3 ಸಾವಿರ ಎಕರೆ ಆಸ್ತಿಯನ್ನು ಮಾಗಡಿ ಮಠಕ್ಕೆ ದಾನ ಮಾಡಿದ ರಾಜಸ್ಥಾನದ ಗಣಿ ಉದ್ಯಮಿ

ಬಸವ ಮೀಡಿಯಾ
ಬಸವ ಮೀಡಿಯಾ

ರಾಮನಗರ

ರಾಜಸ್ಥಾನದ ಗಣಿ ಉದ್ಯಮಿ ಪಿ.ಬಿ. ಓಸ್ವಾಲ್‌ ಜೈನ್ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ‌ ಪಾಲನಹಳ್ಳಿ ಮಠಕ್ಕೆ ಮೂರು ಸಾವಿರ ಎಕರೆ ಆಸ್ತಿ ದಾನ ಮಾಡಿ ಸನ್ಯಾಸತ್ವ ಸ್ವೀಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಕಳೆದ 27 ವರ್ಷಗಳಿಂದ ಪಾಲನಹಳ್ಳಿ ಮಠದ ಜೊತೆ ಒಡನಾಟ ಹೊಂದಿದ್ದ ಜೈನ್ ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ. ಸಿದ್ದರಾಜ ಸ್ವಾಮೀಜಿ ಅವರಿಗೆ ಕಾನೂನಾತ್ಮಕವಾಗಿ ಆಸ್ತಿ‌ ಪತ್ರ ಹಸ್ತಾಂತರಿಸಿದ್ದಾರೆ.

ತಾವು ಕಂಪನಿ ಆರಂಭಿಸಿದ ದಿನದಿಂದಲೂ ಶ್ರೀಗಳ ಮಾರ್ಗದರ್ಶನ ಪಡೆದುಕೊಂಡು ಯಶಸ್ಸು ಸಾಧಿಸಿದ್ದೇನೆ, ಹಾಗಾಗಿ ಮೋಕ್ಷ ಸಾಧನೆಗಾಗಿಯೇ ಮಠಕ್ಕೆ ಆಸ್ತಿ ಬರೆದುಕೊಟ್ಟಿರುವುದಾಗಿ ಜೈನ್ ಹೇಳಿದ್ದಾರೆ.

‘ಓಸ್ವಾಲ್‌ ಕಂಪನಿ ಆರಂಭವಾದಾಗಿನಿಂದ ಸತತ 27 ವರ್ಷ ಪಾಲನಹಳ್ಳಿ ಮಠದ ಶ್ರೀಗಳ ಮಾರ್ಗದರ್ಶನ ಮತ್ತು ಅವರ ಒಡನಾಟವಿದ್ದ ಕಾರಣ ಮಠಕ್ಕೆ ಆಸ್ತಿ ಬರೆದುಕೊಟ್ಟಿದ್ದೇನೆ. ನನಗೆ ಈಗಾಗಲೇ 78 ವರ್ಷವಾಗಿದೆ. ಜೈನ ವ್ರತಾಚರಣೆ ಮಾಡಿ ಅಹಿಂಸಾ ಪರಮೋಧರ್ಮ ಮತ್ತು ಮೋಕ್ಷ ಸಾಧನೆಗಾಗಿ ಮಠಕ್ಕೆ ಆಸ್ತಿಯನ್ನು ದಾನ ಮಾಡಿದ್ದೇನೆ ಎಂದು ಮಾಧ್ಯಮಗಳಿಗೆ ಜೈನ್‌ ಹೇಳಿದರು.

ರಾಜಸ್ಥಾನ ಮಾತ್ರವಲ್ಲದೆ, ಮುಂಬೈ, ಗುಜರಾತ್‌, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಅವರ ಹೆಸರಲ್ಲಿ ಇದ್ದಿದ್ದು 3 ಸಾವಿರ ಎಕರೆಯ ಭೂಮಿ. ಇದರಲ್ಲಿ ಕಲ್ಲಿದ್ದಲು, ಚಿನ್ನ ಹಾಗೂ ಅದಿರಿನ ಗಣಿಗಾರಿಕೆ ಮಾಡುತ್ತಿದ್ದರು. ಅದರೊಂದಿಗೆ ಜರ್ಮನಿ, ಜಪಾನ್‌ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆಸುತ್ತಿದ್ದ ಎಲ್ಲಾ ವಿದೇಶಿ ವಹಿವಾಟುಗಳಿದ್ದವು. ಈ ಎಲ್ಲವನ್ನೂ ಪಾಲನಹಳ್ಳಿ ಮಠಕ್ಕೆ ದಾನ ಮಾಡಿದ್ದಾರೆ.

ಆಸ್ತಿಯನ್ನು ಸಮಾಜ ಸೇವೆಗೆ ಬಳಕೆ ಮಾಡಿಕೊಳ್ಳುತ್ತೇನೆ ಎಂದು ಡಾ. ಸಿದ್ದರಾಜ ಸ್ವಾಮೀಜಿ ತಿಳಿಸಿದ್ದಾರೆ. ಮಠದ ನಿರ್ವಹಣೆ, ಶಾಲೆ, ಕಾಲೇಜು, ಆಸ್ಪತ್ರೆ, ಗೋಶಾಲೆ, ದೇಗುಲಗಳ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತದೆ. ಗಣಿಯಿಂದ ಬರುವ ಆದಾಯ ಎಲ್ಲವೂ ತೆರಿಗೆ ವ್ಯಾಪ್ತಿಗೆ ಬರುತ್ತದೆ. ಈ ಬಗ್ಗೆ ತೆರಿಗೆ ಆಯುಕ್ತರ ಬಗ್ಗೆ ಚರ್ಚಿಸಿ ಇದರ ಆದಾಯವನ್ನು ಹೇಗೆ ಬಳಕೆ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ತೀರ್ಮಾನ ಮಾಡಲಿದ್ದೇನೆ ಎಂದು ಹೇಳಿದ್ದಾರೆ.

ರಾಜಸ್ಥಾನದ ಗಣಿ ಉದ್ಯಮಿಯಾಗಿರುವ ಓಸ್ವಾಲ್‌ ಜೈನ್‌ಗೆ ಇಬ್ಬರು ಮಕ್ಕಳಿದ್ದಾರೆ. ಮಗ ವಿದೇಶದಲ್ಲಿದ್ದರೆ, ಮಗಳು ರಾಜಸ್ಥಾನದಲ್ಲಿ ಸಿಎ ವೃತ್ತಿಯಲ್ಲಿದ್ದಾಳೆ. ಇಬ್ಬರಿಗೂ ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿ ನೀಡಿರುವ ಓಸ್ವಾಲ್‌ ಜೈನ್‌, ತಾವು ಬದುಕಿನಲ್ಲಿ ದುಡಿದು ಗಳಿಸಿದ ಸ್ವಯಾರ್ಜಿತ ಆಸ್ತಿಯಾಗಿರುವ 3 ಸಾವಿರ ಎಕರೆ ಆಸ್ತಿಯನ್ನು ಮಾತ್ರವೇ ದಾನ ಮಾಡಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *