ನಂಜನಗೂಡು:
ತಾಲೂಕಿನ ಸರ್ಕಾರಿ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವಚನ ಕಂಠಪಾಠ ಸ್ಪರ್ಧಾ ವಿಜೇತ ಮಕ್ಕಳಿಗೆ ನಂಜನಗೂಡು ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ ಪ್ರಥಮ ಬಹುಮಾನ ಲ್ಯಾಪ್ ಟಾಪ್, ದ್ವಿತೀಯ ಟ್ಯಾಬ್ ಮತ್ತು ತೃತೀಯ ಬಹುಮಾನವಾಗಿ ನಗದು ವಿತರಣೆ ಮಾಡಿದರು.
ಶರಣರಾದ ಅಂಬಿಗರ ಚೌಡಯ್ಯ, ಶಿವಯೋಗಿ ಸಿದ್ದರಾಮೇಶ್ವರ, ಹಡಪದ ಲಿಂಗಮ್ಮ ಮತ್ತು ಮಡಿವಾಳ ಮಾಚಿದೇವರ ವಚನಗಳ ಕಂಠಪಾಠ ಸ್ಪರ್ಧೆಯನ್ನು ಈಚೆಗೆ ನಡೆಸಲಾಗಿತ್ತು.

ಪಟ್ಟಣದ ನಂಜುಂಡೇಶ್ವರ ದೇವಸ್ಥಾನದ ಹತ್ತಿರ ನಡೆದ ಶರಣ ಮಡಿವಾಳ ಮಾಚಿದೇವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, 12ನೇ ಶತಮಾನದ ಮಹಾನ್ ಶರಣ ಮಾಚಿದೇವರಾಗಿದ್ದಾರೆ. ಅವರು ವಚನ ಸಾಹಿತ್ಯ ರಕ್ಷಣೆಯಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದರು.
12ನೇ ಶತಮಾನದ ಬಸವಾದಿ ಶರಣರ ವಚನಗಳು ಅತ್ಯಮೂಲ್ಯವಾದ ನೈತಿಕ ಮೌಲ್ಯದಿಂದ ಕೂಡಿವೆ ಮತ್ತು ಶಾಲಾ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನವನ್ನ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದಲೇ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಿಂದಲೇ ವಚನ ಓದುವ ಹವ್ಯಾಸ ಬೆಳೆಸಿದರೆ ಅವರು ದೇಶಕ್ಕೆ ಅತ್ಯಮೂಲವಾದ ಆಸ್ತಿ ಆಗಲಿದ್ದಾರೆ. ಆದ್ದರಿಂದ ಪ್ರತಿ ಶಾಲೆಯ ಮಕ್ಕಳು ವಚನಗಳನ್ನ ಓದಿ ಅದರಲ್ಲಿರುವ ನಿಜತನವನ್ನು ತಿಳಿದು ರಾಷ್ಟ್ರ ನಿರ್ಮಾಣದಲ್ಲಿ ಭಾಗಿಯಾಗಬೇಕೆಂದರು.

ಶರಣರ ವಚನಗಳು ಸಮಸಮಾಜ, ಸಾಮಾಜಿಕ ನ್ಯಾಯ ಒದಗಿಸಲು ಅತ್ಯಂತ ಅಮೂಲ್ಯವಾಗಿವೆ. ಜಗತ್ತಿನ ಯಾವ ಸಾಹಿತ್ಯದಲ್ಲೂ ಈ ಪ್ರಕಾರದ ಉತ್ತಮ ಮಾರ್ಗ ದೊರೆಯುವುದು ವಿರಳ. ಆದ್ದರಿಂದ ವಿದ್ಯಾರ್ಥಿಗಳು ಅಲ್ಲದೆ ಪ್ರತಿಯೊಬ್ಬರು ವಚನ ಸಾಹಿತ್ಯವನ್ನು ಓದುವ ಅಭ್ಯಾಸವನ್ನ ಇಟ್ಟುಕೊಂಡರೆ ಸಂಸಾರದಲ್ಲಿಯೂ ಕೂಡ ಸಾಮರಸ್ಯ ಕಾಪಾಡಿಕೊಳ್ಳಬಹುದೆಂದು ಶಾಸಕರು ಮಾತನಾಡಿದರು.
ಪೂರ್ವಭಾವಿ ಸಭೆಯಲ್ಲಿ ವಚನ ಕಂಠಪಾಠ ಸ್ಪರ್ಧೆ ಮಾಡಬೇಕೆಂದು ಸಲಹೆ ನೀಡಿ ಹಾಗೂ ನೇತೃತ್ವ ವಹಿಸಿಕೊಂಡು, ಅಚ್ಚುಕಟ್ಟಾಗಿ ಕಾರ್ಯಕ್ರಮ ನೆರವೇರಿಸಿ ಕೊಟ್ಟಂತಹ ಬಸವಯೋಗೇಶ ಅವರನ್ನು ಗೌರವಿಸಲಾಯಿತು.

ಸರ್ಕಾರಿ ಆದರ್ಶ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಕಿಶನ್ 47 ವಚನಗಳನ್ನು ಹೇಳಿ ಪ್ರಥಮ ಬಹುಮಾನ, ಹೊರಳವಾಡಿ ಸರ್ಕಾರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಮಹೇಶ್ ಎಂ. 32 ವಚನ ಹೇಳುವುದರ ಮುಖಾಂತರ ಎರಡನೇ ಬಹುಮಾನ, ನಂಜನಗೂಡಿನ ಸರ್ಕಾರಿ ಬಾಲಕಿಯರ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಮಾನಸ ಮತ್ತು ಅಹಲ್ಯ ಸರ್ಕಾರಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾದ ದರ್ಶನ್ ಮತ್ತು ಅಭಿಷೇಕ್ ತಲಾ 26 ವಚನಗಳನ್ನ ಹೇಳಿ ಮೂರನೇ ಬಹುಮಾನವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಶರಣತತ್ವ ಪ್ರಚಾರಕರಾದ ಬಸವ ಯೋಗೇಶ್ ಮಾತನಾಡಿ, ಇಂತಹ ಕಾರ್ಯ ರಾಜ್ಯದಲ್ಲಿ ಎಲ್ಲೂ ನಡೆದಿಲ್ಲ. ಇಂತಹ ಅಮೂಲ್ಯವಾದ ಕಾರ್ಯಕ್ರಮವನ್ನು ನಮ್ಮ ನಂಜನಗೂಡಿನ ಶಾಸಕರಾದ ದರ್ಶನ್ ಧ್ರುವನಾರಾಯಣ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಹಶೀಲ್ದಾರ್ ಸ್ಮಿತರಾಮು, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಏರ್ಪಡಿಸಿ ಮಾದರಿಯಾಗಿದ್ದಾರೆ. ಅವರಿಗೆ ಬಸವಾದಿ ಶರಣರ ಕೃಪಾಶೀರ್ವಾದವಿರಲಿ ಎಂದು ಹೇಳಿದರು.

ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಪ್ರವಚನಕಾರ ಸಿದ್ದರಾಜಪ್ಪ, ವಿವಿಧ ಇಲಾಖೆಯ ಮುಖ್ಯಸ್ಥರು, ಪೊಲೀಸ್ ಇಲಾಖೆಯವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಎಂ. ಶಂಕರ್,ಮಡಿವಾಳ ಮಾಚಿದೇವ ಸಮುದಾಯದ ಅಧ್ಯಕ್ಷ ಪ್ರಸನ್ನ, ಪ್ರದಾನ ಕಾರ್ಯದರ್ಶಿ ಬಸವರಾಜ, ಹೌಸಿಂಗ್ ಬೋರ್ಡ್ ರವಿ, ಮುದ್ದಹಳ್ಳಿ ಅಶೋಕ, ಭೋವಿ ಸಮುದಾಯದ ಮುಖಂಡ ಪಾಳ್ಯ ಪಾಪಣ್ಣ, ವಿದ್ಯಾನಗರ ನಂದೀಶ್ ಮಾಸ್ಟರ್, ಪ್ರಶಸ್ತಿ ಪಡೆದ ವಿದ್ಯಾರ್ಥಿಗಳ ಪೋಷಕರು, ಸಾರ್ವಜನಿಕರು ಹಾಜರಿದ್ದರು.
