ನಗರದ 20 ಪ್ರದೇಶಗಳಲ್ಲಿ ತಿಂಗಳು ಕಾಲ ಧರ್ಮಜಾಗೃತಿ ಹಾಗೂ ವ್ಯಸನಮುಕ್ತಿ ಅಭಿಯಾನ
ಪುಣೆ:
ನಗರದಲ್ಲಿ ಶ್ರಾವಣ ಮಾಸದ ನಿಮಿತ್ತ ಧರ್ಮಗುರು ಬಸವಣ್ಣನವರ ವಿಚಾರಗಳನ್ನು ಮನೆ–ಮನೆಗೆ ತಲುಪಿಸುವ, ವಚನ ಸಂಸ್ಕೃತಿಯ ಅರಿವು ಮೂಡಿಸುವ ಹಾಗೂ ಸಮಾಜವನ್ನು ವ್ಯಸನಮುಕ್ತಗೊಳಿಸುವ ಮಹತ್ವದ ಸಂಕಲ್ಪದ ಅಭಿಯಾನ ನಡೆಯಿತು.

“ಶ್ರಾವಣ ಬಸವ ಜ್ಯೋತಿ – ವ್ಯಸನಮುಕ್ತಿ ಜೋಳಿಗೆ” ಅಭಿಯಾನ ಪುಣೆ ಜಿಲ್ಲೆಯ 20 ಪ್ರದೇಶಗಳಲ್ಲಿ ತಿಂಗಳು ಕಾಲ ಯಶಸ್ವಿಯಾಗಿ ನಡೆಯಿತು.
ಲಿಂಗಾಯತ ಧರ್ಮಕ್ಷೇತ್ರ ಬಸವಕಲ್ಯಾಣದ ಪರುಷ ಕಟ್ಟೆಯಲ್ಲಿ ಜ್ಯೋತಿ ಪ್ರಜ್ವಲಿಸಿಕೊಂಡು, ಗುರು ಬಸವಣ್ಣನವರ ಅರಿವಿನ ಮನೆಯ ಗವಿಯಲ್ಲಿ ವಚನ ಗ್ರಂಥ, ಜೋಳಿಗೆ ತೆಗೆದುಕೊಂಡು ಆಗಸ್ಟ್ 13 ಈ ಅಭಿಯಾನ ಪ್ರಾರಂಭಿಸಲಾಯಿತು.

ಪುಣೆ ಜಿಲ್ಲೆಯಾದ್ಯಂತ ಧರ್ಮಜಾಗೃತಿ, ಸಂಸ್ಕಾರ ಹಾಗೂ ವ್ಯಸನಮುಕ್ತಿಯ ಸಂದೇಶವನ್ನು ನೂರಾರು ಕುಟುಂಬಗಳಿಗೆ ತಲುಪಿಸಿತು.
ಕೇಶವನಗರ, ಮಾಂಜರಿ ಬುದ್ರುಕ್, ಮಾಂಜರಿ ಖುರ್ದ, ಕೋಲವಡಿ, ಶೇವಾಳವಾಡಿ, ಹಡಪಸರ, ವಡಗಾಂವ ಬುದ್ರುಕ್, ದಾಯರಿ, ಕಾತ್ರಜ, ಗೋಕುಲ ನಗರ, ಶನಿವಾರ ಪೇಠ, ನಿಗಡಿ ಪ್ರಾಧಿಕರಣ, ಭೋಸ್ರಿ ಇಂದ್ರಾನಗರ, ಪಿಂಪ್ರಿ-ಚಿಂಚವಾಡ, ವಾಗೋಲಿ, ಸನಸವಾಡಿ, ಭೀಮಾ ಕೋರೆಗಾಂವ, ಉರಳಿಕಾಂಚನ, ಸುಖಸಾಗರ ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಗುರು ಬಸವ ಜ್ಯೋತಿ
ಅಭಿಯಾನದ ಸಂದರ್ಭದಲ್ಲಿ ಮನೆಗಳಿಗೆ ಗುರು ಬಸವ ಜ್ಯೋತಿ ಹಾಗೂ ವಚನ ಗ್ರಂಥವನ್ನು ತಲೆಯ ಮೇಲೆ ಹೊತ್ತು ಸಾಗಿಸಲಾಯಿತು. ಪ್ರತಿ ಮನೆಯಲ್ಲಿ ಗುರು ಬಸವ ಪೂಜೆ, ಷಟ್ಸ್ಥಲ ಧ್ವಜಾರೋಹಣ, ಬಸವ ಮಂತ್ರ ಪಠಣ ಹಾಗೂ ಬಸವಾದಿ ಶರಣರ ಅನುಭಾವ ಚಿಂತನೆಯೊಂದಿಗೆ ಕಾರ್ಯಕ್ರಮ ಆರಂಭವಾಗುತ್ತಿತ್ತು.

ಅಷ್ಟಾವರಣ, ಪಂಚಾಚಾರ, ಷಟ್ಸ್ಥಲ ತತ್ವಗಳು, ಇಷ್ಟಲಿಂಗ ದೀಕ್ಷೆಯ ಮಹತ್ವ, ಶರಣರ ಜೀವನ–ಕಥೆಗಳು, ವಚನ ಸಾಹಿತ್ಯ, ಇಷ್ಟಲಿಂಗ ಧಾರಣೆ, ಉತ್ತಮ ಸಂಸ್ಕಾರ ಹಾಗೂ ವ್ಯಸನಮುಕ್ತ ಜೀವನದ ಕುರಿತು ಪರಿಚಯಾತ್ಮಕ ಪ್ರವಚನ ನೀಡಲಾಗುತ್ತಿತ್ತು. ಕೊನೆಯಲ್ಲಿ ಪ್ರಸಾದ ದಾಸೋಹ ನೆರವೇರಿಸಲಾಗುತ್ತಿತ್ತು.
ವ್ಯಸನ ತ್ಯಜಿಸುವ ಸಂಕಲ್ಪ ಪುಷ್ಪ
ಅಭಿಯಾನದ ವಿಶೇಷತೆಯಾಗಿ ಪ್ರತಿ ಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರ ಕೈಗೆ ಒಂದು ಪುಷ್ಪ ನೀಡಿ, “ಒಂದಾದರೂ ವ್ಯಸನವನ್ನು ತ್ಯಜಿಸುತ್ತೇವೆ”ಎಂಬ ಸಂಕಲ್ಪ ಮಾಡಿಸಲಾಯಿತು. ನಂತರ ಆ ಸಂಕಲ್ಪ ಪುಷ್ಪವನ್ನು ಪೂಜ್ಯ ಸದ್ಗುರು ಬಸವದೇವರ ವ್ಯಸನಮುಕ್ತಿ ಜೋಳಿಗೆಗೆ ಸಮರ್ಪಿಸಲಾಯಿತು.
ಗುಟ್ಕಾ, ಪಾನ್, ಸಾರಾಯಿ, ಬೆಟ್ಟಿಂಗ್ನಂತಹ ದೈಹಿಕ ವ್ಯಸನಗಳ ಜೊತೆಗೆ ಅತಿಯಾದ ಮೊಬೈಲ್ ಬಳಕೆ, ಕೋಪ, ದ್ವೇಷ, ಅಸೂಯೆ, ಆಲಸ್ಯ, ಸಮಯಹರಣ ಸೇರಿದಂತೆ ಮನುಷ್ಯನ ಅಂತರಂಗವನ್ನು ದುರ್ಬಲಗೊಳಿಸುವ ಮಾನಸಿಕ ಹಾಗೂ ಭಾವನಾತ್ಮಕ ವ್ಯಸನಗಳಿಂದಲೂ ಮುಕ್ತರಾಗುವಂತೆ ಎಲ್ಲ ವಯೋಮಾನದ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಸಮಾರೋಪ ಸಮಾರಂಭ
ಒಂದು ತಿಂಗಳ ಕಾಲ ನಡೆದ ಈ ಅಭಿಯಾನದ ಸಮಾರೋಪ ಸಮಾರಂಭವು ಸೆಪ್ಟೆಂಬರ್ 10ರಂದು ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಸಮಾರೋಪ ಕಾರ್ಯಕ್ರಮವು ಗುರು ಬಸವ ಪೂಜೆಯೊಂದಿಗೆ ಆರಂಭಗೊಂಡಿತು. ಗುರು ಬಸವಣ್ಣನವರ ವಿಚಾರಧಾರೆ ಹಾಗೂ ಶರಣರ ಅನುಭಾವ ಪರಂಪರೆಯನ್ನು ಸ್ಮರಿಸಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

ರವಿ ಕೂಬಾ ಅವರು ಸ್ವಾಗತ ನುಡಿಗಳ ಮೂಲಕ ಆಗಮಿಸಿದ ಪೂಜ್ಯರು, ಗಣ್ಯರು, ಬಸವಪರ ಸಂಘಟನೆಗಳ ಪ್ರತಿನಿಧಿಗಳು, ದಾಸೋಹಿಗಳು ಹಾಗೂ ಬಸವಭಕ್ತರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಸಮಾರೋಪ ಕಾರ್ಯಕ್ರಮದ ದಾಸೋಹಿಗಳಾದ ಶ್ರದ್ಧಾ ನಾಗೇಶ ಇಂಡೆ ಮತ್ತು ಗೀತಾ ಗಣೇಶ ಇಂಡೆ ದಂಪತಿಗಳಿಂದ ಷಟ್ಸ್ಥಲ ಧ್ವಜಾರೋಹಣ ನೆರವೇರಿತು.
