ನಂಜನಗೂಡು
“ಬಸವಣ್ಣವರನ್ನು ಮಾತಿನಲ್ಲಿ ಮಾತ್ರ ಹೇಳುತ್ತೇವೆ, ಮನದಲ್ಲಿ, ಆತ್ಮದಲ್ಲಿ ಹೇಳುತ್ತಿಲ್ಲ. ಬಸವಣ್ಣನವರನ್ನು ಮೂರ್ತಿ ಮಾಡಿ, ಮೆರವಣಿಗೆಯ ಸರಕಾಗಿ ಬಳಸದೆ ಮನಃಪೂರ್ವಕವಾಗಿ ನಮ್ಮ ಅಸ್ಮಿತೆಯಾಗಿಸಿಕೊಳ್ಳಬೇಕೆಂದು,” ಮೈಸೂರಿನ ಕುಂದೂರು ಮಠದ ಶ್ರೀ ಶರತ್ಚಂದ್ರ ಸ್ವಾಮೀಜಿ ಮಂಗಳವಾರ ಹೇಳಿದರು.
ಪಟ್ಟಣದಲ್ಲಿ ವಿಜೃಂಭಣೆಯಿಂದ ನಡೆದ ಬಸವ ಜಯಂತಿಯಲ್ಲಿ ಮುಖ್ಯ ಪ್ರವಚನಕಾರರಾಗಿ ಮಾತನಾಡಿದ ಸ್ವಾಮೀಜಿ “ನಾವು ಯಾರೂ ಬಸವಣ್ಣರಿಗಿಂತ ದೊಡ್ಡವರಲ್ಲ, ಬಸವಣ್ಣನವರ ಧೂಳಿಗೂ ಸಮಾನರಲ್ಲ. ಆದ್ದರಿಂದ ಎಲ್ಲರೂ ಬಸವಣ್ಣನವರ ಭಕ್ತಿ ಹಾಗೂ ತತ್ವ ಸಿದ್ದಂತಗಳಾದ ಕಾಯಕ, ದಾಸೋಹ, ಸಾಮಾಜಿಕ ಕಳಕಳಿ, ರೂಡಿಸಿಕೊಳ್ಳಬೇಕು. ಬಸವಣ್ಣನವರು ಎಲ್ಲರೂ ನಮ್ಮವರು ಎನ್ನುವ ಭಾವ ಬರಿಸಲು ಪ್ರಯತ್ನಿಸಿದರು,” ಎಂದು ಹೇಳಿದರು.


“ಬಸವಣ್ಣನವರ ಜಯಂತಿಯನ್ನು ಹರ್ಡೇಕರ ಮಂಜಪ್ಪನವರು ನಡೆಸದೆ ಹೋಗಿದ್ದರೆ, ಪ.ಗು. ಹಳಕಟ್ಟಿಯವರು ವಚನಗಳ ಸಂರಕ್ಷಿಸದೇ ಹೋಗಿದ್ದರೆ ಲಿಂಗಾಯತ ಸಮಾಜಕ್ಕೆ ಯಾವ ಬೆಲೆಯೂ ಇರುತ್ತಿರಲಿಲ್ಲ.
ಅವರ ಕೆಲಸ ಮುಂದುವರೆಸಬೇಕಾದರೆ ಇಷ್ಟಲಿಂಗ ಧಾರಣೆ ಕಡ್ಡಾಯವಾಗಿ ಆಗಬೇಕು, ಅದರ ಮೂಲಕ ಬಸವಣ್ಣನವರ ತತ್ವ, ಆದರ್ಶ,ಚಿಂತನೆ, ಸಂಸ್ಕೃತಿ, ಸಂಸ್ಕಾರ ಉಳಿಸಲು ಸಾಧ್ಯ,” ಎಂದು ತಿಳಿಸಿದರು.


ಜೆಎಸ್‌ಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುತ್ತೂರು ಮಠದ ಪೂಜ್ಯ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅದ್ಧೂರಿಯಾಗಿ ಬಸವ ಜಯಂತಿ ಆಚರಿಸಿದರೆ ಸಾಲದು, ಬಸವಣ್ಣನವರನ್ನು ಸ್ಮರಣೆ ಮಾಡುವ ಜೊತೆಗೆ ಅವರ ತತ್ತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗಳಿಗೆ ಅರ್ಥ ಬರುತ್ತದೆ, ಕೇವಲ ಸ್ಮರಣೆಯಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ, ಎಂದು ತಿಳಿಸಿದರು.
ಬಸವಣ್ಣನವರು ನಾಡಿಗೆ ನೀಡಿರುವ ಕೊಡುಗೆ ಅಪಾರವಾಗಿದೆ. ಬಸವಣ್ಣನವರು 12ನೇ ಶತಮಾನದಲ್ಲಿ ಸ್ಥಾಪಿಸಿದ ಅನುಭವ ಮಂಟಪ ಪ್ರಸ್ತುತ ಜಗತ್ತಿನ ಹಲವು ರಾಷ್ಟ್ರಗಳ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿಯಾಗಿದೆ. ಮನಸ್ಸು ಮನಸ್ಸುಗಳ ಮನುಷ್ಯನ ಬಾಂಧವ್ಯ ಬೆಸೆಯಲು ಹೃದಯವಂತಿಕೆ ಅನುಭವ ಮಂಟಪವಾಗಿದೆ, ಎಂದರು.
ಆಶೀರ್ವಚನ ನೀಡಿದ ದೇವನೂರಿನ ಪೂಜ್ಯ ಮಹಾಂತ ಸ್ವಾಮೀಜಿ ಬಸವಣ್ಣನವರ ವಿಚಾರಗಳನ್ನ ಪ್ರತಿಯೊಬ್ಬರು ಆಚರಿಸಬೇಕು. ಬಸವಣ್ಣನವರನ್ನ ಕೇವಲ ಮೆರವಣಿಗೆ, ಮೂರ್ತಿಗೆ ಸೀಮಿತ ಮಾಡಬಾರದೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲ್ಲನಮೂಲೆ ಕಂಬಳಿಶ್ವರ ಮಠದ ಸ್ವಾಮೀಜಿ ಬಸವಣ್ಣನವರ ಎಲ್ಲರು ವಚನಗಳನ್ನ ಓದಬೇಕು ಮತ್ತು ಮಕ್ಕಳಿಗೆ ಓದುವಂತೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಅದ್ದೂರಿ ಮೆರವಣಿಗೆ
ಬೆಳಗ್ಗೆ ನಂಜುಂಡೇಶ್ವರ ದೇವಸ್ಥಾನದ ಹತ್ತಿರದಿಂದ ಬಸವ ಪುತ್ಥಳಿಯ ಮೆರವಣಿಗೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ದರ್ಶನ್ ಧ್ರುವನಾರಾಯಣ ಭಾಗವಹಿಸಿದ್ದರು.


ವೀರಗಾಸೆ, ನಂದಿಕಂಬ, ನಗಾರಿ, ತಮಟೆ, ಜಾನಪದ ಕಲಾತಂಡಗಳಿಂದ ಮೆರವಣಿಗೆಗೆ ಮೆರಗು ಬಂದಿತ್ತು. ಯುವ ಸಮುದಾಯ, ರಾಜಕೀಯ ನಾಯಕರು, ಬಸವಭಕ್ತರು ಕುಣಿದು ಸಂಭ್ರಮಿಸಿದರು. ಮೆರವಣಿಗೆ ಬರುವ ಮಾರ್ಗದ ಅಲ್ಲಲ್ಲಿ ಪಾನಕ, ಮಜ್ಜಿಗೆ ವಿತರಣೆಯನ್ನು ಬಸವ ಭಕ್ತರು ಮಾಡಿದರು.
ಬ್ರಾಂಡ್ ನ್ಯೂ ಗಿಫ್ಟ್ ಸೆಂಟರ್ ಮಾಲೀಕ ಆನಂದ್ ಮತ್ತು ಸ್ನೇಹಿತರು ಹಾಗೂ ಇತರ ಬಸವ ಭಕ್ತರಿಂದ ಬೆಲದ ಹಣ್ಣಿನ ಪಾನಕ, ಮಜ್ಜಿಗೆ ಹಂಚಲಾಯಿತು.
ಮೆರವಣಿಗೆಯ ಚಾಲನೆ ನೀಡಿದ ನವಿಲೂರು ಚುಂಚನಹಳ್ಳಿ ಮಠಾಧ್ಯಕ್ಷ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಬೇಕಾಗಿರುವುದು ಶಾಂತಿ ಹಾಗೂ ನೆಮ್ಮದಿ ಇದಕ್ಕಾಗಿ ಬಸವಣ್ಣನ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಾಸಭಾದ ನಿರ್ದೇಶಕಿ ಶ್ರೀಮತಿ ಮಂಜುಳಾ ಮಧು ನಿರೂಪಣೆ ಮಾಡಿದರು. ತಾಲೂಕ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿಂಧೂವಳ್ಳಿ ಕೆಂಪಣ್ಣ ಸ್ವಾಗತ ಕೋರಿದರು.


ಶಾಸಕ ದರ್ಶನ್ ಧ್ರುವನಾರಾಯಣ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮೆರವಣಿಗೆಯಲ್ಲಿ ಭಾಗಿಯಾದರು. ದೇವನೂರು ಗುರುಮಲ್ಲೇಶ್ವರ ದಾಸೋಹ ಮಠಾಧ್ಯಕ್ಷ ಶ್ರೀ ಮಹಾಂತ ಸ್ವಾಮೀಜಿ, ಮಲ್ಲನಮೂಲೆ ಮಠಾಧ್ಯಕ್ಷ ಶ್ರೀ ಇಮ್ಮಡಿ ಸಿದ್ಧಲಿಂಗ ಸ್ವಾಮೀಜಿ, ಶರಣಸಂಗಮ ಮಠಾಧ್ಯಕ್ಷ ಶ್ರೀ ನಾಗರಾಜೇಂದ್ರ ಸ್ವಾಮೀಜಿ, ಹುಲ್ಲಹಳ್ಳಿ ಮಠದ ಶ್ರೀ ಇಮ್ಮಡಿ ಚೆನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಶಾಸಕ ಬಿ. ಹರ್ಷವರ್ಧನ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ನಿರ್ದೇಶಕ ಹಗಿನವಾಳು ಚೆನ್ನಪ್ಪ, ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ, ಪ್ರಧಾನ ಕಾರ್ಯದರ್ಶಿ ಶಿವಪ್ಪ ದೇವರು, ಖಜಾಂಚಿ ನಟೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಕುಂಬರಳ್ಳಿ ಸುಬ್ಬಣ್ಣ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ಎಪಿಎಂಸಿ ಮಾಜಿ ಸದಸ್ಯ ಗುರುಸ್ವಾಮಿ, ಮುಖಂಡರಾದ ಎನ್.ಸಿ.ಬಸವಣ್ಣ, ಎನ್. ಮಹೇಶ್, ವಕೀಲರಾದ ಬೊಮ್ಮಾಯಿ, ನಾಗೇಂದ್ರಪ್ಪ, ಮಹೇಶ್, ತಾಪಂ ಮಾಜಿ ಅಧ್ಯಕ್ಷ ಬಿ.ಎಸ್. ಮಹದೇವಪ್ಪ, ವೀರಶೈವ ಮಹಾಸಭಾ ಯುವ ಘಟಕ ಅಧ್ಯಕ್ಷ ಮಹದೇವಸ್ವಾಮಿ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ತಾಲೂಕಿನ ಹಲವು ಗ್ರಾಮದಿಂದ ಜನರು ಆಗಮಿಸಿದ್ದರು.
ಕಾರ್ಯಕ್ರಮ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ತಾಲೂಕಿನ ವಿವಿಧ ಬಸವಪರ ಸಂಘಟನೆಗಳ ಸಹಯೋಗದಲ್ಲಿ ನಡೆಯಿತು.
