‘ತತ್ವಪದ ಸಾಹಿತ್ಯದ ಅಲ್ಲಮ ಎಂದು ಪ್ರಸಿದ್ಧಿಯಾಗಿದ್ದ ಕಡಕೋಳ ಮಡಿವಾಳಪ್ಪ’

ಬಸವ ಮೀಡಿಯಾ
ಬಸವ ಮೀಡಿಯಾ

ಅನುಭಾವ ಶ್ರಾವಣ: ಶರಣ ಚಿಂತನ ಮಾಲಿಕೆ

ಚಿತ್ರದುರ್ಗ:

ತತ್ವಪದ ಸಾಹಿತ್ಯದ ಅಲ್ಲಮರೆಂದೇ ಪ್ರಸಿದ್ಧಿಯಾಗಿದ್ದ ಕಡಕೋಳ ಮಡಿವಾಳಪ್ಪ ಅವರು ಸ್ವತಂತ್ರ ಮತ್ತು ನಿರ್ಭಿಡೆಯ ವ್ಯಕ್ತಿತ್ವ ಹೊಂದಿದವರು.

ಮಡಿವಾಳಪ್ಪ ಅವರು ಹೊರಗೆ ಬಂದರೆ ಮೂಲಭೂತವಾದಿಗಳು ಗಡಗಡ ನಡುಗುತ್ತಾ ಇದ್ದರು. ಇವರನ್ನು ಯಾಕೆ ಕರೆಸಿದ್ದಾರೆ ಅಂತಿದ್ರು. ಕಡಕೋಳ ಮಡಿವಾಳಪ್ಪನವರು ಯಾವುದೇ ಮುಲಾಜು, ಮುಪ್ಪತ್ತು ನೋಡದೆ ಮಾತನಾಡುವ ಸ್ವಭಾವದವರು.

ಕೆಲವರು ಇರುತ್ತಾರೆ ತಾವು ಯಾರ ಮುಂದೆ ಇರುವವೋ ಅವರಂತೆ ಮಾತನಾಡುತ್ತಾರೆ. ಆದರೆ ಮಡಿವಾಳಪ್ಪನವರು ಅಂತಹವರಲ್ಲ ಎಂದು ಸಹಾಯಕ ಪ್ರಾಧ್ಯಾಪಕಿ ಡಾ. ಗಾಯತ್ರಿ ಟಿ. ಅವರು ಅಭಿಪ್ರಾಯಪಟ್ಟರು.

ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣಮಾಸದ ಪ್ರಯುಕ್ತ ಆಯೋಜಿಸಿರುವ ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆಯಲ್ಲಿ ಶ್ರೀಮಠದ ಬಸವೇಶ್ವರ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ ಕಡಕೋಳದ ಮಡಿವಾಳಪ್ಪ ಹಾಗೂ ಕೊಪ್ಪಳದ ಗವಿಸಿದ್ದೇಶ್ವರರ ಜೀವನ ಹಾಗೂ ಸಾಧನೆ ಕುರಿತ ಚಿಂತನಗೋಷ್ಠಿಯಲ್ಲಿ ಉಪನ್ಯಾಸ ನೀಡುತ್ತಿದ್ದರು.

ಎಂಥಾ ಕಳ್ಳನವ್ವ ಈ ಊರ ಗೌಡ ಅಂತ ಆಡ್ತಾ ಇದ್ದವರು ಮಡಿವಾಳಪ್ಪನವರು. ಇಂತಹ ದಿಟ್ಟತನವನ್ನು ಹೊಂದಿದ್ದ ಮಡಿವಾಳಪ್ಪನವರು ನಿಜಕ್ಕೂ ಬಸವಣ್ಣನವರ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು. ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ನುಲಿಯ ಚಂದಯ್ಯ, ಮಡಿವಾಳ ಮಾಚಿದೇವ ಮೊದಲಾದವರನ್ನು ಕರೆದುಕೊಂಡು ಬಂದು ಬಸವಣ್ಣನವರು ಜಂಗಮ ಸ್ಥಳಕ್ಕೆ ಏರಿಸಿದರೆ ಬಸವಣ್ಣನವರ ನಂತರ ಮತ್ತೆ ಕಡಕೋಳದಲ್ಲಿ ಅನುಭವ ಮಂಟಪ ಸ್ಥಾಪನೆ ಆಯಿತು.

ತನ್ನ ಶಿಷ್ಯ ಬಳಗದಲ್ಲಿ ಕೈನೂರು ಕೃಷ್ಣಪ್ಪ, ತಲಗಬಾಳ ರೇವಪ್ಪ, ಜಲಾಲಸಾಬ, ಭಾಗ್ಯಮ್ಮ ಮೊದಲಾದ ಬೇರೆ ಬೇರೆ ವರ್ಗದ ಶರಣರನ್ನು ಒಂದೆಡೆ ಸೇರಿಸಿ ಶಿಷ್ಯಬಳಗವನ್ನು ಕಟ್ಟಿ ಬಸವಣ್ಣನವರ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು.

ತಮ್ಮ ತತ್ವಪದಗಳಲ್ಲಿ ಅಂತರಂಗ ಶುದ್ಧತೆ, ಕಾಯಕ, ಲಿಂಗ ಸಮಾನತೆ, ಆಧ್ಯಾತ್ಮಿಕತೆ, ಜಾತ್ಯತೀತತೆ, ಭಕ್ತಿ, ವರ್ಣಾಶ್ರಮದ ವಿರೋಧದ ನಿಲುವು, ಮುಟ್ಟು ಮಡಿ, ಮೈಲಿಗೆ ಸಂಬಂಧಿಸಿದಂತೆ ಕಡ್ಕೋಳಪ್ಪ ಅವರ ತತ್ವಪದಗಳು ಜಿಜ್ಞಾಸೆಯನ್ನು ಮೂಡಿಸುತ್ತವೆ. ಇಂತಹ ಮೇರುವ್ಯಕ್ತಿತ್ವವನ್ನು ಹೊಂದಿದ್ದ ನಿಜಶರಣ

ಮಡಿವಾಳಪ್ಪನವರ ಹುಟ್ಟು ಹಲವು ಸಂಕಟಗಳಿಂದ ಕೂಡಿತ್ತು.

ಕರ್ಮಠವಾದಿಗಳು ಮಡಿವಾಳಪ್ಪನವರನ್ನು ಹುಟ್ಟಿನ ಕಾರಣಕ್ಕಾಗಿಯೇ ಟೀಕೆ ಮಾಡುತ್ತಿದ್ದರು. ಒಮ್ಮೆ ಮಡಿವಾಳಪ್ಪನವರು ತನ್ನ ಗುರುಗಳಾದ ಅರಳುಗುಂಡಿಗೆ ಶರಣಬಸಪ್ಪ ಅವರನ್ನು ಹೀಗೆ ಕೇಳ್ತಾರೆ, ತಿಪ್ಪೆಯಲ್ಲಿ ಹುಟ್ಟಿದ ಬಿಲ್ವಪತ್ರೆ ಲಿಂಗಾರ್ಚನೆಗೆ ಅರ್ಹವಾಗುತ್ತದೆಯೇ ಎಂದು ಕೇಳಿದಾಗ ಶರಣಬಸಪ್ಪನವರು ಹೀಗೆ ಹೇಳುತ್ತಾರೆ, ತಿಪ್ಪೆ ಅಂದ್ರೆ ಗೊಬ್ಬರ ಗೊಬ್ಬರದಾಗೆ ಬೆಳೆದ ಬಿಲ್ವಪತ್ರೆ, ಲಿಂಗಾರ್ಚನೆಗೆ ಅರ್ಹವಾಗುತ್ತದೆ ಎನ್ನುತ್ತಾರೆ.

ಹೀಗೆ ತನ್ನ ಹುಟ್ಟಿನ ಸಂಕಟಗಳನ್ನು ಮೀರಿ ದಾರ್ಶನಿಕನಾಗಿ, ನಿಜಶರಣನಾಗಿ ಸುಮಾರು ೩೩೦೦ ಪದಗಳನ್ನು ರಚಿಸಿರುವುದಾಗಿ ಹೇಳಿಕೊಂಡಿದ್ದಾಗಿಯೂ ಇದುವರೆಗೆ ಕಡಕೋಳ ಮಡಿವಾಳಪ್ಪ ಅವರ ಅಂಕಿತನಾಮವಾದ ಗುಡ್ಡದ ಮಹಾಂತೇಶ ಅಂಕಿತನಾಮದಲ್ಲಿ ೩೫೦ ತತ್ವಪದಗಳು ಲಭಿಸಿವೆ.

ಕಲ್ಬುರ್ಗಿ ಜಿಲ್ಲೆಯ ಅಫ್ಜಲ್ಪುರ ತಾಲೂಕಿನ ಬಿದನೂರಿನಲ್ಲಿ ಜನಿಸಿದ ಮಡಿವಾಳಪ್ಪನವರು ತನ್ನ ಕಡೆಯ ದಿನಗಳನ್ನು ಕಡಕೋಳದಲ್ಲಿ ಕಳೆಯುತ್ತಾರೆ ಎಂದರು.

ಕೊಪ್ಪಳದ ಗವಿಸಿದ್ದೇಶ್ವರರ ಕುರಿತು ಮಾತನಾಡುತ್ತ, ಶ್ರೀ ಚನ್ನಬಸವ ಮಹಾಸ್ವಾಮಿಗಳು, ತಮಗಾಗಿಯೇ ಸಿದ್ದಪಡಿಸಿದ್ದ ಸಮಾಧಿಯಲ್ಲಿ ಶ್ರೀ ಗವಿಸಿದ್ಧೇಶ್ವರರು ತಾವೇ ಧ್ಯಾನಗೈಯುತ್ತಲೇ ಲಿಂಗೈಕ್ಯರಾದರು. ಹೀಗೆ ತಮ್ಮ ಗುರುಗಳಿಗಾಗಿ ಸಿದ್ಧಪಡಿಸಿದ ಗದ್ದುಗೆಯಲ್ಲಿಯೇ ತಾವೇ ಪ್ರವೇಶಿಸಿ ಸಜೀವ ಗದ್ದುಗೆಗೊಂಡವರು.

ಸಜೀವ ಸಮಾಧಿ ಹೊಂದಿದ ಶ್ರೀ ಗವಿಸಿದ್ಧೇಶ್ವರರನ್ನು ಗುರುಗಳಾದ ಶ್ರೀ ಚನ್ನಬಸವ ಮಹಾಸ್ವಾಮಿಗಳವರು ಮುಂದಿನ ಕಾರ್ಯವನ್ನು ನೆರವೇರಿಸಿದರು. ಅಂದಿನಿಂದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಸದ್ಗುರು ಶ್ರೀ ಗವಿಸಿದ್ಧೇಶ್ವರರು ಲಿಂಗೈಕ್ಯರಾಗಿ ಶತಮಾನಗಳು ಸಂದಿದ್ದರೂ ಇಂದಿಗೂ ಅವರು ಜನಮಾನಸರಲ್ಲಿ ಆರಾಧ್ಯದೈವರಾಗಿ ನೆಲೆನಿಂತಿದ್ದಾರೆ. ಶಿವಭಕ್ತನಿದ್ದ ಠಾವೆ ದೇವಲೋಕ, ಭಕ್ತನಂಗಳವೆ ವಾರಣಾಸಿ, ಶಿವಭಕ್ತನ ಕಾಯವೇ ಕೈಲಾಸ ಎಂದು ಭಾವಿಸಿ ಶಿವಜೀವನಗೈದವರು.

ಮಹಾತಪಸ್ವಿಗಳು ಸಂಸ್ಥಾನ ಶ್ರೀ ಗವಿಮಠದ ೧೧ನೇ ಪೀಠಾಧಿಪತಿಗಳಾದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ಕರ್ತೃಗದ್ದುಗೆಯೇ ಶ್ರೀ ಗವಿಮಠದ ಕೇಂದ್ರಸ್ಥಾನ. ಸದ್ಗುರು ಶ್ರೀ ಗವಿಸಿದ್ಧೇಶ್ವರರ ಮೂಲನಾಮ ಗುಡದಯ್ಯ. ಕೊಪ್ಪಳಕ್ಕೆ ಸಮೀಪವಿರುವ ಮಂಗಳಾಪುರ ಗ್ರಾಮದವರು. ನೋಟ ಒಂದು ದೇಹ ಎರಡಾಗಿರುವ ಗುರುಲಿಂಗಮ್ಮ ಮಹಾದೇವಯ್ಯ ಎಂಬ ಪುಣ್ಯ ದಂಪತಿಗಳ ಉದರದಲ್ಲಿ ಜನಿಸಿದರು. ಬೆಳೆಯುವ ಸಿರಿ ಮೋಳಕೆಯಲ್ಲಿ ಎನ್ನುವಂತೆ ಶಿಶುವಿರುವಾಗಲೆ ತಮ್ಮ ಉಜ್ವಲ ಪ್ರಭೆಯಿಂದ ಎಲ್ಲರನ್ನು ಬೆರಗುಗೂಳಿಸಿ ಭಕ್ತರ ಭಕ್ತಿಯ ಸಮೂಹ ಸೃಷ್ಟಿಸಿಕೊಂಡವರು.

ತಮ್ಮ ಜೀವನದಲ್ಲಿ ಸರ್ವ ಸಂಪತ್ತು ಶ್ರೀ ಗವಿಸಿದ್ಧೇಶ್ವರ ಆಶಿರ್ವಾದದಿಂದ ಪ್ರಾಪ್ತವಾಗಿದೆ ಅವರ ಕರುಣೆಯಿಂದ ಲಭಿಸಿದ ಫಲವೆಂದು ಭಾವಿಸಿದ ಲಕ್ಷಾನುಗಟ್ಟಲೇ ಭಕ್ತರು ಕೃತಾರ್ಥಭಾವದೊಂದಿಗೆ ಶ್ರೀಗಳ ಸನ್ನಿಧಿಗೆ ಆಗಮಿಸಿ ಮಹಾದಾಸೋಹಗೈದು ಧನ್ಯರಾಗುತ್ತಾರೆ.

ಸಾವಿರರು ವರ್ಷಗಳ ಪ್ರಾಂಜಲ ಪರಂಪರೆ ಇತಿಹಾಸವಿರುವ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿತ್ಯ ನಿರಂತರವಾಗಿ ಸಾಗಿ ಬಂದಿದೆ. ಪೂಜ್ಯಶ್ರೀ ರುದ್ರಮುನಿ ಶಿವಯೋಗಿಗಳವರಿಂದ ಆರಂಭಗೊಂಡ ಶ್ರೀಮಠದ ಭವ್ಯ ಪರಂಪರೆ ಈಗಾಗಲೇ ೧೮ ಪೀಠಾಧೀಶ್ವರರನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವಿವರಿಸಿದರು.

ಸಮಾರಂಭದ ಸಮ್ಮುಖ ವಹಿಸಿದ್ದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಮಡಿವಾಳಪ್ಪನವರು ಮಹಾಶರಣರು. ಇವರ ವಚನಗಳು ಬೆಂಕಿ ಇದ್ದ ಹಾಗೆ. ಇವರ ಹುಟ್ಟು ಬೇರೆ ರೀತಿ ಇದ್ದರೂ ಸಮಾಜದ ಬೆಳಕಿಗೆ ಕಾರಣರಾದವರು.

ಹೇಗೆ ಹುಟ್ಟಿದರೂ ಏನೇ ಮಾಡಿದರೂ ಕೊನೆಗೆ ಶಿವನ ಪಾದ ಸೇರುವುದು ನಿಶ್ಚಿತ. ಇವರ ಅರ್ಥದಲ್ಲಿ ಮಡಿ-ಸಾವು, ಮೈಲಿಗೆ ಎಂದರೆ ಹುಟ್ಟು. ಆದರೆ ಶುದ್ಧ ನೀರಿನ ತರ ನಮ್ಮ ಬದುಕು ಇರಬೇಕೆನ್ನುವುದಾಗಿದೆ.

ಹಾಲು ಕರುವಿನ ಎಂಜಲು ಆದರೆ ಶಿವನ ಲಿಂಗಕ್ಕೆ ಹೇಗೆ ಅರ್ಪಿತ ಆಗುತ್ತದೆ ಎನ್ನುತ್ತಾರೆ. ಕೊಪ್ಪಳದ ಗವಿಸಿದ್ಧೇಶ್ವರಮಠ ಲಿಂಗ ಸಮಾನತೆಗಾಗಿ ಮಹಿಳಾ ಕಾಲೇಜುಗಳನ್ನು ತೆರೆದು ಆ ಕಾಲೇಜಿನಲ್ಲಿ ಕೂಲಿ ಕಾರ್ಮಿಕರ ಮಕ್ಕಳಿಗೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಪ್ರವೇಶ ಕೊಟ್ಟು ಸಮಾಜದ ಪ್ರಗತಿಗೆ ಕಾರಣವಾಗಿದೆ ಎಂದು ನುಡಿದರು.

ಗುರುಮಠಕಲ್‌ನ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ದೇವನೂರು ಗುರುಮಲ್ಲೇಶ್ವರ ಲಾಳನಹಳ್ಳಿ ಮಠದ ಜಯದೇವಿತಾಯಿ, ಚಿನ್ಮಯಿತಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿವಿಧ ಸಂಘಟನೆ, ಸಮಾಜಗಳ ಮುಖಂಡರುಗಳಾದ ಡಾ. ದೊಡ್ಡಮಲ್ಲಯ್ಯ, ನಾಗರಾಜ ಸಂಗಂ, ಕಸವನಹಳ್ಳಿ ಶಿವಣ್ಣ, ಬಸವರಾಜಯ್ಯ, ಗಾಯತ್ರಿ ಶಿವರಾಂ, ಬಸವರಾಜ ಕಟ್ಟಿ, ಪ್ರಾಚಾರ್ಯರಾದ ಸವಿತಾ, ಮುಖ್ಯಶಿಕ್ಷಕಿ ಆಶಾರಾಣಿ ಮತ್ತಿತರರು ಭಾಗವಹಿಸಿದ್ದರು.

ಶ್ರೀ ಬೃಹನ್ಮಠ ಪ್ರೌಢಶಾಲೆ ಹಾಗೂ ಎಸ್.ಜೆ.ಎಂ. ನರ್ಸಿಂಗ್ ಸೈನ್ಸಸ್ ಕಾಲೇಜುಗಳ ನಿರ್ವಹಣೆಯಲ್ಲಿ ನಡೆದ ಸಮಾರಂಭದಲ್ಲಿ ಉಮೇಶ ಪತ್ತಾರ ತತ್ವಪದಗಳನ್ನು ಹಾಡಿದರು. ಬಸವರಾಜ ಸ್ವಾಗತಿಸಿದರು.

ನಾಗಾನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಬಸವನಗೌಡ ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *