ಸಮಾಜದ ಅಭಿವೃದ್ಧಿಗೆ ಒಗ್ಗಟ್ಟು, ಸೂಕ್ತ ನಾಯಕತ್ವ ಅಗತ್ಯ: ಶಾಸಕ ಅಬ್ಬಯ್ಯ
ಹುಬ್ಬಳ್ಳಿ :
ಸಮಾಜದ ಅಭಿವೃದ್ಧಿಗಾಗಿ ಒಗ್ಗಟ್ಟು, ಸಂಘಟನೆ ಮತ್ತು ಸಮರ್ಥ ನಾಯಕತ್ವದ ಅಗತ್ಯವಿದೆ. ಸಮಾಜವನ್ನು ಮುಖ್ಯವಾಹಿನಿಗೆ ತರಬೇಕಾದರೆ ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ದುಡಿದಾಗ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಪ್ರಸಾದ ಅಬ್ಬಯ್ಯ ನುಡಿದರು.

ಭಾನುವಾರ ನಗರದ ಅಕ್ಕಿಹೊಂಡ ಹನ್ನೆರಡು ಮಠದಲ್ಲಿ ಲಿಂಗಾಯತ ಹೂಗಾರ ಸಮಾಜದ ತಾಲೂಕು ಘಟಕದಿಂದ ಆಯೋಜಿಸಲಾಗಿದ್ದ ಕುಲಗುರು ಶರಣ ಹೂಗಾರ ಮಾದಯ್ಯ ಅವರ ಜಯಂತಿ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಅತ್ಯಂತ ಸಣ್ಣ ಸಮಾಜವಾಗಿರುವ ಹೂಗಾರ ಸಮುದಾಯದ ಶ್ರೇಯೋಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಸಮಾಜಕ್ಕೆ ಏನು ಬೇಕು ಎನ್ನುವುದರ ಜತೆಗೆ ಸಮಾಜಕ್ಕೆ ನಮ್ಮಿಂದ ಏನು ಕೊಡುಗೆ ನೀಡಲು ಸಾಧ್ಯ ಎಂಬುದನ್ನು ಅರಿತು ಮುನ್ನಡೆಯಬೇಕು.
ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ವರ್ಗಗಳಷ್ಟೇ ಇರುವಾಗ ಜಾತಿ ಹೆಸರಿನಲ್ಲಿ ವಿಷಬೀಜ ಬಿತ್ತುವುದು ಸರಿಯಲ್ಲ. ಇಂತಹ ಭೇದಭಾವಗಳನ್ನು ಮೆಟ್ಟಿ ನಿಂತು ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದರು.
ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿ ಎಲ್ಲ ರೀತಿಯ ನೆರವು ನೀಡಲಾಗುವುದು. ಹೂಗಾರ ಸಮಾಜದವರಿಗೆ 2ಎ ಪ್ರಮಾಣಪತ್ರ ಪಡೆಯುವಲ್ಲಿ ಎದುರಾಗುತ್ತಿರುವ ತೊಂದರೆಗಳ ಕುರಿತು ಮುಖಂಡರು ಗಮನ ಸೆಳೆದಿದ್ದು, ಈ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಹೂಗಾರ ಸಮಾಜ ಭವನ ನಿರ್ಮಾಣ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳಿಗೆ ₹1 ಲಕ್ಷ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.
ರುದ್ರಾಕ್ಷಿಮಠದ ಪೂಜ್ಯ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಕುಲಗುರು ಮಾದಯ್ಯ ಶರಣರನ್ನು ಸ್ಮರಿಸುವುದರ ಜೊತೆಗೆ ಸಮಾಜದ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುತ್ತಿರುವುದು ಒಳ್ಳೆಯ ಕಾರ್ಯವಾಗಿದೆ. ಹೂಗಾರ ಸಮಾಜದವರು ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವದು ಹೆಮ್ಮೆಯ ಸಂಗತಿ. ಸಮಾಜದವರು ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುವಂತಾಗಬೇಕು. ಸಮಾಜದ ಏಳಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಸಮಾಜದ ಮುಖಂಡರಾದ ಸುರೇಶ ಹೂಗಾರ, ಮಹಿಳಾ ಮುಖಂಡರಾದ ಸರೋಜಾ ಹೂಗಾರ ಸಮಾಜದ ಸ್ಥಿತಿಗತಿ, ಅಭಿವೃದ್ಧಿ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ಸಮಾಜದ ಸಾಧಕರು, ಕಲಾವಿದರು ಮತ್ತು ಹಿರಿಯ ಮಹಿಳೆಯರನ್ನು ಸತ್ಕರಿಸಲಾಯಿತು.
ತಾಲೂಕು ಘಟಕದ ಅಧ್ಯಕ್ಷ ಸೋಮಲಿಂಗಪ್ಪ ಹೂಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲ್ಮೇಶ ಹೂಗಾರ, ನಾಗರತ್ನಾ ಹೂಗಾರ, ಹನುಮಂತಪ್ಪ ಹೂಗಾರ, ಎಂ.ಎಂ. ಹೂಗಾರ, ರವಿ ಹೂಗಾರ, ಗುರುರಾಜ ಹೂಗಾರ, ಅಶೋಕ ಹೂಗಾರ, ಡಾ. ವಿಜಯಮಹಾಂತೇಶ ಪೂಜಾರ, ರವಿ ಸಂಗಳಕರ, ಪ್ರಭು ಹೂಗಾರ, ಪೂರ್ಣಿಮಾ ಪೂಜಾರ, ಹೊಳಬಸಪ್ಪ ಹೂಗಾರ, ಜಯಶ್ರೀ ಹೂಗಾರ, ಗಿರಿಜಾ ಹೂಗಾರ, ಶಶಿಕಲಾ ಹೂಗಾರ, ಲಲಿತಾ ಹೂಗಾರ, ಬಸಪ್ಪ ಹೂಗಾರ, ಫಕ್ಕಿರಮ್ಮ ಹೂಗಾರ ಸೇರಿದಂತೆ ಹಲವರಿದ್ದರು.
ನಾಗರಾಜ ಸಂಗಳಕರ ಸ್ವಾಗತ ಮಾಡಿದರು. ಬಸವರಾಜ ಹೂಗಾರ ನಿರೂಪಿಸಿದರು. ಪ್ರಿಯಾಂಕಾ ಪೂಜಾರ ಪ್ರಾರ್ಥಿಸಿದರು. ನೂರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಹಾಜರಿದ್ದರು.
