ಮಾತಾಜಿ ಸಂಭಾಷಣೆ ಅನುಮತಿ ಇಲ್ಲದೆ ರೆಕಾರ್ಡ್ ಮಾಡಿ ವೈರಲ್ ಮಾಡಿದ ಖುಬಾ

ಬಸವ ಮೀಡಿಯಾ
ಬಸವ ಮೀಡಿಯಾ

ಎಸ್.ಐ.ಆರ್ ಆಂದೋಲನದಲ್ಲಿ ಭಾಗವಹಿಸಿದ್ದಕ್ಕೆ ನಿಮಗೆ ತಿಳುವಳಿಕೆ ಇಲ್ಲ ಎಂದ ಮಾಜಿ ಸಂಸದ

ಬೀದರ:

ಎಸ್.ಐ.ಆರ್ ಆಂದೋಲನದಲ್ಲಿ ಭಾಗವಹಿಸಿದ್ದಕ್ಕೆ ಬಸವ ಮಂಟಪದ ಪೂಜ್ಯ ಸತ್ಯಾದೇವಿ ಮಾತಾಜಿ ಅವರನ್ನು ದಬಾಯಿಸಿ, ಅವರ ಸಂಭಾಷೆಯನ್ನು ಅನುಮತಿ ಇಲ್ಲದೆ ರೆಕಾರ್ಡ್ ಮಾಡಿ ವೈರಲ್ ಮಾಡಿರುವ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಮೇಲೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ವಿಷಯದಲ್ಲಿ ಎಸ್ಐಆರ್ ಜನಾಂದೋಲನ ಸಮಿತಿ ಅಧ್ಯಕ್ಷರಾಗಿರುವ ಶ್ರೀಕಾಂತ ಸ್ವಾಮಿ, ಎದ್ದೇಳು ಕರ್ನಾಟಕ ಜಿಲ್ಲಾ ಸಂಯೋಜಕರಾದ ಓಂಪ್ರಕಾಶ ರೊಟ್ಟಿ, ಪ್ರೊ. ವಿಠಲದಾಸ ಪ್ಯಾಗೆ, ಭಾರತೀಯ ಬಸವ ದಳದ ಜಗದೀಶ್ವರ ಬಿರಾದಾರ ಪ್ರಕಟಣೆ ಹೊರಡಿಸಿದ್ದಾರೆ.

ಎಸ್ಐಆರ್ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಮಾತಾಜಿ ಅವರಿಗೆ ಖುಬಾ ಇತ್ತೀಚೆಗೆ ಫೋನ್ ಮಾಡಿ ವಿರೋಧ ವ್ಯಕ್ತಪಡಿಸಿದ್ದರು.

“ಎಸ್.ಐ.ಆರ್ ಕಾರ್ಯಕ್ರಮಕ್ಕೆ ಏಕೆ ಹೋಗಿದ್ದೀರಿ, ಅದು ಕಾಂಗ್ರೆಸ್ ಕಾರ್ಯಕ್ರಮ, ನಿಮಗೆ ತಿಳುವಳಿಕೆ ಇಲ್ಲ, ನಾನು ತಿಳಿಸಿ ಹೇಳುತ್ತೇನೆ ಎಂದು ಅಹಂಕಾರದಿಂದ ಮಾತನಾಡಿ ಪೂಜ್ಯರಿಗೆ ಅಗೌರವ ತೋರಿಸಿದ್ದು ಖಂಡನೀಯ. ಕಾವಿ ತೊಟ್ಟವರು ಇಂತಹ ಕಾರ್ಯಕ್ರಮಕ್ಕೇ ಹೋಗಬಾರದು ಎಂದು ದಬಾಯಿಸಿದ್ದು ಖೂಬಾ ಅವರಿಗಿರುವ ಸೊಕ್ಕು ತೋರಿಸುತ್ತದೆ.

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾವಿಧಾರಿ ಅನ್ನುವ ಕನಿಷ್ಠ ಜ್ಞಾನ ಅವರಿಗೆ ಇಲ್ಲ.

ಯಾವುದೇ ಧರ್ಮದ ಮುಖಂಡರು ಪೂಜ್ಯರು ಸರಕಾರದ, ಸಂಸ್ಥೆಗಳ ಜನವಿರೋಧಿ ನಡೆಗಳಿಗೆ ಆಕ್ಷೇಪಣೆ ಮಾಡುವದು, ಜನರಲ್ಲಿ ಜಾಗೃತಿ ಮೂಡಿಸುವದು ಸಂವಿಧಾನ ಬದ್ಧ ಹಕ್ಕು. ಇದನ್ನು ಪ್ರಶ್ನಿಸುವುದು ತಿಳಿಗೇಡಿತನವಾಗುತ್ತದೆ. ಮಾಜಿ ಕೇಂದ್ರ ಸಚಿವರು ಅಜ್ಞಾನ ಪ್ರದರ್ಶಿಸಿದ್ದಾರೆ.

ಮಾತಾಜಿ ಒಬ್ಬ ಶಿಕ್ಷಿತ ಮಹಿಳೆ, ಜ್ಞಾನಿಗಳು, ಎಸ್ಐಆರ್ ಬಗ್ಗೆ ಅಧ್ಯಯನ ಮಾಡಿದ್ದವರು. ಹಲವಾರು ವೇದಿಕೆ ಮೇಲೆ ಅದರ ಬಗ್ಗೆ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಅಂತವರಿಗೆ ನಿಮಗೆ ತಿಳುವಳಿಕೆ ಇಲ್ಲ ಎಂದು ನೇರವಾಗಿ ಮಾನಹಾನಿ ಮಾಡಿದ್ದಲ್ಲದೆ, ಜಿಲ್ಲಾಧಿಕಾರಿಯವರಿಗೆ ಕಾನ್ಫರೆನ್ಸ್ ಪೋನ್ ಕಾಲ್ ತೆಗೆದುಕೊಂಡು ಮಾತಾಜಿ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡಿದ್ದು ಖಂಡನೀಯ.

ಮಾತಾಜಿ ಮತ್ತು ಜಿಲ್ಲಾಧಿಕಾರಿ ಫೋನ್ ಸಂಭಾಷಣೆ ಅವರ ಅನುಮತಿ ಇಲ್ಲದೆ ರೆಕಾರ್ಡ್ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಹರಿ ಬಿಟ್ಟು ಅಪರಾಧ ಎಸಗಿದ್ದಾರೆ. ಬೇರೆಯವರ ಫೋನ್ ರೆಕಾರ್ಡ್ ಮಾಡುವದು ಅಪಾರಾಧ ಎನ್ನುವದು ಒಬ್ಬ ಲೋಕಸಭಾ ಸದಸ್ಯರಾಗಿದ್ದವರಿಗೆ, ಮಾಜಿ ಕೇಂದ್ರ ಸಚಿವರಿಗೆ ಗೊತ್ತಿಲ್ಲ ಅಂದರೆ, ಅವರ ಅಜ್ಞಾನವೆ ಅಥವಾ ಅಹಂಕಾರವೆ ಎಂದು ಪ್ರಶ್ನಿಸಿದ್ದಾರೆ.

ಪೂಜ್ಯ ಮಾತಾಜಿಯವರ ಮತ್ತು ಜಿಲ್ಲಾಧಿಕಾರಿ ಫೋನ್ ರೆಕಾರ್ಡ್ ಮಾಡಿ, ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಮಾಜಿ ಲೋಕಸಭಾ ಸದಸ್ಯ ಮತ್ತು ಮಾಜಿ ಕೇಂದ್ರ ಸಚಿವರ ಮೇಲೆ ಸರ್ಕಾರ ಕಾನೂನುಬದ್ಧ ಕ್ರಮ ಜರುಗಿಸಬೇಕು,” ಎಂದು ಪ್ರಕಟಣೆಯಲ್ಲಿ ಒತ್ತಾಯಿಸಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *