ರೋಣ:
ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ತೇಲಿ ಕುಟುಂಬದವರಿಂದ ಪ್ರತಿವರ್ಷದಂತೆ ಈ ವರ್ಷವೂ ಬಸವ ಜಯಂತಿ ಆಚರಣೆ ಅರ್ಥಪೂರ್ಣವಾಗಿ ನಡೆಯಿತು.
ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕಾಯಕ ಜೀವಿಗಳಿಗೆ ಗೌರವ ಸತ್ಕಾರ, ನಿವೃತ್ತ ಯೋಧರು ಹಾಗೂ ನಿವೃತ್ತ ನೌಕರರಿಗೆ ಗೌರವ ಸನ್ಮಾನ ಸಮಾರಂಭ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರದ ಬಸವ ಪ್ರಶಸ್ತಿ ಪುರಸ್ಕೃತರಾದ ಡಾ. ರಂಜಾನ್ ದರ್ಗಾ ಅವರು ಅನುಭಾವಿಗಳಾಗಿ ಆಗಮಿಸಿ ತಮ್ಮ ಅನುಭವ ಹಂಚಿಕೊಂಡರು.
ಅವರು ಮಾತನಾಡುತ್ತ, ಪ್ರಚಲಿತ ಕಾಲಘಟ್ಟದಲ್ಲಿ ಯುವಕರು ಧರ್ಮದ ಅಫೀಮನ್ನು ತಲೆಗೆ ಹಚ್ಚಿಕೊಂಡು ಹಾಳಾಗುತ್ತಿರುವುದು ತೀವ್ರ ವಿಷಾದನೀಯ ಎಂದರು.
ಇಲ್ಲಿರುವ ನಾವೆಲ್ಲ ಶ್ರಮಜೀವಿ ವರ್ಗದವರು. ಬಸವಣ್ಣ ಮತ್ತು ಶರಣರು ಶ್ರಮಜೀವಿಗಳನ್ನೆಲ್ಲಾ ಸಂಘಟಿಸಿ ಅನುಭವ ಮಂಟಪ ಕಟ್ಟಿ ಆ ಮೂಲಕ ನಮಗೆಲ್ಲ ಘನತೆ ಗೌರವ ತಂದುಕೊಟ್ಟರು ಎಂದು ನುಡಿದರು.
ಅತಿಥಿಗಳಾಗಿ ಧಾರವಾಡ ಬಸವ ಕೇಂದ್ರದ ಕಾರ್ಯದರ್ಶಿ ಬಸವಂತಪ್ಪ ತೋಟದ ಹಾಗೂ ಬೆಂಗಳೂರು ಬಸವ ಬಳಗದ ಅಧ್ಯಕ್ಷರಾದ ಕೆ.ಚ. ಪಾಟೀಲ ಅವರು ಆಗಮಿಸಿ ತಮ್ಮ ಅನುಭಾವ ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಉಮೇಶ ಬಾಗೂರ ಅವರು, 12 ನೆಯ ಶತಮಾನದಲ್ಲಿ ಶರಣರು ನಡೆಸಿದ ವಯಸ್ಕರ ಶಿಕ್ಷಣದ ಕುರಿತು ಮಾತನಾಡಿದರು.
ಜನರಿಗೆ ಕಂದಾಚಾರ, ಮೌಢ್ಯ ಗಳನ್ನು ಹೇಗೆ ವ್ಯವಸ್ಥಿತವಾಗಿ ಹೇರಿದ್ದಾರೆ ಹಾಗೂ ಅದರಿಂದ ಹೊರಬರಲು ಬಸವಣ್ಣನವರ ವಿಚಾರಗಳು ಹೇಗೆ ಸಹಕಾರಿ ಆಗುತ್ತವೆ ಎಂಬುದನ್ನು ಕುಮಾರ ತೇಲಿ ಹೇಳಿದರು.

ಆರಂಭದಲ್ಲಿ ಬಸವ ಪ್ರಾರ್ಥನೆ ನಡೆಯಿತು. ನೀಲಾ ಸಚಿನ್ ತೇಲಿ ಅವರು ಎಲ್ಲರಿಗೂ ಸ್ವಾಗತ ಕೋರಿದರು. ಕಾರ್ಯಕ್ರಮವನ್ನು ಆಶಾ ಸಾಗರ ತೇಲಿ ಅವರು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕುಮಾರ ತೇಲಿ ಮತ್ತು ಸುಜಾತ ತೇಲಿ ದಂಪತಿ ತಮ್ಮ ಮರಣಾ ನಂತರ ದೇಹದಾನ ಮಾಡುವುದಾಗಿ ಘೋಷಿಸಿದರು.

ತೇಲಿ ಕುಟುಂಬ ಬಾಂಧವರು, ಮಿತ್ರರು, ಹಿರೇಹಾಳ ಗ್ರಾಮಸ್ಥರು, ಪರ ಊರಿನವರು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಎಲ್ಲರಿಗೂ ಮಾದರಿಯಾಗಿ ಈ ಬಸವ ಜಯಂತಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತದೆ. ಕಾರ್ಯಕ್ರಮಕ್ಕೆ ಬಂದವರಿಗೆಲ್ಲ ಪ್ರಸಾದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
