ಶಹರ ಪೊಲೀಸ ಠಾಣೆಯಲ್ಲಿ ರವಿ ಹಂಜ್ ವಿರುದ್ಧ ದೂರು ದಾಖಲು
ಗದಗ :
ಇತ್ತೀಚಿಗೆ ಅನಿವಾಸಿ ಭಾರತೀಯ ರವಿ ಹಂಜ್ ಉರ್ಫ್ ರವಿ ಹಂಜಗಿಮಠ ಎಂಬಾತ ವಿಶ್ವವಾಣಿ ಯುಟ್ಯೂಬ್ ಗೆ ನೀಡಿದ ಸಂದರ್ಶನವೊಂದರಲ್ಲಿ ಬಸವಣ್ಣ ಕಳ್ಳ, ಕೊಲೆಗಾರ, ವಂಚಕ ಎಂದು ಹೇಳಿರುವುದನ್ನು ಬಸವ, ದಲಿತ, ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಈ ಕೂಡಲೇ ರವಿ ಹಂಜನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಗುರುವಾರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿಪತ್ರ ಸಲ್ಲಿಸಿ ಸರ್ಕಾರವನ್ನು ಆಗ್ರಹಿಸಿವೆ.
ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ, ಬಸವರಾಜ ವೆಂಕಟಾಪೂರ ಶರಣರು ಮಾತನಾಡುತ್ತ, ವಿಶ್ವಗುರು ಬಸವಣ್ಣ ಹಾಗೂ ಅಂದಿನ ಶರಣರು ಈ ನೆಲದಲ್ಲಿ ಜನಿಸಿದ ಮಹಾನ್ ದಾರ್ಶನಿಕರು. ಅಂದು ಶ್ರೇಣಿಕೃತ ಜಾತಿವ್ಯವಸ್ಥೆ, ಧಾರ್ಮಿಕ ಶೋಷಣೆ, ಅಂಧಶ್ರದ್ದೆಗಳಿಂದ ಕಂಗೆಟ್ಟಿದ್ದ ಮನುಕುಲಕ್ಕೆ ಸಮಾನತೆಯ ಸಂದೇಶವನ್ನು ನೀಡಿ ಸರ್ವರೂ ಸಮಾನರೆಂದು ಸಾರಿದವರು. ಪಶುಗಳಿಗಿಂತ ಕೀಳಾಗಿದ್ದ ಅಸ್ಪೃಶ್ಯರು, ಶೂದ್ರರನ್ನು ಸೇರಿದಂತೆ ಶೋಷಿತ ಸರ್ವವರ್ಗದವರನ್ನು ಅಪ್ಪಿಕೊಂಡವರು ಬಸವಣ್ಣನವರು.
ಅಂದಿನ ಅನುಭವ ಮಂಟಪದಲ್ಲಿ ಲಿಂಗಭೇದ, ಜಾತಿಬೇಧಗಳನ್ನು ಅಳಿಸಿ ಸರ್ವ ಶರಣ, ಶರಣೆಯರಿಗೆ ಸಮಾನ ಸ್ಥಾನ ಮಾನ ನೀಡಿದವರು. ಸರ್ವರೂ ಶಿವನ ಮಕ್ಕಳೆಂದವರು ಬಸವಣ್ಣನವರು.
ಇಂದು ಬಸವಣ್ಣ, ಬಸವಾದಿ ಶರಣರು, ಬಸವತತ್ವವು ವಿರೋಧಿಗಳಾಗಿರುವ ಹಲವು ಕುತ್ಸಿಕ ಮನಸ್ಸಿನವರಿಂದ ತೀವ್ರ ದಾಳಿಗೆ ಒಳಗಾಗುತ್ತಿದೆ. ಅದೇ ವರ್ಗಕ್ಕೆ ಸೇರಿದ ರವಿ ಹಂಜ್ ಉರ್ಫ ಹಂಜಗಿಮಠ ಎಂಬಾತ ಯುಟ್ಯೂಬಗೆ ನೀಡಿದ ಸಂದರ್ಶನವೊಂದಕ್ಕೆ ನಮ್ಮ ಧರ್ಮಗುರು ಬಸವಣ್ಣನವರ ಬಗೆಗೆ ಆಡಿದ ಮಾತುಗಳು ಅದರಲ್ಲೂ ಎಲ್ಲ ಧರ್ಮಗಳ ಸಾರಾಂಶವನ್ನೇ ಹೊಂದಿರುವ “ಕಳಬೇಡ…ಕೊಲಬೇಡ…” ಈ ವಚನವನ್ನೇ ಉದಾಹರಿಸಿ ಬಸವಣ್ಣನವರು ದಾಸೋಹ ನೆವದಲ್ಲಿ ಬಿಜ್ಜಳನ ಭಂಡಾರ ದುರುಪಯೋಗ ಪಡಿಸಿಕೊಂಡರು. ಕೊನೆಗೆ ಆ ಬಿಜ್ಜಳನನ್ನೇ ಕೊಲ್ಲಿಸಿದರು. ತಾವು ಹೇಳುವ ವಚನಕ್ಕೆ ವೈರುಧ್ಯವೆನ್ನುವ ರೀತಿಯಲ್ಲಿ ನಡೆದುಕೊಂಡರೆಂದು ಅಪ್ಪಟ ಹಸಿ ಸುಳ್ಳನ್ನು ಹೇಳಿ ನಮ್ಮ ಬಸವಣ್ಣನವರಿಗೆ ಮಾಡಿದ ಅಪಮಾನ ತೀವ್ರ ಖಂಡನೀಯವೆಂದರು.
ಇದು ಸರ್ವ ಬಸವಾಭಿಮಾನಿಗಳ ಮನಕ್ಕೇ ತೀವ್ರ ಆಘಾತ, ನೋವು ನೀಡಿದ್ದು ರವಿ ಹಂಜ್ ಹಾಗೂ ಯುಟ್ಯೂಬ್ ಸಂಪಾದಕ ವಿಶ್ವೇಶ್ವರ ಭಟ್ ಮತ್ತು ಸಂದರ್ಶನ ಪಡೆದ ವ್ಯಕ್ತಿಯ ಮೇಲೆ ಸ್ವಯಂ ಕೇಸು ದಾಖಲಿಸಿ ಕಾನೂನಿನಡಿ ಶಿಕ್ಷಿಸಬೇಕೆಂದು ಒತ್ತಾಯಿಸಿದರು.
ಆರಂಭದಲ್ಲಿ ಹಿರಿಯರಾದ ಎಸ್. ಎನ್. ಬಳ್ಳಾರಿ ಡಿಎಸ್ಎಸ್ ಜಿಲ್ಲಾ ಸಂಚಾಲಕರು ಮಾತನಾಡುತ್ತಾ, ನಾವಿಲ್ಲಿ ರವಿ ಹಂಜ್ ಎಂಬಾತನ ದುರ್ವರ್ತನೆ ಖಂಡಿಸಿ ಆತನ ಮೇಲೆ ಕಾನೂನಿನನ್ವಯ ಕ್ರಮ ಕೈಗೊಳ್ಳಲು ಒತ್ತಾಯಿಸುವುದಕ್ಕಾಗಿ ಸೇರಿದ್ದೇವೆ.
೧೨ನೇ ಶತಮಾನದಲ್ಲೇ ತಳವರ್ಗ, ಮೇಲುವರ್ಗ ಸೇರಿದಂತೆ ಸರ್ವರನ್ನು ಅಪ್ಪಿಕೊಂಡವರು ಬಸವಣ್ಣನವರು. ಇಂತಹ ಮಹಾನ್ ವ್ಯಕ್ತಿಯ ಬಗೆಗೆ ಕೇವಲವಾಗಿ ಮಾತನಾಡಿರುವ ರವಿ ಹಂಜ್ ಹಾಗೂ ಅದಕ್ಕೆ ಅನುವು ಮಾಡಿಕೊಟ್ಟ ಯೂಟೂಬ್ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಸಂದರ್ಶಿಸಿದಾತನನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಜಾಗತಿಕ ಲಿಂಗಾಯತ ಮಹಾಸಭೆ, ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಮತ್ತು ದಲಿತ ಸಂಘರ್ಷ ಸಮಿತಿ, ಸಮಾನತೆಗಾಗಿ ನಾವು ಸೇರಿದಂತೆ ಹಲವು ಸಂಘಟನೆಗಳ ಮುಖಂಡರಾದ ಕೆ.ಎಸ್. ಚಟ್ಟಿ, ಶೇಖರ ಕವಳಿಕಾಯಿ, ಪ್ರಕಾಶ ಅಸುಂಡಿ, ಡಾ. ಅರ್ಜುನ ಗೊಳಸಂಗಿ, ಶೇಖಣ್ಣ ಕಳಸಾಪೂರಶೆಟ್ರ, ಚಂದ್ರು ತಡಸದ, ಎಂ.ಕೆ. ಲಮಾಣಿ, ಮುತ್ತು ಬಿಳೆಯಲಿ, ಶರೀಫ ಬಿಳಿಯಲಿ, ಬೂದಪ್ಪಾ ಅಂಗಡಿ, ಮೃತ್ಯುಂಜಯ ಜಿನಗಾ, ಚನ್ನಬಸಪ್ಪ ಅಂಗಡಿ, ಆನಂದ ಸಿಂಗಾಡಿ, ಎನ್.ಎಸ್. ಬಡಿಗಣ್ಣವರ, ಶಿವನಗೌಡ ಗೌಡರ, ಬಿ.ಟಿ. ಹಿರೇಹಡಗಲಿ, ಹನಮಂತಪ್ಪಾ ಬಿ.ಎಲ್. ಪರಶು ಕಾಳೆ, ರಾಮಚಂದ್ರ ಹಂಸನೂರ, ಎಸ್. ಎ. ಸೋಮಗೊಂಡ, ಎಂ.ಬಿ. ಲಿಂಗಧಾಳ, ಗಣೇಶ ಹುಬ್ಬಳ್ಳಿ, ಅಮರೇಶ ರಾಮಪೂರ, ವಿಜಯ ಮಹಾಂತದೇವರು, ಸಿದ್ಧಣ್ಣ ಅಂಗಡಿ ಸೇರಿದಂತೆ ಇನ್ನೂ ಅನೇಕ ಬಸವಾಭಿಮಾನಿಗಳು ಮನವಿ ಅರ್ಪಿಸುವ ಸಂದರ್ಭದಲ್ಲಿ ಹಾಜರಿದ್ದರು.
ನಂತರ ಗದಗ ಶಹರ ಪೊಲೀಸ ಠಾಣೆಗೆ ತೆರಳಿ ರವಿ ಹಂಜ್ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಯಿತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU
