ಸಾರ್ಥಕಗೊಂಡ ಶಿವಾನುಭವ ಪತ್ರಿಕೆ ವಿಚಾರ ಸಂಕಿರಣ

ಬಸವ ಕಲ್ಯಾಣ

         ಬಸವ ಕಲ್ಯಾಣದ ವಿಶ್ವಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಅಧ್ಯಕ್ಷರಾದ ಪೂಜ್ಯ ಡಾ. ಬಸವಲಿಂಗ ಪಟ್ಟಾಧ್ಯಕ್ಷರು ದಿನಾಂಕ ೩ ಮತ್ತು ೪ ಅಕ್ಟೋಬರ್ ೨೨೦೬ರಂದು ಎರಡು ದಿನಗಳ ಕಾಲ ಆಯೋಜಿಸಿದ್ದ ‘ಶಿವಾನುಭವ ಪತ್ರಿಕೆ : ಕನ್ನಡ ಅಸ್ಮಿತೆ’ ವಿಚಾರ ಸಂಕಿರಣ ಅತ್ಯಂತ ವಿಧಾಯಕವಾಗಿ  ಜರುಗಿತು.

            ಜುಲೈ ೨ ರಂದು ಡಾ. ಫ.ಗು. ಹಳಕಟ್ಟಿಯವರ ಜಯಂತಿ ನಿಮಿತ್ಯ ನಾನು ಅವರನ್ನು ಸ್ಮರಿಸಬೇಕೆಂಬ ಆಶಯದಿಂದ ‘ಶಿವಾನುಭವ ಪತ್ರಿಕೆ : ಶತಮಾನೋತ್ಸವ ಸಂಭ್ರಮ’ ಎಂಬ ಹೆಸರಿನ ಲೇಖನವೊಂದನ್ನು ಬರೆದಿದ್ದೆ. ಈ ಲೇಖನವನ್ನು ರಾಜು ಜುಬರೆ ಅವರು ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟಾಧ್ಯಕ್ಷರ ಗಮನಕ್ಕೆ ತಂದರು. ಈ ಬರಹವನ್ನು ಓದಿ ಪೂಜ್ಯರು ತಕ್ಷಣ ‘ಶಿವಾನುಭವ ಪತ್ರಿಕೆ’ ಕುರಿತು ಒಂದು ವಿಚಾರ ಸಂಕಿರಣ ಆಯೋಜಿಸೋಣ! ಎಂದು ಸಂಕಲ್ಪ ಮಾಡಿದರು. ಈ ವಿಷಯವಾಗಿ ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಡಾ. ಕೆ. ರವೀಂದ್ರನಾಥ ಅವರ ಪ್ರಧಾನ ಸಂಪಾದಕತ್ವದಲ್ಲಿ, ನನ್ನ ಸಂಪಾದಕತ್ವದಲ್ಲಿ ಈ ವಿಚಾರ ಸಂಕಿರಣದಲ್ಲಿ ಮಂಡಿತವಾಗುವ ಪ್ರಬಂಧಗಳನ್ನು  ಸಂಪುಟ ಪ್ರಕಟಣೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳಿದರು. ಇರುವ ಕ್ಲುಪ್ತ ಅವಧಿಯಲ್ಲಿ ನಾಡಿನ ಹಿರಿಯ ವಿದ್ವಾಂಸರು ತಮ್ಮ ಅಮೂಲ್ಯವಾದ ಪ್ರಬಂಧಗಳನ್ನು ಬರೆದುಕೊಟ್ಟದ್ದು ಒಂದು ವಿಶೇಷವೆಂದೇ ಹೇಳಬೇಕು.

            ಡಾ. ಎಂ. ಎಸ್. ಮದಭಾವಿ, ಡಾ. ಗುರುಪಾದ ಮರಿಗುದ್ದಿ, ಡಾ. ಮೃತ್ಯುಂಜಯ ರುಮಾಲೆ, ಡಾ. ಎಸ್.ಕೆ. ಕೊಪ್ಪ, ಡಾ. ಬಸನಗೌಡ ಬಿರಾದಾರ, ಡಾ. ಕೆ.ಎಲ್. ರಾಜಶೇಖರ, ಡಾ. ಸಂತೋಷ ಹಾನಗಲ್ಲ, ಡಾ. ಬಸವರಾಜ ಕಲ್ಗುಡಿ, ಡಾ. ಗುರುಲಿಂಗಪ್ಪ ಧಬಾಲೆ, ಡಾ. ಸಿ. ನಾಗಭೂಷಣ, ಡಾ. ಸಿದ್ಧಲಿಂಗೇಶ ಸಜ್ಜನಶೆಟ್ಟರ, ಡಾ. ಉಷಾದೇವಿ ಹಿರೇಮಠ, ಡಾ. ಸುಮಂಗಲಾ ಮೇಟಿ, ಸ್ವ್ಯಾನ್ ಕೃಷ್ಣಮೂರ್ತಿ, ಡಾ. ರಮೇಶ ಕಲ್ಲನಗೌಡರ, ನಿಂಗನಗೌಡ ದೇಸಾಯಿ, ಡಾ. ಕಲ್ಯಾಣರಾವ ಪಾಟೀಲ, ಡಾ. ಆರ್.ಎಸ್.ದಾನರಡ್ಡಿ, ಪ್ರವೀಣಕುಮಾರ ಎನ್, ಸತೀಶಗೌಡ ಬಿ, ಡಾ. ಸಣ್ಣವೀರಣ್ಣ ದೊಡ್ಡಮನಿ, ಲಿಂಗರಾಜ ಉಳ್ಳಾಗಡ್ಡಿ ಈ ಎಲ್ಲ ವಿದ್ವಾಂಸರು ತಮ್ಮ ಪ್ರಬಂಧಗಳನ್ನು ಮಂಡಿಸಿದರು. ಇವರು ಹೇಳಿದ ವಿಚಾರಗಳು ಪುಸ್ತಕದಲ್ಲಿಯೂ, ವರ್ತಮಾನ ಪತ್ರಿಕೆಗಳಲ್ಲಿಯೂ ಯುಟ್ಯೂಬ್ ಆನ್ಲೈನ್ ದಲ್ಲಿಯೂ ಬಂದಿರುವುದರಿಂದ ಆ ವಿಚಾರಗಳ ಬಗ್ಗೆ ಹೆಚ್ಚು ಇಲ್ಲಿ ಪ್ರಸ್ತಾಪ ಮಾಡದೇ, ವಿಚಾರ ಸಂಕಿರಣದಲ್ಲಿ ಕಂಡ ಕೆಲವು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುವೆ.

            ೧. ಪೂಜ್ಯ ನಾಡೋಜ ಡಾ. ಬಸವಲಿಂಗ ಪಟ್ಟಾಧ್ಯಕ್ಷರು ಈ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಬಸವಣ್ಣನವರ ಕಾಯಕಭೂಮಿ ಬಸವ ಕಲ್ಯಾಣದಲ್ಲಿ ಡಾ. ಹಳಕಟ್ಟಿಯವರ ಶಿವಾನುಭವ ಪತ್ರಿಕೆಯ ಶತಮಾನದ ಸೇವೆಯನ್ನು ಸ್ಮರಿಸುವ ಕಾರ್ಯವನ್ನು ಮೊಟ್ಟಮೊದಲು ಮಾಡಿದ್ದು ತಮಗೆ ಅತೀವ ಹೆಮ್ಮೆ ಮತ್ತು ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದರು. ಶಿವಾನುಭವ ಪತ್ರಿಕೆ ಕುರಿತಾಗಿ ಎಲ್ಲ ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ಜರುಗಬೇಕು. ಲಿಂಗಾಯತ ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕೆಂದು ತಿಳಿಸಿದರು. ಇಷ್ಟು ಜನ ವಿದ್ವಾಂಸರು ಇಲ್ಲಿ ಬಂದು ಉಪನ್ಯಾಸ ನೀಡಿದ್ದು ನಮಗಂತೂ ತುಂಬ ಸಂತಸ ತಂದಿದೆ ಎಂದು ಹೇಳಿದರು.

            ೨. ಸಾನಿಧ್ಯ ವಹಿಸಿದ್ದ ಹುಲಸೂರಿನ ಪೂಜ್ಯ ಶಿವಾನಂದ ಶ್ರೀಗಳು ತಮ್ಮ ಮಾತುಗಳಲ್ಲಿ ವಿಚಾರ ಸಂಕಿರಣದ ಔಚಿತ್ಯವನ್ನು ವಿವರಿಸುವುದರೊಂದಿಗೆ, ಇತ್ತೀಚೆಗೆ ಕನ್ಹೇರಿ ಸ್ವಾಮಿಗಳು ಬಸವತತ್ವನಿಷ್ಠ ಸ್ವಾಮಿಗಳ ಮೇಲೆ ಮಾಡುತ್ತಿರುವ ಆರೋಪದ ಬಗ್ಗೆ ಪ್ರಸ್ತಾಪಿಸಿ, ಬಸವತತ್ವನಿಷ್ಠ ಮಠಾಧೀಶರನ್ನು ಉದ್ದೇಶಪೂರ್ವಕವಾಗಿ ಆಧಾರರಹಿತವಾಗಿ ಆರೋಪಿಸುತ್ತಿರುವ ಕನ್ಹೇರಿ ಸ್ವಾಮಿಗಳು ಬಹಿರಂಗವಾಗಿ ನಮ್ಮೊಂದಿಗೆ ಚರ್ಚೆಗೆ ಬರಲಿ, ಸುಖಾಸುಮ್ಮನೆ, ಕಪೋಲ ಕಲ್ಪಿತ ಆರೋಪಗಳನ್ನು ಮಾಡುವುದು ಅವರ ಸನ್ಯಾಸಿ ಧರ್ಮಕ್ಕೆ ಶೋಭೆ ತರುವ ವಿಚಾರವಲ್ಲ.

