ಮರಣವನ್ನು ಗೆದ್ದವರು ಶರಣರು: ಪ್ರಭುದೇವ ಸ್ವಾಮೀಜಿ

ಸುಪ್ರೀತ ಪತಂಗೆ
ಸುಪ್ರೀತ ಪತಂಗೆ

ಮಕ್ಕಳಿಗಾಗಿ 10 ದಿನಗಳ ಕಾರ್ಯಕ್ರಮ

ಬೀದರ:

ಶರಣರು ಮರಣಕ್ಕೆ ಹೆದರಿದವರಲ್ಲ, ಮರಣವೇ ಮಹಾನವಮಿ ಎಂದವರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಶರಣರು ಕಲ್ಯಾಣ ತೊರೆದಿದ್ದು ಪ್ರಾಣರಕ್ಷಣೆಗಾಗಿ ಅಲ್ಲ, ವಚನ ಸಾಹಿತ್ಯ ಉಳಿಸಲು ಎಂದು ಗೋರಟಾ ಲಿಂಗಾಯತ ಮಹಾಮಠದ ಪಿಠಾಧಿಪತಿ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ತಿಳಿಸಿದರು.

ಮರಣವೇ ಮಹಾನವಮಿ ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಶರಣರ ತ್ಯಾಗ ಬಲಿದಾನ ಮುಂದಿನ ಪೀಳಿಗೆ ಅರಿಯಬೇಕಾಗಿದೆ. ಮಾನವೀಯ ಮೌಲ್ಯವಾಗಿರುವ ವಚನ ಸಾಹಿತ್ಯ ಇಂದು ವಿಶ್ವಕ್ಕೆ ತಲುಪಿಸುವ ಕಾರ್ಯ ನಡೆಯಬೇಕಾಗಿದೆ. ಅದಕ್ಕಾಗಿಯೇ ಗೋರಟಾ ಗ್ರಾಮದ ಲಿಂಗಾಯತ ಮಹಾಮಠ ಗ್ರಾಮದಲ್ಲಿ ಮಕ್ಕಳಿಗಾಗಿ ಹತ್ತು ದಿನಗಳ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಮಕ್ಕಳಿಂದಲೇ ಅನುಭಾವ, ವಚನ ಚಿಂತನೆ, ವಚನ ಪಠಣ, ಸ್ವಾಗತ, ನಿರೂಪಣೆ, ವಚನಗಾಯನ, ವಚನ ನೃತ್ಯಗಳು ಮಾಡಿಸುವ ಮುಖಾಂತರವಾಗಿ ಹತ್ತು ದಿನಗಳಲ್ಲಿ ನೂರಾರು ಮಕ್ಕಳಿಗೆ ವೇದಿಕೆಗೆ ತಂದು ಮಕ್ಕಳಲ್ಲಿ ತತ್ವ ಬಿತ್ತಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅನುಭವ ನೀಡಿದ ಕು. ಸೃಜನ ಶರಣಬಸವ ಪೊಲೀಸಪಾಟೀಲ, ಅನ್ಯರಿಗೆ ಅಸಹ್ಯ ಪಡಬೇಡ ಎನ್ನುವ ವಿಷಯದ ಕುರಿತು ಮಾತನಾಡಿ, ಅಸಹ್ಯ ಎಂದರೆ ತಡೆಯಲಾಗದ, ತಾಳಲಾರದ, ಹೇಸಿಗೆ ಬರುವಂತದ್ದು. ಅಸಹ್ಯ ಎಂಬುದು ಮನದ ಅವಗುಣ. ಅಹಂಕಾರದ ಲಕ್ಷಣ. ಯಾರಲ್ಲಿ ನಾನೇ ಶ್ರೇಷ್ಠ, ನನ್ನದೇ ಪವಿತ್ರ ಎಂಬ ಅಹಂಭಾವ ಇದೆಯೋ, ಅವರಿಗೆ ಇನ್ನೊಬ್ಬರಲ್ಲಿ ಕೊರತೆಯನ್ನು, ಮಲಿನವನ್ನು ಕಾಣುವ ದೃಷ್ಟಿಬೆಳೆಯುತ್ತದೆ. ಪ್ರೀತಿಯ ಅಭಾವವೇ ಅಸಹ್ಯದ ಮೂಲ.

ಮೈಯೆಲ್ಲ ಹೊಲಸು ಮಾಡಿಕೊಂಡು ಬಂದ ಮಗುವನ್ನು ಕಂಡು, ತಾಯಿ ಮೂಗು ಮುಚ್ಚಿಕೊಳ್ಳಲಾರಳು. ಅವಳು ಮೂಗು ಮುಚ್ಚಿಕೊಂಡರೆ, ಜಗತ್ತಿನಲ್ಲಿ ಮಾಂಸದ ಮುದ್ದೆಗಳೇ ಇರುತ್ತಿದ್ದವು. ವ್ಯಕ್ತಿಗಳು ಕಾಣುತ್ತಿರಲಿಲ್ಲ. ಬೊಟ್ಟಿನಂತಹ ಮಗುವನ್ನು ಬೆಟ್ಟದಷ್ಟು ಬೆಳೆಸುತ್ತಾಳೆ. ಕಾರಣ ಅವಳಲ್ಲಿರುವ ಅಪರಿಮಿತ ಅಗಣಿತವಾದ ಪ್ರೀತಿ- ವಾತ್ಸಲ್ಯ.

ಯಾರನ್ನು ಯಾವುದನ್ನು ಕಂಡಾಗಲು ಅಸಹ್ಯ ಪಡಬೇಡ ಎನ್ನುತ್ತಾರೆ ಗುರು ಬಸವಣ್ಣನವರು. ಅಸಹ್ಯ ಪಡುವಿಕೆಯು ಪರೋಕ್ಷವಾಗಿ ಅಪಮಾನ ಗೊಳಿಸುವಿಕೆಯೇ ಆಗಿದೆ ಎಂದು ಮಾರ್ಮಿಕವಾಗಿ ತಿಳಿಸಿದರು.

ವಚನ ಚಿಂತನೆಗೈದ ಕು. ಪೂಜಾ ಗೌರೆ ಮಾತನಾಡಿ, ಯಾರನ್ನು ಹಿಂಸೆ ಮಾಡಬೇಡ ಎನ್ನುತ್ತಾರೆ ಶರಣರು. ಹಿಂಸೆಯಲ್ಲಿ ಮೂರು ಪ್ರಕಾರ. ಕಾಯ, ವಾಚ ಮತ್ತು ಮಾನಸಿಕ ಹಿಂಸೆ. ಹೊಡಿ, ಬಡಿ, ಕಡಿ, ಕಾಯ ಹಿಂಸೆಯಾದರೆ ಕುಟಿಲ, ಕುಹಕ ವ್ಯಂಗ್ಯ ಮಾತುಗಳು ವಾಚ ಹಿಂಸೆ.

ದ್ವೇಷ, ಅಸೂಯೆ, ಮತ್ಸರ ಭಾವಗಳು ಮಾನಸಿಕ ಹಿಂಸೆ. ಇದರಲ್ಲಿ ಯಾವ ಹಿಂಸೆ ಮಾಡಿದರು ಕೂಡ ದೇವ ನಮ್ಮನ್ನು ಸ್ವೀಕರಿಸಲಾರ ಎಂದು ತಿಳಿಸಿದರು.

25ನೇ ಕಲ್ಯಾಣ ಪರ್ವ ಪ್ರಚಾರಾರ್ಥವಾಗಿ ಕಾರ್ಯಕ್ರಮದ ವೇದಿಕೆಗೆ ಆಗಮಿಸಿ ಅನುಭಾವ ನೀಡಿದ ಪೂಜ್ಯ ಅನಿಮಿಷಾನಂದ ಸ್ವಾಮೀಜಿ, ಪೂಜ್ಯ ಅಕ್ಕ ಅನ್ನಪೂರ್ಣತಾಯಿಯವರು ಹಾಕಿಕೊಟ್ಟ ದಾರಿಯಲ್ಲಿಯೇ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ಮುಂದುವರಿಯುತ್ತಿದ್ದಾರೆ. ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಈ ಕಾರ್ಯಕ್ರಮ ಅತ್ಯಂತ ವಿಶೇಷವಾಗಿರುವಂತಹದು. ಮಕ್ಕಳು ಮಾತಾಡುವುದು ನೋಡಿದರೆ ಮುಂದೊಂದು ದಿನ ಇದೇ ಮಕ್ಕಳು ತತ್ವವನ್ನು ವಿಶ್ವಕ್ಕೆ ಮುಟ್ಟಿಸುವ ಕಾರ್ಯ ಮಾಡುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಗುರುನಾಥಪ್ಪ ಹತ್ತೆ ವಹಿಸಿಕೊಂಡರು‌. ಮುಖ್ಯ ಅತಿಥಿಗಳಾಗಿ ರಮೇಶ ಪತಂಗೆ, ಜ್ಯೋತಿ ಪೊಲಿಸಪಾಟಿಲ, ಸುರೇಖಾ ರಾಜೋಳೆ, ಸುಲಭಾ ಮದಕಟ್ಟೆ, ನೀಲಾಂಬಿಕಾ ಪತಂಗೆ, ಮಹಾದೇವಿ ಕನಕಟ್ಟೆ, ಶೃತಿ ರಾಜೋಳೆ ಮುಂತಾದವರು ಭಾಗವಹಿಸಿದರು.

ನಿರೂಪಣೆ ಅಪೂರ್ವ ರವಿ ಕಾದೇಪೂರಿ, ವಚನ ಗಾಯನ ರುದ್ರಾಕ್ಷ ಬಿರಾದರ, ಪ್ರಾರ್ಥನಾ ಪೋಲಿಸಪಾಟೀಲ, ವಚನ ಪಠಣ ಅಂಬಿಕಾ ದಿಲೀಪ, ಸ್ವಾಗತ ಸಿದ್ದೇಶ್ವರಿ ಭದ್ರಪ್ಪ, ವಚನ ನೃತ್ಯ ವಚನಶ್ರೀ ಮತ್ತು ಸ್ನೇಹ, ಭಕ್ತಿ ದಾಸೋಹ ಗೌರಮ್ಮ ಜಗನ್ನಾಥ ಪತಂಗೆ ಅವರಿಂದ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *