ಬಸವಕಲ್ಯಾಣದಲ್ಲಿ ಶರಣ ವಿಜಯೋತ್ಸವ, ಹುತಾತ್ಮ ದಿನಾಚರಣೆ ಉದ್ಘಾಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ :

೧೨ನೇ ಶತಮಾನದಲ್ಲಿ ಬಸವಣ್ಣನವರು ಸೇರಿದಂತೆ ಶಿವಶರಣರ ಸಂದೇಶಗಳು ಕೇವಲ ಒಂದು ಕಾಲಕ್ಕೆ ಅಥವಾ ಒಂದು ವರ್ಗಕ್ಕೆ ಸೀಮಿತವಾಗಿರದೆ ಇಡೀ ಮಾನವಕುಲದ ಕಲ್ಯಾಣವನ್ನು ಬಯಸುವಂತಾಗಿವೆ ಎಂದು ಬೀದರ ಸಂಸದ ಸಾಗರ ಖಂಡ್ರೆ ಅವರು ಹೇಳಿದರು.
 
ಅವರು ಅಂರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಮತ್ತು ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ಭಾನುವಾರ ಆಯೋಜಿಸಿದ್ದ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಸಮಾಜ ನಿರ್ಮಾಣಕ್ಕಾಗಿ ಹುತಾತ್ಮರಾದ ಶರಣರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ, ವಚನ ಸಾಹಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಮುಟ್ಟಿಸುವುದು ಅವಶ್ಯಕವಾಗಿದೆ. ಶರಣರ ಸಂದೇಶಗಳು ಪ್ರತಿಯಬ್ಬರ ಹೃದಯವನ್ನು ತಲುಪಲಿ. ಶರಣರ ವಿಚಾರಧಾರೆ ವಿಶ್ವದಾದ್ಯಂತ ಪಸರಿಸಲಿ, ಸಮಾನತೆ, ಶಾಂತಿ, ಪ್ರೀತಿ ಮತ್ತು ಸಹೋದರತೆಯಿಂದ ಕೂಡಿದ ಸಮಾಜ ನಿರ್ಮಾಣವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
 
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವಕಲ್ಯಾಣ ಕೇವಲ ಒಂದು ಪಟ್ಟಣವಲ್ಲ. ಹೊಸ ಮಾನವೀಯ ಮೌಲ್ಯಗಳಿಗೆ ಜನ್ಮ ನೀಡಿದ ಪವಿತ್ರ ನೆಲ, ಸಮಾನತೆ ಸಾರಿದ ನೆಲ. ಮನುಷ್ಯನನ್ನು ಜಾತಿಯಿಂದ ಅಳೆಯಬೇಡಿ ಅವನ ಗುಣ, ಕಾಯಕ ಮತ್ತು ಮಾನವೀಯತೆಯಿಂದ ಅಳೆಯಬೇಕು. ವ್ಯಕ್ತಿತ್ವದಿಂದ ಎಲ್ಲರೂ ಸಮಾನರು ಎಂಬ ಸಿದ್ಧಾಂತ ಬಸವಣ್ಣನವರು ನೀಡಿದ್ದಾರೆ.

ಸಮಾನತೆಯ ತತ್ವಕ್ಕಾಗಿ ಧರ್ಮಕ್ಕಾಗಿ ಪ್ರಾಣಕೊಟ್ಟ ಶರಣರ ಸ್ಮರಣಾರ್ಥಕ್ಕಾಗಿ ಕಳೆದ ೧೧ ವರ್ಷಗಳಿಂದ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.
 
ಅಧ್ಯಕ್ಷತೆ ವಹಿಸಿಕೊಂಡಿದ್ದ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಶರಣು ಸಲಗರ ಮಾತನಾಡಿ, ಇಡೀ ಜಗತ್ತಿಗೆ ಬಸವಣ್ಣನವರೇ ಸತ್ಯ. ನಾನು ಅಪ್ಪಟ್ಟ ಬಸವಭಕ್ತ. ಬಸವಧರ್ಮ ಶ್ರೇಷ್ಠ ಧರ್ಮ, ಬಿದ್ದವರನ್ನು ಎತ್ತುವ ಜಗತ್ತಿನ ಏಕೈಕ ಧರ್ಮ ಬಸವಧರ್ಮ.

ಮೂಢನಂಬಿಕೆಗಳಿಗೆ ಹೆದರಿ ಮರುಳಾಗಿ ಸುತ್ತಾಡಬೇಡಿ, ಬಸವಣ್ಣನಂತಹ ಶ್ರೇಷ್ಠ ವ್ಯಕ್ತಿ ಎಲ್ಲಿಯೂ ಸಿಗಲ್ಲ. ದುಡ್ಡನ್ನು ಪ್ರೀತಿಸುವವರು ನಾವಲ್ಲ, ದುಡಿಮೆಯನ್ನು ಪ್ರೀತಿಸುವವರು ನಾವು. ಬಸವಕಲ್ಯಾಣ ಅತ್ಯಂತ ಪವಿತ್ರ ನೆಲ. ಮುಂದೊಂದು ದಿನ ಜಗತ್ತಿನ ಜನ ಬಸವಕಲ್ಯಾಣಕ್ಕೆ ಬರುತ್ತಾರೆ.

ಕಾಯಕತತ್ವವನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು, ಬಸವತತ್ವ ಪ್ರಸಾರಕ್ಕಾಗಿ ಪೂಜ್ಯ ಡಾ. ಗಂಗಾಂಬಿಕಾ ಅಕ್ಕನವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಅನುಭವ ಮಂಟಪ ಟ್ರಸ್ಟ ಉಪಾಧ್ಯಕ್ಷ ವೈಜಿನಾಥ ಕಾಮಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ನಿರ್ದೇಶಕರಾದ ವೀರಣ್ಣಾ ಹಲಶೆಟ್ಟಿ, ಬಸವರಾಜ ತೊಂಡಾರೆ, ಪುಷ್ಪಾವತಿ ಮಾಮಾ, ಮುಖಂಡ ಶಿವರಾಜ ನರಶೆಟ್ಟಿ, ಬೀದರ ಬಸವ ಸೇವಾ ಪ್ರತಿಷ್ಠಾನದ ವಿಶ್ವನಾಥ ಕಾಜಿ, ಹುಮನಾಬಾದ ಬಸವ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಮಲ್ಲಿಕಾರ್ಜುನ ಸಂಗಮಕರ್, ವಚನ ಸಮೂಹ ಸಂಸ್ಥೆ ಅಧ್ಯಕ್ಷ ಅಲ್ಲಮಪ್ರಭು ನಾವದಗೆರೆ, ಜಿಲ್ಲಾ ಕಸಾಪ ಕೋಶ್ಯಾಧ್ಯಕ್ಷ ಶಿವಶಂಕರ ಟೋಕರೆ, ನಿವೃತ್ತ ಡಿಡಿಪಿಯು ರಮೇಶ ಬೆಜಗಂ, ಇಂದುಮತಿ ಅಬ್ದಗಿರೆ, ರಂಜನಾ ದುರ್ಗೆ ಉಪಸ್ಥಿತರಿದ್ದರು.

ಹರಳಯ್ಯ ಸಮಾಜದ ಅಧ್ಯಕ್ಷ ಶಿವಾಜಿ ಕಾಂಬಳೆ ಧ್ವಜಾರೋಹಣಗೈದರು. ವಿವೇಕಾನಂದ ವಸ್ತ್ರದ, ಮಂಜುನಾಥ ಹೇಮಶೆಟ್ಟಿ ವಚನ ಸಂಗೀತ ನಡೆಸಿಕೊಟ್ಟರು. ಜಯಶ್ರೀ ಬಿರಾದಾರ ಸ್ವಾಗತಿಸಿದರೆ, ಡಾ. ಸಂಗೀತಾ ಮಂಠಾಳೆ ನಿರೂಪಿಸಿದರು.
೧೩ರಂದು ಸಾಯಂಕಾಲ ೬ ಗಂಟೆಗೆ ಮಹಾಶಕ್ತಿಕೂಟಗಳ ಸಮಾವೇಶ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಸಾನಿಧ್ಯ, ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಗೀತಾ ಖಂಡ್ರೆ ಉದ್ಘಾಟಿಸುವರು.

ಕರ್ನಾಟಕ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಹಾಗೂ ಸ್ತ್ರೀ ಜಾಗೃತಿ ಪತ್ರಿಕಾ ಸಂಪಾದಕಿ ಶೋಭಾ ಎಚ್.ಜಿ. ಅವರಿಗೆ ಶರಣ ನಾಯಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮಹಾಶಕ್ತಿಕೂಟಗಳ ಪ್ರತಿನಿಧಿಗಳು ಉಪಸ್ಥಿತರಿರುವರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *