ಶರಣಸಂಸ್ಕೃತಿ ಉತ್ಸವ: 10,000 ಗಾಯಕರಿಂದ ವಚನ ಝೇಂಕಾರ

ಬಸವ ಮೀಡಿಯಾ
ಬಸವ ಮೀಡಿಯಾ

ಮುರುಘಾ ಮಠದಲ್ಲಿ ಸಾಮೂಹಿಕ ತಾಲೀಮಿಗೆ ಚಾಲನೆ

ಚಿತ್ರದುರ್ಗ:

ಅಕ್ಟೊಬರ್ ೧೭ ಬೆಳಗ್ಗೆ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಏಕ ಕಾಲದಲ್ಲಿ ೧೦ ಸಾವಿರ ಜನರಿಂದ ನಡೆಯಲಿರುವ ಸಾಮೂಹಿಕ ವಚನ ಗಾಯನ ಕಾರ್ಯಕ್ರಮದ ತಾಲೀಮಿಗೆ ನಿನ್ನೆ ಚಾಲನೆ ದೊರೆಯಿತು.

ಪೂರ್ವಾಭ್ಯಾಸದ ನೇತೃತ್ವ ವಹಿಸಿದ್ದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಮಾತನಾಡಿ, ೧೨ನೇ ಶತಮಾನದ ವಚನಗಳು ಅನರ್ಘ್ಯ ರತ್ನ. ಅವುಗಳು ಜನಮಾನಸದಲ್ಲಿ ಈಗಲೂ ಗುನುಗುಟ್ಟುತ್ತವೆ. ಇಂದಿನ ಮಕ್ಕಳಿಗೆ, ದೊಡ್ಡವರಿಗೂ ಅವುಗಳ ಮನನ ಅಗತ್ಯವಾಗಿದೆ.

ವಚನಗಳು ನಮ್ಮ ಮನಸ್ಸಿನೊಳಗೋದರೆ ಅವು ಶಾಶ್ವತವಾಗಿ ಉಳಿಯುವವೆಂಬ ಕಾರಣದಿಂದ ಶರಣ ಸಂಸ್ಕೃತಿ ಉತ್ಸವದ ಸದಾಶಯವೂ ಅದೇ ಆಗಿರುವ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಇಂತಹ ಪ್ರಯತ್ನ ನಡೆಯುತ್ತಿದೆ.

ಜಿಲ್ಲೆಯ ಎಲ್ಲ ಭಾಗಗಳ ಆಸಕ್ತರನ್ನು ಸೇರಿಸಿಕೊಂಡು ಬೇರೆಯವರಿಗೆ ಪ್ರೇರೇಪಿಸಿ ಇದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಈಗಾಗಲೇ ಚಿತ್ರದುರ್ಗದ ಅನೇಕರು ಇದರಲ್ಲಿ ಭಾಗಿಗಳಾಗಿದ್ದಾರೆನ್ನುವುದಕ್ಕೆ ನೀವೇ ಸಾಕ್ಷಿ.

ಇಂತಹದೇ ಒಂದು ಸಮೂಹ ಗಾಯನ ವಚನ ನಾದ ಎನ್ನುವ ಹೆಸರಿನಲ್ಲಿ ದಾವಣಗೆರೆಯ ಮಹಾಜನತೆಯ ಸಹಕಾರದೊಂದಿಗೆ ಲಿಂಗಾಯತ ಮಠಾಧೀಶರ ಒಕ್ಕೂಟವು ಸೆಪ್ಟೆಂಬರ್ ೩೦ರ ಆಯೋಜಿಸಿತ್ತು.

ಅಲ್ಲಿ ಮಕ್ಕಳಿಂದ ಹಿಡಿದು ೮೦ರ ವಯೋಮಾನದ ಹಿರಿಯರೂ ಭಾಗವಹಿಸಿದರು. ಚಿತ್ರದುರ್ಗದ ಜನತೆಯೂ ಸಹ ಇಲ್ಲಿ ನಡೆಯುವ ಸಂದರ್ಭದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಕೆ.ಎಸ್. ಅಶ್ವಥ್ ಅವರ ನಿರ್ದೇಶನ ಹಾಗೂ ಸ್ವರ ಸಂಯೋಜನೆಯಲ್ಲಿ ನಿರ್ಮಾಣಗೊಂಡಿದ್ದ ಕೂಡಲಸಂಗಮದೇವ ಧ್ವನಿಸುರಳಿಯ ಆಯ್ದ ೩೨ ವಚನಗಳಿಗೆ ಹೆಸರಾಂತ ಗಾಯಕ ಕೆ. ಯುವರಾಜ್ ಈ ತಾಲೀಮಿಗೆ ಚಾಲನೆ ನೀಡಿ ಪೂರ್ವಾಭ್ಯಾಸಕ್ಕಾಗಿ ವಚನಗಳನ್ನು ಹೇಳಿಕೊಟ್ಟರು.

ಈ ಸಮೂಹ ವಚನ ಗಾಯನ ಯಶಸ್ವಿಯಾಗುತ್ತದೆ. ವಚನ ಹೇಳಿ ಕೊಡುವವರ ಅನುಭವಿ ತಂಡವೇ ಇಲ್ಲಿದೆ. ಹಾಗಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಲವಾರು ವಚನಗಳ ಗಾಯನ ನಡೆಯಿತು. ನಗರದ ವಿವಿಧ ಸಮಾಜ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಎಸ್‌ಜೆಎಂ ವಿದ್ಯಾಪೀಠದ ಶಾಲಾ ಕಾಲೇಜುಗಳ ಸಿಬ್ಬಂದಿಗಳು ಭಾಗವಹಿಸಿದ್ದರು.

ಅದರಂತೆ ಗಾಯನ ಸಂದರ್ಭದಲ್ಲಿ ಮಹಿಳೆಯರಿಗೆ ಇಳಕಲ್ ಸೀರೆ ಹಾಗೂ ಪುರುಷರಿಗೆ ರಾಮರಾಜ್ ವಸ್ತ್ರಗಳನ್ನು ರಿಯಾಯಿತಿ ದರದಲ್ಲಿ ಒದಗಿಸಲಾಗುವುದೆಂದು ತಿಳಿಸಲಾಯಿತು.

ವಚನ ಝೇಂಕಾರ ಬಸವಕೇಂದ್ರ, ಮುರುಘರಾಜೇಂದ್ರ ಬೃಹನ್ಮಠ, ಎಸ್.ಜೆ.ಎಂ. ವಿಶ್ವವಿದ್ಯಾಲಯ ವತಿಯಿಂದ ಸರ್ವ ಸಮಾಜ, ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಶರಣಸಂಸ್ಕೃತಿ ಉತ್ಸವದ ಭಾಗವಾಗಿ ನಡೆಯಲಿದೆ.

ಶರಣಸಂಸ್ಕೃತಿ ಉತ್ಸವ ಅಕ್ಟೋಬರ್ ೧೪ ರಿಂದ ೨೨ರವರೆಗೆ ನಡೆಯಲಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *