ಗದಗ :
ವಿಶ್ವಗುರು ಬಸವಣ್ಣ ಕೇವಲ ಕರ್ನಾಟಕ, ಭಾರತ, ಏಶಿಯಾದ ಬೆಳಕಲ್ಲ. ಅವರು ಜಗದ ಬೆಳಕು, ಜಗದ ಉತ್ಸಾಹ, ಜಗದ ಮಹಾಶಕ್ತಿ, ಜಗದ ಪ್ರವಾದಿ, ಜಗದ ಅದ್ವಿತೀಯ ಶರಣ, ಜಗದ ಅದ್ಭುತ ಭಕ್ತ, ಜಗದ ಆದರ್ಶ ರಾಜಕೀಯ ನಾಯಕ, ಜಗದ ದಿವ್ಯಜ್ಞಾನಿ.
ಬಸವಣ್ಣ ಕನ್ನಡಿಗರ ಸಾಂಸ್ಕೃತಿಕ ನಾಯಕ ಅವರ ಜನ್ಮವೇ ಈ ಭೂಮಿಗೆ ಆಶೀರ್ವಾದ ಎಂದು ಪ್ರೊ. ಎಸ್. ಯು. ಸಜ್ಜನಶೆಟ್ಟರ ಅಭಿಪ್ರಾಯಪಟ್ಟರು.
ಅವರು ಶಿವಾನಂದನಗರದ ಬಸವದಳದ ಬಸವ ಸಮುದಾಯ ಭವನದಲ್ಲಿ ಜರುಗಿದ ೧೭೧೯ ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ “ಕನ್ನಡಿಗರ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ” ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸವಣ್ಣನವರನ್ನು ಸುಮ್ಮನೆ ಸಾಂಸ್ಕೃತಿಕ ನಾಯಕರೆಂದು ಹೇಳಿಲ್ಲ. ಅವರೊಬ್ಬ ಶರಣ ಸಂಸ್ಕೃತಿ, ಅಭೇದ ಸಂಸ್ಕೃತಿ, ಅರಿವು-ಆಚಾರ ಅನುಭಾವ ಸಂಸ್ಕೃತಿ, ಕಾಯಕ-ದಾಸೋಹ ಶಿವಯೋಗ ಸಂಸ್ಕೃತಿಯನ್ನು ಸಮಾಜದಲ್ಲಿ ಬೆಳೆಸಿದರು.
‘ಅರಿದೊಡೆ ಶರಣ ಮರೆದೊಡೆ ಮಾನವ’ ಎಂದು ಸಾರಿ ಅಂತರಂಗ-ಬಹಿರಂಗ ಶುದ್ಧಿಯ ಆತ್ಮಸಾಕ್ಷಾತ್ಕಾರವನ್ನು ಹುಟ್ಟುಹಾಕಿದರು.
ಇಷ್ಟಲಿಂಗ ಧಾರಣೆ ಮಾಡಿ, ಇಷ್ಟಲಿಂಗ ಜನಕರಾದರು. ‘ಲಿಂಗ-ಮುಟ್ಟಿ ಲಿಂಗವೇ ತಾನಾಗಬೇಕು’. ‘ಕೂಡಲಸಂಗಮನ ಶರಣನಾರಿಗೂ ಅಂಜುವನಲ್ಲ’, ‘ನಾಳೆ ಬಪ್ಪುದು ನಮಗಿಂದೇ ಬರಲಿ’, ‘ಮರಣವೇ ಮಹಾನವಮಿ’ ಎಂದವರು.

ನಡೆ-ನುಡಿ ಸಾಮರಸ್ಯದಿಂದ ಬಾಳಿ ಬದುಕಬೇಕು. ಇವ ನಮ್ಮವ ಇವ ನಮ್ಮವ ಎಂದು ಎಲ್ಲರನ್ನೂ ಅಪ್ಪಿ ಬದುಕಿದ ಬಸವಣ್ಣ ಬಾಗುವ ವಿನಯ, ಅಪ್ಪಿಕೊಳ್ಳುವ ಅಂತಃಕರಣ, ತೋರುವ ಗೌರವ, ಹಂಚಿಕೊಳ್ಳುವ ಆತ್ಮೀಯತೆ, ವಿನಯ ಮಾತು ಇವುಗಳು ಶರಣರಿಗೆ ಲೇಸು ಎಂದು ಹೇಳಿದರು.
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಈ ವಚನದಲ್ಲಿ ‘ಬೇಡ’ ಎಂದು ಹೇಳುವ ಛಲ ಬೇಕು. ಶರಣಂಗೆ ಪರಧನವನೊಲ್ಲೆನೆಂಬ ವಚನದಲ್ಲಿರ ‘ಬೇಕು’ ಎನ್ನುವುದು ಶರಣ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.
