ಕಲಬುರ್ಗಿ ಮತ್ತು ಹಂಚಿನಾಳ ಗುರುಗಳ ಸ್ಮರಣೆ
ಗದಗ:
ಕನ್ನಡ ಹಾಗೂ ಬಸವಣ್ಣ ನನ್ನ ಪ್ರಾಣವೆಂದು ನಂಬಿದ ಕಲಬುರ್ಗಿಯವರು, ಬಸವಾದಿ ಶಿವಶರಣರ ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸಿದ ಶ್ರೇಯಸ್ಸು, ಸತ್ಯಸಂಶೋಧಕ ಹಾಗೂ ಮಹಾಮಾರ್ಗದ ರೂವಾರಿ ಹುತಾತ್ಮ ಡಾ. ಎಂ. ಎಂ. ಕಲಬುರ್ಗಿ ಅವರಿಗೆ ಸಲ್ಲುತ್ತದೆ ಎಂದು ಶಿವನಗೌಡ ಗೌಡರ ತಿಳಿಸಿದರು.
ಬಸವ ಸಮುದಾಯ ಭವನದಲ್ಲಿ ಈಚೆಗೆ ಬಸವದಳದ ೧೭೧೩ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಹುತಾತ್ಮ ಡಾ. ಎಂ.ಎಂ. ಕಲಬುರ್ಗಿ ಹಾಗೂ ಶರಣ ಎಂ.ಎ. ಹಂಚಿನಾಳ ಗುರುಗಳ ಸ್ಮರಣೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಡಾ. ಎಂ. ಎಂ. ಕಲಬುರ್ಗಿ ಅವರು ಕನ್ನಡ ಅಧ್ಯಯನ ಸಂಸ್ಥೆಯನ್ನು ಹಾಗೂ ಕನ್ನಡ ವಿಶ್ವವಿದ್ಯಾಲಯವನ್ನು ಸಾಹಿತ್ಯಿಕವಾಗಿ ಬಹು ಎತ್ತರಕ್ಕೆ ಬೆಳೆಸಿದರು. ನಾಡಿನ ಮಠ-ಮಾನ್ಯಗಳಿಂದ, ಸಂಘ-ಸಂಸ್ಥೆಗಳಿಗೆ ಕನ್ನಡ-ವಚನ ಸಾಹಿತ್ಯದ ಕೆಲಸ ಮಾಡಿಸಿದರು.
ಗದುಗಿನ ಶ್ರೀ ತೋಂಟದಾರ್ಯ ಮಠದಿಂದ ೭೦೦ ಗ್ರಂಥಗಳನ್ನು ಪ್ರಕಟಿಸಿದರೆ, ಸುತ್ತೂರು ಮಠದಿಂದ ಸ್ವರವಚನ ಸಾಹಿತ್ಯವನ್ನು, ಬೆಳಗಾವಿ ಮಠದಿಂದ ಅಧ್ಯಯನ ಅಕಾಡೆಮಿಯನ್ನು, ಕೆ.ಎಲ್.ಇ. ಸಂಸ್ಥೆಯಿಂದ ಸಪ್ತರ್ಷಿಗಳ ಸಂಪುಟ ಹಾಗೂ ಅರಟಾಳ ರುದ್ರಗೌಡರ ಬೃಹತ್ ಗ್ರಂಥ, ಬಿ.ಎಲ್.ಡಿ.ಇ. ಸಂಸ್ಥೆಯಿಂದ ಫ. ಗು. ಹಳಕಟ್ಟಿ ಸಮಗ್ರ ಸಾಹಿತ್ಯ ಹಾಗೂ ಆದಿಲ್‌ಶಾಹಿ ಸಂಪುಟಗಳನ್ನು ಹೊರತಂದರು.
