ಹಾಸನ:
ಜಿಲ್ಲೆಯಲ್ಲಿ ವೀರಶೈವ ಲಿಂಗಾಯತರು ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಮತದಾರರಿದ್ದು, ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಸಮಾಜದ ಸಂಘಟನೆ ಕಟ್ಟುವುದರ ಜೊತೆಗೆ ನಾವು ಪ್ರಬಲರಾಗಬೇಕಾಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾ ಮುಖಂಡ, ಉದ್ಯಮಿ ರಾಜಶೇಖರ ಹೇಳಿದರು.
ತಣ್ಣೀರುಹಳ್ಳ ಮಠದಲ್ಲಿ ನಡೆದ ಹಾಸನ ನಗರ ಪ್ರಾಧಿಕಾರ ಮಟ್ಟದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜದಲ್ಲಿ ಒಗ್ಗಟ್ಟು ಅವಶ್ಯಕತೆ ಇದೆ. ನಾವೆಲ್ಲರೂ ಒಗ್ಗಟ್ಟಾಗಿ ಇದ್ದರೆ ರಾಜಕೀಯದಲ್ಲಿ ಸ್ಥಾನಮಾನ ಪಡೆಯಬಹುದು ಹಾಗೂ ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಬಹುದು. ನಮ್ಮ ವೈಯುಕ್ತಿಕ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಸಮಾಜದ ಸಂಘಟನೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳೋಣ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಾಸನ ಜಿಲ್ಲಾ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ, ನಾವೆಲ್ಲರೂ ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ಸದಸ್ಯತ್ವವನ್ನು ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಹಾಸಭಾ ರಾಷ್ಟ್ರೀಯ ಘಟಕದ ಉಪಾಧ್ಯಕ್ಷರಾದ ರಾಜೇಶ್ವರಿ ನಾಗರಾಜ ಮಾತನಾಡಿ, ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟಗಳಲ್ಲಿ ಸದಸ್ಯರುಗಳನ್ನು ನೇಮಕ ಮಾಡುವ ಮೂಲಕ ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಬದ್ಧರಾಗಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಹಾಸನ ತಾಲ್ಲೂಕು ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ ಮಾತನಾಡಿ, ಹಾಸನ ಜಿಲ್ಲಾ ಕೇಂದ್ರದಲ್ಲಿ ವೀರಶೈವ ಸಮಾಜದ ಹಾಸ್ಟೆಲ್ ಇಲ್ಲದೆ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದೆ. ಒಂದು ಹಾಸ್ಟೆಲ್ ನಿರ್ಮಿಸುವ ನಿಟ್ಟಿನಲ್ಲಿ ನಾವೆಲ್ಲ ಸಂಘಟಿತಾಗಿ ಕೆಲಸವನ್ನು ಮಾಡಬೇಕಾಗಿದೆ, ಮಹಾಸಭಾಕ್ಕೆ ಒಂದು ಸ್ವಂತ ಕಟ್ಟಡವನ್ನು ನಿರ್ಮಿಸುವ ನಿಟ್ಟಿನಲ್ಲಿ ನಾವೆಲ್ಲ ಬದ್ದರಾಗಬೇಕಾಗಿದೆ ಎಂದರು. ನೂತನ ಪದಾಧಿಕಾರಿಗಳು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ತಿಳಿಸಿದರು.
ಹಾಸನ ಮಹಾನಗರ ಪ್ರಾಧಿಕಾರ ಘಟಕದ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾದ ಹೆಚ್. ಪಿ. ರೋಹಿತ ಅವರು ಮಾತನಾಡಿ, ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ಹೆಚ್ಚಿನ ಮಟ್ಟದಲ್ಲಿ ಸಂಘಟನೆಯನ್ನು ಮಾಡಲು ನಾವೆಲ್ಲ ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಾಸನ ಜಿಲ್ಲಾ ಮಹಾಸಭಾ ಅಧ್ಯಕ್ಷರಾದ ನವೀಲೆ ಪರಮೇಶ ಮಾತನಾಡಿ, ವೀರಶೈವ ಲಿಂಗಾಯತ ಸಮಾಜವನ್ನು ಸಂಘಟಿಸುವ ದೃಷ್ಟಿಯಲ್ಲಿ ನಾವೆಲ್ಲ ಬದ್ಧರಾಗಿ ಕೆಲಸ ಮಾಡಬೇಕಾಗಿದೆ. ಹಾಸನ ಜಿಲ್ಲೆಯಲ್ಲಿ ಎಂಟು ತಾಲೂಕುಗಳನ್ನು ಸಮಿತಿ ರಚನೆ ಮಾಡಲಾಗಿದ್ದು, ಇನ್ನು ಕೆಲವು ತಾಲೂಕುಗಳಲ್ಲಿ ಯುವ ಘಟಕ ಮತ್ತು ಮಹಿಳಾ ಘಟಕಗಳನ್ನು ಸಹ ರಚನೆ ಮಾಡಬೇಕಾಗಿದೆ, ನಾವೆಲ್ಲ ಸಮಾಜದ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಮಹಾಸಭಾದ ರಾಜ್ಯ ಘಟಕದ ನಿರ್ದೇಶಕರಾದ ಎಚ್.ಪಿ. ಶಿವಕುಮಾರ, ಜಿಲ್ಲಾ ಉಪಾಧ್ಯಕ್ಷರುಗಳಾದ ಬಿ. ಜಿ. ಯತೀಶ, ಪುನೀತ್ ಪಟೇಲ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಮತಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಜಿ. ಎಸ್. ಅವಿನಾಶ, ಹಾಸನ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಮಮತಾ ಪಾಟೀಲ ಇದ್ದರು.
ಜಿಲ್ಲಾ ಮಾಜಿ ಯುವ ಘಟಕದ ಅಧ್ಯಕ್ಷ ಸಂಗಮ್, ರಾಜ್ಯ ಮಹಿಳಾ ಘಟಕದ ನಿರ್ದೇಶಕಿ ಜ್ಯೋತಿ ಗಣೇಶ, ಜಿಲ್ಲಾ ಖಜಾಂಚಿ ಎಸ್ ಜಯಶಂಕರ, ಜಿಲ್ಲಾ ಕಾರ್ಯದರ್ಶಿಗಳಾದ ಎಂ.ಎಂ. ಸುರೇಶ, ಶಾಂತರಾಜು, ಜಿಲ್ಲಾ ನಿರ್ದೇಶಕರಾದ ಶೋಬನ್ ಬಾಬು, ಶರತ್ ಭೂಷಣ, ಶಿವಾನಂದ, ವಿಜಯಕುಮಾರ, ನಂದೀಶ, ಚನ್ನರಾಯಪಟ್ಟಣ ತಾಲ್ಲೂಕು ಅಧ್ಯಕ್ಷ ರಾಜಣ್ಣ, ಹೋಳೆನರಸಿಪುರ ತಾಲ್ಲೂಕು ಅಧ್ಯಕ್ಷ ಕೆ. ರಾಜಶೇಖರ, ಮಹಾಪಾಲಿಕೆ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಪಿ ಮಂಜುನಾಥ್ಯ, ಉಪಾಧ್ಯಕ್ಷರಾದ ಎಚ್.ಪಿ. ಮಧು ಒಳಗೊಂಡಂತೆ ವೀರಶೈವ ಲಿಂಗಾಯತ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.
ನಿರೂಪಣೆಯನ್ನು ಹಿರಿಯ ಪತ್ರಕರ್ತ ಹಾಗೂ ಮಹಾಸಭಾ ಮಹಾನಗರ ಪಾಲಿಕೆ ಘಟಕದ ಉಪಾಧ್ಯಕ್ಷರಾದ ಬಿ. ಆರ್. ಉದಯಕುಮಾರ ನೆರವೇರಿಸಿದರು. ಸಹಕಾರ್ಯದರ್ಶಿ ವಿ. ವಿಕಾಸ್ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹಾಸನ ನಗರದ ಮಹಾನಗರ ಪಾಲಿಕೆ ಘಟಕದ ನೂತನ ಪದಾಧಿಕಾರಿಗಳಿಗೆ ಆಯ್ಕೆ ನೇಮಕ ಪತ್ರವನ್ನು ನೀಡುವ ಮೂಲಕ ಗೌರವಿಸಲಾಯಿತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
