ಬೀದರ
ಬಸವ ಭಕ್ತರನ್ನು ‘ಬಸವ ತಾಲಿಬಾನಿಗಳು’ ಎಂದು ಅವಹೇಳನ ಮಾಡಿದ ಕನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿಯವರು “ಬಸವಾದಿ ಶರಣರ ಹಿಂದೂ ಸಮಾವೇಶ” ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಸವಕಲ್ಯಾಣಕ್ಕೆ ಆಗಮಿಸುತ್ತಿರುವುದನ್ನು ವಿರೋಧಿಸಿ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ನಾಡಿನ ಸಮಸ್ತ ಬಸವಪರ ಸಂಘಟನೆಗಳು “ಬಸವಕಲ್ಯಾಣಕ್ಕೆ ಕನ್ನೇರಿ ಪ್ರವೇಶ ಬೇಡ” ಎಂಬ ಮಹತ್ವದ ಹೋರಾಟವನ್ನು ನಡೆಸಿದವು.
ಈ ಹೋರಾಟವನ್ನು ಸಂಪೂರ್ಣವಾಗಿ ಕಾನೂನುಬದ್ಧ ಹಾಗೂ ಶಾಂತಿಯುತ ಮಾರ್ಗದಲ್ಲಿ ನಡೆಸಲಾಯಿತು. ಈ ಹೋರಾಟದಲ್ಲಿ ಭಾಗವಹಿಸಲು ರಾಜ್ಯದಾದ್ಯಂತ ಬಸವ ಭಕ್ತರಿಗೆ ಕರೆ ನೀಡಲಾಗಿತ್ತು.
“ಕಲ್ಯಾಣಕ್ಕೆ ಕನ್ನೇರಿ ಬೇಡ” ಎಂಬ ನಮ್ಮ ಪ್ರಮುಖ ಬೇಡಿಕೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ತೀರ್ಪಿನ ಮೂಲಕ ಬಸವ ಭಕ್ತರ ಹೋರಾಟಕ್ಕೆ ಮಹತ್ವದ ಜಯ ದೊರೆತಿದೆ. ತೀರ್ಪಿನ ಪ್ರಕಾರ, ಬಸವಕಲ್ಯಾಣದ ಕಾರ್ಯಕ್ರಮದಲ್ಲಿ ಕನ್ನೇರಿ ಸ್ವಾಮೀಜಿಯವರು ಭಾಷಣ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡದಂತೆ ಹಾಗೂ ತಮ್ಮ ಅಭಿಪ್ರಾಯಗಳನ್ನು ಮತ್ತೊಬ್ಬರ ಮೂಲಕವೂ ವ್ಯಕ್ತಪಡಿಸದಂತೆ ಸೂಚನೆ ನೀಡಲಾಗಿದೆ.
ಈ ತೀರ್ಪನ್ನು ನಾವು ಅತ್ಯಂತ ಗೌರವದಿಂದ ಸ್ವಾಗತಿಸಿ, ನ್ಯಾಯಾಂಗದ ಮೇಲಿನ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ.
ಹೈಕೋರ್ಟ್ ತೀರ್ಪಿನ ನಂತರ, “ಕಲ್ಯಾಣಕ್ಕೆ ಕನ್ನೇರಿ ಬೇಡ” ಎಂಬ ನಮ್ಮ ಹೋರಾಟವನ್ನು ಮುಕ್ತಾಯಗೊಳಿಸಲಾಯಿತು. ಆದ್ದರಿಂದ ಅಲ್ಲಿನ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಹೋರಾಟ ಅಥವಾ ಪ್ರತಿಭಟನೆ ನಡೆಸುವ ಅಗತ್ಯ ಅಥವಾ ಸಂದರ್ಭ ಉಳಿದಿಲ್ಲ.
ಆದಾಗ್ಯೂ, “ಬಸವಾದಿ ಶರಣರ ಹಿಂದೂ ಸಮಾವೇಶ” ಎಂಬ ಶೀರ್ಷಿಕೆಯ ಕುರಿತು ನಮ್ಮ ತಕರಾರು, ವಿರೋಧ ಹಾಗೂ ಭಿನ್ನಾಭಿಪ್ರಾಯ ಮುಂದುವರಿಯಲಿದೆ. ಈ ವಿಷಯವನ್ನು ಮುಂದಿನ ದಿನಗಳಲ್ಲಿ ಕಾನೂನುಬದ್ಧ ಹೋರಾಟದ ಮೂಲಕವೇ ಬಗೆಹರಿಸಿಕೊಳ್ಳಬೇಕಾಗಿದೆ.
ಹೈಕೋರ್ಟ್ ತೀರ್ಪಿನ ನಂತರ ಡಾ.ಬಸವಲಿಂಗಪಟ್ಟದೇವರ ಸಮ್ಮುಖದಲ್ಲಿ ಆ ಸಂದರ್ಭದಲ್ಲಿ ಉಪಸ್ಥಿತ ಸಮಸ್ತ ಪೂಜ್ಯರೊಂದಿಗೆ ಸಮಾಲೋಚನೆ ನಡೆಸಿ, ಕಾನೂನಿಗೆ ಗೌರವ ನೀಡಿ, ನಾವು ಕರೆ ನೀಡಿದ್ದ ಹೋರಾಟಕ್ಕೆ ಇತಿಶ್ರೀ ಹಾಡಲಾಯಿತು.
ಕೆಲವರು ಈ ನಿರ್ಧಾರವನ್ನು ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ನಾವು ಗೌರವಿಸುತ್ತೇವೆ. ಆದರೆ ನಮ್ಮ ದೃಷ್ಟಿಯಲ್ಲಿ ಇದು ಪ್ರಬುದ್ಧ, ಜವಾಬ್ದಾರಿಯುತ ಹಾಗೂ ಸಮಯೋಚಿತ ನಿರ್ಧಾರವಾಗಿದೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ.
ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ ಹೋರಾಟದ ನೇತೃತ್ವ ವಹಿಸಿಕೊಂಡವರ ಮೇಲೆ ಜವಾಬ್ದಾರಿ ಹಾಗೂ ಇಡೀ ಬಸವ ಭಕ್ತರ ಗೌರವವನ್ನು ಕಾಪಾಡುವ ಹೊಣೆಗಾರಿಕೆಯೂ ಇರುತ್ತದೆ. ಕಾನೂನು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಅಗತ್ಯ ಸಹಕಾರ ನೀಡಬೇಕಾದ ಸಂದರ್ಭಗಳೂ ಉಂಟಾಗುತ್ತವೆ. ಆವೇಶದ ನಿರ್ಧಾರಗಳು ಅನಗತ್ಯ ಹಾನಿಗೆ ಕಾರಣವಾಗಬಹುದು ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು.
ಆದ್ದರಿಂದ ಈ ನಮ್ಮ ನಿರ್ಧಾರ ಸೂಕ್ತ, ಸಂಯಮಯುತ ಹಾಗೂ ಸಮಯೋಚಿತವಾಗಿದೆ.
ಈ ಮಹತ್ವದ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲಾ ಪೂಜ್ಯರಿಗೂ, ಬಸವಪರ ಸಂಘಟನೆಗಳ ಮುಖಂಡರಿಗೂ ಹಾಗೂ ನಾಡಿನ ಸಮಸ್ತ ಬಸವ ಭಕ್ತರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಹೋರಾಟ ಹಿಂಪಡೆದದ್ದು ಸರಿಯಾದ ಕ್ರಮವಲ್ಲ. ಕಾರಣ ಇಲ್ಲಿ ಎಲ್ಲರ ಅಭಿಪ್ರಾಯ ಕ್ರೂಡಿಕರಣಗೊಂಡಿಲ್ಲ. ಇಷ್ಟು ದಿವಸ ಲಿಂಗಾಯತ ವೀರಶೈವ. ಇನ್ನೂ ಮುಂದೆ ಲಿಂಗಾಯತ ವರ್ಸಸ್ ಲಿಂಗಾಯತ ಎನ್ನುವಂತಾಯಿತು. ಇನ್ನೂ ಸಮಯ ಮುಗಿದಿಲ್ಲ. ಹೋರಾಟ ಮುಂದುವರಿಸಿ ಹಾಗೂ ಅರ್ಧ ಸಂದ ಜಯಕ್ಕೆ ಎಲ್ಲರೂ ಕಲ್ಯಾಣದಲ್ಲಿ ಸೇರಿ ಹೋರಾಟ ಮತ್ತು ಸಂಭ್ರಮಾಚರಣೆ ಎನ್ನುವ ಎರಡು ಕಾರ್ಯಕ್ರಮಗಳನ್ನು ಒಂದೆ ವೇದಿಕೆಯಲ್ಲಿ ಮಾಡಿಬಿಡಿ.