ಬಸವಾದಿ ಶರಣರ ವಚನಗಳನ್ನು ಸ್ಮರಿಸುತ್ತ ವಚನ ಪ್ರಾರ್ಥನೆ ನೆರವೇರಿಸಲಾಯಿತು. ವಚನಗಳ ಮೂಲಕ ಉತ್ತಮ ಬದುಕಿನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪವನ್ನು ಮಾಡಲಾಯಿತು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಸಂತೋಷ ಮಲಶೆಟ್ಟಿ ಅವರು ಆಡಿದರು.

“ಬಸವಪರ ಸಂಘಟನೆಗಳ ಒಗ್ಗಟ್ಟಿನ ನಿಸ್ವಾರ್ಥ ಸೇವೆಯೇ ಈ ಅಭಿಯಾನದ ಶಕ್ತಿಯಾಗಿದೆ. ಸಮಾಜದ ಪ್ರತಿ ಕುಟುಂಬಕ್ಕೆ ಲಿಂಗಾಯತ ಧರ್ಮ ಸಂಸ್ಕಾರಗಳನ್ನು ತಲುಪಿಸಬೇಕಿದೆ. ಅನುಭಾವಿಗಳಾದ ಜಂಗಮ ಮೂರ್ತಿಗಳು ಹಾಗೂ ಬಸವಭಕ್ತರು ಲಿಂಗಾಯತ ಧರ್ಮ ಪ್ರಸಾರಕ್ಕಾಗಿ ಕಂಕಣ ಕಟ್ಟಿ ಶ್ರಮಿಸಿದರೆ ಮಾತ್ರ ಧರ್ಮ ಪ್ರಸಾರ ಸಾಧ್ಯ.
ಈ ದೆಸೆಯಲ್ಲಿ ಪೂಜ್ಯ ಬಸವದೇವರು ಹಿಂದಿ ಭಾಷೆಯಲ್ಲಿ ಪ್ರವಚನ ನೀಡುತ್ತ, ನಮ್ಮ ಪುಣೆ ನಗರದಲ್ಲಿ ಧರ್ಮ ಪ್ರಸಾರ ಮಾಡಿದ್ದು ನಮಗೆಲ್ಲ ಸಂತಸ ತಂದಿದೆ. ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲ ಬಸವಪರ ಸಂಘಟನೆಗಳಿಗೆ ಅಭಿನಂದನೆಗಳು ಎಂದು ಹೇಳಿದರು.

