ಸೂಲಿಬೆಲೆ ಸಮಾವೇಶ: ಜನ ಬಾರದೆ ಎರಡನೇ ಬಾರಿ ಮುಂದೆ ಹೋದ ಪೂರ್ವಭಾವಿ ಸಭೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ದೇವದುರ್ಗ

ಪಟ್ಟಣದಲ್ಲಿ ಕರೆದಿದ್ದ ‘ಬಸವಾದಿ ಶರಣರ ಹಿಂದೂ ಸಮಾವೇಶ’ದ ಪೂರ್ವಭಾವಿ ಸಭೆ ಎರಡನೇ ಬಾರಿ ಮುಂದೆ ಹೋಗಿದೆ. ನಿರೀಕ್ಷಿಸಿದ ಮಟ್ಟದಲ್ಲಿ ಜನ ಬಾರದಿರುವುದರಿಂದ ವಿಷಯ ಸರಿಯಾಗಿ ಚರ್ಚೆಯಾಗದೆ ಸಭೆಯನ್ನು ಎರಡು ಬಾರಿ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.

ಅಕ್ಟೋಬರ್ 29 ಬೆಳಗಾವಿಯಲ್ಲಿ ಕನ್ನೇರಿ ಸ್ವಾಮಿಯ ಬೆಂಬಲದಲ್ಲಿ ಯುವ ಬ್ರಿಗೇಡ್ ನಾಯಕ ಚಕ್ರವರ್ತಿ ಸೂಲಿಬೆಲೆಯ ನೇತೃತ್ವದಲ್ಲಿ ಹಿಂದುತ್ವ ಸಂಘಟನೆಗಳ ಸಭೆ ನಡೆದಿತ್ತು. ಅದರಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಉತ್ತರ ಕೊಡಲು ತಾಲೂಕು ಮಟ್ಟದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ ನಡೆಸಲು ಸೂಲಿಬೆಲೆ ಹಿಂದುತ್ವ ಸಂಘಟನೆಗಳಿಗೆ ಸೂಚನೆ ನೀಡಿದ್ದರು.

ಅದರಂತೆ ಪಟ್ಟಣದ ವೀರಶೈವ ಸಮಾಜದ ಮುಖಂಡರೊಬ್ಬರು ಅಕ್ಟೋಬರ್ 31ರಂದು ಕೆಇಬಿ ಹತ್ತಿರ ಇರುವ ಅಂಬಾಭವಾನಿ ದೇವಾಲಯದಲ್ಲಿ ಮೊದಲ ಸಭೆ ಕರೆದಿದ್ದರು. ಅದಕ್ಕೆ ಕೇವಲ 15-16 ಜನ ಬಂದಾಗ ಎಲ್ಲರೂ ಬಾಗಿಲು ಮುಚ್ಚಿಕೊಂಡು ಚರ್ಚಿಸಿದ್ದರು. “ನಾವೇ ಹೆಚ್ಚಿಗೆ ಜನ ಕರೆದಿರಲಿಲ್ಲ, ಕಾರ್ಯತಂತ್ರ ರೂಪಿಸಲು ಕೆಲವು ಪ್ರಮುಖರನ್ನು ಮಾತ್ರ ಆಹ್ವಾನಿಸಿದ್ದೆವು. ಮುಂದಿನ ಸಭೆಯಲ್ಲಿ ಹೆಚ್ಚಿಗೆ ಜನ ಬರುತ್ತಾರೆ,” ಎಂದು ಸಂಘಟಕರೊಬ್ಬರು ತಮ್ಮ ಬೆಂಬಲಿಗರಿಗೆ ಹೇಳಿದರೆಂದು ತಿಳಿದು ಬಂದಿದೆ.

ಪಟ್ಟಣದ ಅಂಬಾಭವಾನಿ ದೇವಾಲಯದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ದ ಸಭೆ ಕರೆಯಲಾಗಿತ್ತು.

ನವೆಂಬರ್ 2ರ ಸಂಜೆ ಮತ್ತೆ ಎರಡನೇ ಸಭೆ ಕರೆದು ವಿವಿಧ ಸಮಾಜದ ಮುಖಂಡರನ್ನು ಅಂಬಾಭವಾನಿ ದೇವಾಲಯಕ್ಕೆ ಬರುವಂತೆ ಆಹ್ವಾನಿಸಲಾಗಿತ್ತು. ಅದಕ್ಕೂ ನಿರೀಕ್ಷಿತ ಮಟ್ಟದಲ್ಲಿ ಜನ ಬಾರದ ಕಾರಣ ಸಭೆಯನ್ನು ಸಂಕ್ಷಿಪ್ತವಾಗಿ ನಡೆಸಿ ಮತ್ತೆ ಮುಂದೂಡಲಾಯಿತು.

“ಸುಮಾರು 30 ಜನ ಸಭೆಗೆ ಬಂದಿದ್ದರು. ಸಭೆಯಲ್ಲಿ ಹಿಂದೂ ದೇವರನ್ನು ಅವಹೇಳನ ಮಾಡುವ, ಜನರ ಭಕ್ತಿಯನ್ನು ಕೆಡಿಸುವ ವಾತಾವರಣ ನಿರ್ಮಾಣವಾಗುತ್ತಿದೆ. ಇದರ ವಿರುದ್ಧವಾಗಿ ಸಮಾಜವನ್ನು ಜಾಗೃತಗೊಳಿಸಿ, ಸನಾತನ ಜೀವನ ಪದ್ಧತಿಯ ಸಂರಕ್ಷಣೆ ಮಾಡಬೇಕೆಂದು ಕರೆ ನೀಡಲಾಯಿತು,” ಎಂದು ಸಭೆಯಲ್ಲಿ ಭಾಗವಹಿಸಿದವರೊಬ್ಬರು ಹೇಳಿದರು.

ಮೊದಲ ಸೂಲಿಬೆಲೆ ಸಮಾವೇಶದ ಪೂರ್ವಭಾವಿ ಸಭೆಗೆ ಅಹ್ವಾನ ಹೋಗುತ್ತಿದಂತೆಯೇ ಪಟ್ಟಣದ ಬಸವ ಸಂಘಟನೆಗಳಿಂದಲೂ ತಟ್ಟನೆ ಪ್ರತಿಕ್ರಿಯೆ ಬಂದಿತು. ಬಸವಾದಿ ಶರಣರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಲಿಂಗಾಯತರನ್ನು ದಾರಿ ತಪ್ಪಿಸಲು ಸೂಲಿಬೆಲೆ ಬೆಂಬಲಿಗರು ಪ್ರಯತ್ನ ಮಾಡುತ್ತಿದ್ದಾರೆಂದು ಹೇಳಿ ಅವರು ಸಮಾಜದಲ್ಲಿ ಜಾಗೃತಿ ಮೂಡಿಸಿದರು.

“ಯಾರು ಬೇಕಾದರೂ ಸಮಾವೇಶ ಮಾಡಲು ಸಂವಿಧಾನ ಸ್ವಾತಂತ್ರ್ಯ ನೀಡಿದೆ. ಆದರೆ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾದರೆ ನಾವು ಸುಮ್ಮನಿರುವುದಿಲ್ಲ. ಅವರು ನಿರೀಕ್ಷಿಸಿರುವ ಮಟ್ಟದಲ್ಲಿ ನೆರವು ದೊರೆಯುತ್ತದೆಯೇ ಎಂದು ನೋಡಬೇಕು,” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಅಮರ ನಾಡಗೌಡ ಹೇಳಿದರು.

ಹಿಂದುತ್ವ ಮುಖಂಡರಿಗೆ ಬಸವ ಸಂಸ್ಕೃತಿ ಅಭಿಯಾನಕ್ಕೆ ವಿರುದ್ಧವಾಗಿ ಏಕತಾ ಸಮಾವೇಶ ನಡೆಸಲು ಪ್ರಯತ್ನಿಸಿದ್ದ ದಿಂಗಾಲೇಶ್ವರ ಸ್ವಾಮೀಜಿ ಮತ್ತು ಪಂಚಾಚಾರ್ಯರು ಸೂಲಿಬೆಲೆ ಸಮಾವೇಶಕ್ಕೆ ಕೈ ಜೋಡಿಸುವ ನಿರೀಕ್ಷೆಯಿದೆ.

ಆದರೆ ಇತ್ತೀಚೆಗೆ ಟಿವಿ ಸಂದರ್ಶನವೊಂದರಲ್ಲಿ ದಿಂಗಾಲೇಶ್ವರ ಸ್ವಾಮೀಜಿ “ಅವರು ಹೊಸ ಹೆಸರು ಇಟ್ಟುಕೊಂಡು, ಹೊಸ ಪ್ರಯೋಗ ಮಾಡುತ್ತಿದ್ದಾರೆ. ಅವರ ಅಜೆಂಡಾ, ನಿಲುವು, ಉದ್ದೇಶ ನೋಡಿಕೊಂಡು ಸ್ವಲ್ಪ ದಿನಗಳಾದ ಮೇಲೆ ನಮ್ಮ ಪ್ರತಿಕ್ರಿಯೆ ಕೊಡುತ್ತೇವೆ,” ಎಂದು ಹೇಳಿದರು.

“ಇನ್ನು ಎರಡು ಮೂರು ದಿನಗಳಲ್ಲಿ ಪಟ್ಟಣದಲ್ಲಿ ಸೂಲಿಬೆಲೆ ಸಮಾವೇಶದ ಮೂರನೇ ಪೂರ್ವಭಾವಿ ಸಭೆ ಕರೆಯಲಾಗುತ್ತದೆ. ಈ ಬಾರಿ ಗಂಭೀರ ಪ್ರಯತ್ನ ನಡೆಸಿ ಜನ ಸೇರಿಸಿ ಯಶಸ್ವಿ ಸಭೆ ನಡೆಸುತ್ತೇವೆಂದು,” ಎಂದು ಸಂಘಟಕರು ಹೇಳಿದ್ದಾರೆಂದು ತಿಳಿದು ಬಂದಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
7 Comments
  • ಧರ್ಮದ ಅಫೀಮು ಮುಗ್ದ ಜನರಿಗೆ ತುಂಬಲು ಸನಾತನಿಗಳಿಗೆ ಟೈಮ್ ಬೇಕು. 2 ಸಭೆ ವಿಫಲವಾಗಿರುವುದು ಜನ ಎಚ್ಚರಗೊಂಡಿದ್ದಾರೆ ಎಂದು ಅರ್ಥ. ಹಾಗಂತ ನಾವು ಕೈ ಕಟ್ಟಿ ಕೂಡುವುದಲ್ಲ ತಂತ್ರಕ್ಕೆ ಪ್ರತಿತಂತ್ರ ಎಣೆಯಲೇಬೇಕು.

    • ಸೂಲಿಬೆಲೆಗೆ ಬಸವಾದಿ ಶರಣರ ಸಂಬಂದವಿಲ್ಲ ಇದರ ಗೊಡವಿ ಏಕೆ.. ಹಿಂದುತ್ವ ಬೇರ ಲಿಂಗಾಯತ ಬೇರೆ

  • ಸರ್, ಈ ಸನಾತನಿ ಬ್ರಾಮಂಡರು ಭಾಳ danger ಇವ್ರು ಸುಮ್ಮ ಕುಂಡ್ರಲಾಕ ಸಾಧ್ಯಾನೇ ಇಲ್ಲ. ಒಳಗಿಂದ ಒಳಗೆ ಎನರೆ ಮಾಡ್ತಾರಾ. ಎರಡು ಸಾವಿರ ವರ್ಷದ experience ಐತೆ ಇವ್ರಿಗೆ. ನಮ್ಮ ಲಿಂಗಾಯತ ಮಂದಿ ಸ್ವಲ್ಪ ಮಳ್ಳ ಮಂದಿ light ತೊಗೊಂಡ್ರ ನಮ್ಮನ್ನ ಬಿಳಿ ಬಟ್ಟಿ ಹಾಶಿ ತಿಥಿ ಮಾಡಿ ಬಿಡ್ತಾರ. ಹುಷಾರ್.

  • ಅವರಿಗೆ ಇದೇ ಪೂರ್ಣ ಪ್ರಮಾಣದ ಕೆಲಸ. ಆದುದರಿಂದ ಪುನರ್ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

  • ಈ ಸೂಲಿಬೆಲೆ ಮುಟ್ಟಾಳನಿಗೆ ಎಚ್ಚರಿಕೆ ನೀಡುವಮೂಲಕ ಅವನ ಸಮಾವೇಶನಡೆಸಲು ಭಾರದಂತೆ ಎಚ್ಚರಿಸಬೇಕು.

  • ಜನರು ಸಭೆಗೆ ಬಾರದೆ ಚೆನ್ನಾಗಿ ಬುದ್ಧಿ ಕಲಿಸಿದ್ದಾರೆ. ಅಲ್ಲ ಬಸವ ಬಂಧುಗಳು ಬುದ್ಧಿವಂತರು… ಶರಣು ಶರಣಾರ್ಥಿಗಳು💐🙏

  • ದೇವದುರ್ಗದ ಜನ ತುಂಬಾ ಮುಗ್ಧರು ಅವರನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಸೂಲಿಬೆಲೆ ಲಿಂಗಾಯತರು ತುಂಬಾ ಎಚ್ಚರಿಕೆ ಹೆಜ್ಜೆಗಳನ್ನು ಇಟ್ಟು ಮುಂದೆ ಸಾಗಬೇಕಾಗಿದೆ

Leave a Reply

Your email address will not be published. Required fields are marked *