ಸುಳ್ಳು ವಿಚಾರಗಳನ್ನು ಜನರ ಮನಸ್ಸಿನಲ್ಲಿ ತುಂಬಿ ಬಸವತತ್ವನಿಷ್ಠ ಸ್ವಾಮಿಗಳ ತೇಜೋವಧೆ ಮಾಡುತ್ತಿರುವ ಕನ್ಹೇರಿ ಸ್ವಾಮಿಗಳು ನಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. ಎಲ್ಲ ಪೂಜ್ಯರು ಬಸವಸಂಸ್ಕೃತಿ ಅಭಿಯಾನ ಮಾಡಿದ್ದು, ಅದು ಯಶಸ್ವಿಯಾದದ್ದು ಕೆಲವು ಸಂಪ್ರದಾಯಬದ್ಧ ಮನಸ್ಸುಗಳಿಗೆ ಅರಗಿಸಿಕೊಳ್ಳಲಾಗದ ವಿಷಯವಾಗಿದೆ. ಹೀಗಾಗಿ ಕನ್ಹೇರಿ ಸ್ವಾಮಿಗಳನ್ನು ಮುಂದೆ ಮಾಡಿ ತಮ್ಮ ಬೆಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ.

 ಸೈದ್ಧಾಂತಿಕ ನೆಲೆಯಲ್ಲಿ ವಿರೋಧಿಸಲಾಗದವನು ಕೊನೆಗೆ ಬಳಸುವ ಅಸ್ತ್ರವೆಂದರೆ ಅಪಪ್ರಚಾರ-ತೇಜೋವಧೆ. ಬಸವಾದಿ ಶರಣರ ವಿಚಾರಗಳಿಗೆ ವಿರೋಧವಾದ ಮನಸ್ಥಿತಿಯುಳ್ಳ ಈ ಜನರು ಬಸವನಿಷ್ಠ ಸ್ವಾಮಿಗಳನ್ನು ವೈಯಕ್ತಿಕ ನೆಲೆಯಲ್ಲಿ ತೇಜೋವಧೆ ಮಾಡಿ ವಿಕೃತ ಆನಂದವನ್ನು ಪಡೆಯುತ್ತಿದ್ದಾರೆ. ಹೀಗಾಗಿ ಹುಲಸೂರು ಶ್ರೀಗಳು ಮಾತನಾಡಿದ್ದು ಔಚಿತ್ಯಪೂರ್ಣವೆನಿಸಿತು.

            ೩. ಡಾ. ಬಸವಲಿಂಗ ಪಟ್ಟದ್ದೇವರ ಸಾಹಿತ್ಯಿಕ ಪ್ರೀತಿ, ವಿದ್ವಾಂಸರಿಗೆ ಅವರು ನೀಡುವ ಗೌರವ ತುಂಬ ಆಪ್ಯಾಯಮಾನವಾದುದು. ಕಾರ್ಯಕ್ರಮಕ್ಕೆ ಬಂದ ಎಲ್ಲ ಅತಿಥಿಗಳಿಗೆ ಎಳ್ಳುಕಾಳಷ್ಟು ತೊಂದರೆಯಾಗದಂತೆ ಎಲ್ಲ ರೀತಿಯ ಅನುಕೂಲತೆಗಳನ್ನು ಕಲ್ಪಿಸಿದ್ದರು. ಅನುಭವ ಮಂಟಪ  ಸಿಬ್ಬಂದಿಗಳ ಸೇವಾಮನೋಭಾವವೂ ಅಷ್ಟೇ ಸ್ಮರಣೀಯವಾದುದು.

 ಪೂಜ್ಯರು ನೀಡಿದ ಆದೇಶವನ್ನು ಒಂದು ಗುಂಜಿಯಷ್ಟು ತಪ್ಪಾಗದಂತೆ ಅವರು ಎಲ್ಲ ಅತಿಥಿಗಳ ಯೋಗಕ್ಷೇಮವನ್ನು ಅತ್ಯಂತ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ನೋಡಿಕೊಂಡರು. ಎಷ್ಟೋ ಮಠಗಳಲ್ಲಿ ಕಾರ್ಯಕ್ರಮಕ್ಕೆ ಕರೆಯಿಸಿರುತ್ತಾರೆ, ಆದರೆ ಅತಿಥಿಗಳಿಗೆ ಯಾವುದೇ ಗೌರವ ನೀಡುವುದಿಲ್ಲ. ಆದರೆ ಪೂಜ್ಯರ ಸೇವಾಸಿಬ್ಬಂದಿ ನೀಡಿದ ಆದರಾತಿಥ್ಯ ಅಮೋಘವಾದದ್ದು. ತಮ್ಮ ಸಿಬ್ಬಂದಿಗಳಿಗೆ ಪೂಜ್ಯರು ಕೊಟ್ಟ ಸಂಸ್ಕಾರ ನೋಡಿ ಅಲ್ಲಿ ಬಂದ ವಿದ್ವಾಂಸರಿಗೆ ನಿಜಕ್ಕೂ ಸೋಜಿಗವೆನಿಸಿತು. ಎರಡು ದಿನಗಳ ಕಾಲ ಪ್ರಸಾದ ವ್ಯವಸ್ಥೆಯಂತೂ ಇನ್ನೂ ಮೌಲಿಕವಾಗಿತ್ತು.

            ೪. ಪೂಜ್ಯ ಡಾ. ಬಸವಲಿಂಗ ಅಪ್ಪಗಳವರ ಕರಕಮಲ ಸಂಜಾತರಾಗಿ ಕ್ರಿಯಾಶೀಲರಾಗಿರುವ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರ ಬಗ್ಗೆಯೂ ಇಲ್ಲಿ ಮುಖ್ಯವಾಗಿ ಹೇಳಲೇಬೇಕು. ಪೂಜ್ಯರ ನಿರಂತರ ಚಲನಶೀಲ ಚಟುವಟಿಕೆಗಳನ್ನು ಕಂಡು ಆಶ್ಚರ್ಯವೆನಿಸಿತು. ಬೆಳಿಗ್ಗೆ ಐದು ಗಂಟೆಗೆ ಎದ್ದು ಇಡೀ ಕ್ಯಾಂಪಸ್ ಸುತ್ತು ಹಾಕಿ, ಸಂಬಂಧಪಟ್ಟ ಸಿಬ್ಬಂದಿಗಳಿಗೆ ಸ್ವಚ್ಛತಾ ಕಾರ್ಯ ಮೊದಲು ಮಾಡಿಕೊಂಡು, ಇಡೀ ದಿನ ಮಾಡಬೇಕಾದ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಬೆಳಿಗ್ಗೆ ೫ ಗಂಟೆಗೆ ಏಳುವ ಪೂಜ್ಯರು ರಾತ್ರಿ ೧೧ರವರೆಗೆ ನಿರಂತರವಾಗಿ ಕೆಲಸ ಮಾಡುತ್ತಾರೆ. ಅವರಲ್ಲಿರುವ ಈ ಪಾದರಸದಂತಹ ಕ್ರಿಯಾಶೀಲ ಮನಸ್ಥಿತಿ ನೋಡಿ  ಆಶ್ಚರ್ಯವೆನಿಸಿತು.

 ನಾವು ೫.೩೦ಕ್ಕೆ ವಾಯುವಿಹಾರಕ್ಕೆ ಹೊರಟಾಗ ಪೂಜ್ಯ ಗುರುಬಸವ ಪಟ್ಟದ್ದೇವರು ಯಾತ್ರಿ ನಿವಾಸಕಡೆಗೆ ಬರುತ್ತಿದ್ದರು. ಅವರು ಬರುವಷ್ಟರಲ್ಲಿ ಪೂಜ್ಯ ಶಿವಾನಂದ ಸ್ವಾಮಿಗಳು ಬಂದರು. ತಕ್ಷಣ ಗುರುಬಸವ ಪಟ್ಟದ್ದೇವರು – ‘ಬನ್ನಿ ಕುಲಪತಿಗಳೇ’ ಎಂದು ಹೇಳಿದರು. ಇಬ್ಬರೂ ಪರಸ್ಪರ ಮಾತನಾಡುವುದನ್ನು ಕೇಳಿದಾಗ ನನಗಂತೂ ಬಸವಾದಿ ಶಿವಶರಣರು ಶೂನ್ಯಸಂಪಾದನೆಯಲ್ಲಿ ಸಂವಾದ ಮಾಡಿದಂತೆ ತೋರಿತು.

ಪೂಜ್ಯ ಗುರುಬಸವ ಪಟ್ಟದ್ದೇವರು ಶ್ರೀ ಶಿವಾನಂದ ಶ್ರೀಗಳ ಬಗ್ಗೆ ನಮ್ಮ ಮುಂದೆ ಹೇಳುತ್ತ- ‘ಶಿವಾನಂದ ಶ್ರೀಗಳು ಗುರುಗಳ (ಬಸವಲಿಂಗ ಅಜ್ಜವರ) ಸಾನ್ನಿಧ್ಯದಲ್ಲಿ ೨೦ ವರುಷಗಳಿಂದ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದಿನ ಗದುಗಿನ ಜಗದ್ಗುರುಗಳು ಶ್ರೀ ಶಿವಾನಂದ ಶ್ರೀಗಳಿಗೆ ಸಾಷ್ಟಾಂಗ ಹಾಕಿ, ನಿಮ್ಮನ್ನು ದೊಡ್ಡ ಮಠಕ್ಕೆ ಮಾಡುತ್ತೇವೆ ಎಂದಾಗ- ಶ್ರೀ ಶಿವಾನಂದ ಶ್ರೀಗಳು- ‘ನನಗೆ ಕಲ್ಯಾಣ ಬಿಟ್ಟು ಯಾವ ದೊಡ್ಡ ಮಠವೂ, ಕಲ್ಯಾಣಕ್ಕಿಂತಲೂ ಯಾವ ಮಠವೂ ದೊಡ್ಡದಲ್ಲ,  ಬಸವಲಿಂಗ ಅಜ್ಜಾವರ ಸೇವಾದಲ್ಲಿ ನನ್ನ ಬದುಕನ್ನು ಸಾರ್ಥಕಪಡಿಸಿಕೊಳ್ಳುವೆ. ಅವರನ್ನು ಬಿಟ್ಟು ಬೇರೆ ನಾನು ಯಾವ ಮಠಕ್ಕೂ ಹೋಗುವುದಿಲ್ಲ’ ಎಂದು ಹೇಳಿದಂತಹ ನಿರಪೇಕ್ಷ ಮನೋಭಾವದವರು ಶ್ರೀ ಶಿವಾನಂದ ಶ್ರೀಗಳು’ ಎಂದು ಅವರನ್ನು ಪರಿಚಯಿಸಿಕೊಟ್ಟರು.

 ಪೂಜ್ಯರ ನುಡಿಗಳ ಅಕ್ಷರಶಃ ನಿಜ. ಅವರು ಗದುಗಿನ ಜಗದ್ಗುರುಗಳ ಮತ್ತು ಡಾ. ಬಸವಲಿಂಗ ಪಟ್ಟಾಧ್ಯಕ್ಷರ ಗರಡಿಯಲ್ಲಿ ಬೆಳೆದ ಅಪ್ಪಟ ಚಿನ್ನವಾಗಿದ್ದಾರೆ. ನಿಜವಾದ ವಿರಕ್ತರಾಗಿದ್ದಾರೆ, ಅವರಿಗೆ ಯಾವುದೇ ಮಾಯೆ ಮಮಕಾರವಿಲ್ಲ, ಹಣದ ವ್ಯಾಮೋಹವಿಲ್ಲ. ಇಂದಿಂಗೆ ನಾಳಿಂಗೆ ಬೇಕೆಂಬ ಭಾವವಿಲ್ಲ. ಅಷ್ಟೊಂದು ನಿರ್ಲಿಪ್ತ ಮನಸ್ಥಿತಿಯ ಪೂಜ್ಯರು ದೊರೆಯುವುದು ಇಂದು ದುರ್ಲಭ.

 ಭಾಲ್ಕಿ ಪೂಜ್ಯರು ಸದ್ದುಗದ್ದಲವಿಲ್ಲದೆ ಇಂತಹ ನಿರಪೇಕ್ಷ ಭಾವದ ಜಂಗಮ ಪಡೆಯೊಂದನ್ನು ಸಮಾಜದಲ್ಲಿ ನಿರ್ಮಾಣ ಮಾಡಿದ್ದಾರೆ. ಪೂಜ್ಯ ಶ್ರೀ ನಿರಂಜನ ದೇವರು ಭಾಲ್ಕಿ ಪೂಜ್ಯರ ಗರಡಿಯಲ್ಲಿ ಬೆಳೆದ ಮತ್ತೊಬ್ಬ ನಿರಂಜನ ಮೂರ್ತಿಗಳು. ಅವರಂತೂ ಕೈಯಿಂದ ಹಣವನ್ನೇ ಮುಟ್ಟುವುದಿಲ್ಲ. ದಿನಕ್ಕೆ ಒಂದೇ ಹೊತ್ತು ಪ್ರಸಾದ ಮಾಡುತ್ತಾರೆ. ಇಲ್ಲಿಯವರೆಗೆ ೧೭೫ ಹಳ್ಳಿಗಳಲ್ಲಿ ಸಂಚರಿಸುತ್ತ ಯೋಗ ಪ್ರಾಣಾಯಾಮ ಪ್ರವಚನಗಳ ಮೂಲಕ ಆಧ್ಯಾತ್ಮಿಕ ಜಾಗೃತಿಯನ್ನುಂಟು ಮಾಡುತ್ತಿದ್ದಾರೆ. ಇಂತಹ ಶಿಷ್ಯ ರತ್ನಗಳನ್ನು ಸಮಾಜಕ್ಕೆ ನೀಡಿದ ಡಾ. ಬಸವಲಿಂಗಪಟ್ಟಾಧ್ಯಕ್ಷರು ನಿಜಕ್ಕೂ ಲೋಕಮನ್ನಣೆಗೆ ಪಾತ್ರರಾದವರು.

              ೫. ಡಾ. ಬಸವಲಿಂಗ ಪಟ್ಟಾಧ್ಯಕ್ಷರು ತಮ್ಮ ಬಹುತೇಕ ಜವಾಬ್ದಾರಿಗಳನ್ನು ಪೂಜ್ಯ ಗುರುಬಸವ ಪಟ್ಟಾಧ್ಯಕ್ಷರಿಗೆ ವಹಿಸಿ, ನಿಶ್ಚಿಂತರಾಗಿ ಶಿವಯೋಗ ಸಾಧನೆಯಲ್ಲಿ ಸಾಗಿದ್ದಾರೆ. ಇಡೀ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ ಕಿರಿಯ ಶ್ರೀಗಳ ಕುರಿತು ಪೂಜ್ಯರು ಒಂದೇ ಮಾತಿನಲ್ಲಿ – “ನಾವಿಬ್ಬರೂ ಹೊರಗೆ ದ್ವೈತ; ಒಳಗೆ ಅದ್ವೈತ. ದೇಹವೆರಡೂ ಆತ್ಮವೊಂದೆ, ನಮ್ಮ ಮನಸ್ಸಿನೊಳಗಿನ ಮಾತು ಹೊರಗೆ ಬರುವಷ್ಟರಲ್ಲಿ ಗುರುಬಸವ ಪಟ್ಟದ್ದೇವರು ಅದನ್ನು ಅನುಷ್ಠಾನಕ್ಕೆ ತಂದಿರುತ್ತಾರೆ. ಹೀಗಾಗಿ ಅಂತಹ ಪೂಜ್ಯರನ್ನು ಪಡೆದ ತಾವೇ ಧನ್ಯ. ನಾವು ಬೇರೆಯಲ್ಲ, ಗುರುಬಸವ ಪಟ್ಟದ್ದೇವರು ಬೇರೆಯಲ್ಲ’ ಎಂದು ಹೇಳಿದ್ದು, ಅಲ್ಲಿಯ ಅವರ ಕ್ರಿಯಾಶೀಲ ದುಡಿಮೆಯನ್ನು ಕಂಡಾಗ ಅನುಭವಕ್ಕೆ ಬಂದಿತು.

