ಸಾಣೇಹಳ್ಳಿ
ಸಾಮಾನ್ಯವಾಗಿ ವಚನ ಕಂಠಪಾಠ ಸ್ಪರ್ಧೆಗಳು ನಡೆಯುವುದು ಮಕ್ಕಳಿಗೆ ಅಥವಾ ಆಸಕ್ತ ವಯಸ್ಕರಿಗೆ. ಆದರೆ ಈಗ ಸಾಣೇಹಳ್ಳಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಲು ಮಠಾಧೀಶರಿಗೂ ಅವಕಾಶ ಮಾಡಿಕೊಡಲಾಗಿದೆ.
“ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮಿಗಳವರು ಮಠಾಧೀಶರಿಗೊಂದು ಸುವರ್ಣ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಠಾಧೀಶರಿಗೆ ಪ್ರಥಮ ಬಹುಮಾನ ೪೦ ಸಾವಿರ ರೂಗಳು ಕೊಡುವುದಾಗಿ ಹೇಳಿದ್ದಾರೆ,” ಎಂದು ಸಾಣೇಹಳ್ಳಿ ಮಠದಿಂದ ಬಂದಿರುವ ಪ್ರಕಟಣೆಯೊಂದು ತಿಳಿಸಿದೆ.
ಜೂನ್ ೧೫ ರಂದು ಸಾಣೇಹಳ್ಳಿಯಲ್ಲಿ `’ಒಲಿದಂತೆ ಹಾಡುವೆ’ ಎನ್ನುವ ಹೆಸರಿನಲ್ಲಿ ವಚನ ಕಂಠಪಾಠ ಸ್ಪರ್ಧೆಯಲ್ಲಿ ಮಠಾಧೀಶರು ಮಾತ್ರವಲ್ಲ ಯಾರು ಬೇಕಾದರೂ ವಯಸ್ಸು, ಲಿಂಗ, ಜಾತಿಯ ಅಂತರವಿಲ್ಲದೆ ಭಾಗವಹಿಸಬಹುದು. ಅವರಿಗೆ ಪ್ರತ್ಯೇಕ ಬಹುಮಾನವಿರುತ್ತದೆ.
ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ‘ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ’ಯ ಶಾಲಾ ಕಾಲೇಜುಗಳಲ್ಲಿ ‘ವಚನ ಪರಿಚಯ, ವಚನ ಪ್ರವೇಶ, ವಚನ ವಿಶಾರದ, ವಚನ ಪ್ರವೀಣ’ ಪರೀಕ್ಷೆಗಳನ್ನು ನಡೆಸುತ್ತ ಬಂದಿದ್ದರು. ಅದೇ ದಾರಿಯಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನಡೆಯುತ್ತಿದ್ದಾರೆ, ಎಂದು ಪ್ರಕಟಣೆ ತಿಳಿಸಿದೆ.
ನಿಯಮಗಳು:
•ಸ್ಪರ್ಧಿಗಳು ಪಠ್ಯ ನೋಡದೆ ೫೦೦ ವಚನಗಳನ್ನು ಹಾಡಬಹುದು ಇಲ್ಲವೇ ಗದ್ಯರೂಪದಲ್ಲಿ ಹೇಳಬಹುದು.
•ಲಿಂಗ, ಜಾತಿ, ವಯೋಭೇದವಿಲ್ಲದೆ ಯಾರು ಬೇಕಾದರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
•ವಚನಗಳನ್ನು ತಪ್ಪಿಲ್ಲದೆ ಸ್ಪಷ್ಟವಾಗಿ, ವ್ಯಾಕರಣ ದೋಷವಿಲ್ಲದೇ ಭಾವಪೂರ್ಣವಾಗಿ ಹೇಳಬೇಕು.
•೧ನೆಯ ಬಹುಮಾನ ರೂಪಾಯಿ ೩೦,೦೦೦=೦೦, ೨ನೆಯ ಬಹುಮಾನ ೨೫,೦೦೦=೦೦, ೩ನೆಯ ಬಹುಮಾನ ೨೦,೦೦೦-೦೦, ೪ನೆಯ ಬಹುಮಾನ ೧೫,೦೦೦=೦೦ ೫ನೆಯ ಬಹುಮಾನ ೧೦,೦೦೦=೦೦. ಜೊತೆಗೆ ಪ್ರಶಸ್ತಿಪತ್ರ, ಪುಸ್ತಕ, ಟವೆಲ್ ನೀಡಿ ಗೌರವಿಸಲಾಗುವುದು
•೨೦೦ ವಚನಗಳನ್ನು ಹೇಳಿದವರೆಲ್ಲರಿಗೂ ಪ್ರಶಸ್ತಿಪತ್ರ, ಪುಸ್ತಕ, ಟವೆಲ್ ಕೊಡಲಾಗುವುದು.
•ಹೇಳುವ ವಚನಗಳನ್ನು ಹಾಳೆಯ ಒಂದು ಮಗ್ಗಲಿಗೆ ಡಿಟಿಪಿ ಮಾಡಿ ನಿರ್ಣಾಯಕರ ಕಡೆ ಕೊಡಬೇಕು.
•ವಚನಗಳನ್ನು ನೆನಪಿಸಿಕೊಂಡು ಹೇಳಲು ಕಾಲವಿಳಂಬ ಆಗಬಾರದು ಎನ್ನುವ ಕಾರಣಕ್ಕೆ ಪ್ರತಿವಚನದ ಮೊದಲ ಸಾಲನ್ನು ಮಾತ್ರ ಡಿಟಿಪಿ ಮಾಡಿಕೊಂಡು ಒಂದರ ನಂತರ ಒಂದು ವಚನವನ್ನು ಹೇಳಲು ಅವಕಾಶವಿದೆ.
ಬೇರೆ ಬೇರೆ ತಾಲ್ಲೂಕು ಜಿಲ್ಲೆಗಳಿಂದ ಜೂನ್ ೧೪ರಂದೇ ಬರುವ ಸ್ಪರ್ಧಾರ್ಥಿಗಳಿಗೆ ಉಳಿದುಕೊಳ್ಳಲು ಊಟ, ವಸತಿಸೌಲಭ್ಯವಿದೆ.
ಕಂಠಪಾಠ ಮಾಡಬೇಕಾದ ವಚನಕಾರರು ಮತ್ತು ಅವರ ವಚನಗಳು:
೧) ಬಸವಣ್ಣ, ೨) ಚನ್ನಬಸವಣ್ಣ ೩) ಅಲ್ಲಮಪ್ರಭುದೇವರು ೪) ದೇವರ ದಾಸಿಮಯ್ಯ ೫) ಅಕ್ಕಮಹಾದೇವಿ ೬) ಶಿವಯೋಗಿ ಸಿದ್ಧರಾಮೇಶ್ವರ ೭) ಅಂಬಿಗರ ಚೌಡಯ್ಯ ೮) ಅಕ್ಕಮ್ಮ ೯) ಅಮುಗೆ ರಾಯಮ್ಮ ೧೦) ನೀಲಮ್ಮ ೧೧) ಸತ್ಯಕ್ಕ ೧೨) ಮೋಳಿಗೆ ಮಾರಯ್ಯ ೧೩) ಮಡಿವಾಳ ಮಾಚಿದೇವ ೧೪) ಹಡಪದ ಅಪ್ಪಣ್ಣ ೧೫) ಉರಿಲಿಂಗಪೆದ್ದಿ ಇವರ ತಲಾ ೨೦ ವಚನಗಳನ್ನಾದರೂ ಹೇಳಬೇಕು.
ಉಳಿದಂತೆ ೧೨ನೆಯ ಶತಮಾನದ ಯಾವ ಶರಣ ಶರಣೆಯರ ವಚನಗಳನ್ನಾದರೂ ಹೇಳಬಹುದು.
ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ‘ಸಮಗ್ರ ವಚನ ಸಂಪುಟ’ದ ವಚನಗಳನ್ನು ಮಾತ್ರ ಹೇಳಬೇಕು.
ಸ್ಪರ್ಧಿಗಳು ವಚನ ಕಂಠಪಾಠಕ್ಕೆ ಆನ್‌ಲೈನ್‌ನಲ್ಲಿ ಸಿಗುವ ‘ವಚನ ಸಂಪುಟ’ ಮತ್ತು ‘ವಚನ ಸಂಚಯ’ ಜಾಲತಾಣಗಳ ಬಳಕೆ ಮಾಡಿಕೊಳ್ಳಬಹುದು.
ಪ್ರವೇಶ ಶುಲ್ಕ ರೂ. ೧೦೦=೦೦ ಜೂನ್ ೧೦ರೊಳಗೆ ಅರ್ಜಿಯನ್ನು ಕೆಳಕಂಡ ವಿಳಾಸಕ್ಕೆ ಅಂಚೆ ಇಲ್ಲವೇ ಆನ್‌ಲೈನ್ ಮೂಲಕವೂ ಸಲ್ಲಿಸಬಹುದು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸುವ ವಿಳಾಸ:
ಶ್ರೀ ಟಿ.ಎಂ. ಮರುಳಸಿದ್ದಯ್ಯ
ಶ್ರೀ ತರಳಬಾಳು ಜಗದ್ಗುರು ಶಾಖಾಮಠ
ಸಾಣೇಹಳ್ಳಿ, ಹೊಸದುರ್ಗ – ತಾ, ಚಿತ್ರದುರ್ಗ – ಜಿಲ್ಲೆ
ದೂ: 9663177254

