ಹಿಂದುತ್ವ ಸಮಾವೇಶ ವಿರೋಧಿಸಲು 35 ವಾರ್ಡುಗಳಲ್ಲಿ ಜಾಗೃತಿ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

‘ಸಮಾನತೆಗಾಗಿ ನಾವು’ ವೇದಿಕೆ ಅಡಿಯಲ್ಲಿ ಪ್ರತಿರೋಧ

ಗದಗ:

ಬಸವದಳದ ಬಸವ ಮಂಟಪದಲ್ಲಿ ರವಿವಾರ ನಡೆದ ಬಸವಪರ, ಪ್ರಗತಿಪರ ಸಂಘಟನೆಗಳ ಸಭೆಯಲ್ಲಿ ಸನಾತನವಾದಿಗಳು ನಗರದಲ್ಲಿ ಬಸವಾದಿ ಶರಣರ ಹೆಸರಿನಲ್ಲಿ ಆಯೋಜಿಸಿರುವ ಹಿಂದೂ ಸಮಾವೇಶವನ್ನು ತೀವ್ರವಾಗಿ ಖಂಡಿಸಲಾಯಿತು.

ಸಭೆಯಲ್ಲಿ ಜಿಲ್ಲೆಯ ತಾಲೂಕುಗಳಿಂದ ಪ್ರಮುಖ ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿಗಳು ಆಗಮಿಸಿದ್ದರು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ಮಾತನಾಡಿ, ಬಸವಣ್ಣನವರು ಹುಟ್ಟಿದ ಈ ನಾಡಿನಲ್ಲಿ ಮನುವಾದಿಗಳು ಬಸವಾದಿ ಶರಣರ ವಚನಗಳನ್ನು ತಿದ್ದುವ, ತಿರುಚುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಜನತೆ ಒಕ್ಕೊರಲಿನಿಂದ ಖಂಡಿಸಬೇಕೆಂದು ಹೇಳಿದರು.

ಚಿಂತಕ ಬಸವರಾಜ ಸೂಳಿಭಾವಿ ಅವರು ಮಾತನಾಡಿ, ಹಿಂದೂ ಸಮಾವೇಶಕ್ಕೆ ನಮ್ಮ ವಿರೋಧವಿಲ್ಲ. ಆದರೆ ಬಸವಾದಿ ಶರಣರ ಹೆಸರನ್ನು ಬಳಸಿಕೊಂಡು ರಾಜಕೀಯ ಉದ್ದೇಶಕ್ಕಾಗಿ ಈ ಸಮಾವೇಶವನ್ನು ಮಾಡುತ್ತಿದ್ದಾರೆ. ಇಲ್ಲಿ ದಲಿತ, ಪ್ರಗತಿಪರ, ಬಸವಾನುಯಾಯಿಗಳು ಸೇರಿದ್ದು, ನಾವೆಲ್ಲ ಒಂದಾಗಿ ಸೇರಿ ಈ ಹಿಂದೂ ಸಮಾವೇಶಕ್ಕೆ ತಕ್ಕ ಉತ್ತರ ನೀಡೋಣ. “ಸಮಾನತೆಗಾಗಿ ನಾವು” ಎಂಬ ವೇದಿಕೆ ಅಡಿಯಲ್ಲಿ ಈ ಕಾರ್ಯಕ್ರಮವನ್ನು ರೂಪಿಸೋಣ ಎಂದರು.

ನಂತರ ಬೇರೆ ಬೇರೆ ತಾಲೂಕಿನಿಂದ ಬಂದ ಬಸವಾನುಯಾಯಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಬೆಂಬಲ, ಸಹಕಾರದ ಭರವಸೆ ನೀಡಿದರು.

31ರ ಒಳಗಾಗಿ ಗದಗ ನಗರದ 35 ವಾರ್ಡ್‌ಗಳಿಗೆ ತೆರಳಿ ಬಸವಾದಿ ಶರಣರ ನಿಜ ಇತಿಹಾಸ, ಪರಂಪರೆ, ಶರಣ ಧರ್ಮ ಕುರಿತಾಗಿಯೂ ಹಾಗೂ ಹಿಂದುತ್ವದ ಸಮಾವೇಶದ ಒಳ ಹುನ್ನಾರದ ಉದ್ದೇಶಗಳನ್ನು ಗದಗ ಜನರಿಗೆ ತಿಳಿಸಬೇಕೆಂದು ತೀರ್ಮಾನಕ್ಕೆ ಬರಲಾಯಿತು.

26 ರ ಬೆಳಗ್ಗೆ 11 ಕ್ಕೆ ಈ ಕುರಿತು ಗದಗ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸುವುದು. ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಈ ಸಮಾವೇಶದ ಬಗ್ಗೆ ಮಾಧ್ಯಮಗಳ ಮುಖಾಂತರ ತಿಳಿಸುವದು.

ಪತ್ರಿಕಾಗೋಷ್ಠಿಯ ನಂತರ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಭೇಟಿ ಮಾಡಿ, ಚರ್ಚಿಸಿ ಕನ್ನೇರಿ ಸ್ವಾಮಿ ಗದಗ ಜಿಲ್ಲೆಯ ಪ್ರವೇಶವನ್ನು ನಿರ್ಬಂಧಿಸಬೇಕೆಂಬ ಮನವಿ ಸಲ್ಲಿಸಲಾಗುವುದು.

ನಗರದ ಪ್ರಮುಖ ಸ್ಥಳಗಳಲ್ಲಿ ಬಸವಾದಿ ಶರಣರ ವಚನಗಳ ಬ್ಯಾನರ್ ಹಾಕಲು ತೀರ್ಮಾನ ಮಾಡಲಾಯಿತು.

ಇದೇ 30 ಶನಿವಾರದಂದು ನಗರದ ಗಾಂಧಿ ವೃತ್ತದಲ್ಲಿ ಬಸವಾದಿ ಶರಣರ ವಚನಗಳನ್ನು ಹಾಡುವುದರ ಮೂಲಕ ಹಿಂದೂ ಸಮಾವೇಶಕ್ಕೆ ಪ್ರತಿರೋದ ಒಡ್ಡುವುದು. ಜಿಲ್ಲೆಯ ಎಲ್ಲ ಪ್ರಗತಿಪರ ಮನಸ್ಸುಗಳು 30ರಂದು ಹೆಚ್ಚಿನ ಸಂಖ್ಯೆಯಲ್ಲಿ ಗದಗಿನಲ್ಲಿ ಸೇರಬೇಕು.

31 ರ ನಂತರ ಮತ್ತೆ ಸಭೆ ಸೇರಿ ಪರ್ಯಾಯ ಸಮಾವೇಶದ ಸಿದ್ಧತೆಗಳ ಕುರಿತು ಚರ್ಚಿಸುವುದೆಂದು ಸಭೆ ತೀರ್ಮಾನಕ್ಕೆ ಬಂದಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
2 Comments
  • ಕೋಮುವಾದಿ ಸಂಘಟನೆಗಳು ತಮ್ಮ ಮನುವಾದಿ ರಾಜಕೀಯ ಪಕ್ಷದ ಮರಿ/ ಪುಡಾರಿ ರಾಜಕಾರಣಿಗಳಿಗೆ ದುಡ್ಡು ಕೊಟ್ಟು ಗದಗ ಸುತ್ತಲಿನ ಹಳ್ಳಿಯ ಜನರನ್ನು ಸೇರಿಸಲು ಹೇಳುತ್ತಾರೆ. ಅವರು ದುಡ್ಡು ಖರ್ಚು ಮಾಡಿ ಜನರನ್ನು ತರುತ್ತಾರೆ.

  • ಬಸವಾದಿ ಶರಣರು ಅಸಮಾನತೆಯ ಹಿಂಸೆಪೂರಿತ ಹಿಂದು ಮತವನ್ನು ಸಾರಾಸಗಟಾಗಿ ತ್ಯಜಿಸಿ ಸರ್ವಸಮಾನತೆಯ ಅಹಿಂಸಾತ್ಮಕ ಲಿಂಗಾಯತ/ಶರಣ ಧರ್ಮವನ್ನು ಸ್ಥಾಪಿಸಿ, ಅಚ್ಚುಗನ್ನಡದಲ್ಲಿ ವಚನಗಳನ್ನು ರಚಿಸಿ, ಅನುಭಾವ ಮಂಟಪವೆಂಬ ಸಂಸತ್ತನ್ನು ನಿರ್ಮಿಸಿದ ಪ್ರಥಮ ಪ್ರಜಾಪ್ರಭುತ್ವದ ಪಿತಾಮಹರು.
    ಗದಗ ಜಿಲ್ಲೆಯ ಸಕಲ ಬಸವಾದಿ ಶರಣರ ಸಂಘಟನೆಗಳು, ದಲಿತ, ಪ್ರಗತಿಪರ ಸಂಘಟನೆಗಳು ಕೂಡಿ ಬಸವಾದಿ ಶರಣರ ಹಿಂದು ಸಮಾವೇಶ ಮಾಡುವವರಿಗೆ ತಕ್ಕ ಪಾಠ ಕಲಿಸಲು ಸಿದ್ಧಗೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಕಲರಿಗು ವಂದನೆ ಅಭಿನಂದನೆ.🙏🙏

Leave a Reply

Your email address will not be published. Required fields are marked *