ ರಿಂದ ಕಾರ್ಪೋರೇಶನ್ ಸರ್ಕಲ್ ಹತ್ತಿರ ಇರುವ ಬನಪ್ಪ ಪಾರ್ಕ್ ನಿಂದ ಶುರುವಾಗಲಿದೆ.
ಬೆಂಗಳೂರಿನ ಪ್ರಮುಖ ಸರ್ಕಲ್ ಗಳಲ್ಲಿ ಹಾಯ್ದು ಮಾರತಹಳ್ಳಿಯ ಮೂಲಕ ಫೀನಿಕ್ಸ್ ಮಾಲ್ ಮುಂದೆ ಬಾವುಟ ಹಾರಿಸುವ ಮೂಲಕ ಕೊನೆಗೊಳ್ಳಲಿದೆ.
ಈ ಸಂಭ್ರಮೋತ್ಸವದಲ್ಲಿ ಪಾಲ್ಗೊಳ್ಳಲು ಈಗಾಗಲೇ ನೂರಾರು ಜನ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ, ಎಲ್ಲರೂ ನಾಡಿನ ಉಡುಗೆತೊಡುಗೆಯನ್ನು ತೊಟ್ಟು ಹೆಲ್ಮೆಟ್ ಧರಿಸಿ ಸಂಚಾರಿ ನಿಯಮಗಳನ್ನ ಪಾಲಿಸುತ್ತ ಕನ್ನಡ ಬಾವುಟ ಹಾರಿಸುತ್ತಾ ಬೈಕ್ ನಡೆಸುವ ಪರಿಯೇ ನೋಡಲು ಹಬ್ಬ.
೨೨ ಭಾಗಗಳಾಗಿದ್ದ ಕನ್ನಡಿಗರ ನಾಡು ಅಖಂಡ ಕರ್ನಾಟಕವೆಂದು ರೂಪಗೊಂಡದ್ದು ೧೯೫೬ ರಲ್ಲಿ, ಸ್ವಾತಂತ್ರ್ಯ ಪೂರ್ವದಲ್ಲಿಯೇ ಹೊತ್ತಿಕೊಂಡ ಕರ್ನಾಟಕ ಏಕೀಕರಣ ಚಳುವಳಿ ಸ್ವಾತಂತ್ರ್ಯದ ನಂತರ ನಾಡು ಒಂದಾಗುವುದರೊಂದಿಗೆ ಪೂರ್ಣವಾಗಿ ಬೆಳಗಿತು, ನಮ್ಮ ಹಿರಿಯರು ಕಟ್ಟಿದ ಈ ಭವ್ಯ ನಾಡಿನಲ್ಲಿ ,ಈ ಶ್ರೀಮಂತ ಪರಂಪರೆಯಲ್ಲಿ ಹುಟ್ಟಿದ ನಾವೇ ಧನ್ಯರು, ನವೆಂಬರ್ ೧ ಬಂತೆಂದರೆ ನಮಗೆಲ್ಲ ಅದೇನು ಭಾವೋದ್ವೇಗದ ಸಡಗರ ಈ ಸಡಗರದಲ್ಲಿ ಮತ್ತಷ್ಟು ಬೆರೆಯಬೇಕೆಂದರೆ ಬೆಂಗಳೂರಿನಲ್ಲಿರುವ ಈ ಬೈಕ್ ರ‍್ಯಾಲಿಗೆ ಕನ್ನಡ ಮನಸ್ಸುಗಳೆಲ್ಲಾ ಜೊತೆಯಾಗಿ, ಒಗ್ಗಟ್ಟಿನಿಂದ ಬೆಂಬಲಿಸಿ .
ಬೆಂಗಳೂರಿನೆಲ್ಲೆಡೆ ಹಾರಲಿ ಕನ್ನಡ ಬಾವುಟ,ಮೊಳಗಲಿ ಕನ್ನಡದ ಕಹಳೆ.