ಬಸವಕಲ್ಯಾಣ :
೪೭ನೇ ಶರಣ ಕಮ್ಮಟ ಅನುಭವಮಂಟಪ ಉತ್ಸವದ ನಿಮಿತ್ಯ ಪಟ್ಟಣದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಈಚೆಗೆ ಸಾಮೂಹಿಕ ವಚನ ಪಾರಾಯಣ ನಡೆಯಿತು.
ಸಾನಿಧ್ಯ ವಹಿಸಿ, ಕನ್ನಡ ಸಾಹಿತ್ಯ ಲೋಕಕ್ಕೆ ೧೨ನೇ ಶತಮಾನದ ಶರಣರು ನೀಡಿದ ಅಮೂಲ್ಯ
ಕೊಡುಗೆಯೇ ವಚನ ಸಾಹಿತ್ಯ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ ಸೇರಿದಂತೆ, ನೂರಾರು ಶರಣರು ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಸರಳ ಕನ್ನಡದಲ್ಲಿ ವಚನಗಳ ರೂಪದಲ್ಲಿ ರಚಿಸಿದ್ದಾರೆ. ಈ ವಚನಗಳನ್ನು ಭಕ್ತಿ, ಶ್ರದ್ಧೆ ಮತ್ತು ಅರ್ಥಪೂರ್ಣವಾಗಿ ಓದುವುದೇ ವಚನ ಪಾರಾಯಣ.
ವಚನ ಪಾರಾಯಣವು ಕೇವಲ ಧಾರ್ಮಿಕ ಆಚರಣೆಯಲ್ಲ, ಅದು ಬದುಕಿನ ದಾರಿದೀಪವಾಗಿದೆ. ಜನಸಾಮಾನ್ಯರ ಆಡುಭಾಷೆಯಲ್ಲಿರುವ ವಚನಗಳು ನೇರವಾಗಿ ಮನಸ್ಸನ್ನು ತಲುಪುತ್ತವೆ. ಪ್ರತಿನಿತ್ಯ ವಚನ ಪಾರಾಯಣ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಹಾಗೂ ಸಕಾರಾತ್ಮಕ ಚಿಂತನೆಗಳು ಮೂಡುತ್ತವೆ.

ವಚನಗಳಲ್ಲಿರುವ ಕಾಯಕ, ದಾಸೋಹ, ಸಮಾನತೆ, ಅಹಿಂಸೆ ಮತ್ತು ನೈತಿಕ ಮೌಲ್ಯಗಳು ಮನುಷ್ಯನ ವ್ಯಕ್ತಿತ್ವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ವಚನಗಳ ಅಧ್ಯಯನ ಮತ್ತು ಪಾರಾಯಣ ಮಾಡುವುದರಿಂದ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡುತ್ತದೆ.
ವಚನಗಳು ಉದಯಿಸಿದ ಈ ಪಾವನ ಭೂಮಿಯಲ್ಲಿಯೇ, ಇಂದು ವಚನ ಪಾರಾಯಣ ಮಾಡುತ್ತಿರುವುದು ನಮ್ಮೆಲ್ಲರ ಅಹೋಭಾಗ್ಯವಾಗಿದೆ ಎಂದು ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಆರ್ಶೀವಚನ
ನೀಡಿದರು.
ವಚನ ಪಾರಾಯಣದ ಉದ್ಘಾಟನೆಯನ್ನು ನೆರವೇರಿಸಿ, ವಚನಗಳು ಲಿಂಗಾಯತ ಧರ್ಮದ ಬುನಾದಿ ಇದ್ದಂತೆ, ವಚನಗಳ ಅಧ್ಯಯನದಿಂದ ಲಿಂಗಾಯತ ಧರ್ಮದ ಅರಿವು ಮೂಡುತ್ತದೆ. ಭಾಲ್ಕಿಯ ಪೂಜ್ಯರು ವಚನ ಪಾರಾಯಣ ಆರಂಭಿಸುವ ಮೂಲಕ ವಚನಪ್ರಜ್ಞೆ ಬೆಳೆಸುತ್ತಿರುವುದು ಅತ್ಯಂತ ಸಂತೋಷ ಸಂಗತಿಯಾಗಿದೆ ಎಂದು ಹುಲಸೂರಿನ ಪೂಜ್ಯ ಡಾ.ಶಿವಾನಂದ ಮಹಾಸ್ವಾಮಿಗಳು, ಆಶೀರ್ವಚನ ನೀಡಿದರು.
ಪೂಜ್ಯರಾದ ಗುರುಬಸವ ಪಟ್ಟದ್ದೇವರು, ಚನ್ನಬಸವ ಸ್ವಾಮಿಗಳು, ಬಸವಪ್ರಭು ಸ್ವಾಮಿಗಳು, ಬಸವಲಿಂಗದೇವರು, ಮಹಾಂತ ಸ್ವಾಮಿಗಳು, ಅನೀಲ ಮಹಾರಾಜರು, ಶಂಕರಲಿಂಗ ಸ್ವಾಮಿಗಳು, ಪ್ರಭುಲಿಂಗ ಸ್ವಾಮಿಗಳು, ಸುಗುಣಾತಾಯಿ, ಸತ್ಯಕ್ಕ ಬಂದವರ ಓಣಿ, ಹಾಲಮ್ಮ ತಾಯಿ ಮುಂತಾದ ಪೂಜ್ಯರು ನೇತೃತ್ವ ವಹಿಸಿದರು.
ಸುಭಾಷಚಂದ್ರ ನಾಗರಾಳೆ ಪರಿವಾರದಿಂದ ಪ್ರಸಾದ ದಾಸೋಹ ಜರುಗಿತು. ವೈಜಿನಾಥ ಕಾಮಶೆಟ್ಟೆ, ಪಂಡಿತ ನಾಗರಾಳೆ, ವಿವೇಕ ನಾಗರಾಳೆ ಮುಂತಾದವರು ಉಪಸ್ಥಿತರಿದ್ದರು.
ಪಾರಾಯಣ ಸೇವಾ ಸಮಿತಿ ಅಧ್ಯಕ್ಷರಾದ ಮಮತಾ ಭೂಸೆ ಹಾಗೂ ಕಾರ್ಯಾಧ್ಯಕ್ಷರಾದ ಜಯಶ್ರೀ ಬಿರಾದಾರ ಅವರು ಸ್ವಾಗತಿಸಿರು. ಶರಣ ಡಾ. ರಾಜು ಜುಬರೆ ಅವರಿಂದ ಬಸವ ಪ್ರಾರ್ಥನೆ ನಡೆಯಿತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh
