ಸಾಣೇಹಳ್ಳಿಯಲ್ಲಿ ಬಯಲ ಬೆರಗು ಕೃತಿ ಲೋಕಾರ್ಪಣೆ

ಸಾಣೇಹಳ್ಳಿ:

ಇಲ್ಲಿನ ಎಸ್ಸೆಸ್ ರಂಗಮಂದಿರದಲ್ಲಿ ಬಯಲು ಬೆರಗು ಕೃತಿ ಲೋಕಾರ್ಪಣಾ ಸಮಾರಂಭ ನಡೆಯಿತು.

ಸಮಾರಂಭದ ಸಾನಿಧ್ಯ ವಹಿಸಿದ್ದ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವ ಬದುಕು ಎಷ್ಟು ಶ್ರೇಷ್ಠವೋ ಅಷ್ಟೇ ಕನಿಷ್ಠ. ಆದರ್ಶಗಳ ದಾರಿಯಲ್ಲಿ ಸಾಗಿದರೆ ಮಾತ್ರವೇ ಬದುಕು ಶ್ರೇಷ್ಠವಾಗುತ್ತದೆ. ಆದರ್ಶಗಳನ್ನು ಗಾಳಿಗೆ ತೂರಿದರೆ ಕನಿಷ್ಠ ಬದುಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಠ ಬದುಕನ್ನು ಬಿಟ್ಟು ಶ್ರೇಷ್ಠ ಬದುಕನ್ನು ಸಾಧಿಸಬೇಕು ಎನ್ನುವುದೇ ಬಸವಾದಿ ಶರಣರು ಮತ್ತು ಹಿರಿಯ ಗುರುಗಳ ಆಶಯವಾಗಿತ್ತು.”

 “ಜನನ ಮತ್ತು ಮರಣಗಳಷ್ಟೇ ಬದುಕಿನ ಮುಖ್ಯ ವಿಚಾರಗಳಲ್ಲ. ಹುಟ್ಟು ಮತ್ತು ಸಾವಿನ ನಡುವೆ ಈ ಲೋಕಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡಬೇಕಾದುದು ಅತ್ಯಗತ್ಯ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಅತ್ಯಂತ ಕಡುಬಡತನದಲ್ಲಿದ್ದು, ಸತ್ಯದ ಕಾಯಕ ಹಾಗೂ ಸಾಮಾಜಿಕ ಕಳಕಳಿಯ ಮೂಲಕ ಇದನ್ನು ‘ದುಡಿಯುವ ಮಠ’ವನ್ನಾಗಿ ಮತ್ತು ಶಿಷ್ಯರನ್ನು ‘ಕೊಡುವ ಶಿಷ್ಯರನ್ನಾಗಿ’ ಬೆಳೆಸಿದರು.

ಭಕ್ತರು ಶ್ರೀಮಂತರಾದಾಗ ಅಹಂಕಾರ ಬೆಳೆಸಿಕೊಳ್ಳದೆ, ಸತ್ಕಾರ್ಯಗಳಿಗೆ ತಮ್ಮ ಸಂಪತ್ತನ್ನು ಧಾರೆ ಎರೆಯುವ ಸ್ವಭಾವ ಬೆಳೆಸಿಕೊಂಡಿದ್ದಾರೆ. ಭಕ್ತರ ಶ್ರದ್ಧೆ ಹಾಗೂ ನಂಬಿಕೆಯಿಂದಾಗಿಯೇ ಸಾಣೇಹಳ್ಳಿಯಲ್ಲಿ ಇಂದು ಇಷ್ಟೆಲ್ಲಾ ಬೃಹತ್ ಕೆಲಸಕಾರ್ಯಗಳು ನಡೆಯಲು ಸಾಧ್ಯವಾಗಿದೆ” ಅಲ್ಲದೆ, ತಮ್ಮ ಬದ್ಧತೆಗೆ ಬದ್ಧರಾಗಿ ಯಾವುದೇ ದೇವಸ್ಥಾನಗಳ ಉದ್ಘಾಟನೆಗೆ ಹೋಗದಿರುವ ನಿರ್ಧಾರ ಮತ್ತು ಭಕ್ತರ ಸತ್ವಪರೀಕ್ಷೆಗಳನ್ನು ಎದುರಿಸಿದ್ದೇವೆ.

