ಬಸವಾದಿ ಶರಣರ ಹೆಸರಿನ ದುರ್ಬಳಕೆ ಬಗ್ಗೆ ಮನೆ ಮನೆಗಳಲ್ಲಿ ಜಾಗೃತಿ ಮೂಡಿಸಲು ಪೂರ್ವಭಾವಿ ಸಭೆಯಲ್ಲಿ ನಿರ್ಣಯ
ಗದಗ :
ನಗರದಲ್ಲಿ ಇದೇ ತಿಂಗಳು 31ರಂದು ನಡೆಯಲಿರುವ ಬಸವಾದಿ ಶಿವಶರಣರ ಹೆಸರಿನ ಹಿಂದೂ ಸಮಾವೇಶವನ್ನು ವಿರೋಧಿಸಲು ಪ್ರಗತಿಪರ, ಬಸವಪರ ಸಂಘಟನೆಗಳು ಕರೆ ನೀಡಿವೆ.
ನಗರದ ಪ್ರವಾಸಿ ಮಂದಿರದ ಸಭಾಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಆರ್.ಆರ್.ಎಸ್ ಹಾಗೂ ಕನ್ನೇರಿ ಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಖಂಡಿಸಲಾಯಿತು.
ಸಭೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರಾದ ಅಶೋಕ ಬರಗುಂಡಿ ಅವರು ಮಾತನಾಡಿ, “ಸಮತೆಯ ಬಾಳನ್ನು ಬದುಕಲಿಕ್ಕೆ ಶರಣರು ಇಷ್ಟಲಿಂಗದಲ್ಲಿ ಬೆರೆತು, ಎಲ್ಲರೂ ಒಂದೇ ಎನ್ನುವ ಭಾವದಲ್ಲಿ ಬದುಕುತ್ತಾರೆ. ಇದನ್ನು ಸಹಿಸದ ಮನುವಾದಿಗಳು, ವೈದಿಕ ಮನಸ್ಥಿತಿಯವರು ಇದನ್ನು ನಾಶ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಈ ಮನುವಾದಿಗಳು ನಗರದಲ್ಲಿ ಹಿಂದೂ ಸಮಾವೇಶವನ್ನು ಮಾಡುತ್ತಿರುವುದನ್ನು ನಾವೆಲ್ಲರೂ ಖಂಡಿಸಬೇಕು” ಎಂದು ಹೇಳಿದರು.
“ಗದಗಿನಲ್ಲಿ ಪ್ರತಿರೋಧ ಒಡ್ಡುವುದಿಲ್ಲವೆಂದು ತಿಳಿದು ಆರ್.ಎಸ್.ಎಸ್, ಮನುವಾದಿಗಳು ಹಿಂದು ಸಮಾವೇಶ ಮಾಡುತ್ತಿದ್ದು, ಈ ಮೂಲಕ ಬಸವಣ್ಣನವರ ವಿಚಾರಗಳನ್ನು ತಿರಚುತ್ತಿದ್ದಾರೆ. ಗದಗದಲ್ಲಿ ಇದರ ವಿರುದ್ಧ ದೊಡ್ಡಮಟ್ಟದಲ್ಲಿ ಪ್ರತಿರೋಧ ವ್ಯಕ್ತಪಡಿಸಬೇಕು” ಎಂದು ಹೇಳಿದರು.
ದಲಿತ ಹೋರಾಟಗಾರ ಶರೀಫ್ ಬಿಳೆಯಲಿ ಮಾತನಾಡಿ, “ಒಂದು ವರ್ಷದ ಹಿಂದೆ ಆರ್.ಎಸ್.ಎಸ್. ಹಾಗೂ ಹಿಂದೂ ಸಂಘಟನೆಗಳು ಮಹಾಯಜ್ಞ ಕುಂಭಮೇಳ ಮಾಡಿದರು. ಈಗ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ಮಾಡಲು ಹೊರಟಿದ್ದಾರೆ. ಈ ನಾಡಿನೊಳಗೆ ಕೇವಲ ಬಸವಣ್ಣನವರ ವಚನಗಳನ್ನು ನಾಶಗೊಳಿಸುವುದು ಅಷ್ಟೆ ಅಲ್ಲ, ಇಡೀ ಶೋಷಿತ ವರ್ಗದ ಪರಂಪರೆಯನ್ನು ನಾಶಗೊಳಿಸಲು ಹೊರಟಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದಲಿತ ಮುಖಂಡರಾದ ಮುತ್ತು ಬಿಳೆಯಲಿ ಮಾತನಾಡಿ, “ಆರ್.ಎಸ್.ಎಸ್. ಪ್ರಚಾರಕರಾದ ಕನ್ನೇರಿ ಸ್ವಾಮಿ ಹೋದಲ್ಲೆಲ್ಲ ತನ್ನ ಅಶ್ಲೀಲ ಭಾಷೆಯ ಮೂಲಕ ಕೋಮುದ್ವೇಷ ಹರಡುತ್ತಿದ್ದಾನೆ. ಈಗ ಗದಗಲ್ಲಿ ಹಿಂದೂ ಸಮಾವೇಶದ ಹೆಸರಿನಲ್ಲಿ ಗದಗದ ಸೌಹಾರ್ದತೆಯನ್ನು ಹಾಳು ಮಾಡಲು ಬರ್ತಿದ್ದಾರೆ. ಈ ಹಿಂದೆ ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಕನ್ನೇರಿ ಪ್ರವೇಶ ನಿರಾಕರಿಸಿದ್ದನ್ನು ಸ್ಮರಿಸಿದರು” ಬಸವಣ್ಣನವರ ವಚನಗಳನ್ನು ಒಪ್ಪಿಕೊಳ್ಳುವವರು ಇದನ್ನು ಪ್ರತಿರೋಧಿಸಬೇಕು. ಜಿಲ್ಲೆಗೆ ಬರದಂತೆ ನೋಡಿಕೊಳ್ಳಬೇಕು.
ಗದಗಿನಲ್ಲಿ ವಚನ ದರ್ಶನ ಕಾರ್ಯಕ್ರಮ ಮೂಲಕವೇ ಇದನ್ನು ಆರಂಭ ಮಾಡಿದ್ದಾರೆ. ಅವಾಗ ನಾವು ಪ್ರತಿರೋಧ ಒಡ್ಡಿದ್ದೆವು. ಇಂತಹ ಕೋಮುದ್ವೇಷ ಬಿತ್ತುವವರ ವಿರುದ್ದ ಪ್ರತಿಭಟನೆ ಮಾಡಬೇಕು. ಇಂತಹ ಕೋಮುವಾದಿಗಳಿಗೆ ಜಿಲ್ಲೆಗೆ ಪ್ರವೇಶ ಮಾಡದಂತೆ ನೋಡಿಕೊಳ್ಳೋಣ” ಎಂದು ಹೇಳಿದರು.

ಬಂಡಾಯ ಸಾಹಿತಿ ಬಸವರಾಜ ಸೂಳಿಬಾವಿ ಮಾತನಾಡಿ, “ನಾವು ಭಾವನಾತ್ಮಕವಾಗಿ, ವೈಚಾರಿಕವಾಗಿ ಬಸವಣ್ಣನವರನ್ನು ಒಪ್ಪಿಕೊಂಡವರು. ಈ ಆಶಯವನ್ನು ಇಟ್ಟುಕೊಂಡು ಸಮಾಜವನ್ನು ನಿರ್ಮಾಣ ಮಾಡುವ ಆಶಯವುಳ್ಳವರಾಗಿದ್ದೇವೆ. ಆದರೆ ಇಲ್ಲಿರುವ ಮಠಗಳು ಲಿಂಗಾಯತ, ಶರಣತತ್ವ ಅಂತ ಬದುಕಲೆಯಿಲ್ಲ. ಬದುಕಿದ್ದರೇ ಬೇರೆಯೇ ಆಗುತ್ತಿದ್ದವು. ಇಡೀ ಜಿಲ್ಲೆಯಲ್ಲಿ ಬೇರೆಯೇ ರೀತಿಯ ವಾತಾವರಣ ಇರುತ್ತಿತ್ತು.
ಮಠದ ಪರಂಪರೆಯಲ್ಲಿ ಇದ್ದವರೆ ಹಿಂದೂ ಸಮಾವೇಶಕ್ಕೆ ಹೋಗುತ್ತಿದ್ದಾರೆ ಎಂದರೆ ಈ ಮಠದ ಆಯ್ಕೆಗಳು ಏನು ಎಂಬುದರ ಕುರಿತು ಯೋಚಿಸಬೇಕಿದೆ. ಈ ಮಠದ ಮೇಲೆ ತುಂಬ ಭರವಸೆ ಇಟ್ಟುಕೊಂಡಿದ್ದೀವಿ. ಆ ಒಳಸಂಕಟದಿಂದ ಹೇಳುತ್ತಿದ್ದೀವಿ, ಆರೋಪದ ಭಾಷೆಯಲ್ಲ. ಈಗ ಆಗುತ್ತಲಿರುವ ಹಿಂದೂ ಸಮಾವೇಶವನ್ನು ನಾವೆಲ್ಲರೂ ಪ್ರತಿಭಟಿಸಬೇಕಿದೆ” ಎಂದು ಹೇಳಿದರು.
ದಲಿತ ಮುಖಂಡ ಎಸ್.ಎನ್. ಬಳ್ಳಾರಿ ಅವರು ಮಾತನಾಡಿ, “ನಮ್ಮ ನಮ್ಮವರೇ ಆ ಹಿಂದೂ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ತಿಳಿಯದೇ ಇರುವವರು ಭಾಗವಹಿಸುವುದು ಒಂದು ಕಡೆ ಇರಲಿ, ತಿಳಿದವರೇ, ಅರಿತುಕೊಂಡವರೇ ಅವರ ಆಶೆ ಆಮಿಷಗಳಿಗೆ ಬಲಿಯಾಗಿ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಇಂತವರನ್ನು ನಾವು ಏನೆಂದು ಹೇಳಬೇಕು. ಹಾಗಾಗಿ ಮನೆ ಮನೆಗೆ, ವಾರ್ಡ್ ವಾರ್ಡ್ ಗಳಿಗೆ ಹೋಗಿ ಜಾಗೃತಿ ಮೂಡಿಸುವ ಮೂಲಕ ಈ ಹಿಂದೂ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಬೇಕು” ಎಂದರು.

ಪೂರ್ವಭಾವಿ ಸಭೆಯ ತಿರ್ಮಾನ :
ಸಭೆಯಲ್ಲಿ ಚರ್ಚಿಸಿ “ಮುಂದಿನ ದಿನಗಳಲ್ಲಿ ಬಸವಾದಿ ಶರಣರ ನಿಜ ಸಮಾವೇಶ ಹಮ್ಮಿಕೊಳ್ಳುವುದರ ಮೂಲಕ, ವಚನ ಚಳುವಳಿಯನ್ನು ಜಿಲ್ಲೆಯ ಪ್ರತಿ ಮನೆ ಮನೆಗೂ ತಲುಪಿಸಬೇಕು.
ಕೋಮುದ್ವೇಷ ಬಿತ್ತುವ ಕನ್ನೇರಿ ಮಠದ ಸ್ವಾಮಿಜಿಯ ಗದಗ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ, ಗದಗ ಜಿಲ್ಲೆಯ ಜನತೆಗೆ ಜಾಗೃತಿ ಮೂಡಿಸಬೇಕು ಎಂದು ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ತಿರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಬಸವರಾಜ ಎಂ. ಕಡೇಮನಿ, ಎಚ್.ಎಸ್. ಸೊಂಪೂರ, ಕೆ. ಎಸ್. ಚಟ್ಟಿ, ವಿ.ಕೆ. ಕರೇಗೌಡ್ರ, ಶೇಖಣ್ಣ ಕವಳಿಕಾಯಿ, ದಿಲೀಪಕುಮಾರ ಹಲವಾಗಲಿ, ಪ್ರಕಾಶ ಅಸುಂಡಿ, ಮಂಜುನಾಥ ಹಗೇದಾಳ.ಯ, ಎನ್.ಎಂ. ಪವಾಡಿಗೌಡ್ರ, ಆನಂದ ಶಿಂಗಾಡಿ, ನಾಗಭೂಷಣ ಬಡಿಗಣ್ಣವರ, ಸುವರ್ಣ ಗಾಳಪ್ಪನವರ, ಮಂಗಳಾ ನಾಲವಾಡ, ಬಾಲರಾಜ ಅರಬರ, ಶಿವಾನಂದ ತಮ್ಮಣ್ಣವರ, ಪರಶು ಕಾಳೆ, ಅನಿಲ ಕಾಳೆ, ಬಸವರಾಜ ಬಿಳೆಯಲಿ, ಮಂಜುನಾಥ ಹಗೆದಾಳ, ಗೌರಕ್ಕ ಬಡಿಗಣ್ಣವರ, ಸುಜಾತ ವಾರದ ಸೇರಿದಂತೆ ಜಿಲ್ಲೆಯ ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ಬಸವದಳ, ಮೇ ಸಾಹಿತ್ಯ ಮೇಳ, ದಲಿತ ಕಲಾ ಮಂಡಳಿ, ದಲಿತ ಸಂಘಟನೆಗಳ ಒಕ್ಕೂಟ, ನಗರದ ಎಲ್ಲ ಪ್ರಗತಿಪರ ಮತ್ತು ಬಸವಾದಿ ಶರಣರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
24ಕ್ಕೆ ಮುಂದಿನ ಸಭೆ:
ಮುಂದಿನ ಸಭೆಯನ್ನು ಮೇ 24 ರಂದು ಸಾಯಂಕಾಲ 4 ಗಂಟೆಗೆ ಶಿವಾನಂದ ನಗರದ ಬಸವ ಮಂಟಪದಲ್ಲಿ ನಡೆಸುವದು ಮತ್ತು ಪರ್ಯಾಯ ಸಮಾವೇಶದ ಕುರಿತು ಚರ್ಚಿಸಲು ತೀರ್ಮಾನ ಮಾಡಲಾಯಿತು.