ವೇದಿಕೆಯ ಮೇಲೆ ಅತಿಥಿಗಳಾಗಿ ಆಗಮಿಸಿದ್ದ ಪಿ.ಪಿ.ಜಿ. ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರಾಜಶೇಖರ ದಾನರೆಡ್ಡಿ ಅವರು, ಇತ್ತೀಚಿಗೆ ಬಸವಕಲ್ಯಾಣದಲ್ಲಿ ಎರಡು ದಿನ ನಡೆದ ಡಾ. ಫ. ಗು. ಹಳಕಟ್ಟಿ ಅವರ ಸಂಪಾದಕತ್ವದ ‘ಶಿವಾನುಭವ ಪತ್ರಿಕೆ ಶತಮಾನೋತ್ಸವ’ದ ವಿಚಾರ ಸಂಕಿರಣದಲ್ಲಿನ ಗೋಷ್ಠಿಗಳ ಹಾಗೂ ಬಸವಕಲ್ಯಾಣದ ಪರಿಸರವನ್ನು ಮನ ಮುಟ್ಟುವ ಹಾಗೆ ತಿಳಿಸಿದರು.
ವಿಚಾರ ಸಂಕಿರಣದಲ್ಲಿ ಬೇರೆ-ಬೇರೆ ವಿಷಯಗಳ ಕುರಿತು ನಾಡಿನಾದ್ಯಂತದಿಂದ ಆಗಮಿಸಿದ ವಿದ್ವಾಂಸರು, ಶಿವಾನುಭವ ಪತ್ರಿಕೆ, ಹಿತಚಿಂತಕ ಮುದ್ರಣಾಲಯ, ಶಿವಶರಣರ ಚರಿತ್ರೆಗಳು, ವಚನ ಸಾಹಿತ್ಯ, ಲಿಂಗಾಯತ ಪತ್ರಿಕೆಗಳು, ಫ. ಗು. ಹಳಕಟ್ಟಿಯವರ ಜೀವನ ಮತ್ತು ಸಾಹಿತ್ಯ-ಈ ಎಲ್ಲಾ ವಿಷಯಗಳನ್ನು ಸಹೃದಯರ ಮನಮುಟ್ಟುವಂತೆ ಮಾಡಿದ ಬಾಲ್ಕಿ ಮಠದ ಪೂಜ್ಯ ನಾಡೋಜ ಡಾ. ಬಸವಲಿಂಗ ಪಟ್ಟದೇವರು, ಪೂಜ್ಯ ಗುರುಬಸವ ಪಟ್ಟದ್ದೇವರು, ಡಾ. ಪುರುಷೋತ್ತಮ ಬಿಳಿಮಲೆ, ಡಾ. ಕೆ. ರವೀಂದ್ರನಾಥ, ಪ್ರಕಾಶ ಗಿರಿಮಲ್ಲನವರ ಎಲ್ಲರನ್ನು ಸ್ಮರಿಸಿಕೊಂಡರು.
ಬಸವಕಲ್ಯಾಣ ಪರಿಸರದಲ್ಲಿರುವ ಬಂದವರ ಓಣಿ, ಅರಿವಿನ ಮನೆ, ಮಡಿವಾಳ ಮಾಚಯ್ಯನವರ ಹೊಂಡ, ಪರುಷ ಕಟ್ಟೆ, ಚೆನ್ನಬಸವಣ್ಣ, ಅಕ್ಕನಾಗಮ್ಮ, ನೀಲಮ್ಮ, ಗಂಗಾಂಬಿಕೆ, ಹಡಪದ ಅಪ್ಪಣ್ಣ, ಅಣ್ಣ ಬಸವಣ್ಣ, ಕಿನ್ನರಿ ಬೊಮ್ಮಯ್ಯ, ಹಲವಾರು ವಚನಕಾರರು ತಪಗೈದ ನೆಲ ತ್ರಿಪುರಾಂತ ಕೆರೆ, ಬಿಜ್ಜಳನ ಅರಮನೆ, ಅತಿ ಎತ್ತರದಲ್ಲಿ ೧೦೮ ಅಡಿ ಕುಳಿತ ಬಸವಣ್ಣ, ಗುಹೆಗಳು, ಬಸವಣ್ಣನ ನೂತನ ಗುಡಿ ಇವೆಲ್ಲವುಗಳನ್ನು ಭೇಟಿ ಮಾಡಿ, ಅನುಭವಿಸಿದ ಅನುಭವಗಳನ್ನು ಕೇಳಿ ಕಾರ್ಯಕ್ರಮದಲ್ಲಿದ್ದ ಶರಣರನ್ನು ಬಸವಕಲ್ಯಾಣಕ್ಕೆ ಕರೆದೊಯ್ದು, ೧೨ ನೇ ಶತಮಾನದ ಶರಣರ ಕಣ್ಮುಂದೆ ಸುಳಿದ ಹಾಗೆ ವರ್ಣಿಸಿ ಎಲ್ಲರನ್ನು ಚಕಿತರನ್ನಾಗಿಸಿದರು.
ಹಿರಿಯ ಶರಣರಾದ ಎಸ್. ಎ. ಮುಗದ ಅವರು ಶರಣರ ವಿಚಾರಗಳನ್ನು ಬಸವದಳದ ಮುಖಾಂತರ ಎತ್ತರ ಎತ್ತರಕ್ಕೆ ಒಯ್ಯಬೇಕು, ಯಾವುದೇ ತಾರತಮ್ಯವಿಲ್ಲದೆ, ಎಲ್ಲರೂ ಒಂದೇ ಎಂಬ ಭಾವನೆಯಿಂದ ಪ್ರತಿಯೊಬ್ಬರು ಶರಣ ಧರ್ಮಕ್ಕೆ ಶ್ರಮಿಸಬೇಕು.

ಪ್ರತಿಯೊಬ್ಬರು ವಚನ ಚಿಂತನೆಯನ್ನು ಮಾಡಬೇಕು, ಯಾವುದೇ ಸಮಾರಂಭದಲ್ಲಿ ಧೈರ್ಯವಾಗಿ ವಚನಗಳನ್ನು ಹಾಡುವ ಮತ್ತು ಉಪನ್ಯಾಸ ಮಾಡಲು ಮುಂದೆ ಬರಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಸವದಳದ ನೂತನ ಅಧ್ಯಕ್ಷರಾದ ಪ್ರಕಾಶ ಅಸುಂಡಿ ಅವರು, ಪ್ರತಿವಾರವೂ ಶರಣ ದಂಪತಿಗಳ ಕುರಿತು ವಚನ ಚಿಂತನೆ, ಶರಣರ ಉಪನ್ಯಾಸವನ್ನು ಮಾಡುವುದು ‘ಕಾಯಕವೇ ಕೈಲಾಸ’ ಶರಣರ ವಾಣಿಯಂತೆ ಎಲ್ಲರೂ ಕೂಡಿಗೊಂಡು ತಮಗೆ ವಹಿಸಿದ ಕಾರ್ಯಗಳನ್ನು ಮಾಡುವುದು ಎನ್ನುತ್ತಾ ಛತ್ರಪತಿ ಶಿವಾಜಿ ಮಹಾರಾಜರನ್ನು ಮಹಾರಾಷ್ಟ್ರದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಹಾಗೆ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ಸರಕಾರ ಘೋಷಿಸಿದೆ.
ಕಾಯಕ, ದಾಸೋಹ, ಅನುಭವ ಮಂಟಪ, ವಚನ ಸಾಹಿತ್ಯ, ಗುರು ಲಿಂಗ, ಜಂಗಮ ಎಂಬ ಮಾರ್ಗವನ್ನು ಬಸವಾದಿ ಶರಣರು ತೋರಿಸಿದ್ದಾರೆ. ಆ ಮಾರ್ಗದಲ್ಲಿ ನಾವು-ನೀವೆಲ್ಲ ಸಾಗೋಣ, ಶರಣ ಸಂಸ್ಕೃತಿಯನ್ನು ಬೆಳೆಸೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗಿರಿಜಕ್ಕ ಧರ್ಮರೆಡ್ಡಿಯವರು ಮಾತನಾಡಿದರು. ಎಸ್. ಪಿ. ಹೊಂಬಳ ವಚನ ಗಾಯನ ಮಾಡಿದರು. ರೇಣುಕಾ ಕರೇಗೌಡ್ರ ಇವರು ಬಸವ ಪ್ರಾರ್ಥನೆ ಮಾಡಿದರು, ಸ್ವಾಗತವನ್ನು ಡಾ. ಗಿರಿಜಾ ಹಸಬಿಯವರು ನೆರವೇರಿಸಿದರೆ, ನಿರೂಪಣೆಯನ್ನು ಸುಜಾತಾ ವಾರದ ಮಾಡಿದರು. ಶರಣು ಸಮರ್ಪಣೆ ಶರಣಬಸಪ್ಪ ಸಿಂಧನೂರ ನೆರವೇರಿಸಿದರು.
ಕಾರ್ಯಕ್ರಮಕ್ಕೆ ಹೊಸದಾಗಿ ಬಂದಂತ ಶರಣ-ಶರಣೆಯರನ್ನು ವಚನ ಪುಸ್ತಕಗಳು ಕೊಡುವ ಮೂಲಕ ಗೌರವಿಸಲಾಯಿತು. ಪ್ರಸಾದ ಸೇವೆಯನ್ನು ನೀಲಲೋಚನಾ ಶಿದ್ಧಲಿಂಗಪ್ಪ ಹಂಚಿನಾಳ ಅವರು ವಹಿಸಿಕೊಂಡಿದ್ದರು. ಬಸವದಳದ ಸದಸ್ಯರು ಹಾಗೂ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
