ದಾವಣಗೆರೆ:
ವಚನಾಮೃತ ಬಳಗ ಹಾಗೂ ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿ ವತಿಯಿಂದ ವಚನ ಸಂರಕ್ಷಣಾ ದಿನವನ್ನು ಈಚೆಗೆ ಆಚರಿಸಲಾಯಿತು.
ಕಾಳಿಕಾದೇವಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಚನಾಮೃತ ಬಳಗದ ಅಧ್ಯಕ್ಷೆ ಸೌಮ್ಯ ಸತೀಶ ಅವರು ಮಾತನಾಡುತ್ತಾ, 12ನೇ ಶತಮಾನದ ಶರಣರು ರಚಿಸಿದಂತಹ ವಚನಗಳನ್ನು ಸಂಶೋಧಿಸಿ, ಸಂರಕ್ಷಿಸಿ, ಪ್ರಕಟಿಸಿ ಅವನ್ನು ನಮ್ಮೆಲ್ಲರಿಗೂ ತಲುಪಿಸಿರುವ ಶರಣರಾದ ಫ.ಗು. ಹಳಕಟ್ಟಿಯವರ ಜನ್ಮದಿನವನ್ನು ವಚನ ಸಂರಕ್ಷಣಾ ದಿನವನ್ನಾಗಿ ಆಚರಿಸಲು ತುಂಬಾ ಸಂತೋಷವೆನಿಸುತ್ತದೆ ಎಂದರು.

ಹಳಕಟ್ಟಿ ಮಹಾನುಭಾವರು ಉಳಿಸಿಕೊಟ್ಟಿರುವ ವಚನಗಳನ್ನು ಇಂದು ನಾವು ಅರಿತು, ಕಲಿತು ಅವನ್ನು ಉಳಿಸಿಕೊಂಡು ಪಾಲಿಸಿಕೊಂಡು ಹೋಗಬೇಕು ಎಂದು ಅವರು ಹೇಳಿದರು.
ವಚನ ಸಂರಕ್ಷಣಾ ದಿನದ ಪ್ರಯುಕ್ತ ವಚನಗಳ ಲಿಖಿತ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಕಾಳಿಕಾ ಭಜನಾ ಮಂಡಳಿಯ ಸದಸ್ಯರು, ಮತ್ತಿತರರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಚನ ಗಾಯನ ಸಹ ನಡೆಯಿತು.

ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿ ಶೈಲಜಾ, ಭಜನಾ ಮಂಡಳಿಯ ಗುರುಗಳಾದ ಸರಸ್ವತಿ ಹಾಗೂ ಸದಸ್ಯೆಯರಾದ ಶಶಿಕಲಾ, ಚಿನ್ನಮ್ಮ, ಶಶಿ, ರಾಜೇಶ್ವರಿ, ರೂಪ, ಮಂಜುಳಾ, ಕವಿತಾ, ಲತಾ, ಶಾಂತ, ಮೀನಾ, ರೇಣುಕಾ, ರೇಖಾ, ಹೇಮ ಮತ್ತಿತರರು ಭಾಗವಹಿಸಿದ್ದರು.
