ವಚನಕಾರರನ್ನು ಅರ್ಥವಿಲ್ಲದ ವಿಚಾರದಲ್ಲಿ ವಿರೋಧಿಸುವದು ಸಲ್ಲದು
ಹುಬ್ಬಳ್ಳಿ :
ಬಸವಣ್ಣನವರು ಪರಿಚಯಿಸಿದ ಇಷ್ಟಲಿಂಗ ಪೂಜೆ ಕೇವಲ ಧಾರ್ಮಿಕ ಆಚರಣೆಯಲ್ಲ. ಮನುಷ್ಯನ ದೇಹ, ಮನಸ್ಸು ಹಾಗೂ ಬದುಕನ್ನು ಶುದ್ಧಗೊಳಿಸಿ, ಪ್ರತಿಯೊಂದು ಕಾಯಕವನ್ನೂ ಶಿವಸೇವೆಯನ್ನಾಗಿಸುವ ಶಿವಯೋಗದ ಸಾಧನೆಯಾಗಿದೆ.
ವಚನ ಸಾಹಿತ್ಯವನ್ನು ಕೇವಲ ಓದುವುದಷ್ಟೇ ಅಲ್ಲ, ಅದರ ಆಳವಾದ ಅರ್ಥವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹಿರಿಯ ವೈದ್ಯ ಸಾಹಿತಿ ಡಾ. ದಯಾನಂದ ನೂಲಿ ಹೇಳಿದರು.

ರವಿವಾರ ಕೆಎಲ್ಇ ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದ ಸೆಮಿನಾರ್ ಹಾಲ್ನಲ್ಲಿ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದ ಮೂಲಕ ನೀಡುವ ರಾಜ್ಯಮಟ್ಟದ ” ಸಂಗಮ ಸಿರಿ” ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
೧೨ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪಕ್ಕೆ ದೇಶದ ವಿವಿಧ ಭಾಗಗಳಿಂದ ಶರಣರು, ಶರಣೆಯರು ಆಗಮಿಸಿದ್ದರು. ಭಾಷೆ, ಪ್ರದೇಶದ ಗಡಿಗಳನ್ನು ಮೀರಿ ಬಸವತತ್ವಕ್ಕೆ ಆಕರ್ಷಿತರಾಗಿ ಕಲ್ಯಾಣದಲ್ಲಿ ನೆಲೆಸಿದ್ದರು. ಶರಣರ ವಿಚಾರಧಾರೆಗಳಲ್ಲಿದ್ದ ಸಾರ್ವತ್ರಿಕ ಮಾನವೀಯ ಮೌಲ್ಯಗಳೇ ಇದಕ್ಕೆ ಕಾರಣ ಎಂದರು.
ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ ಸೇರಿದಂತೆ ಶಿವಯೋಗದ ವಿವಿಧ ಹಂತಗಳನ್ನು ವೈದ್ಯಕೀಯ ಹಾಗೂ ವೈಜ್ಞಾನಿಕ ದೃಷ್ಟಿಕೋನದಿಂದ ಅಧ್ಯಯನ ಮಾಡಿ ತಮ್ಮ ಕೃತಿಯಲ್ಲಿ ವಿವರಿಸಿರುವುದಾಗಿ ತಿಳಿಸಿದರು.
ಕಾಯಕ, ದಾಸೋಹ, ಶುದ್ಧ ಮನಸ್ಸು ಮತ್ತು ಅಂತರoಗದ ಅರಿವು ಶಿವಯೋಗದ ಪ್ರಮುಖ ಆಶಯಗಳಾಗಿವೆ ಎಂದು ಹೇಳಿದರು.
ಇಂದಿನ ಯುವ ಪೀಳಿಗೆ ದಾವಂತ ಬದುಕಿಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ವಚನ ಸಾಹಿತ್ಯವನ್ನು ಕೇವಲ ಓದುವುದಷ್ಟೇ ಅಲ್ಲ, ಅದರ ಆಳವಾದ ಅರ್ಥವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಮುಂದಿನ ಪೀಳಿಗೆಗೆ ಶರಣರ ಚಿಂತನೆಗಳನ್ನು ತಲುಪಿಸಬೇಕು. ಅಲ್ಲದೆ, ಇಂದು ವಚನಕಾರರನ್ನು ಅರ್ಥವಿಲ್ಲದ ವಿಚಾರದಲ್ಲಿ ವಿರೋಧಿಸುವುದು, ಏನೇನೋ ಮಾತನಾಡುವುದು ಮಾಡುತ್ತಿದ್ದಾರೆ ಇದು ಸರಿಯಲ್ಲ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆಎಲ್ಇ ಸಂಸ್ಥೆಯ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅವರು, ಮುಂದಿನ ಪೀಳಿಗಿಗೆ ಡಾ. ಸಂಗಮೇಶ ಹಂಡಗಿ ಅವರ ಸಾಹಿತ್ಯ ಮಾದರಿಯಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಹಂಡಿಗೆ ಅವರ ಸಾಹಿತ್ಯ ಪಸರಿಸುವ ಕೆಲಸವನ್ನು ಇನ್ನಷ್ಟು ಮಾಡುವಂತಾಗಲಿ. ಸ್ಪರ್ಧಾತ್ಮಕ ಯುಗದಲ್ಲಿ ಹಿರಿಯರನ್ನು ಗೌರವಿಸುವುದನ್ನು ಯುವಪೀಳಿಗೆ ಮರೆಯುತ್ತಿದೆ. ಹಿರಿಯರ ನಡೆ, ನುಡಿ ತಿಳಿಸುವ ಇಂತಹ ಮೌಲ್ವಿಕ ಕಾರ್ಯಕ್ರಮ ನಡೆಯುವುದು ಮುಖ್ಯ ಎಂದರು.
ಪ್ರತಿಷ್ಠಾನದ ಗೌರವಾಧ್ಯಕ್ಷ, ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ ಮಾತನಾಡಿ, ಡಾ. ಸಂಗಮೇಶ ಹಂಡಗಿ ಅವರು ೪೬ ಕ್ಕೂ ಹೆಚ್ವು ಕೃತಿಗಳನ್ನು ರಚಿಸಿದ್ದಾರೆ. ಕಾವ್ಯ, ವಚನ, ವಿಮರ್ಶೆ ಸೇರಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ನಡೆನುಡಿ ಒಂದೆoದು ಶುದ್ಧ ಬದುಕು ನಡೆಸಿದವರಾಗಿದ್ದು, ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಹುಬ್ಬಳ್ಳಿ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಪ್ರತಿಯೊಬ್ಬರು ನಡೆ, ನುಡಿಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಹಿರಿಯರು, ವಚನಕಾರರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ಕೆಎಂಸಿಆರ್ಐನ ಡಾ. ಎಸ್.ವೈ. ಮುಲ್ಕಿಪಾಟೀಲ ಹಾಗೂ ಕನ್ನಡಪರ ಹೋರಾಟಗಾರ ವೆಂಕಟೇಶ ಮರೆಗುದ್ದಿ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.
ಕವಿ ಮಹಾಂತಪ್ಪ ನಂದೂರು ಪ್ರಶಸ್ತಿ ಪುರಸ್ಕೃತರ ಕೃತಿ ಕುರಿತು ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಜಿ.ಬಿ. ಗೌಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮಕ್ಕೆ ಸಹಯೋಗ ನೀಡಿದ ಬಸವ ಶ್ರೀ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್, ವಿವೇಕಾನಂದ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಸಹಕಾರ ನೀಡಿದ್ದವು. ಸಂಯೋಜಕ ಡಾ. ಪ್ರಭು ಗಂಜಿಹಾಳ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ಡಾ. ಪಿ. ಜಿ. ಕೆಂಪಣ್ಣವರ ಇದ್ದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ವೀರೇಶ ಹಂಡಗಿ ಸ್ವಾಗತಿಸಿದರು. ಡಾ. ಬಿ.ಎಸ್. ಮಾಳವಾಡ ಪರಿಚಯಿಸಿದರು. ಗುರು ಹಂಜಗಿಮಠ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ರವೀಂದ್ರ ರಾಮದುರ್ಗಕರ್ ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh
