ಶಿವಮೊಗ್ಗ:
ಅತೀ ದೊಡ್ಡ ಪರಂಪರೆ ಸೃಷ್ಟಿಸಿದ ವಚನಕಾರರ ಸಂಪತ್ತನ್ನು ಫ.ಗು. ಹಳಕಟ್ಟಿ ನಮಗೆ ಕೊಟ್ಟಿದ್ದಾರೆ. ಆದರೆ, ಈ ಸಂಪತ್ತನ್ನು ನಾವು ಹೇಗೆ ಬಳಸುತ್ತಿದ್ದೇವೆ ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಹಿರಿಯ ಸಾಹಿತಿ ಬಸವರಾಜ ಸಾದರ ಹೇಳಿದ್ದಾರೆ.
ಶಿವಮೊಗ್ಗ ಬಸವ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಫ.ಗು. ಹಳಕಟ್ಟಿ ಜನ್ಮದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ಕನ್ನಡ ನಾಡಿನ ಬೆಳಕು ಹೆಚ್ಚುಸುವಲ್ಲಿ ವಚನಕಾರರ ಕೊಡುಗೆ ಅಪಾರವಾದದ್ದು. ಈ ಶರಣರ ವಚನಗಳ ಸಾರದಂತೆ ಹಳಕಟ್ಟಿ ಅವರು ಬದುಕಿ ಮಾದರಿಯಾಗಿದ್ದಾರೆ. ಶರಣ ಎಂಬ ಪದಕ್ಕೆ ಹಳಕಟ್ಟಿಯವರು ನಿಜವಾದ ಅರ್ಥ ತಂದು ಕೊಟ್ಟಿದ್ದಾರೆ ಎಂದರು.

ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿ ವಚನೋದ್ಧಾರದ ಕಾರ್ಯವನ್ನು ಹಳಕಟ್ಟಿ ಅವರು ಕೈಗೊಳ್ಳದಿದ್ದರೆ ಅದರ ಬಹುಭಾಗ ನಶಿಸಿ ಹೋಗುತ್ತಿತ್ತು. ವ್ಯಕ್ತಿಯ ಬದುಕು ಹೇಗಿರಬೇಕು ಎಂದು ಮಾರ್ಗದರ್ಶನ ಮಾಡುವ ಧರ್ಮ ಸಂವಿಧಾನ ಇಂದಿನ ಅಗತ್ಯ ಎಂಬುದು ಹಳಕಟ್ಟಿ ಅವರ ಆಶಯವಾಗಿತ್ತು ಎಂದರು.
ವಚನ ವಿಶ್ವವಿದ್ಯಾಲಯ ಆಗಬೇಕು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಆದರೆ, ಇವತ್ತಿನ ಸಂದರ್ಭದಕ್ಕೆ ಅತ್ಯಗತ್ಯವಾಗಿ ಕಾಯಕ ವಿಶ್ವವಿದ್ಯಾಲಯ ಆರಂಭವಾಗಬೇಕಿದೆ. ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಧರ್ಮ ಇದ್ದರೆ ಅದು ವಚನ ಧರ್ಮ ಮಾತ್ರ. ಸ್ವತಂತ್ರ ವಿಚಾರಧಾರೆಗೆ ಮುಕ್ತ ಅವಕಾಶ ಕೊಟ್ಟಿದ್ದು ಶರಣ ಚಳವಳಿ ಎಂದು ವಿಶ್ಲೇಷಿಸಿದರು.
ಜಗತ್ತಿನ ಇಂದಿನ ಎಲ್ಲಾ ಜ್ಞಾನ ಶಿಸ್ತುಗಳ ಮೂಲ ಬೀಜ ವಚನಗಳಲ್ಲಿದೆ. ತಮ್ಮ ಧರ್ಮವನ್ನು ಬಿಟ್ಟು ಬಂದು ಇನ್ನೊಂದು ಧರ್ಮ ಸ್ಥಾಪಿಸಿದ ಬಸವಣ್ಣ ಹಾಗೂ ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸಿ ಬಾಬಾ ಸಾಹೇಬರ ಬದುಕು ನಮ್ಮ ಚಿಂತನೆಯ ಮೂಲ ಆಗಬೇಕು ಎಂದರು.
ಇಂದಿನ ವೈಜ್ಞಾನಿಕ ಶೈಕ್ಷಣಿಕ ಪದ್ಧತಿಯಲ್ಲಿ ಸಾಹಿತ್ಯ ಸಂಪಾದನೆಯೇ ಒಂದು ಪ್ರತ್ಯೇಕ ಶಾಖೆಯಾಗಿ ಬೆಳೆದಿದೆ. ಇದಕ್ಕಿಂತ ಮುನ್ನವೇ ಹಳಕಟ್ಟಿಯವರು ಅತ್ಯಂತ ವೈಜ್ಞಾನಿಕವಾಗಿ ವಚನಗಳನ್ನು ಸಂಪಾದಿಸಿದ್ದಾರೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶಿವಮೊಗ್ಗ ಬಸವಕೇಂದ್ರದ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿ, ಸಭ್ಯತೆ, ಸಂಸ್ಕೃತಿ, ಸದಾಚಾರ ಹೇಳಬೇಕಾದ ಶರಣ ತತ್ವದ ಮಾರ್ಗಿಗಳು, ಅನ್ಯರ ಅಸಭ್ಯ ಮಾತಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಶರಣ ತತ್ವದ ಮಹತ್ವವನ್ನು ವಿವರಿಸುವ, ಎಲ್ಲಡೆ ತಲುಪಿಸುವ ಕಾರ್ಯವನ್ನು ಮಾಡಿದರೆ ಸಾಕು ಎಂದು ಹೇಳಿದರು.
ಬಸವಕೇಂದ್ರದ ಅಧ್ಯಕ್ಷರಾದ ಬೆನಕಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ರುದ್ರೇಗೌಡರು ಮುಖ್ಯ ಅತಿಥಿಯಾಗಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆಚ್.ಎನ್. ಮಹಾರುದ್ರ ಪ್ರಾಸ್ತಾವಿಕ ಭಾಷಣ ಮಾಡಿದರು.
ಚನ್ನಬಸಪ್ಪ ನಿರೂಪಿಸಿದರು. ಖಚಾಂಚಿ ಚಂದ್ರಶೇಖರ ತಲಗಿಹಾಳ ಸ್ವಾಗತಿಸಿದರು.
