ಲಂಡನ್
ಇತ್ತೀಚಿನ ದಿನಗಳಾಗ ಲಿಂಗಾಯತ ಧರ್ಮದ ಒಳಗಡೆ ಉಪಪಂಗಡಗಳ ಜಗಳ ಹಚ್ಚಿ, ರಾಜಕೀಯ ಬೇಳೆ ಬೇಯಿಸಿಕೊಳ್ಳೋ ಸಂಘಿಗಳ ಗಣಿತ ಬಹಳ ಜೋರಾಗಿ ನಡೀದೈತಿ.
ಬಸರಕೋಡಿನ ಬಾಪುಗೌಡ ಮೇಟಿಯಂತವರನ್ನು ಮುಂದಿಟ್ಟುಕೊಂಡು, “ಹಿಂದೂ ಬಸವಾದಿ ಶರಣರ ಸಮಾಜ” ಅಂತ ನಾಟಕ ಮಾಡ ಹೊರಟಿದ್ದಾರೆ. ಅದರಲ್ಲೂ ಲಿಂಗಾಯತ ರೆಡ್ಡಿಗಳನ್ನು ಕೇವಲ “ಹಿಂದೂ ರೆಡ್ಡಿ” ಮಾಡಲು ಹೊರಟಿರೋ ಇದರ ಹಿಂದಿನ ಅಸಲಿ ಕುತಂತ್ರ ನಾವಿಲ್ಲಿ ಅರಿತುಕೊಳ್ಳಬೇಕಾಗಿದೆ.
ಲಿಂಗಾಯತ ರೆಡ್ಡಿ ಸಮುದಾಯಕ್ಕೆ ತನ್ನದೇ ಆದ ಗಟ್ಟಿಯಾದ ಇತಿಹಾಸ ಐತಿ. ಒಂದೆಡೆ ಹೇಮರೆಡ್ಡಿ ಮಲ್ಲಮ್ಮನ ಭಕ್ತಿ ಪರಂಪರೆ ಇದ್ದರೆ, ಇನ್ನೊಂದೆಡೆ ವೈಚಾರಿಕ ಕ್ರಾಂತಿ ಮಾಡಿದ ಯೋಗಿ ವೇಮನನ ಇತಿಹಾಸವಿದೆ. ವೇಮನ ಸಾಮಾನ್ಯ ತೆಲುಗು ಕವಿಯಲ್ಲ, ಆತ ಬಸವ ತತ್ವದ ಆಶಯಗಳನ್ನು ಒಪ್ಪಿಕೊಂಡಿದ್ದ ಒಬ್ಬ ಶರಣ!
ಅಂದಿನ ಬ್ರಿಟಿಷ್ ಅಧಿಕಾರಿ ಸಿ. ಪಿ. ಬ್ರೌನ್ ಅವರು ವೇಮನ ವಚನಗಳನ್ನು ಇಂಗ್ಲಿಷ್ಗೆ ಅನುವಾದ ಮಾಡಿದ ಮೇಲೆಯೇ ತೆಲುಗು ಸಾಹಿತ್ಯಕ್ಕೊಂದು ಜಾಗತಿಕ ಅಸ್ತಿತ್ವ ಸಿಕ್ಕಿದ್ದು. ವೇಮನ ತನ್ನ ವಚನಗಳಾಗ ಜಾತಿ ವಿಭಜನೆ ಮತ್ತು ಧರ್ಮದೊಳಗಿನ ಉಪಪಂಗಡಗಳ ಕುರಿತು ಎಷ್ಟು ಕಟುವಾಗಿ ಹೇಳಿದ್ದಾನೆ ನೋಡಿ:
“ಮರ್ಮಮೆರುಗ ಲೇಕ ಮತಮುಲ ಗಲ್ಪಿಸಿ
ಉರ್ವಿ ದುಃಖುಲಗುದು ರೊಕರಿಕೊಕರು…”
(ಭಾವಾರ್ಥ: ಧರ್ಮದ ಅಸಲಿ ಮರ್ಮ ತಿಳಿಯದೇ ಒಳಗಡೆ ಉಪಪಂಗಡಗಳನ್ನು ಸೃಷ್ಟಿ ಮಾಡಿ, ಒಬ್ಬರಿಗೊಬ್ಬರು ಜಗಳ ಆಡುತ್ತಾ ಇಡೀ ಸಮಾಜವೇ ದುಃಖ ಪಡುವಂತೆ ಮಾಡುತ್ತಿದ್ದಾರೆ.)
“ಕುಲಮು ಹೆಚ್ಚು ತಗ್ಗು ಗೊಡವಲು ಪನಿಲೇದು…”
(ಭಾವಾರ್ಥ: ಜಾತಿ-ಉಪಪಂಗಡಗಳಲ್ಲಿ ಹೆಚ್ಚು-ಕಡಿಮೆ ಎನ್ನುವ ಜಗಳವೇ ಬೇಡ, ನಾವೆಲ್ಲರೂ ಒಂದೇ ಮೂಲದಿಂದ ಬಂದ ಸಮಾನರು.)
ಇಂತಹ ವೈಚಾರಿಕ ಸತ್ಯಗಳು ಹೊರಬರಬಾರದು, ಲಿಂಗಾಯತರಲ್ಲಿ ಸಬ್-ಗ್ರೂಪಿಂಗ್ ಮಾಡಿ ಒಗ್ಗಟ್ಟು ಮುರಿಯಬೇಕು ಅನ್ನೋದೇ ಇವರ ಕುತಂತ್ರ. ನಮ್ಮ ಕಾಯಕ ಸಮಾಜಗಳು ಮತ್ತು ಲಿಂಗಾಯತ ರೆಡ್ಡಿಗಳು ಈ ರಾಜಕೀಯ ದಾಳಕ್ಕೆ ಬಲಿಯಾಗದೆ, ಶರಣರ ಮತ್ತು ವೇಮನ ನಿಜವಾದ ವೈಚಾರಿಕತೆಯನ್ನು ಅರಿತುಕೊಳ್ಳಬೇಕಾಗಿದೆ.