ಸಾನಿಧ್ಯ ವಹಿಸಿ ಮಾತನಾಡಿದ ಹೊಸದುರ್ಗದ ಪೂಜ್ಯ ಶಾಂತವೀರ ಮಹಾಸ್ವಾಮಿಗಳು ಮಾತನಾಡಿ, “ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರು ರಾಜಕಾರಣಿಗಳನ್ನು ಎದುರಿಸದೆ, ಕೃತಿ ಮತ್ತು ನಾಟಕಗಳ ಮೂಲಕ ಅವರಲ್ಲಿ ಜಾಗೃತಿ ಮೂಡಿಸಿದವರು. ಸಮಯ ಪ್ರಜ್ಞೆ ಹಾಗೂ ವೈಚಾರಿಕ ಕಿಚ್ಚನ್ನು ಮೈಗೂಡಿಸಿಕೊಂಡಿರುವ ಅವರು, ಸರ್ಕಾರದ ಅನುದಾನ ಹಾಗೂ ಹಂಗಿಗೆ ಒಳಗಾಗದೆ ಸಮಾಜಮುಖಿಯಾಗಿ ಖಂಡಿಸುವ ಗಟ್ಟಿತನ ಪ್ರದರ್ಶಿಸಿದವರು.

ನುಡಿದಂತೆ ನಡೆಯುವ, ನಡೆ-ನುಡಿ ಒಂದಾಗಿರುವ ಸ್ಪಷ್ಟತೆಯ ಸ್ಪಟಿಕ ಸ್ವಾಮೀಜಿ ಎಂದರೆ ಅದು ಪಂಡಿತಾರಾಧ್ಯ ಸ್ವಾಮೀಜಿಯವರು. ಯುವ ಸನ್ಯಾಸಿಗಳಿಗೆ ಮತ್ತು ಸಮಾಜಕ್ಕೆ ಅವರ ಬದುಕು ಹಾಗೂ ಸಮಯ ಪ್ರಜ್ಞೆ ದೊಡ್ಡ ಪ್ರೇರಣೆ.

ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಶರಣ ಚಿಂತಕ ಬಸವರಾಜ ಸಾದರ, “ಕನ್ನಡಿಯು ಏನನ್ನೂ ಸ್ವೀಕರಿಸದೆ, ತಿರಸ್ಕರಿಸದೆ, ಸಂಗ್ರಹಿಸಿಟ್ಟುಕೊಳ್ಳದೆ ಎಲ್ಲವನ್ನೂ ಹೇಗೆ ಪ್ರತಿಫಲಿಸಿ ತೋರಿಸುತ್ತದೆಯೋ, ಹಾಗೆಯೇ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರ ವ್ಯಕ್ತಿತ್ವವೂ ಇದೆ.

ಅಲ್ಲಮಪ್ರಭುಗಳು ಹೇಳಿದಂತೆ ಶರೀರದ ವಾಂಛೆ ಮತ್ತು ಮಾಯೆಯನ್ನು ಗೆದ್ದು, ಜ್ಞಾನದ ನೆಲೆಯನ್ನು ಕಂಡು ಆತ್ಮಸಾಕ್ಷಿಯಿಂದ ಬದುಕುತ್ತಿರುವವರು ಪೂಜ್ಯರು. ಅವರ ಬಯಲ ಸ್ವರೂಪದ ವ್ಯಕ್ತಿತ್ವ ಹಾಗೂ ತಪಸ್ಸಿನ ಫಲವಾಗಿ ಈ ಗ್ರಂಥ ಮೂಡಿಬಂದಿದೆ,” ಎಂದರು.

ಕಾರ್ಯಕ್ರಮದಲ್ಲಿ 75 ವಸಂತಗಳನ್ನು ಪೂರೈಸಿ 76ನೇ ವರ್ಷಕ್ಕೆ ಕಾಲಿಡುತ್ತಿರುವ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾರ್ಥಕ ಸೇವೆಯನ್ನು ಸ್ಮರಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.

ಆರಂಭದಲ್ಲಿ ಶಿವಸಂಚಾರದ ನಾಗರಾಜ, ಜ್ಯೋತಿ ಶರಣ ವಚನ ಗೀತೆಗಳನ್ನು ಹಾಡಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ಪರಿಸರ ಗೀತೆಗೆ ನೃತ್ಯ ಪ್ರದರ್ಶಿಸಿದರು. ದೀಪಾ ಸ್ವಾಗತಿಸಿದರೆ ಸುಧಾ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *