5 ಕೋಟಿಗೆ ಎಸ್ ನಿಜಲಿಂಗಪ್ಪ ಮನೆ ಖರೀದಿಸಿದ ಸರ್ಕಾರ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ದಿ.ಎಸ್ ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ನಿಜಲಿಂಗಪ್ಪ ಮನೆ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದ ಹಿನ್ನೆಲೆಯಲ್ಲಿ ನಿಜಲಿಂಗಪ್ಪ ನಿವಾಸವನ್ನು ರಾಜ್ಯ ಸರ್ಕಾರ 5 ಕೋಟಿಗೆ ಖರೀದಿ ಮಾಡಿದೆ.

ಈ ಹಿಂದೆ ಕೆಪಿಸಿಸಿಯಿಂದ ನಿಜಲಿಂಗಪ್ಪ ಮನೆ ಖರೀದಿ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿತ್ತು. ಇದೇ ವಿಚಾರವಾಗಿ ಸೆಪ್ಟೆಂಬರ್ 2 ರಂದು ನಿಜಲಿಂಗಪ್ಪ ನಿವಾಸಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡಿ ಪುತ್ರ ಕಿರಣ್ ಜೊತೆ ಕೆಲಹೊತ್ತು ಚರ್ಚೆ ನಡೆಸಿದ್ದರು. ಆದರೆ ಕಾಂಗ್ರೆಸ್ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಮನೆ ಮಾರಾಟಕ್ಕಿದೆ ಎಂದು ಕಿರಣ್ ಜಾಹೀರಾತು ನೀಡಿದ್ದರು. ಸದ್ಯ ನಿಜಲಿಂಗಪ್ಪ ಪುತ್ರ ಕಿರಣ್ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಶಿವರಾಜ್ ತಂಗಡಗಿ ಸಭೆ

ಒಂದು ತಿಂಗಳಲ್ಲಿ ಮನೆಯನ್ನು ನೋಂದಣಿ ಮಾಡಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಿಜಲಿಂಗಪ್ಪ ಅವರ ಮನೆ ಖರೀದಿಸಿ ಸಂರಕ್ಷಿಸಲು ಹಾಗೂ ಅಭಿವೃದ್ಧಿಗೊಳಿಸುವ ಸಂಬಂಧ ಸಚಿವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮತ್ತು ಚಿತ್ರದುರ್ಗ ಜಿಲ್ಲಾಧಿಕಾರಿ ಅವರ ಜೊತೆ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಗುರುವಾರ ಸಭೆ ನಡೆಸಿ, ಈ ಮೇಲಿನ ಸೂಚನೆ ನೀಡಿದರು.

ನಿಜಲಿಂಗಪ್ಪ ಅವರ ಮನೆ ಖರೀದಿ ಹಾಗೂ ಸಂರಕ್ಷಣೆ ಸಂಬಂಧ ಈಗಾಗಲೇ ಸರ್ಕಾರ ಅನುದಾ‌ನ ಬಿಡುಗಡೆಗೊಳಿಸಿದ್ದರೂ ತಡವಾಗುತ್ತಿರುವ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ‌ ಹಿಂದೆ ಮನೆ ಖರೀದಿ ಸಂಬಂಧ ತಾಂತ್ರಿಕ ಕಾರಣಗಳು ಎದುರಾಗಿತ್ತು. ಇದೀಗ ನಿಜಲಿಂಗಪ್ಪ ಅವರ ಪುತ್ರ ಹಾಗೂ ಅವರ ಸಂಬಂಧಿಗಳ ಜತೆ ಚರ್ಚೆ ನಡೆಸಿದ್ದು, ಮನೆ ಖರೀದಿ ಪ್ರಕ್ರಿಯಿಸಿ ಮುಂದಾಗಿದ್ದೇವೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾನೂನಾತ್ಮಕವಾಗಿ ವ್ಯವಹರಿಸಿ, ಕೂಡಲೇ ಮನೆ ಖರೀದಿಸಿ ಎಂದು ತಾಕೀತು ಮಾಡಿದರು.

ಬಳಿಕ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ”ನಿಜಲಿಂಗಪ್ಪ ಅವರ ಮನೆ ಖರೀದಿ ಹಿನ್ನೆಲೆಯಲ್ಲಿ ಕಾನೂನು ಇಲಾಖೆಯಿಂದ ಅಭಿಪ್ರಾಯ ಪಡೆಯಲಾಗಿದೆ. ನಿಜಲಿಂಗಪ್ಪ ಅವರು ವಾಸವಿದ್ದ ಕೋಟೆನಾಡಿನ ಮನೆ ಖಾತೆ ಅವರ 3ನೇ ಪುತ್ರ ಎಸ್.ಎನ್.ಕಿರಣ್ ಶಂಕರ್ ಅವರ ಹೆಸರಿನಲ್ಲಿತ್ತು. ನಿಜಲಿಂಗಪ್ಪ ಅವರು ಬರೆದಿಟ್ಟಿರುವ ವಿಲ್​ ಪ್ರಕಾರ ಮನೆ ಖಾತೆಯು ಪ್ರಸ್ತುತ ನಿಜಲಿಂಗಪ್ಪ ಅವರ ಮೊಮ್ಮಗ ವಿನಯ್ ಬಿನ್ ಎಸ್.ಎ.ಕಿರಣ್ ಶಂಕರ್ ಅವರ ಹೆಸರಿನಲ್ಲಿದ್ದು, ಸಂಪೂರ್ಣ ಇದೀಗ ಆಸ್ತಿಗೆ ವಿನಯ್ ಮಾಲೀಕತ್ವ ಹೊಂದಿದ್ದಾರೆ. ಈ ಸಂಬಂಧ ಅಧಿಕಾರಿಗಳು ಕಿರಣ್ ಅವರೊಂದಿಗೆ ಚರ್ಚೆ ನಡೆಸಿದ್ದು, ತಿಂಗಳಲ್ಲಿ ಮನೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ” ಎಂದು ಮಾಹಿತಿ ನೀಡಿದರು.

Share This Article
Leave a comment

Leave a Reply

Your email address will not be published. Required fields are marked *