‘ತಾಲಿಬಾನಿ, ಕನ್ಹೇರಿ ಶ್ರೀ ಮತ್ತು ಲಿಂಗಾಯತ ಧರ್ಮ’ ಕೃತಿ ಬಿಡುಗಡೆ
ಬೀದರ:
ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿಯವರು “ತಾಲಿಬಾನಿ, ಕನ್ಹೇರಿ ಶ್ರೀ ಮತ್ತು ಲಿಂಗಾಯತ ಧರ್ಮ ” ಕೃತಿಯಲ್ಲಿ ವಚನಗಳ ಆಧಾರದ ಮೇಲೆ ಕನ್ಹೇರಿ ಶ್ರೀಗಳಿಗೆ ಉತ್ತರ ನೀಡಿದ್ದಾರೆ. ಈ ಪುಸ್ತಕ ಓದಿ ಕನ್ಹೇರಿ ಶ್ರೀಗಳ ಮನ ಪರಿವರ್ತನೆಯಾಗಲಿ ಎಂದು ಬಸವಕಲ್ಯಾಣದ ಬಸವ ಮಹಾಮನೆಯ ಪೂಜ್ಯ ಡಾ. ಸಿದ್ಧರಾಮ ಬೆಲ್ದಾಳ ಶರಣರು ತಿಳಿಸಿದರು.

ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ ಮತ್ತು ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ವತಿಯಿಂದ ಬಸವ ಮಂಟಪದಲ್ಲಿ ಆಯೋಜಿಸಿದ “ತಾಲಿಬಾನಿ, ಕನ್ಹೇರಿ ಶ್ರೀ ಮತ್ತು ಲಿಂಗಾಯತ ಧರ್ಮ” ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.

ಕನ್ಹೇರಿ ಶ್ರೀಗಳು ಹಲವು ಕಡೆ ಮಾಡಿದ ಭಾಷಣಗಳಿಗೆ ಉತ್ತರದ ರೂಪದಲ್ಲಿ ವಚನಗಳನ್ನು ಆಧಾರವಾಗಿಟ್ಟುಕೊಂಡು ರಚಿಸಲಾಗಿದೆ. ಲಿಂಗಾಯತ ಧರ್ಮ ಸ್ಥಾಪಕರು ಗುರುಬಸವಣ್ಣ, ವಚನ ಸಾಹಿತ್ಯ ಧರ್ಮಗ್ರಂಥ, ಕೂಡಲ ಸಂಗಮ ಧರ್ಮರ್ಕ್ಷೇತ್ರ ಎಂಬುದು ಅರ್ಥಮಾಡಿಕೊಳ್ಳಬೇಕು ಎಂದರು.
ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಮಾತನಾಡಿ, ಕಿರಿದಾದ ಕೃತಿಯಲ್ಲಿ ಹಿರಿದಾದ ಸಂದೇಶವನ್ನು ಮನಮುಟ್ಟುವಂತೆ ಪೂಜ್ಯ ಚನ್ನಬಸವಾನಂದ ಶ್ರೀಗಳು ಇದರಲ್ಲಿ ನೀಡಿದ್ದಾರೆ. ಕನ್ಹೇರಿ ಶ್ರೀಗಳ ಪ್ರತಿಯೊಂದು ಆಪಾದನೆಗೆ ಕೃತಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.

ಬಸವಣ್ಣ ಹಿಂದೂ ಧರ್ಮದ ಕೊಳಕು ತೊಳೆದಿದ್ದಾರೆ, ವೇದ ಉಪನಿಷತ್ ಒಳಗಿರುವ ಅಂಶಗಳನ್ನೇ ಬಸವಾದಿ ಶರಣರು ಹೇಳಿದ್ದಾರೆ ಎಂದು ಕನ್ಹೇರಿ ಶ್ರೀಗಳು ಸುಳ್ಳು ಹೇಳಿದ್ದಕ್ಕೆ ಈ ಕೃತಿಯಲ್ಲಿ ಉತ್ತರ ನೀಡಲಾಗಿದೆ. ಪ್ರತಿಯೊಬ್ಬರೂ ಖರೀದಿಸಿ ಓದಬೇಕೆಂದು ತಿಳಿಸಿದರು.
ಕೃತಿ ಲೇಖಕರಾದ ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಕನ್ಹೇರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರರ ಮಠ ಶರಣ ಪರಂಪರೆಯ ಮಠ. ಈ ಪೀಠದ ಮೇಲೆ ಕುಳಿತ ಕನ್ಹೇರಿ ಶ್ರೀಗಳು ಚಾತುರ್ವರ್ಣ ಪದ್ಧತಿ ಪಾಲಿಸುವ ವೈದಿಕ ಸಂಸ್ಕೃತಿ ಕಡೆಗೆ ವಾಲಿ, ಬಸವಭಕ್ತರಿಗೆ ಅಸಾಂವಿಧಾನಿಕವಾಗಿ ನಿಂದಿಸುತ್ತಿರುವುದು ನಿಜಕ್ಕೂ ಶೋಚನೀಯ. ಕನ್ಹೇರಿ ಶ್ರೀಗಳು ವಚನ ಸಾಹಿತ್ಯ ಅಧ್ಯಯನ ಮಾಡಲಿ ಎಂದರು.
ಪೂಜ್ಯ ಸದ್ಗುರು ಮಾತೆ ಸತ್ಯಾದೇವಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ 99.5% ಅಂಕ ಪಡೆದ ನಾಗೂರ್ ಎಂ ಗ್ರಾಮದ ವಿದ್ಯಾರ್ಥಿ ದಿವ್ಯ ಮಲ್ಲಪ್ಪ ಗೌಡಾ ಅವರನ್ನು ಸತ್ಕಾರ ಮಾಡಲಾಯಿತು.

371(ಜೆ)ಕಲಂ ಸಮಗ್ರ ಅನುಷ್ಠಾನ ಹೋರಾಟ ಸಮಿತಿಯ ಅಧ್ಯಕ್ಷ ಅಶೋಕಕುಮಾರ ನಾಗುರೆ, ಶಿವರಾಜ ಪಾಟೀಲ ಅತಿವಾಳ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ಕಾಶೀನಾಥ ಪಾಟೀಲ, ಗುರುನಾಥ ನಿಡಗುಂದೆ, ಮಲ್ಲಪ್ಪ ಗೌಡ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಪೂಜ್ಯ ಡಾ. ಚೆನ್ನಬಸವಾನಂದ ಸ್ವಾಮಿಗಳಿಗೆ ಅನಂತ ಹಾರ್ದಿಕ ಅಭಿನಂದನೆಗಳು.