ಸಮಾರೋಪದ ಅಂಗವಾಗಿ ಸೆಪ್ಟೆಂಬರ್ 10ರಂದು ಬೆಳಿಗ್ಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ರಕ್ತದೊತ್ತಡ, ಶುಗರ್, ರಕ್ತಪರೀಕ್ಷೆ, ಇಸಿಜಿ ಹಾಗೂ ನೇತ್ರ ತಪಾಸಣೆ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು. ರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚಿಕಿತ್ಸೆ ಹಾಗೂ ವೈದ್ಯಕೀಯ ಸಲಹೆಯನ್ನೂ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಖ್ಯಾತ ನೇತ್ರತಜ್ಞ ಡಾ. ಅನಿಲ ದುಧಭಾತೆ, ಡಾ. ದುಧಭಾತೆ ನೇತ್ರಾಲಯ ಮತ್ತು ರೆಟಿನಾ ಸೆಂಟರ್, ಪುಣೆ ಅವರು ಮಾತನಾಡಿ, “ನಾವು ರೋಗಕ್ಕೆ ಮದ್ದು ಕೊಡುತ್ತೇವೆ. ಆದರೆ ಗುರು ಬಸವ ಜ್ಯೋತಿ ಹಾಗೂ ದುಷ್ಚಟಗಳ ಭಿಕ್ಷಾ ಜೋಳಿಗೆ ಕಾರ್ಯಕ್ರಮ ಭವರೋಗಕ್ಕೆ ದಿವ್ಯ ಔಷಧಿಯಾಗಿದೆ. ಬಸವಯೋಗದಿಂದ ಯಾವುದೇ ರೋಗಗಳಿಗೆ ಅವಕಾಶ ಇಲ್ಲ” ಎಂದು ಅಭಿಪ್ರಾಯಪಟ್ಟರು.
ಸಂಜೆ ನಡೆದ ಸಾಂಗತಾ ಸಮಾರೋಪ ಕಾರ್ಯಕ್ರಮಕ್ಕೆ ಪೂಜ್ಯ ಸದ್ಗುರು ಬಸವದೇವರು ಸಾನಿಧ್ಯ ವಹಿಸಿದ್ದರು. ಪೂಜ್ಯ ಸಂಗಮೇಶ್ವರ ಸ್ವಾಮೀಜಿ, ಶಿವಮೊಗ್ಗ ಅವರು ಸಮ್ಮುಖ ವಹಿಸಿದ್ದರು.

ಅಭಿಯಾನದ ಸಂದರ್ಭದಲ್ಲಿ ತಮಗಾದ ಅನುಭವಗಳನ್ನು ಗೌರಿ ನೌಖಂಡೆ, ಸ್ವಾತಿ ಇಂಡೆ, ಗೀತಾ ಇಂಡೆ, ರಾಚಪ್ಪ ಮಂಟಾಳೆ ಹಾಗೂ ಸಂಗಮೇಶ ಕೂಬಾ ಮೊದಲಾದವರು ಹಂಚಿಕೊಂಡರು.
ಮನೆ–ಮನೆಗಳಿಗೆ ಗುರು ಬಸವ ಜ್ಯೋತಿ ಆಗಮಿಸಿದ ಸಂದರ್ಭದಲ್ಲಿ ಕುಟುಂಬಗಳಲ್ಲಿ ಮೂಡಿದ ಧಾರ್ಮಿಕ ಜಾಗೃತಿ, ವಚನ ಸಾಹಿತ್ಯದ ಆಸಕ್ತಿ, ವ್ಯಸನಮುಕ್ತಿಯ ಸಂಕಲ್ಪ ಹಾಗೂ ಕಾರ್ಯಕ್ರಮದಿಂದ ದೊರೆತ ಪ್ರೇರಣೆಯ ಕುರಿತು ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಅಭಿಯಾನದ ಕುರಿತು ಮಾತನಾಡಿದ ಪೂಜ್ಯ ಶ್ರೀ ಸದ್ಗುರು ಬಸವದೇವರು ಅವರು, “ಈ ಕಾರ್ಯಕ್ರಮದ ಯಶಸ್ಸಿಗೆ ಗುರು ಬಸವಾದಿ ಶರಣರ ಕೃಪಾಶೀರ್ವಾದವೇ ಮೂಲ ಕಾರಣ. ನಿಸ್ವಾರ್ಥ ಸೇವೆ ಹಾಗೂ ಕಳಕಳಿಯ ಧರ್ಮ ಪ್ರಸಾರಕ್ಕಾಗಿ ಕಳೆದ ಎರಡು ವರ್ಷಗಳಿಂದ ಈ ಅಭಿಯಾನದಲ್ಲಿ ಕಂಕಣಬದ್ಧರಾಗಿ ದುಡಿಯುತ್ತಿರುವ ಬಸವಪರ ಸಂಘಟನೆಗಳಿಗೆ ಈ ಯಶಸ್ವಿ ಅಭಿಯಾನದ ಕೀರ್ತಿ ಸಲ್ಲಬೇಕು. ನಾವು ಕೇವಲ ನಿಮಿತ್ತ ಮಾತ್ರ ಜಂಗಮ ಮೂರ್ತಿಗಳು” ಎಂದು ಹೇಳಿದರು.
“ಪ್ರತಿ ಮನೆ ವ್ಯಸನಮುಕ್ತವಾಗಬೇಕು. ಕುಟುಂಬಸ್ಥರ ಕಣ್ಣೀರು ನಿಲ್ಲಬೇಕು. ಉತ್ತಮ ಆರೋಗ್ಯ, ಉತ್ತಮ ಚಿಂತನೆಗಳು ಮೂಡಿ ಪ್ರತಿಯೊಂದು ಮನೆಯಲ್ಲಿ ಗುರು ಬಸವಣ್ಣನವರ ಜ್ಞಾನಜ್ಯೋತಿ ಬೆಳಗಬೇಕು. ಪ್ರತಿಯೊಬ್ಬರೂ ವ್ಯಸನಮುಕ್ತರಾಗಿ ಇಷ್ಟಲಿಂಗ ದೀಕ್ಷೆ ಪಡೆದು, ವಚನಗಳನ್ನು ಓದಿ ಉತ್ತಮ ಸಂಸ್ಕಾರವನ್ನು ಪಡೆಯಬೇಕು.

ಜಾತಿ, ವರ್ಣ, ವರ್ಗ ಭೇದವಿಲ್ಲದೆ ಧರ್ಮ ಸಂಸ್ಕಾರ ಸಹಿತವಾದ ಭವ್ಯ ಬಸವ ಭಾರತ ಕಟ್ಟಬೇಕು ಎಂಬುದು ಈ ಕಾರ್ಯಕ್ರಮದ ಮುಖ್ಯ ಸಂಕಲ್ಪ” ಎಂದು ತಿಳಿಸಿದರು.
ಮುಂದುವರಿದು, “ಗುರು ಬಸವ ಜ್ಯೋತಿ ಮನೆಯ ಕತ್ತಲೆಯನ್ನು ಕಳೆಯುವುದರೊಂದಿಗೆ, ವಚನ ಗ್ರಂಥದ ಜ್ಞಾನ ಜ್ಯೋತಿ ಮನದ ಕತ್ತಲೆಯನ್ನು ಕಳೆಯಲು ಪ್ರತಿ ಮನೆಗೆ ಒಂದು ತಿಂಗಳ ಕಾಲ ಆಗಮಿಸಿತ್ತು. ಆ ಬೆಳಕಿನೊಳಗೆ ತಮ್ಮನ್ನು ಸಮರ್ಪಿಸಿಕೊಂಡವರೇ ಧನ್ಯರು” ಎಂದು ಅಭಿಪ್ರಾಯಪಟ್ಟರು.

ಪುಣೆಯ ವಿವಿಧ ಪ್ರದೇಶಗಳ ಕುಟುಂಬಗಳು ಕಾರ್ಯಕ್ರಮದ ಸಂಕಲ್ಪಕ್ಕೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.
ಸಮಾರೋಪದ ಅಂಗವಾಗಿ ಮಂಗಳ ಗೀತೆ ನೆರವೇರಿಸಲಾಯಿತು. ನಂತರ ಪ್ರಸಾದ ದಾಸೋಹದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಈ ಅಭಿಯಾನದ ಯಶಸ್ಸಿನಲ್ಲಿ ಸಂತೋಷ ಮಲಶೆಟ್ಟಿ, ನಂದಿನಿ ಪಾಟೀಲ, ಸಂಗಮೇಶ ಕೂಬಾ, ವೀರಭದ್ರಪ್ಪ ನೌಖಂಡೆ, ರಾಚಪ್ಪ ಮಂಟಾಳೆ, ಸತೀಶ ಪಾಟೀಲ, ರವಿ ಕೂಬಾ, ಬಸವರಾಜ ಕಣಜೆ, ಸಿದ್ಧರಾಮ ನವದಗೇರೆ, ಶಿವ ಹೊನ್ನಳ್ಳಿ ಹಾಗೂ ಚನ್ನಬಸಯ್ಯ ಸಾಲಿಮಠ ಸೇರಿದಂತೆ ಸಕ್ರಿಯವಾಗಿ ಸೇವೆ ಸಲ್ಲಿಸಿದ ಬಸವಭಕ್ತರ ಪಾತ್ರ ಮಹತ್ವದ್ದಾಗಿದೆ.
ತಮ್ಮ ಮನೆಗಳಲ್ಲಿ ಗುರು ಬಸವ ಜ್ಯೋತಿ ಹಾಗೂ ದುಷ್ಚಟಗಳ ಭಿಕ್ಷಾ ಜೋಳಿಗೆ ಕಾರ್ಯಕ್ರಮವನ್ನು ಆಯೋಜಿಸಿ ಸಹಕರಿಸಿದ ಎಲ್ಲ ಗುರು ಬಸವ ಭಕ್ತರು ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಒಟ್ಟಾರೆ, ಶ್ರಾವಣ ಮಾಸದಲ್ಲಿ ನಡೆದ “ಶ್ರಾವಣ ಬಸವ ಜ್ಯೋತಿ – ವ್ಯಸನಮುಕ್ತಿ ಜೋಳಿಗೆ” ಅಭಿಯಾನವು ಕೇವಲ ಜ್ಯೋತಿ ಬೆಳಗಿಸುವ ಕಾರ್ಯಕ್ರಮವಾಗಿರದೆ, ಮನೆ–ಮನೆಗಳಲ್ಲಿ ಬಸವ ವಿಚಾರದ ಬೆಳಕು, ವ್ಯಸನಮುಕ್ತ ಬದುಕಿನ ಸಂಕಲ್ಪ, ವಚನ ಸಂಸ್ಕೃತಿಯ ಅರಿವು ಹಾಗೂ ಉತ್ತಮ ಜೀವನಮೌಲ್ಯಗಳ ಜಾಗೃತಿ ಮೂಡಿಸಿದ ವಿಶಿಷ್ಟ ಧರ್ಮ–ಸಾಮಾಜಿಕ ಅಭಿಯಾನವಾಗಿ ಗಮನ ಸೆಳೆಯಿತು.
ಶರಣ ಮಲ್ಲಿಕಾರ್ಜುನ ಮುಳಗೆ ಅವರು ಸಂಪೂರ್ಣ ಶ್ರಾವಣ ಮಾಸದಲ್ಲಿ ಮೌನಾನುಷ್ಠಾನ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಮೌನಾನುಷ್ಠಾನವನ್ನು ಸಮಾಪ್ತಿಗೊಳಿಸಿದರು. ಸ್ವಾಮಿ ಬಸವದೇವರು ಮಲ್ಲಿಕಾರ್ಜುನ ಮುಳಗೆ ಅವರನ್ನು ಸನ್ಮಾನಿಸಿದರು.
ಮನೆಯ ಕತ್ತಲೆಯ ಜೊತೆಗೆ ಮನದ ಕತ್ತಲೆಯನ್ನೂ ಕಳೆಯುವ ಗುರು ಬಸವ ಜ್ಯೋತಿ ಮುಂದೆಯೂ ಸಮಾಜದ ಪ್ರತಿಯೊಂದು ಮನೆ–ಮನವನ್ನು ಬೆಳಗಿಸಲಿ ಎಂಬ ಸಂಕಲ್ಪದೊಂದಿಗೆ ಅಭಿಯಾನವು ಯಶಸ್ವಿಯಾಗಿ ಸಂಪನ್ನಗೊಂಡಿತು.

ಒಳ್ಳೆಯ ಕಾರ್ಯಕ್ರಮವಾಗಿದೆ.ಬಸವ ಬೆಳಕು ಎಲ್ಲೆಡೆ ಹರಡಲಿ. ಜೈ ಬಸವ
ಉತ್ತಮ ಕಾರ್ಯಕ್ರಮ, ಶರಣು ಶರಣಾರ್ಥಿ
ಇಂತಹ ಅಪರೂಪದ ಉತ್ತಮ ಕಾರ್ಯ ಕ್ರಮ ಎಲ್ಲ ಕಡೆ ಪಸರಿಸಲಿ. ಜೈ ಗುರು ಬಸವ.
ಸುದ್ದಿ ಪ್ರಸಾರ ಮಾಡಿದ ಬಸವ ಮಿಡಿಯಾ ಬಳಗಕ್ಕೆ ಧನ್ಯವಾದಗಳು 🙏💐