ಬೆಂಗಳೂರಿನ ಬಸವ ಸಮಿತಿಯಿಂದ ಸಮಗ್ರ ವಚನಗಳನ್ನು ದೇಶದ ವಿವಿಧ ಭಾಷೆಗಳಲ್ಲಿ ಪ್ರಕಟಿಸುವ ಕಾರ್ಯ, ಕರ್ನಾಟಕ ಸರ್ಕಾರದಿಂದ ೧೫ ಬೃಹತ್ ವಚನ ಸಂಪುಟಗಳ ಪ್ರಕಟಣೆ, ಉಡುಪಿ ಪೇಜಾವರ ಮಠದಿಂದ ಸಮಗ್ರ ದಾಸ ಸಾಹಿತ್ಯ ಪ್ರಕಟಣೆ, ಬಸವಣ್ಣನವರ ಕಾರ್ಯಕ್ಷೇತ್ರಗಳಾದ ಕೂಡಲಸಂಗಮ, ಬಸವನಬಾಗೇವಾಡಿಗಳನ್ನು ಪ್ರೇಕ್ಷಣೀಯ ಯಾತ್ರಾ ಸ್ಥಳಗಳನ್ನಾಗಿ ಮಾಡಲು ಸರಕಾರಕ್ಕೆ ಕೈಜೋಡಿಸಿರುವದು, ಕರ್ನಾಟಕ ವಿದ್ಯಾವರ್ಧಕ ಸಂಘದ ಮೂಲಕ ಕನ್ನಡ ನಾಡು, ನುಡಿ, ಭಾಷೆಗಳಿಗಾಗಿ ಗೋಕಾಕ ಚಳುವಳಿ ನೆರವೇರಿಸಿದ್ದು- ಆ ಸಂಸ್ಥೆಯನ್ನು ಸಾಂಸ್ಕೃತಿಕ ಸಂಸ್ಥೆಯನ್ನಾಗಿ ಉನ್ನತಿಕರಿಸಿದ್ದು ಕಲಬುರ್ಗಿಯವರು.
ದ. ರಾ. ಬೇಂದ್ರೆ ಟ್ರಸ್ಟ್ ಅಧ್ಯಕ್ಷರಾಗಿ, ನವದೆಹಲಿ ಬಿರ್ಲಾ ಫೌಂಡೇಶನ್ ಅಧ್ಯಕ್ಷರಾಗಿ, ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಸ್ಮರಣೀಯವಾದ, ಇತಿಹಾಸದ ಪುಟಗಳಲ್ಲಿ ದಾಖಲಾರ್ಹವಾದ ಕೆಲಸ ಡಾ. ಎಂ. ಎಂ. ಕಲಬುರ್ಗಿ ಅವರಿಂದ ಆಗಿದೆ. ಅವರು ಒಬ್ಬ ವ್ಯಕ್ತಿಯಾಗಿರದೆ, ಮಹಾನ್ ಶಕ್ತಿಯಾಗಿ, ಲಿಂಗಾಯತ ಸಮಾಜದ ಮೇರುಪರ್ವತವಾಗಿದ್ದರು ಎಂದು ಲೇಖಕ ಶಿವನಗೌಡ ಗೌಡರ ಮಾತನಾಡಿದರು.

ಲಿಂಗೈಕ್ಯ ಶರಣ ಎಂ. ಎ. ಹಂಚಿನಾಳ ಗುರುಗಳ ಕುರಿತು ಅವರ ಮಗಳಾದ ಶಾಂತಲಾ ಕೆ. ವ್ಯಾಪಾರಿ ಮಾತನಾಡುತ್ತ, ನಮ್ಮ ತಂದೆಯವರು ಬಿಜಾಪೂರ ಜಿಲ್ಲೆಯ ಚಿಕ್ಕಪಡಸಲಗಿಯಿಂದ ಬಂದು ಪೂಜ್ಯ ಸಿದ್ಧಲಿಗ ಸ್ವಾಮಿಗಳ ಪ್ರಭಾವವಲಯಕ್ಕೆ ಮಾರು ಹೋಗಿ, ಶ್ರೀಮಠದ ಶಿಷ್ಯರಾದರು. ಶಿಕ್ಷಕರಾಗಿ ಗದುಗಿಗೆ ಬಂದು ಮಠದ ಶಿವಾನುಭವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಪೂಜ್ಯರ ಸಮೀಪದಲ್ಲಿ ಬೆಳೆದು, ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ-ಬಸವಕೇಂದ್ರ ಸಂಸ್ಥೆಗಳ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಸ್ಮರಣೀಯ ಕೆಲಸ ಮಾಡಿದ್ದಾರೆ.
ಶ್ರೀಮಠದ ಶಾಖಾ ಸಂಸ್ಥೆಗಳಲ್ಲಿ ಬಸವಾದಿ ಶರಣರ ಪ್ರವಚನ ಬಸವತತ್ವದಡಿಯಲ್ಲಿ ಮದುವೆ, ಮನೆ-ಮನೆಗಳಲ್ಲಿ ಮಹಾಮನೆ, ಇಷ್ಟಲಿಂಗ ಲಿಂಗಧಾರಣೆ ಹೀಗೆ ಬಸವಪರ ಕೆಲಸಗಳನ್ನು ಗೈದ ಶರಣರಿವರು. ಶರಣ ನೂಲಿಯಚಂದಯ್ಯನವರ ನಾಟಕ, ಬಸವೇಶ್ವರ ಮಕ್ಕಳ ಚರಿತ್ರೆ, ಪಂಚಬಾಳಪ್ಪ ಹೀಗೆ ೧೧ ಕಿರುಕ ಕೃತಿಗಳನ್ನು ಬರೆದ ಲೇಖಕರೂ ಇವರಾಗಿದ್ದರೆಂದು ಶಾಂತಾ ವ್ಯಾಪಾರಿ ಸ್ಮರಿಸಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಶರಣ ವ್ಹಿ. ಕೆ. ಕರೇಗೌಡ್ರ ಡಾ. ಎಂ. ಎಂ. ಕಲಬುರ್ಗಿ ಹಾಗೂ ಶರಣ ಹಂಚಿನಾಳ ಇವರ ಅಗಲಿಕೆ ಲಿಂಗಾಯತ ಸಮಾಜಕ್ಕೆ, ವಚನ ಸಾಹಿತ್ಯಕ್ಕೆ ತುಂಬಲಾಗದ ಹಾನಿಯಾಗಿದೆ. ‘ಕಾಯಕವೇ ಕೈಲಾಸ’ ಸಿದ್ಧಾಂತದಲ್ಲಿ ಇವರು ಸಲ್ಲಿಸುತ್ತಿದ್ದ ಸೇವೆಯಿಂದ ನಿರ್ವಾತ ಸ್ಥಿತಿ ನಿರ್ಮಾಣವಾಗಿತ್ತು. ‘ಮರಣವೇ ಮಹಾನವಮಿ’ ಎಂಬುದು ನಮ್ಮ ಸಿದ್ಧಾಂತವಾಗಿದ್ದರಿಂದ ಆಶಾವಾದಿಯಾಗಿ ಮುನ್ನಡೆದು, ಅವರೀರ್ವರ ಕೆಲಸ ಕಾರ್ಯಗಳನ್ನು ಮುನ್ನಡೆಸಿಕೊಂಡು ಹೋಗೋಣ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಎಸ್. ಎ. ಮುಗದ ಅವರು ಇಬ್ಬರೂ ಸ್ಮರಣೀಯ ಮಹನೀಯರ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು.
ಪ್ರಾರಂಭದಲ್ಲಿ ರೇಣುಕಾ ಕರೇಗೌಡ್ರ ಸಾಮೂಹಿಕ ಪ್ರಾರ್ಥನೆ ಗೈದರು. ಮೃತ್ಯುಂಜಯ ಜಿನಗಾ ಸ್ವಾಗತಿಸಿದರು. ಪ್ರಕಾಶ ಅಸುಂಡಿ ವಂದಿಸಿದರು. ರಾಮಣ್ಣ ಕಳ್ಳಿಮನಿ ಕಾರ್ಯಕ್ರಮ ನಿರೂಪಿಸಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
