ಅಲ್ಲಮಪ್ರಭು ಜಯಂತಿ: ರಾಯಚೂರಿನಲ್ಲಿ ವಿಶೇಷ ಚಿಂತನ ಕಾರ್ಯಕ್ರಮ

ರಾಯಚೂರು

ನಗರದ ಬಸವ ಕೇಂದ್ರದಲ್ಲಿ, 12ನೇ ಶತಮಾನದ ಶ್ರೇಷ್ಠ ಅನುಭವ ಮಂಟಪ ಶೂನ್ಯ ಸಿಂಹಾಸನದ ಪ್ರಪ್ರಥಮ ಅಧ್ಯಕ್ಷ, ಅಲ್ಲಮಪ್ರಭುದೇವರ ಜಯಂತೋತ್ಸವ ಅಂಗವಾಗಿ ವಿಶೇಷ ಚಿಂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಅಲ್ಲಮ ಪ್ರಭುದೇವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಪಣೆ ಮಾಡಿ, ನಮನ ಸಲ್ಲಿಸುವುದರ ಮೂಲಕ ಚಾಲನೆ ನೀಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಶರಣ ರಾಚನಗೌಡ ಕೋಳೂರು, ಮಾತನಾಡುತ್ತಾ, ಪ್ರಭುದೇವರ ಮೇರು ವ್ಯಕ್ತಿತ್ವ, ಶೂನ್ಯ ಸಂಪಾದನೆ, ಭಕ್ತಿ ಮತ್ತು ವೈರಾಗ್ಯದ ಬೋಧನೆ ಮೂಲಕ, ಬಸವಾದಿ ಶಿವಶರಣರಲ್ಲಿ ಮೇರು ಶಿಖರವಾದವರು ಅಲ್ಲಮರು ಎಂದು ತಿಳಿಸಿದರು.

ಅಲ್ಲಮಪ್ರಭು ವಚನಕಾರರಲ್ಲಿ ಪ್ರಸಿದ್ಧರಾದವರು. ಅತ್ಯಂತ ನೇರ ನಿಷ್ಠುರವಾದಿ. ಶರಣ-ಶರಣೆಯರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿದರು. ತಮ್ಮ ವಚನಗಳ ಮೂಲಕ ಅಂತರಂಗ, ಬಹಿರಂಗಗಳನ್ನು ಶೋಧಿಸಲೆತ್ನಿಸಿದರು ಎಂದು ತಿಳಿಸಿದರು.

ಗುಹೇಶ್ವರ ಎಂಬ ಅಂಕಿತನಾಮದಲ್ಲಿ ಅವರ ಸುಮಾರು 1645 ವಚನಗಳು ಅಸ್ತಿತ್ವದಲ್ಲಿವೆ. ಅವರು ಆಧ್ಯಾತ್ಮಿಕತೆ ಮತ್ತು ಅತೀಂದ್ರಿಯತೆಯ ಮೇಲೆ ಗಮನ ಕೇಂದ್ರೀಕರಿಸಿದರು. ಅವರು ತಮ್ಮ ಅನುಭವಗಳನ್ನು ಮಾರ್ಮಿಕ ಭಾಷೆಯಲ್ಲಿ ವ್ಯಕ್ತಪಡಿಸಿ, ಕುತೂಹಲ ಅತೀಂದ್ರಿಯ ಅನುಭವ ಮತ್ತು ಬುದ್ಧಿವಂತಿಕೆಯಿಂದ ಗರ್ಭಿಣಿಯಾಗಿರುವ ಅವರ ಬೆಡಗಿನ ವಚನಗಳು ಒಗಟಾಗಿವೆ ಎಂದು ಬಣ್ಣಿಸಿದರು.

ಬಸವಾದಿ ಶರಣರ ಕೃಪೆಯಿಂದ, ತಮ್ಮೆಲ್ಲರ ಜೀವನದಲ್ಲಿ ಬೇವು ಮತ್ತು ಬೆಲ್ಲದ ಸಮತೋಲಿತ ಮಿಶ್ರಣ ತುಂಬಿರಲಿ ಎಂದು ಕೋಳೂರು ಸರ್ವರಿಗೂ ಯುಗಾದಿ ಹೊಸ ವರುಷದ ಶುಭಾಶಯಗಳು ಕೋರಿದರು.

ವಿಶೇಷ ಉಪನ್ಯಾಸ ನೀಡಿದ ಶರಣ ಶಿವಕುಮಾರ ಮಾಟೂರ್ ಮಾತನಾಡುತ್ತಾ,
ಹನ್ನೆರಡನೇ ಶತಮಾನದಲ್ಲಿ ನಡೆದ ಶರಣ ಚಳವಳಿಯಲ್ಲಿ ಕೆಲವು ಮಹಾರೂಪಕಗಳು ಬರುತ್ತವೆ. ಅವುಗಳಲ್ಲಿ ಮಹಾಮನೆ ಮತ್ತು ಅನುಭವ ಮಂಟಪ ಮುಖ್ಯವಾದವು. ಬಸವಣ್ಣನವರ ಮನೆಯನ್ನು ಮಹಾಮನೆ ಎಂದು ಕರೆದದ್ದು ಉಚಿತವೂ ವಾಸ್ತವವೂ ಆದ ಸತ್ಯ. ಇದನ್ನು ವಿವಾದವಿಲ್ಲದೆ ಎಲ್ಲರೂ ಒಪ್ಪಿದ್ದಾರೆ. ಆದರೆ, ಅನುಭವ ಮಂಟಪದ ಬಗ್ಗೆ ವೈದಿಕರು ಅಪಸ್ವರ ಎತ್ತಿದ್ದಾರೆ. ಅನುಭವ ಮಂಟಪವೆಂಬುದು ಇರಲೇ ಇಲ್ಲ. ಅದು ಚಳವಳಿ ನಡೆದು ಎರಡು ಶತಮಾನ ಕಳೆದ ಮೇಲೆ ಕಲ್ಪಿಸಿದ ಒಂದು ಕಾಲ್ಪನಿಕ ಸಂಗತಿ ಎಂದು ವಾದಿಸುತ್ತಾರೆ. ಈ ವಾದಕ್ಕೆ ಹುರುಳಿಲ್ಲ. ಕಾರಣ ಈ ದೇಶದಲ್ಲಿ ಹಲವು ವಿಚಾರಗಳಲ್ಲಿ ಚರಿತ್ರೆಯನ್ನು ತಿರುಚಲಾಗಿದೆ ಎಂದು ತಿಳಿಸಿದರು.

ಇದ್ದದ್ದನ್ನು ಇಲ್ಲವೆನ್ನುವ ನಡೆದದ್ದಕ್ಕೆ ಅಪವ್ಯಾಖ್ಯೆ ನೀಡುವ ಅನರ್ಥಕಾರಿ ಪಂಡಿತ ಮಾನ್ಯರು ವರ್ಣಹಿತ ಸಾಧಕರು. ಇಂಥವರ ವಾದ ಸರಣಿಯಲ್ಲಿ ವಿವಾದಕ್ಕೆ ಒಳಗಾದ ಒಂದು ವಾಸ್ತವ ಸಂಗತಿ ಅನುಭವ ಮಂಟಪ.

ಬಾಹ್ಯ ಪ್ರಮಾಣುವಿಗಿಂತ ಅಂತಃಪ್ರಮಾಣವನ್ನೇ ನಿರುಕಿಸುವ ಮನಸ್ಸುಗಳಿಗೆ ವಚನ ಸಾಹಿತ್ಯದ ಬಹುತೇಕ ರಚನೆಗಳು ಅನುಭವ ಮಂಟಪದ ಜಿಜ್ಞಾಸೆಯ ಫಲರೂಪಗಳೆಂಬುದು ಅಂಗೈನೆಲ್ಲಿಯಷ್ಟು ಸತ್ಯ. ಒಬ್ಬರ ಪ್ರಶ್ನೆಗೆ ಮತ್ತೊಬ್ಬರ ಉತ್ತರವೆಂಬಂತೆ ಕೆಲವು ವಚನಗಳು ರಚನೆಗೊಂಡಿವೆ. ಪ್ರಶ್ನೆ ಪ್ರತಿಪ್ರಶ್ನೆಗಳ, ಉತ್ತರ ಪ್ರತ್ಯುತ್ತರಗಳ ಒಳ ಸುಳಿಗಳಲ್ಲಿ ನಡೆದ ಒಂದು ಸಾಮುದಾಯಿಕ ಮಹಾಜಿಜ್ಞಾಸೆಗಳಾಗಿ ಎದುರು ನಿಲ್ಲುತ್ತದೆ. ಇಡೀ ವಚನ ಭಂಡಾರವನ್ನು ಸೂಕ್ಷ್ಮವಾಗಿ ಓದುತ್ತಾ ಹೋದರೆ ಅದೊಂದು ಮಹಾಯಾನ; ಹನಿ ಹಳ್ಳ ತೊರೆಗೂಡಿ ಹರಿದ ಮಹಾನದಿಯ ಯಾನ. ಒಂದೆಡೆ ಸಂಘಟಿತವಾಗದೆ ಚರ್ಚಿಸದೆ ಯಾವ ಚಳವಳಿಯೂ ರೂಪುರೇಷೆಗಳನ್ನು ಪಡೆಯುವುದಿಲ್ಲ. ಇಂಥ ಸಂಘಟಿತ ಸಮಾವೇಶದ ಮೂರ್ತರೂಪವೇ ಅನುಭವ ಮಂಟಪ.

ಈ ಅನುಭವ ಮಂಟಪದ ಆಯಸ್ಕಾಂತ ಸೆಳೆತಕ್ಕೆ ಒಳಗಾಗದೆ ಇರುವ ಶರಣರಿಲ್ಲ ಎಂಬಷ್ಟರ ಪರಿವ್ಯಾಪ್ತಿಯಲ್ಲಿ ಅದರ ಕ್ರಿಯಾಚಲನೆ ಹರಿದಿದೆ. ದೇಶದ ಮೂಲೆ ಮೂಲೆಗಳಿಂದ ಇದರ ಕಕ್ಷೆಗೆ ಬಂದು ಸೇರಿದವರಿದ್ದಾರೆ. ಕಾಶ್ಮೀರದ ಅರಸ ತನ್ನ ಪತ್ನಿಯೊಡಗೂಡಿ ಅರಸೊತ್ತಿಗೆಯನ್ನು ತೊರೆದು ಕಲ್ಯಾಣಕ್ಕೆ ಬಂದ. ಕಟ್ಟಿಗೆ ಕಾಯಕದಲ್ಲಿ ತೊಡಗಿ ಜಂಗಮ ದಾಸೋಹಕ್ಕೆ ತೊಡಗಿದ. ಆ ದಂಪತಿಗಳು ಮೋಳಿಗೆ ಮಾರಯ್ಯ ಮಹದೇವಮ್ಮನೆಂದು ಹೆಸರಾಗಿದ್ದಾರೆ.

ಸೌರಾಷ್ಟ್ರದ ವರ್ತಕ ಆದಯ್ಯ, ಆಂಧ್ರದಿಂದ ಮೈದುನ ರಾಮಯ್ಯ, ಕುಂತಳದಿಂದ ಏಕಾಂತದರಾಮಯ್ಯ, ಕಳಿಂಗದಿಂದ ಮರುಳಶಂಕರದೇವ ಹೀಗೆ ಈ ಪಟ್ಟಿ ಬೆಳೆಯುತ್ತದೆ. ಈ ಅನುಭವ ಮಂಟಪದಲ್ಲಿ ಎಲ್ಲ ವರ್ಗ ವರ್ಣ ಮೂಲದ ಶರಣರು ಕಲೆತು ಸರ್ವ ಭೇದಗಳನ್ನು ಕಿತ್ತೊಗೆದು ಶಿವಾನುಭವ ಸಹಪಂಕ್ತಿ ಭೋಜನ ನಡೆಸುತ್ತಿದ್ದರು.

ಅನುಭವ ಮಂಟಪದ ಮಧ್ಯದಲ್ಲಿ ಶೂನ್ಯ ಸಿಂಹಾಸನ. ಇದು ಅಧ್ಯಕ್ಷರ ಗದ್ದುಗೆ, ಈ ಸಿಂಹಾಸನವನ್ನೇರಲು ಆರು ಮೆಟ್ಟಿಲುಗಳು. ಭಕ್ತ ಮಹೇಶ ಪ್ರಸಾದ ಪ್ರಾಣಲಿಂಗ ಶರಣ ಐಕ್ಯ ಈ ಷಟ್ಸಲ್ಥಗಳನ್ನು ಸಂಕೇತಿಸುವ ಪಾವಟಿಕೆಗಳಿವು. ಶೂನ್ಯ ಸಿಂಹಾಸನದ ಮೊದಲ ಅಧ್ಯಕ್ಷ ಅಲ್ಲಮಪ್ರಭು; ಐಕ್ಯ ಸ್ಥಲದ ಅನುಭವವನ್ನು ಪಡೆದಿದ್ದ ಅನುಭಾವಿ.

ಇಷ್ಟಲಿಂಗ ಪೂಜೆ, ಕರ್ಮವಾದದ ಬೇರುಗಳನ್ನು ಕಿತ್ತು ಹೊಸ ಸಮಾನತೆಯ ಹೊಸ ದಾರಿಯಲ್ಲಿ ನಡೆಯುವುದು, ವಿಚಾರ ಸ್ವಾತಂತ್ರ್ಯ, ಆಚಾರ ಸ್ವಾತಂತ್ರ್ಯಗಳ ತಳಹದಿಯಲ್ಲಿ ವ್ಯಕ್ತಿಗೌರವವನ್ನು ಕಾಪಾಡುವುದು, ಕಾಯಕ ದಾಸೋಹಗಳ ನೆಲೆಯಲ್ಲಿ ನಡೆನುಡಿ ಶುದ್ಧ ಬದುಕು ಕಟ್ಟುವುದು ಇತ್ಯಾದಿ ಪ್ರಗತಿಪರ ಕಾರ್ಯಗಳಲ್ಲಿ ಅನುಭವ ಮಂಟಪ ಕ್ರಿಯಾಶೀಲವಾಗಿತ್ತು ಎಂದು ಮಾಟೂರ ತಿಳಿಸಿದರು.

ಶರಣ ಚನ್ನಬಸವ ಮಲದಕಲ್, ಸ್ವಾಗತ ಕೋರಿದರು. ವೆಂಕಣ್ಣ ಆಶಾಪುರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ಗುಡಿಮನಿ ವಂದಿಸಿದರು.

ವಚನ ಗಾಯನ ಮತ್ತು ಸಾಮೂಹಿಕ ಬಸವ ಪ್ರಾರ್ಥನೆಯನ್ನು ಶರಣ ರಾಘವೇಂದ್ರ ಆಶಾಪುರ ಮತ್ತು ಅವರ ಶಿಷ್ಯವೃಂದ ನಡೆಸಿಕೊಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
Leave a comment

Leave a Reply

Your email address will not be published. Required fields are marked *