ಮೈಸೂರು ಪ್ರಾಂತ್ಯ ಬಸವತತ್ವದ ಪುಣ್ಯಭೂಮಿ: ಸಿದ್ದಲಿಂಗ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಮರಿಯಾಲ

ಬಸವಧರ್ಮ ಪರಿಪಾಲನೆ ಮಾಡುವ ಜೊತೆಗೆ ಶ್ರೀಮಠದ ಸೇವೆಯನ್ನು ಈ ಭಾಗದ ಜನರಿಗೆ ನೀಡುತ್ತಿರುವ ಕಾಯಕವನ್ನು ಇಮ್ಮಡಿ ಮುರುಘರಾಜೇಂದ್ರಸ್ವಾಮಿಗಳು ಸಾಕಾರಗೊಳಿಸುತ್ತಾ ಬಂದಿದ್ದಾರೆ ಎಂದು ತುಮಕೂರು ಸಿದ್ದಗಂಗಾ ಕ್ಷೇತ್ರದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಮರಿಯಾಲ ಗ್ರಾಮದಲ್ಲಿರುವ ಶ್ರೀಮುರುಘರಾಜೇಂದ್ರಸ್ವಾಮಿ ಮಹಾಸಂಸ್ಥಾನ ಶ್ರೀಮಠದಲ್ಲಿ ನಡೆದ ಎರಡನೇ ದಿನದ ಬಸವೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಮುರುಘರಾಜೇಂದ್ರಸ್ವಾಮೀಜಿ ಅವರ 109 ನೇ ವರ್ಷದ ಸ್ಮರಣೋತ್ಸವ, ಮಹಾಂತ ಮಂಟಪದ ಉದ್ಘಾಟನೆ, ನೂತನ ಬಸವದ್ವಾರ ಹಾಗೂ ಪುತ್ಥಳಿಗಳ ಅನಾವರಣ ಹಾಗೂ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಅವರ ಗುರುಪಟ್ಟಾಧಿಕಾರ ರಜತ ಮಹೋತ್ಸವ ಕಾರ್ಯಕ್ರಮಗಳು ಶ್ರೀ ಮಠದಲ್ಲಿ ಸೋಮವಾರ, ಮಂಗಳವಾರ ನಡೆದವು.

ರಾಜ್ಯದಲ್ಲಿ ಮಠಮಾನ್ಯಗಳ ಕೊಡುಗೆ ಅಪಾರ. ಮೈಸೂರು ಭಾಗದ ಮಠಗಳಂತೂ ಕಾಯಕ, ದಾಸೋಹ ಅಳವಡಿಸಿಕೊಂಡು ಜನರಲ್ಲಿ ಬಸವತತ್ವದ ಬಗ್ಗೆ ಅರಿವು ಮೂಡಿಸುತ್ತಿರುವುದು ಈ ಭಾಗದ ಪುಣ್ಯ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಮೈಸೂರು ಪ್ರಾಂತ್ಯ ಬಸವತತ್ವದ ಪುಣ್ಯಭೂಮಿ. ಯಡಿಯೂರು ಸಿದ್ದಲಿಂಗೇಶ್ವರರು, ಮಲೆ ಮಹಾದೇಶ್ವರರು, ಗುರುಮಲ್ಲೇಶ್ವರರು, ಮುರುಘರಾಜೇಂದ್ರ ಸ್ವಾಮಿಗಳು ನೆಲೆಸಿದ ಪುಣ್ಯಭೂಮಿ.

ಚಾಮರಾಜನಗರ ಜಿಲ್ಲೆಯಲ್ಲಿ ಗುರುಮಲ್ಲೇಶ್ವರರು, ಅವರ ಸಮಕಾಲೀನರಾದ ಮುರುಘ ರಾಜೇಂದ್ರ ಸ್ವಾಮಿಗಳು ನೆಲೆಸಿ, ದಾಸೋಹ, ಕಾಯಕ ತತ್ವವನ್ನು ಅಳವಡಿಸಿಕೊಂಡು ಬಸವ ತತ್ವವನ್ನು ಸಾರುತ್ತಾ ಮಠಗಳನ್ನು ಸ್ಥಾಪಿಸಿದರು. ಅಂತಹ ಮಠಗಳಲ್ಲಿ ಮರಿಯಾಲದ ಮುರುಘ ರಾಜೇಂದ್ರಸ್ವಾಮಿ ಮಠವು ಒಂದಾಗಿದೆ ಎಂದರು.

ಮರಿಯಾಲದಲ್ಲಿ ಶ್ರೀಮಠವು ಬಸವತತ್ವ ಭೋಧನೆ ಮಾಡುತ್ತಾ, ಜನರನ್ನು ಜಾಗೃತಿಗೊಳಿಸುವ ಕೆಲಸವನ್ನು 19ನೇ ಶತಮಾನದಿಂದಲೂ ಮಾಡುತ್ತಾ ಬಂದಿದೆ. ಉತ್ತರಿಂದ ಬಂದಂತಹ ಶ್ರೀ ಗುರುಮಲ್ಲೇಶ್ವರರು ಹಾಗು ಮುರುಘರಾಜೇಂದ್ರಸ್ವಾಮಿಗಳು ಈ ಭಾಗದ ಜನರಲ್ಲಿ ಬಸವಧರ್ಮವನ್ನು ಪ್ರಚುರ ಮಾಡುತ್ತಾ ನೆಲೆಯಾಗಿ ನಿಂತು ಬಸವದೀಕ್ಷೆಯನ್ನು ನೀಡಿದರು.

ಅವರು ಅಂದು ಹಚ್ಚಿದ ಧರ್ಮಜ್ಯೊತಿ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಇಂಥ ಪವಿತ್ರ ಕಾರ್ಯದಲ್ಲಿ ತಮ್ಮನ್ನು ಸಮರ್ಪಣೆ ಮಾಡಿಕೊಂಡಿರುವ ಇಮ್ಮಡಿ ಮುರುಘರಾಜೇಂದ್ರಸ್ವಾಮಿಗಳು 25ನೇ ಪಟ್ಟಾಧಿಕಾರದ ರಜತ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ, ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ರಜತ ಮಹೋತ್ಸವಕ್ಕಾಗಿ 25 ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಭರದಲ್ಲಿ ಶ್ರೀಗಳು 150ಕ್ಕು ಹೆಚ್ಚು ಕಾರ್ಯಗಳನ್ನು ಇಲ್ಲಿ ಕೈಗೊಂಡಿದ್ದಾರೆ. ಇದು ಅವರ ಕಾರ್ಯಕ್ಷಮತೆಯಿಂದ ಸಾಧ್ಯವಾಗಿದೆ. ಶ್ರೀ ಮಹಾಂತಸ್ವಾಮಿಗಳ ದೂರದೃಷ್ಠಿ ಚಿಂತನೆ ಫಲವಾಗಿ ಇಂದು ಧಾರ್ಮಿಕ ಅಭಿವೃದ್ದಿ ಜೊತೆಗೆ ಶೈಕ್ಷಣಿಕ ಪ್ರಗತಿಯನ್ನು ಹೊಂದಿದೆ. ದೊಡ್ಡ ಕ್ಯಾಂಪಸ್ ನಿರ್ಮಾಣವಾಗಿದೆ. ಆದೇ ರೀತಿ ಭಕ್ತವೃಂದವು ಸಹ ಮಠದ ಅಭಿವೃದ್ದಿಯಲ್ಲಿ ಹೆಚ್ಚಿನ ಸಹಕಾರ ನೀಡುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳು ನಡೆಯಲು ಅವರ ಸಹಕಾರ ಪ್ರೇರಣೆ ಸಾಕ್ಷಿಯಾಗಿದೆ ಎಂದರು.

ಇಂತಹ ಮುಖ್ಯ ಮಠದ ಅಧಿಕಾರವಹಿಸಿಕೊಂಡು 24 ವರ್ಷ ಜನರಸೇವೆ ಮಾಡುತ್ತಾ, ಬಸವತತ್ವ ಪ್ರಚಾರದಲ್ಲಿ ತೊಡಗಿ, ತಮ್ಮ ಗುರುಗಳ ಆಜ್ಞೆ ಯನ್ನು ಪಾಲಿಸುತ್ತಾ ಮಠವನ್ನು ಮುನ್ನಡೆಸುತ್ತಿರುವ ಇಮ್ಮಡಿ ಮುರುಘರಾಜೇಂದ್ರಸ್ವಾಮಿಗಳು ಸುವರ್ಣ ಮಹೋತ್ಸವ ಆಚರಿಸಲಿ. ಮಠದ ಗುರುಗಳು ಒಂದು ಕೈಯಲ್ಲಿ ಲಿಂಗಪೂಜೆ ಮಾಡುತ್ತಾ ಇನ್ನೊಂದು ಕೈಯಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು.

ದೇವನೂರು ದಾಸೋಹ ಮಠದ ಮಹಾಂತಸ್ವಾಮೀಜಿ, ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಹಾಸನದ ಶ್ರೀ ಗುರು ಮುಕುಂದೂರು ವಿರಕ್ತಮಠದ ಡಾ. ಶ್ರೀಮಹಾಂತ ಬಸವಲಿಂಗಸ್ವಾಮೀಜಿ, ಹರಗುರು ಚರಮೂರ್ತಿಗಳು ಹಾಗೂ ಮರಿಯಾಲ ಮತ್ತು ಸುತಮತ್ತಲಿನ ಭಕ್ತರು ಉಪಸ್ಥಿತರಿದ್ದರು.

ರಾತ್ರಿ ಶ್ರೀ ಮರುಘರಾಜೇಂದ್ರ ಸ್ವಾಮಿ ಕಲಾ ಬಳಗ ಇವರಿಂದ “ಪ್ರಭುಲಿಂಗ ಲೀಲೆ “ಎಂಬ ಶರಣರ ಜೀವನಾಧಾರಿತ ತತ್ವದ ವಿಚಾರಧಾರೆಗಳನ್ನು ಒಳಗೊಂಡ ನಾಟಕ ಪ್ರದರ್ಶನಗೊಂಡಿತು.

ಎರಡು ದಿನಗಳ ಬಸವೋತ್ಸವದಲ್ಲಿ ಶ್ರೀಮಠದಿಂದ ವಿವಿಧ ಕಾರ್ಯಕ್ರಮಗಳು ನಿರಂತರ ನಡೆದವು. ಸಹಸ್ರಾರು ಜನ ಬಸವಭಕ್ತರು ಭಾಗವಹಿಸಿದರು.

ಸಮಾರಂಭದಲ್ಲಿ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಅವರಿಗೆ ಬೆಳ್ಳಿ ಕಿರೀಟಧಾರಣೆ ಮಾಡಿ ಮೆರವಣಿಗೆಯಲ್ಲಿ ಕರೆದೊಯ್ದು ಗೌರವ ಸಲ್ಲಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/ILsKluXiq8VG6CRftVzc2g

Share This Article
1 Comment
  • ಇದೊಂದು ಅವಿಸ್ಮರಣೀಯ ಕಾರ್ಯಕ್ರಮ ಮರಿಯಾಲ ಮಠದ ಈಗಿನ ಶ್ರೀಗಳು ಅಪಾರ ಜ್ಞಾನ ಉಳ್ಳವರಾಗಿದ್ದಾರೆ ಹಾಗೂ ಜನಪರ ಕಾಳಜಿಯುಳ್ಳ ತಾಯಿ ಹೃದಯ ಸ್ವಭಾವ ಹೊಂದಿದ್ದಾರೆ. ಅವರ ಬಸವ ನಿಷ್ಠೆ ಕಂಡು ನಾಡಿನ ಎಲ್ಲಾ ಮಠಾಧೀಶರು ಶ್ರೀಗಳನ್ನ ಮನಸ್ಸಾರೆ ಮೆಚ್ಚಿರುವುದು ಸಂತೋಷತಂದಿದೆ.

Leave a Reply

Your email address will not be published. Required fields are marked *