ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆ
ಚಿತ್ರದುರ್ಗ:
ಕಳೆದ ೭೦-೮೦ ವರ್ಷಗಳ ಹಿಂದೆ ಸರಿಯಾದ ಶಿಕ್ಷಣ ಸಿಗದೆ ಎಷ್ಟೋ ಜನ ಪ್ರಾಥಮಿಕ ಹಂತದಿಂದ ಮುಂದಿನ ಅಧ್ಯಯನವನ್ನು ನಿಲ್ಲಿಸಿದ ಉದಾಹರಣೆಗಳಿದ್ದವು.
ಅದನ್ನು ಮನಗಂಡ ಹಿಂದಿನ ಸಿರಿಗೆರೆಯ ಲಿಂಗೈಕ್ಯ ಪೂಜ್ಯ ಶಿವಕುಮಾರ ಸ್ವಾಮಿಗಳವರು ಆ ಸಮಯಕ್ಕೆ ಬೇಕಾಗಿದ್ದ ಪ್ರೌಢಶಾಲೆಗಳನ್ನು ತಮ್ಮ ಮಠದಿಂದ ತೆರೆದರು.
ಆ ಮೂಲಕ ಸಾವಿರಾರು ಬಡ, ಮಧ್ಯಮ ವರ್ಗದವರ ಬಾಳಿನಲ್ಲಿ ಬೆಳಕು ಮೂಡಿಸಿದರು ಎಂದು ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಅವರು ಹಿಂದಿನ ಚರಿತ್ರೆಯ ಅವಲೋಕನ ಮಾಡಿದರು.

ಶ್ರೀಗಳು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣಮಾಸದ ಪ್ರಯುಕ್ತ ಆಯೋಜಿಸಿರುವ ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆಯ ೧೯ನೇ ದಿನದ ಸಮಾರಂಭವು ನಗರದ ಮರುಳಪ್ಪ ಬಡಾವಣೆಯ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆ.ಎಂ.ಚಿದಾನಂದಪ್ಪ ಅವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿರಿಗೆರೆಯ ತರಳಬಾಳು ಬೃಹನ್ಮಠದ ಲಿಂಗೈಕ್ಯ ಜಗದ್ಗುರು ಶಿವಕುಮಾರ ಸ್ವಾಮಿಗಳವರ ಜೀವನ ಹಾಗೂ ಸಾಧನೆ ಕುರಿತಾದ ಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಮಠವನ್ನು ಭಕ್ತರ ನೆರವಿನಿಂದ ಸದೃಢಗೊಳಿಸುತ್ತ ಬಂದರು. ಶೈಕ್ಷಣಿಕ ಕ್ರಾಂತಿಯ ಮೂಲಕ ಜನರಿಗೆ ಶಿಕ್ಷಣದ ಮೂಲಕ ಅರಿವನ್ನು ತುಂಬಲು ಪ್ರಯತ್ನಿಸಿದರು. ಅದರ ಫಲವಾಗಿ ಇಂದು ಉಪನ್ಯಾಸ ನೀಡಿದ ರುದ್ರಪ್ಪ ಅವರ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದ್ದರ ಬಗ್ಗೆ ಶ್ರೀಗಳವರ ಬಗೆಗೆ ಎಂತಹ ಭಾವನಾತ್ಮಕ ಸಂಬಂಧ ಇತ್ತೆಂಬುದನ್ನು ಅವರ ಮಾತಿನಲ್ಲಿ ನೀವು ಕೇಳಿದ್ದೀರಿ. ಊರೂರು ಅಲೆದು ಮಠ ಜತೆಗೆ ಸಾಲು ಸಾಲು ಶಿಕ್ಷಣ ಸಂಸ್ಥೆಯನ್ನು ಆರಂಭಿಸುತ್ತ ನಡೆದ ಅವರು ಯಾವುದೇ ಸಮಾರಂಭ ನಡೆಯಲಿ ಅಲ್ಲಿ ಅಚ್ಚುಕಟ್ಟುತನ ಮತ್ತು ಸಮಯ ಪ್ರಜ್ಞೆಗೆ ಎಲ್ಲಿಲ್ಲದ ಮಹತ್ವ ನೀಡುತ್ತಿದ್ದರು ಎನ್ನುವುದಕ್ಕೆ ಮುಖ್ಯಮಂತ್ರಿ, ಮಂತ್ರಿ ಯಾರೇ ಆಗಿರಲಿ ಅವರಿಗಾಗಿ ಕಾಯದೇ ಸಮಾರಂಭ ಆರಂಭಿಸಿದ ಬಗ್ಗೆ ಅನೇಕ ಉದಾಹರಣೆಗಳಿವೆ.
ಹಾಗೆಯೇ ಬಸವಾದಿ ಶಿವಶರಣರ ಬಗೆಗೆ ಎಲ್ಲಿಲ್ಲದ ಪ್ರೇಮ ಮತ್ತು ಅದನ್ನು ಯಾವ ಯಾವ ರೀತಿ ಜನರಿಗೆ ತಲುಪಿಸಬೇಕೆಂಬ ಅಭಿಲಾಷೆಯಿಂದ ಭಜನೆ, ನಾಟಕ, ಸಾಹಿತ್ಯದ ಮೂಲಕ ಜನರನ್ನು ತಲುಪುವಂತೆ ನೋಡಿಕೊಂಡರು. ಸ್ವತಃ ಬಸವಾದಿ ಶಿವಶರಣರ ಕುರಿತಾದ ಅನೇಕ ಸಾಹಿತ್ಯ ಕೃತಿಗಳನ್ನು ಹಾಗೂ ನಾಟಕಗಳನ್ನು ರಚಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ.
ಸಮಾಜದಲ್ಲಿದ್ದ ಅನೇಕ ಕಂದಾಚಾರ, ಮೂಢನಂಬಿಕೆ, ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಅಂದು ಮಠದ ಜವಾಬ್ದಾರಿ ಹೊತ್ತ ಅವರಿಗೆ ಅದೇನು ಹೂವಿನ ಹಾಸಿಗೆ ಆಗಿರಲಿಲ್ಲ.
ಉಪಕಾರಕ್ಕಿಂತ ಉಪದ್ರವ ಕೊಟ್ಟವರೇ ಜಾಸ್ತಿ. ಅದೆಲ್ಲವನ್ನು ಮೆಟ್ಟಿನಿಂತು ದಿಟ್ಟ ಕ್ರಮಗಳಿಂದ ಎದುರಿಸಿದರು. ಅದರಂತೆ ಚಿತ್ರದುರ್ಗದ ಬೃಹನ್ಮಠಕ್ಕೂ ಸಿರಿಗೆರೆಯ ತರಳಬಾಳು ಬೃಹನ್ಮಠಕ್ಕೂ ಅವಿನಾಭಾವ ಸಂಬಂಧ ಇದ್ದೇ ಇದೆ.
ಒಮ್ಮೊಮ್ಮೆ ಸಾಮರಸ್ಯ ಕದಡಲು ಬಂದವರಿಗೆ ಸರಿಯಾದ ಉತ್ತರವನ್ನು ಉಭಯ ಮಠಗಳ ಶ್ರೀಗಳು ನೀಡಿದ್ದರು.
ಜಯದೇವ ಜಗದ್ಗುರುಗಳು ಪ್ರಸಾದ ನಿಲಯಗಳಿಗೆ ಒತ್ತು ನೀಡಿದರೆ, ಶಿವಕುಮಾರ ಶ್ರೀಗಳು ಶಿಕ್ಷಣಕ್ಕೆ ಆದ್ಯತೆ ನೀಡಿದ ಫಲವಾಗಿ ಅಂದು ಅನೇಕರು ಇದರಿಂದ ಮೇಲೆ ಬಂದರೆಂದು ಅನೇಕ ಉದಾಹರಣೆ ಮೂಲಕ ಶ್ರೀಗಳವರ ವ್ಯಕ್ತಿತ್ವದ ಅವಲೋಕನವನ್ನು ಮಾಡಿದರು.

ಸಮ್ಮುಖ ವಹಿಸಿದ್ದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಚಿತ್ರದುರ್ಗ ಹಾಗೂ ಸಿರಿಗೆರೆಯ ಹಿಂದಿನ ಪೀಠಾಧ್ಯಕ್ಷರುಗಳಾಗಿದ್ದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳಿಗೂ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ನಡುವೆ ಸುಮಧುರ ಬಾಂಧವ್ಯವಿತ್ತು. ಹಾಗಾಗಿ ತಮ್ಮ ಪೀಠದ ಮುಂದಿನ ಉತ್ತರಾಧಿಕಾರಿಗಳಾಗಲಿರುವ ಈಗಿನ ಶಿವಮೂರ್ತಿ ಶಿವಾಚಾರ್ಯ ಶ್ರೀಗಳವರನ್ನು ಉನ್ನತ ಅಧ್ಯಯನಕ್ಕೆ ವಿದೇಶಕ್ಕೆ ಕಳಿಸುವ ಬೀಳ್ಕೊಡುಗೆ ಸಮಾರಂಭಕ್ಕೆ ಕರೆಸಿಕೊಂಡದ್ದು ಅವಿಸ್ಮರಣೀಯ ಸಂದರ್ಭ.
ಹೊಳಲ್ಕೆರೆ ಸಮೀಪದ ಮುತ್ತಗದೂರಿನ ಮಹದೇವಯ್ಯ ಬಸಮ್ಮ ದಂಪತಿಗಳ ಸುಪುತ್ರರೇ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು. ಇವರಿಗೆ ಅಂದಿನ ಶಾಂತಲಿಂಗ ದೇಶಿಕರು ದೀಕ್ಷೆ ನೀಡಿರುತ್ತಾರೆ. ಶಾಂತಲಿಂಗ ದೇಶಿಕರ ನಂತರ ಸಿರಿಗೆರೆ ಪೀಠದ ಹೊಣೆ ಶಿವಕುಮಾರ ಶ್ರೀಗಳವರು ವಹಿಸಿಕೊಳ್ಳುತ್ತಾರೆ. ಬಹುವಾಗಿ ಶ್ರಮಿಸಿ ಭಕ್ತರನ್ನು ಸಂಘಟಿಸಿ ಮಠ ಕಟ್ಟಿ ಸಾಮಾಜಿಕ ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಮುನ್ನಡೆಸಿದ ಕೀರ್ತಿ ಶ್ರೀಗಳವರಿಗೆ ಸಲ್ಲುತ್ತದೆಂದು ನುಡಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಚಿತ್ರದುರ್ಗ ಕ್ಷೇತ್ರದ ಮಾಜಿ ಶಾಸಕರಾದ ಎಸ್.ಕೆ. ಬಸವರಾಜನ್ ಮಾತನಾಡಿ, ಶ್ರಾವಣ ಮಾಸ ಅತ್ಯಂತ ಪವಿತ್ರ ಮಾಸ. ಶ್ರವಣ ಮತ್ತು ಮನನಕ್ಕೆ ಸುಸಂದರ್ಭ. ಆ ಕಾರಣಕ್ಕಾಗಿ ಒಂದು ತಿಂಗಳು ಕೇಳಿದ್ದನ್ನು ಒಂದು ವರ್ಷದ ತನಕ ಕಾಪಿಟ್ಟುಕೊಳ್ಳುವಂತಹ ಸಮಯ ಇದಾಗಿದೆ. ದೊಡ್ಡ ಸಮಾರಂಭದಲ್ಲಿ ಯಾವುದನ್ನು ಸರಿಯಾಗಿ ಆಸ್ವಾದಿಸಲು ಆಗಲ್ಲ. ಮನೆಯಲ್ಲಿ ಒಂದು ಭಾವನಾತ್ಮಕ ವಾತಾವರಣ ಕೇಳಲು ಒಳ್ಳೆಯ ವಾತಾವರಣ ಇರುತ್ತದೆಂಬ ಕಾರಣಕ್ಕೆ ಮನೆ ಮನೆಗೆ ಇಂತಹ ಕಾರ್ಯಕ್ರಮ ಶ್ರೀಮಠದಿಂದ ನಡೆದಿದೆ.

ಸಿರಿಗೆರೆ ಶಿವಕುಮಾರ ಶ್ರೀಗಳು ಅಂದರೆ ಅದೊಂದು ದೊಡ್ಡ ಶಕ್ತಿ. ಅವರ ಕಾಲದಲ್ಲಿ ಬಸವತತ್ವ ಅಷ್ಟೊಂದು ಪ್ರಚಾರಕ್ಕೆ ಬರದ ಸಂದರ್ಭದಲ್ಲಿ ಇವರು ಹಳ್ಳಿ ಹಳ್ಳಿಗಳಿಗೆ ತಮ್ಮ ನಾಟಕ ತಂಡದ ಮೂಲಕ ಮರಣವೇ ಮಹಾನವಮಿ ಎನ್ನುವ ನಾಟಕವನ್ನು ಸಾವಿರಾರು ಪ್ರದರ್ಶನವನ್ನು ಮಾಡಿಸುವ ಮೂಲಕ ಬಸವಾದಿ ಶಿವಶರಣರ ಮೌಲ್ಯವನ್ನು ಮುಟ್ಟಿಸುವ ಕೆಲಸ ಮಾಡಿದರು.
ಆಗಿನ್ನು ಯಾವುದೇ ಮಾಧ್ಯಮಗಳು ಇರದ ಕಾಲದಲ್ಲಿಯೂ ಊರೂರು ಸುತ್ತಿ ವಚನ ಸಾಹಿತ್ಯ ಪ್ರಚಾರಕ್ಕೆ ಬರಲು ಆದ್ಯತೆ ನೀಡಿದರು. ಸಿರಿಗೆರೆ – ಚಿತ್ರದುರ್ಗದ ಎರಡು ಮಠಗಳು ಜನಪರವಾಗಿ ಕೆಲಸ ಮಾಡಿದ ಉದಾಹರಣೆ ಇವೆ.
ಶಿವಕುಮಾರ ಶ್ರೀಗಳು ಅಂದು ರೈತರಿಗೆ ಪ್ರತಿಯೊಬ್ಬರೂ ಒಂದೊಂದು ಎಕರೆ ಅಡಿಕೆ ತೋಟವನ್ನು ಮಾಡಲು ಕರೆ ನೀಡಿದ ಫಲವಾಗಿ ಎಲ್ಲಾ ಕಡೆ ಅಡಿಕೆ ತೋಟ ಬೆಳೆಯಲು ಕಾರಣವಾಯಿತು. ಅಂದು ಅಡಿಕೆ ತೋಟ ಇಲ್ಲದವರಿಗೆ ಹೆಣ್ಣು ಕೊಡಲು ಹಿಂಜರಿದ ವಾತಾವಾರಣವಿತ್ತು. ಅದೊಂದು ಪ್ರತಿಷ್ಠೆಯಾಗಿತ್ತು. ಹೀಗೆ ಸಮಾಜಕ್ಕೆ ಬಹುವಿಧದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿಹೋಗಿದ್ದಾರೆಂದು ಸ್ಮರಿಸಿದರು.

ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವರೊಂದಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಉದ್ಯೋಗ ವಿನಿಮಯ ಕಛೇರಿಯ ನಿವೃತ್ತ ಅಧಿಕಾರಿ ರುದ್ರಪ್ಪ ಅವರು ಮಾತನಾಡಿ, ನಾನು ಅವರ ಶಿಷ್ಯ. ಮುತ್ತಗದೂರಿಗೂ ನಮ್ಮ ಊರು ಕಾಳಘಟ್ಟ ಗ್ರಾಮಕ್ಕೂ ಹತ್ತಿರದ ನಂಟು. ಶ್ರೀಗಳವರ ಮಠದ ವಿದ್ಯಾಸಂಸ್ಥೆಯಲ್ಲಿ ಓದಿದವನು ನಾನು. ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.
ಅವರು ಧನಿಕರಿರಲಿ ಬಡವನಿರಲಿ ಎಲ್ಲರನ್ನೂ ಸಮಾನಾಗಿ ಕಾಣುವ ಪ್ರವೃತ್ತಿ ಹೊಂದಿದ್ದರು. ಅವರು ಅಮೂಲ್ಯ ಮಾತೊಂದು ಅವರ ಆತ್ಮನಿವೇದನೆ ಗ್ರಂಥದಲ್ಲಿ ಉಲ್ಲೇಖವಾಗಿದೆ. ಶಿಷ್ಯರ ಹಣವನ್ನು ತೆಗೆದುಕೊಂಡು ಹೋಗಿ ಮಠದಲ್ಲಿರುವ ತಮ್ಮ ಅಣ್ಣ ತಮ್ಮಂದಿರ ಹೆಂಡಿರು ಮಕ್ಕಳಿಗೆ ಹಾಕುವ ನಾಮದಾರಿ ಗುರುಗಳು ಸಮಾಜದಿಂದ ತೊಲಗುವವರೆಗೆ ಕಲ್ಯಾಣವಿಲ್ಲ ಎಂಬ ಧೀರೋದಾತ್ತ ನಿಲುವನ್ನು ಹೊಂದಿದ್ದರೆಂಬ ಅನೇಕ ಉಲ್ಲೇಖಗಳನ್ನು ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಎಂ. ಚಿದಾನಂದಪ್ಪ ಛಾಯಾದೇವಿ ದಂಪತಿ, ಶಂಕ್ರಣ್ಣ, ರುದ್ರೇಶ ಐಗಳ್, ಸುರೇಶ್ಬಾಬು(ಸೈಟ್), ಮಹಾಂತಮ್ಮ, ಬಸವರಾಜ ಕಟ್ಟಿ, ಸೌಭಾಗ್ಯ ಬಸವರಾಜನ್, ಕಂಟ್ರಾಕ್ಟರ್ ರವಿಕುಮಾರ, ವಕೀಲರಾದ ವಿಜಯಕುಮಾರ, ಜ್ಯೋತಿ, ಬಸವರಾಜ, ಅಶೋಕ, ಅಜಿತ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದ ಉಮೇಶ ಪತ್ತಾರ ವಚನ ಪ್ರಾರ್ಥನೆ ಮಾಡಿದರೆ, ಕಾನೂನು ಸಲಹೆಗಾರ ನಾಗರಾಜ ಸಂಗಮ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