  ೬. ಪೂಜ್ಯರ ಸಾಹಿತ್ಯಿಕ ಚಟುವಟಿಕೆಗಳ ಹಿಂದೆ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತೊಬ್ಬ ಮಹತ್ವದ ವ್ಯಕ್ತಿಗಳೆಂದರೆ ಲೇಖಕ ರಾಜು ಜುಬರೆ ಅವರು. ಪೂಜ್ಯರು ಹೇಳುವ ಪ್ರತಿಯೊಂದು ವಿಚಾರಗಳನ್ನು ತಕ್ಷಣ ಕಾರ್ಯಾನುಷ್ಠಾನಕ್ಕೆ ತರುವ ಜುಬರೆ ಅವರ ಸಮರ್ಪಿತ ಸೇವೆ ಅವಿಸ್ಮರಣೀಯವಾದುದು. ಶ್ರೀಮಠದ ಮತ್ತು ಶ್ರೀಗಳ ಸಾಹಿತ್ಯ ಸೇವಾಕಾರ್ಯಗಳು ಇಷ್ಟು ಉಜ್ವಲವಾಗಿ ಬೆಳಗಲು, ರಾಜು ಜುಬರೆ ಅವರಂತಹ ಯುವಕರ ದಣಿವಿಲ್ಲದೆ ದುಡಿಮೆಯೇ ಕಾರಣವೆನಿಸಿತು. ಪೂಜ್ಯರ ಸಾನ್ನಿಧ್ಯದಲ್ಲಿಯೇ ಸದಾವಕಾಲ ಇರುವ ರಾಜು ಜುಬರೆ ಅವರು ನಾಡಿನ ಎಲ್ಲ ವಿದ್ವಾಂಸರ ಸಂಪರ್ಕದಲ್ಲಿದ್ದವರು. ಶ್ರೀಗಳು ಮಾಡುವ ಸಂಕಲ್ಪಗಳೆಲ್ಲ ಸಾಂಗವಾಗಿ ಜರುಗಲು ರಾಜು ಜುಬರೆ ಅವರಂತಹ ಚೈತನ್ಯಶೀಲ ವ್ಯಕ್ತಿಗಳೂ ಕಾರಣವಾಗಿದ್ದಾರೆ.

            ೭. ಹಿಂದೂಗಳಿಗೆ ಕಾಶಿ, ಇಸ್ಲಾಂ ಧಮೀಯರಿಗೆ ಮೆಕ್ಕಾ, ಕ್ರೈಸ್ತರಿಗೆ ವ್ಯಾಟಿಕನ್ ಇದ್ದಂತೆ ಲಿಂಗಾಯತ ಧರ್ಮೀಯರಿಗೆ ಬಸವ ಕಲ್ಯಾಣ ಅತ್ಯಂತ ಪವಿತ್ರವಾದ ಭೂಮಿ ಆಗಿದೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ಬಸವಕಲ್ಯಾಣಕ್ಕೆ ಕಾಲಿಟ್ಟಾಗ, ಬಸವಾದಿ ಶಿವಶರಣರು ನಡೆದಾಡಿದ ಈ ಪವಿತ್ರ ಭೂಮಿ ಕಂಡಾಗ ಮೈಯಲ್ಲಿ ಒಂದು ರೀತಿಯ ರೋಮಾಂಚನವಾಯಿತು. ಶರಣರು ಮೊದಲು ಕಲ್ಯಾಣಕ್ಕೆ ಬಂದಾಗ, ಉಳಿದುಕೊಳ್ಳುತ್ತಿದ್ದ ಪ್ರದೇಶವನ್ನು ‘ಬಂದವರ ಓಣಿ’ ಎಂದು ಕರೆಯುತ್ತಾರೆ. ಕಲ್ಯಾಣ ಪ್ರವೇಶ ಮಾಡುವ ಪ್ರತಿಯೊಬ್ಬ ಶರಣರು ಮೊದಲು ಬಂದವರ ಓಣಿಗೆ ಹೋಗಿಯೇ ಒಳಗೆ ಪ್ರವೇಶ ಮಾಡಬೇಕಾಗಿತ್ತು. ಅಲ್ಲಿ ಅಕ್ಕಮಹಾದೇವಿಯ ಒಂದೆರಡು ಗವಿಗಳಿವೆ. ಒಂದು ಗವಿ ಎಂಟು ಕಿ.ಮೀ. ದೂರದಲ್ಲಿದೆ ಎಂದು ಅಲ್ಲಿಯ ಗೈಡ್ ಪ್ರಭುಶೆಟ್ಟಿ ನಮಗೆ ತಿಳಿಸಿದರು.

ಅಲ್ಲಿ ಹರಿಯುವ ನೀರು ಅತ್ಯಂತ ಶುಭ್ರವಾಗಿತ್ತು, ಎಂತಹ ಬೇಸಿಗೆ ಕಾಲದಲ್ಲಿಯೂ ಅಲ್ಲಿಯ ನೀರು ಬತ್ತುವುದಿಲ್ಲ. ಆ ನೀರು ತುಂಬ ಸಿಹಿಯಾಗಿದೆ. ಕಲ್ಯಾಣದಲ್ಲಿ ಅತ್ಯಂತ ಪವಿತ್ರವೆನ್ನಿಸುವ ಅಕ್ಕನಾಗಮ್ಮನವರ ಗವಿ, ನೀಲಮ್ಮ-ಗಂಗಾಂಬಿಕೆಯರ ಗವಿ, ಅರಿವಿನ ಮನೆ, ಪರುಷ ಕಟ್ಟೆ, ಬಸವೇಶ್ವರ ದೇವಸ್ಥಾನ, ಬಿಜ್ಜಳನ ಕೋಟೆ, ತ್ರಿಪುರಾಂತಕ ಕೆರೆ, ಅಲ್ಲಮಪ್ರಭುದೇವರ ಮಠ, ಹರಳಯ್ಯನ ಗವಿ  ಮೊದಲಾದವುಗಳನ್ನು ನೋಡಿ ಹೃದಯತುಂಬಿ ಬಂದಿತು. ಬಸವಾದಿ ಶರಣರು ಆ ಕಾಲದಲ್ಲಿ ನಡೆದ ಪವಿತ್ರ ಜಾಗದಲ್ಲಿ ನಾವಿರುವುದೇ ಒಂದು ಸೌಭಾಗ್ಯವೆನಿಸಿತು.

ಇಂದು ಸರಕಾರ ಎಂಟುನೂರು ಕೋಟಿ ರೂಪಾಯಿಗಳಲ್ಲಿ ಕಟ್ಟಿಸುತ್ತಿರುವ ನೂತನ ಅನುಭವ ಮಂಟಪಕ್ಕೂ ಭಾಲ್ಕಿ ಪೂಜ್ಯ ಬಸವಲಿಂಗ ಪಟ್ಟಾಧ್ಯಕ್ಷರೇ ಸ್ಥಳವನ್ನು ನೀಡಿದ್ದಾರೆ. ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಿಸಲು ಹಿಂದಿನ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ಪಟ್ಟ ಕಷ್ಟವನ್ನು ಈಗಿನ ಶ್ರೀಗಳ ಬಾಯಿಂದ ಕೇಳಿದಾಗ ಹೃದಯ ತುಂಬಿ ಬರುತ್ತದೆ. ಅನುಭವ ಮಂಟಪ ಮೂಲ ಇತ್ತೆಂದು ಹೇಳುವ ಜಾಗ ಇಂದು ಪೀರಭಾಷಾ ಬಂಗ್ಲೆಯಾಗಿದೆ. ಅದರ ಮಾಲೀಕ ಹೈದರಾಬಾದಿನಲ್ಲಿರುತ್ತಾನೆಂದು ತಿಳಿಸಿದರು. ಈ ವಿಷಯವಾಗಿ ಕೋರ್ಟಿನಲ್ಲಿ ಇನ್ನೂ ವಾದ ನಡೆದಿದೆ ಎಂಬುದನ್ನು ಗೈಡ್ ಪ್ರಭು ಶೆಟ್ಟಿ ತಿಳಿಸಿದರು.

ಶರಣರಿಗೆ ಬಿಜ್ಜಳನ ಸೈನಿಕರು ಎಳೆಹೂಟೆ ಶಿಕ್ಷೆ ನೀಡಿದಾಗ, ನೊಂದ ಶರಣರು ಕಲ್ಯಾಣವೆಂಬುದು ಕಟುಕರ ಕೇರಿಯಾಗಲಿ ಎಂದು ಶಾಪವಿತ್ತರೆಂದು ಹೇಳುತ್ತಾರೆ. ಅಕ್ಷರಶಃ ಅದು ಕೆಲವು ವರ್ಷ ಕಟುಕರ ಕೇರಿಯೇ ಆಗಿತ್ತು. ಈಗ ಒಂದಿಷ್ಟು ಬದಲಾವಣೆಯಾಗಿದ್ದರೂ ಇನ್ನೂ ಸುಧಾರಣೆಯಾಗಬೇಕಾದದ್ದು ಬಹಳಷ್ಟಿದೆ ಎಂಬುದನ್ನು ಗಮನಿಸಬೇಕು.

            ಒಟ್ಟಾರೆ ಎರಡು ದಿನಗಳ ಬಸವಕಲ್ಯಾಣದ ವಿಚಾರ ಸಂಕಿರಣ, ಕಲ್ಯಾಣದ ಕ್ಷೇತ್ರಕಾರ್ಯ ನನ್ನ ಬದುಕಿನಲ್ಲಿ ಎಂದೂ ಮರೆಯಲಾಗದ ಅವಿಸ್ಮರಣೀಯ ಘಟನೆಗಳಾಗಿ ಉಳಿದುಕೊಂಡವು. ಇಂತಹ ಒಂದು ಸದವಕಾಶ ಕಲ್ಪಿಸಿಕೊಟ್ಟ ಭಾಲ್ಕಿಯ ಉಭಯ ಪೂಜ್ಯರಿಗೆ ಅನಂತ ಶರಣುಗಳು

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *