ನಿಜಾಚರಣೆ: ಕುಷ್ಟಗಿಯಲ್ಲಿ ಲಿಂಗಾಯತ ಧರ್ಮದ ವಚನ ಮಾಂಗಲ್ಯ

ಯಲಬುರ್ಗಾ:

ತಾಲೂಕಿನ ಮರಕಟ್ಟ ಗ್ರಾಮದ ರಾಚಮ್ಮ ಹಾಗೂ ಷಣ್ಮುಖಪ್ಪ ಬಳ್ಳಾರಿ ಶರಣ ದಂಪತಿಗಳ ಸುಪುತ್ರ ‘ಅಮರೇಶ’ ಜೊತೆ ‘ಶರಣಮ್ಮ’ ಅವರ ಕಲ್ಯಾಣ ಮಹೋತ್ಸವ ಲಿಂಗಾಯತ ಧರ್ಮದ ನಿಜಾಚರಣೆಯಂತೆ ಜುಲೈ 9ರಂದು ಕುಷ್ಟಗಿಯ ಪಿಸಿಎಚ್ ಪ್ಯಾಲೇಸ್‌ನಲ್ಲಿ  ನಡೆಯಿತು.

ಶರಣಮ್ಮ ಅವರು ಮನ್ನೆರಾಳ ಗ್ರಾಮದ ಸಂಗಮ್ಮ ಹಾಗೂ ಬೈಲಪ್ಪ ವಂದಾಲಿ ಶರಣ ದಂಪತಿಗಳ ಸುಪುತ್ರಿಯಾಗಿದ್ದಾರೆ.

ಕಲ್ಯಾಣ ಮಹೋತ್ಸವದಲ್ಲಿ ಇಲಕಲ್ಲ ವಿಜಯಮಹಾಂತೇಶ್ವರ ಮಠದ ಪೂಜ್ಯ ಡಾ. ಗುರುಮಹಾಂತ ಅಪ್ಪಗಳು ಸಾನಿಧ್ಯ ಮತ್ತು ಬದಾಮಿ-ಬೇಲೂರು ಬಸವೇಶ್ವರ ಮಠದ ಡಾ. ಪ್ರಭುಮಹಾಂತ ಸ್ವಾಮಿಗಳು  ಸಮ್ಮುಖ ವಹಿಸಿದ್ದರು.

ಗಂಗಮ್ಮತಾಯಿ ವೀರಭದ್ರಪ್ಪ ಕುರಕುಂದ, ಅಶೋಕ ಬರಗುಂಡಿ, ತಿಮ್ಮನಗೌಡ ಚಿಲಕರಾಗಿ, ಮಾಜಿ ಶಾಸಕ ಕೆ. ಶರಣಪ್ಪ, ಶರಣಪ್ಪ ಸಾಹುಕಾರ, ಬಸವರಾಜಪ್ಪ ಇಂಗಳದಾಳ, ಗವೀಶ ಶಶಿಮಠ, ಅಮರೇಶಪ್ಪ ಬಳ್ಳಾರಿ ಈ ಅನುಭಾವಿಗಳ ಮಾರ್ಗದರ್ಶನದಲ್ಲಿ ಬಸವಾದಿ ಶರಣರ ವಚನ ಸಾಹಿತ್ಯದಂತೆ ನವದಂಪತಿಗಳು ಇಷ್ಟಲಿಂಗ ದೀಕ್ಷೆ ಪಡೆದು, ಲಿಂಗಾಂಗ ಸಾಮರಸ್ಯದಿಂದ ದಂಪತಿಗಳಾಗಿ ನವ ಜೀವನಕ್ಕೆ ಪಾದಾರ್ಪಣೆ ಮಾಡಿದರು.

ಅನುಭಾವಿ ತಿಮ್ಮನಗೌಡ ಚಿಲಕರಾಗಿ ಅವರು ದೇಶದ ಸಂವಿಧಾನ ಪೀಠಿಕೆಯನ್ನು ಭೋದಿಸಿದರು, ನವದಂಪತಿ ಸೇರಿದಂತೆ ಎಲ್ಲರೂ ಪ್ರತಿಜ್ಞೆ ಸ್ವೀಕರಿಸಿದರು. ಆರಂಭದಲ್ಲಿ ಬಸವಮೂರ್ತಿಗೆ ನವದಂಪತಿ ಪುಷ್ಪಾರ್ಪಣೆ ಮಾಡಿದರು.

ಪೂಜ್ಯ ಗುರುಮಹಾಂತಪ್ಪ ಸ್ವಾಮೀಜಿ, ನವದಂಪತಿಗಳ ಬದುಕಿನ ಆಧಾರಿತವಾಗಿ ಬಸವಾದಿ ಶರಣರ ವಚನದ ತಿರುಳನ್ನು ತಿಳಿಸಿ, ಗುರು ಬಸವಣ್ಣನ ಶ್ರೀರಕ್ಷೆಯೊಂದಿಗೆ ಮೌಲ್ಯಯುತವಾದ ಜೀವನ ಸಾಗಿಸಿ ಎಂದು ಆಶೀರ್ವದಿಸುವುದರೊಂದಿಗೆ, ಜೇಡರ ದಾಸಿಮಯ್ಯನವರ ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರೆದಂತೆ ಕಾಣಾ ರಾಮನಾಥಾ ಎಂಬ ವಚನ ಹೇಳಿದರು. ಈ ವಚನದಂತೆ ಬಾಳಿ ಬದುಕಲು ತಿಳಿಸಿದರು.

ಪ್ರಭುಮಹಾಂತ ಸ್ವಾಮೀಜಿ ಮಾತನಾಡುತ್ತಾ, ಶರಣ ಧರ್ಮವು ಸತಿ-ಪತಿ ಧರ್ಮವೇ ಆಗಿದೆ. ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಒಂದಾದ ಸತಿಪತಿಗಳ ಆತ್ಮಸಾಂಗತ್ಯದ ಭಕ್ತಿ ಮಂಗಳಮಯವಾದ ಶಿವನಿಗೆ ಹಿತ ಎನಿಸುವುದು.

ಹಿತಕರವಾದ ದಾಂಪತ್ಯವು ಐಹಿಕ ವಸ್ತುಗಳ ಕೊರತೆಯನ್ನು ಕೂಡ ನಿವಾರಿಸುವಂಥ ಅರಿವನ್ನು ಮೂಡಿಸುತ್ತದೆ. ಏನೇ ಎದುರಾದರೂ ತೃಪ್ತಭಾವದಿಂದ ಸ್ವೀಕರಿಸುವ ಸಂಯಮವನ್ನು ಸೃಷ್ಟಿಸುತ್ತದೆ.

ಸತಿಯ ಇಚ್ಛೆಯನ್ನರಿಯದೆ ಬದುಕುವ ಪತಿಯ ಭಕ್ತಿ ಅಮೃತದಲ್ಲಿ ವಿಷ ಕೂಡಿಸಿದಂತೆ ಎಂದು ಶರಣರು ಎಚ್ಚರಿಸಿದ್ದಾರೆ. ಅದಕ್ಕಾಗಿ ನಾವು ಈ ಕೂಡ ಬಸವಾದಿ ಶಿವಶರಣರ ವಾಣಿಯಂತೆ ಬಾಳಿ ಬದುಕಬೇಕು ಎಂದರು.

ಅನ್ನಪೂರ್ಣ ಹಾಗೂ ಅಶೋಕ ಬರಗುಂಡಿ, ಶಿಲ್ಪ ಹಾಗೂ ಶರಣಪ್ಪ ಬಳ್ಳಾರಿ, ನಿರ್ಮಲ ಹಾಗೂ ಹನುಮಂತಪ್ಪ ಹುಣಸಿಯಾಳ, ನಾಗರತ್ನ ಹಾಗೂ ಚನ್ನಬಸಪ್ಪ ಬಳ್ಳಾರಿ ಈ ಶರಣ ದಂಪತಿಗಳು ವಚನಮೂರ್ತಿಗಳಾಗಿ ಕಲ್ಯಾಣ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಷಟಸ್ಥಲ ಧ್ವಜಾರೋಹಣವನ್ನು ನೀಲಕಂಠಪ್ಪ ಬಳ್ಳಾರಿ ಅವರು ನೆರವೇರಿಸಿದರು. ಕಲ್ಯಾಣ ಮಹೋತ್ಸವದಲ್ಲಿ ಇತರೆ 11 ಮಂದಿ ಇಷ್ಟಲಿಂಗ ದೀಕ್ಷೆ ಪಡೆದುಕೊಂಡರು.

ನವದಂಪತಿಗಳ ಶುಭ ಹಾರೈಕೆಗೆ ಸುತ್ತ ಹತ್ತಾರು ಹಳ್ಳಿಗಳಿಂದ ಬಂಧು ಬಾಂಧವರೊಡಗೂಡಿ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡು, ಅಕ್ಕಿಕಾಳು ಹಾಕದೇ ಪುಷ್ಪವೃಷ್ಟಿ ಮಾಡುವುದರೊಂದಿಗೆ ಶರಣಾರ್ಥಿ ಸಲ್ಲಿಸಿ ನವದಂಪತಿಗೆ ಶುಭ ಹಾರೈಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *