131ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ
ಮೈಸೂರು :
ವಚನ ಸಾಹಿತ್ಯವು ಕೇವಲ ಓದುವುದಕ್ಕಷ್ಟೇ ಸೀಮಿತವಾದ ಸಾಹಿತ್ಯವಲ್ಲ. ಅದು ಮನುಷ್ಯನಿಗೆ ಬದುಕುವ ಕಲೆಯನ್ನು ಕಲಿಸುವ ಜೀವನದರ್ಶನವಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.
ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಕೊತ್ತಲವಾಡಿಯ ಶಿವಲಿಂಗಮ್ಮ ಮತ್ತು ಎಸ್. ರುದ್ರಪ್ಪ ಅವರ ದತ್ತಿ ಅಂಗವಾಗಿ ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದ ಶ್ರೀ ಗಂಗಾಧರೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 131ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಾಳ್ಮೆ ಇದ್ದಾಗ ಜೀವನದಲ್ಲಿ ಯಾವುದೇ ಅನಾಹುತಗಳು ಸಂಭವಿಸುವುದಿಲ್ಲ. ಬದುಕಿನಲ್ಲಿ ಗೆಲುವು ಸಾಧಿಸಲು ದುಡಿಮೆ ಮತ್ತು ತಾಳ್ಮೆ ಅತ್ಯಗತ್ಯ. ಪ್ರತಿಯೊಬ್ಬರ ಅಂತಿಮ ಗುರಿ ಪರಮಾತ್ಮನನ್ನು ಸೇರುವುದಾಗಿದ್ದು, ಆ ದಾರಿಯಲ್ಲಿ ಸಾಗಲು ವಚನ ಸಾಹಿತ್ಯ ಮಾರ್ಗದರ್ಶನ ನೀಡುತ್ತದೆ.
ವಿಶ್ವಗುರು ಬಸವಣ್ಣನವರ ಕಳಬೇಡ, ಕೊಲಬೇಡ ಎಂಬ ವಚನವು ಮನುಷ್ಯ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಎಲ್ಲರೂ ಒಂದೇ ಎಂಬ ಸಮಾನತೆಯ ಭಾವನೆಯನ್ನು ವಚನ ಸಾಹಿತ್ಯ ಬೆಳೆಸುತ್ತದೆ ಎಂದು ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ವಚನ ಸಾಹಿತ್ಯಕ್ಕೂ ಮನುಷ್ಯನ ಜೀವನಕ್ಕೂ ಅವಿನಾಭಾವ ಸಂಬಂಧವಿದೆ. ವಚನಗಳನ್ನು ಅಧ್ಯಯನ ಮಾಡುವುದರಿಂದ ತಲೆಯಲ್ಲಿ ಸದ್ವಿಚಾರ, ಎದೆಯಲ್ಲಿ ಸದ್ಭಾವ, ಕೈಯಲ್ಲಿ ಸತ್ಕಾರ್ಯ ಹಾಗೂ ಬಾಯಲ್ಲಿ ಸವಿಮಾತು ಮೂಡುತ್ತದೆ. ಅಜ್ಞಾನವನ್ನು ದೂರ ಮಾಡಿ ಜ್ಞಾನವನ್ನು ಬೆಳೆಸಲು, ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿಯನ್ನು ಬೆಳಗಿಸಲು ಹಾಗೂ ಅಸತ್ಯವನ್ನು ತೊಲಗಿಸಿ ಸತ್ಯದ ಹಾದಿಯಲ್ಲಿ ನಡೆಯಲು ವಚನ ಸಾಹಿತ್ಯ ಪ್ರೇರಣೆ ನೀಡುತ್ತದೆ. ಮನುಷ್ಯನ ವ್ಯಕ್ತಿತ್ವವನ್ನು ಪರಿವರ್ತಿಸುವ ಶಕ್ತಿ ವಚನಗಳಿಗಿದೆ ಎಂದು ತಿಳಿಸಿದರು.
ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ವಚನ ಸಾಹಿತ್ಯದಲ್ಲಿ ಮನಸ್ಸಿನ ಏಕಾಗ್ರತೆಯನ್ನು ಬೆಳೆಸುವ ಅಪಾರ ಶಕ್ತಿಯಿದೆ. ಬಸವಣ್ಣನವರ ‘ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ, ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ, ಮತ್ತೊಂದ ನೋಡದಂತೆ ಅಂಧಕನ ಮಾಡಯ್ಯ ತಂದೆ ಎಂಬ ವಚನವು ಮನಸ್ಸನ್ನು ಕೆಟ್ಟ ಆಲೋಚನೆಗಳಿಂದ ದೂರವಿಟ್ಟು, ಒಳ್ಳೆಯ ವಿಚಾರಗಳತ್ತ ಕೇಂದ್ರೀಕರಿಸುವ ಸಂದೇಶ ನೀಡುತ್ತದೆ.

ಕೆಟ್ಟದ್ದನ್ನು ಕೇಳದೆ, ನೋಡದೆ, ಮನಸ್ಸನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲು ವಚನಗಳು ಸಹಕಾರಿಯಾಗಿದ್ದು, ಬಸವಣ್ಣನವರ ವಚನ ಸಾಹಿತ್ಯದ ಸಾಲುಗಳು ದೆಹಲಿ ಸಂಸತ್ತಿನ ಗೋಡೆ ಮೇಲೆ ಕೆತ್ತಲ್ಪಟ್ಟಿದೆ ಎಂದರೆ ಅದರ ಮಹತ್ವ ಪ್ರತಿಯೊಬ್ಬರೂ ಅರಿಯಬೇಕು ಎಂದರು.
ದತ್ತಿ ದಾಸೋಹಿಗಳಾದ ರಾಜೇಶ್ವರಿ ಮಲ್ಲಿಕಾರ್ಜುನಪ್ಪ ಮಾತನಾಡಿ, ವಚನ ಸಾಹಿತ್ಯವು ಬದುಕಿನ ಮೌಲ್ಯಗಳನ್ನು ತಿಳಿಸುವ ವಿಶಿಷ್ಟ ಸಾಹಿತ್ಯವಾಗಿದೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ವಚನಗಳನ್ನು ಅಧ್ಯಯನ ಮಾಡುವುದರಿಂದ ಉತ್ತಮ ಸಂಸ್ಕಾರ, ನೈತಿಕ ಮೌಲ್ಯ ಹಾಗೂ ಆದರ್ಶ ಜೀವನವನ್ನು ರೂಢಿಸಿಕೊಳ್ಳಲು ಸಾಧ್ಯ. ಈ ಉದ್ದೇಶದಿಂದಲೇ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ನಂತರ ವಚನ ಗಾಯನ ಮತ್ತು ವಾಚನ ಮಾಡಿದ ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಮಾಣಪತ್ರ ಮತ್ತು ವಚನ ಪುಸ್ತಕ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಉಪಾಧ್ಯಕ್ಷ ಶಿವಪುರ ಉಮಾಪತಿ, ಕಾಗಲವಾಡಿ ಶಿವಸ್ವಾಮಿ ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಎಸ್. ಶಂಕರಪ್ಪ ಸ್ವಾಗತಿಸಿದರು. ಎಂ.ಎನ್. ನಂದೀಶ್ ನಿರೂಪಿಸಿದರು. ಬಿ. ಎಸ್. ಶಾಂತರಾಜು ವಂದಿಸಿದರು. ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
