ಸಾಣೇಹಳ್ಳಿ ನಾಟಕೋತ್ಸವ ಸಮಾರೋಪ
ಸಾಣೇಹಳ್ಳಿ :
ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಶಿವಕುಮಾರ ಪ್ರಶಸ್ತಿಯೂ ಒಂದು. ಸರ್ಕಾರದ ಪ್ರಶಸ್ತಿಗಳು ಹತ್ತರಲ್ಲಿ ಒಂದಾಗಿದ್ದರೆ, ಶಿವಕುಮಾರ ಪ್ರಶಸ್ತಿಯು ರಾಜ್ಯದಲ್ಲಿ ಒಂದೇ ಎಂದು ರಂಗಕರ್ಮಿ ಬಿ.ಆರ್. ಪೊಲೀಸಪಾಟೀಲ ಪ್ರಶಂಶಿಸಿದರು.
ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ 2026ನೇ ಸಾಲಿನ ಶಿವಕುಮಾರ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಈಗೀಗ ಪ್ರಶಸ್ತಿಗಳ ಮೊತ್ತ ಹೆಚ್ಚಿದೆ. ಆದರೆ ಮೌಲ್ಯ ಕಡಿಮೆಯಾಗಿದೆ. ಪ್ರಶಸ್ತಿಗಳ ಸಂಖ್ಯೆ ಹೆಚ್ಚಿದೆ. ಇದಕ್ಕಿಂತ ಪಡೆಯುವವರ ಸಂಖ್ಯೆ ಹೆಚ್ಚಿದೆ. ಕೊಡುವವರಿಗಿಂತ ಪಡೆಯುವವರ ಸಂಖ್ಯೆ ಹೆಚ್ಚಿದೆ. ಆದರೆ ಮೌನಸಾಧಕರನ್ನು ಗುರುತಿಸಿ ಶಿವಕುಮಾರ ಪ್ರಶಸ್ತಿ ಕೊಡುವುದು ಗಮನಾರ್ಹ ಎಂದು ಹೇಳಿದರು.
ಸಾಣೇಹಳ್ಳಿ ಮತ್ತು ರಂಗಭೂಮಿ ಒಂದೇ ನಾಣ್ಯದ ಎರಡು ಮುಖಗಳು. ರಂಗಕರ್ಮಿಗಳಿಗೆ ಇದು ತೀರ್ಥಕ್ಷೇತ್ರ ಎಂದು ಕೊಂಡಾಡಿದರು.
ಬರವಣಿಗೆ ಸಂತೆಯಲ್ಲ. ಆದರೆ ಬರಹ ನಿಧಾನವಾದರೆ ಸಂತೃಪ್ತಿ. ನಿಧಾನ ಎಂದರೆ ಗಟ್ಟಿಯಾದುದು. ಹೆಚ್ಚು ಬರೆದು ರದ್ದಿಯಾಗುವ ಅಗತ್ಯವಿಲ್ಲ. ಸಾಹಿತಿ ಸತ್ಯಕಾಮ ಅವರನ್ನು ಭೇಟಿಯಾದಾಗ ಸಂತಾನಕ್ಕೆ ಅಣು ಸಾಕು. ಮಿಕ್ಕಿದ್ದೆಲ್ಲ ವ್ಯರ್ಥ ಎಂದಿದ್ದನ್ನು ಮನನ ಮಾಡಿಕೊಂಡು ನಿಧಾನವಾಗಿ, ಗಟ್ಟಿಯಾಗಿ ನಾಟಕಗಳನ್ನು ರಚಿಸಿದೆ.
ಆಕಾಶವಾಣಿಯ ನಾಟಕ ಸ್ಪರ್ಧೆಯಲ್ಲಿ 800 ನಾಟಕಗಳಲ್ಲಿ ನನ್ನ ‘ತುಲಾಭಾರ’ ನಾಟಕ ಮೊದಲ ಬಹುಮಾನ ಪಡೆಯಿತು. ಬಸವರಾಜ ಸಾದರ ಅವರು ಈ ನಾಟಕವನ್ನು ಪ್ರಸಾರಗೊಳಿಸಿದರು. ಹಿಂದಿ ಭಾಷೆಗೂ ಅನುವಾದವಾಗಿ ಪ್ರಸಾರವಾಯಿತು ಎಂದು ಸ್ಮರಿಸಿದರು.
ಸಿದ್ಧೇಶ್ವರ ಶ್ರೀಗಳ ಕುರಿತು ನನ್ನ ‘ಬಯಲು ಬಯಲಾಯಿತ್ತು’ ನಾಟಕ ಕೂಡಾ ಆಕಾಶವಾಣಿಯಿಂದ ಪ್ರಸಾರವಾಯಿತು. ನಂತರ ನಮ್ಮ ವಾತ್ಸಲ್ಯ ವಿಚಾರ ವೇದಿಕೆಯಿಂದ ಈ ನಾಟಕ ರಂಗಕ್ಕೇರಿದೆ ಎಂದರು.
ಬನಹಟ್ಟಿಯ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕನಾಗಿ, ಪ್ರಾಂಶುಪಾಲನಾಗಿ ದುಡಿಯುವಾಗಲೇ ಜಾನಪದ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿ ತೊಡಗಿಕೊಂಡೆ. ಆದರೆ ಸಾಹಿತಿಯಾಗಿ ಸಿಕ್ಕ ಗೌರವಕ್ಕಿಂತ ಕಲಾವಿದನಾಗಿ ಹೆಚ್ಚು ಗೌರವ ಸಿಕ್ಕಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

60 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವೆ. ನೂರಾರು ನಾಟಕಗಳನ್ನು ರಚಿಸಿರುವೆ. ರಂಗಭೂಮಿ ಪಾವಿತ್ರ್ಯ ಮಠದ ಪಾವಿತ್ರ್ಯದಷ್ಟೇ ಪ್ರಮುಖ. ಅನುಭವ ಮತ್ತು ಪಾವಿತ್ರ್ಯ ಗಮನಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪಂಡಿತಾರಾಧ್ಯ ಶ್ರೀಗಳು ಹೇಳಿದ್ದನ್ನು ಮರೆಯಲಾಗದು. ಅವರು ಕೇವಲ ಮಠಾಧೀಶರಾಗದೆ ಕಲಾಕಾರರು, ಕಲಾಪೋಷಕರಾಗಿದ್ದಾರೆ ಎಂದು ಶ್ಲಾಘಿಸಿದರು.
ಸಾಣೇಹಳ್ಳಿಗೆ ಜಾಗತಿಕ ಮನ್ನಣೆ
ಇಲ್ಲಿ ನಡೆಯುವ ನಾಟಕಗಳು ಜಗತ್ತಿನ ಗಮನ ಸೆಳೆದಿವೆ. ರಾಜ್ಯದ ಮುಖ್ಯವಾದ ರೆಪರ್ಟರಿಯಾಗಿ ಗಮನ ಸೆಳೆಯುತ್ತಿದೆ. ಸಾಣೇಹಳ್ಳಿಗೆ ಸೊಗಡಿದೆ. ಜಾಗತಿಕ ಮನ್ನಣೆ ಇದೆ ಎಂದು ವಚನ ಟಿವಿ ನಿರ್ದೇಶಕ ಸಿದ್ದು ಯಾಪಲಪರವಿ ಹೇಳಿದರು.
ಶಿವಕುಮಾರ ಪ್ರಶಸ್ತಿ ಪುರಸ್ಕೃತರಾದ ಬಿ.ಆರ್. ಪೊಲೀಸಪಾಟೀಲ ಅವರ ಕುರಿತ ಪರಿಚಯಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ರಂಗಭೂಮಿಯನ್ನು ಜೀವಂತವಾಗಿಸಿ, ಬೆಳೆಸುತ್ತಿರುವವರು ಸಾಣೇಹಳ್ಳಿ ಮಠಗಳ ಭಕ್ತರು. ಸಾಣೇಹಳ್ಳಿಯಲ್ಲಿ ಶಿಕ್ಷಣ, ಸಾಹಿತ್ಯ, ರಂಗಭೂಮಿ ಮೂಲಕ ಪರಿವರ್ತಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದರು.

ಸ್ವಾಮಿಗಳ ಪವರ್ ಪರಮನೆಂಟು ; ಖಾದರ್
ನಮ್ಮಂಥ ರಾಜಕಾರಣಿಗಳ ಅಧಿಕಾರ, ಅಂತಸ್ತು, ಗತ್ತು ಶಾಶ್ವತವಲ್ಲ. ನಮ್ಮ ಕೆಲಸ, ಪ್ರೀತಿ, ವಿಶ್ವಾಸ ಶಾಶ್ವತ. ಆದರೆ ಸ್ವಾಮಿಗಳ ಪವರ್ ಪರಮನೆಂಟು. ಹೀಗಾಗಿ ಅವರದು ಪರಮನೆಂಟ್ ಪವರ್ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಶ್ಲಾಘಿಸಿದರು.
ನಾಟಕೋತ್ಸವದ ಕೊನೆಯ ದಿನವಾದ ಶುಕ್ರವಾರ ಏರ್ಪಡಿಸಿದ್ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಾಣೇಹಳ್ಳಿಯ ನಾಟಕೋತ್ಸವ ಈ ಮಣ್ಣಿನ ಸೊಗಡು, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುತ್ತದೆ. ಜೊತೆಗೆ ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯ ನಡೆಯುತ್ತಿದೆ. ಆದರೆ ಆಧುನಿಕ ತಂತ್ರಜ್ಞಾನವಿದ್ದರೂ ಕನ್ನಡ ನೆಲದ ಸೊಗಡನ್ನು ಅಲುಗಾಡಿಸಲಾಗದು ಎಂದರು.
ಸಾಣೇಹಳ್ಳಿ ಶ್ರೀಗಳು ಧಾರ್ಮಿಕ, ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಕೊಡುಗೆ ನೀಡುವುದರ ಜೊತೆಗೆ ರಂಗಭೂಮಿಗೂ ಅಪಾರ ಕೊಡುಗೆ ನೀಡುತ್ತಿದ್ದಾರೆ. ಅವರ ಶ್ರಮದಿಂದ ಏಕತೆ, ಪ್ರೀತಿ, ಸೋದರತೆ, ಸಮಾನತೆ ಕಾಣಲು ಸಾಧ್ಯ. ಬಲಿಷ್ಠ ಭಾರತ ಕಟ್ಟಲು ಸಾಧ್ಯವಾಗುತ್ತದೆ ಎಂದರು.

ಸಾಮರಸ್ಯ ಸಮಾಜ ಕಟ್ಟುವಾಗ ಭಿನ್ನಾಭಿಪ್ರಾಯಗಳು ಸಹಜ. ಆದರೆ ಪರಸ್ಪರ ಚರ್ಚಿಸಿ, ಸಾಮರಸ್ಯದ ಮೂಲಕ ಸಾಗುವುದು ಬಹಳ ಮುಖ್ಯ ಎಂದು ಸಚಿವ ಖಾದರ್ ಹೇಳಿದರು.
ಸಮಾರಂಭದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ‘ನುಲಿಯ ಚಂದಯ್ಯ’ ನಾಟಕ ಕೃತಿಯನ್ನು ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಬಿಡುಗಡೆಗೊಳಿಸಿದರು.
ಕೊನೆಯಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚನೆಯ, ಜಗದೀಶ್ ಆರ್. ಅವರ ಸಂಗೀತ-ನಿರ್ದೇಶನದ, ಶಿವಸಂಚಾರ-26 ಅಭಿನಯದ ‘ನುಲಿಯ ಚಂದಯ್ಯ’ ನಾಟಕ ಪ್ರದರ್ಶನಗೊಂಡಿತು. ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ಮಕ್ಳಳಿಂದ ನೃತ್ಯ ರೂಪಕಗಳು ಪ್ರದರ್ಶನಗೊಂಡವು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU
