ಹಿಂದೂ ಸಮಾವೇಶ: ಕಾಯಕ, ದಾಸೋಹ ವೈದಿಕ ಸಿದ್ಧಾಂತಗಳು, ಬಸವಣ್ಣ ಕೊಟ್ಟಿದ್ದಲ್ಲ

ಬಸವ ಮೀಡಿಯಾ
ಬಸವ ಮೀಡಿಯಾ

‘ಬೌದ್ಧ, ಜೈನ ಧರ್ಮಗಳಂತೆ ಲಿಂಗಾಯತವೂ ಧರ್ಮವೇ. ಅದರ ಬಗ್ಗೆ ಚಕಾರವಿಲ್ಲ.’

ಬಸವಕಲ್ಯಾಣ

“ಕಾಯಕ, ದಾಸೋಹ ಬಸವಣ್ಣನವರಿಂದ ಮಾತ್ರ ಬಂದಿಲ್ಲ, ಅವು ಮೂಲತಃ ವೈದಿಕ ಸಿದ್ದಾಂತಗಳು,” ಎಂದು ಬೆಂಗಳೂರಿನ ಆರೂಢ ಭಾರತಿ ಸ್ವಾಮಿ ಭಾನುವಾರ ಹೇಳಿದರು.

ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದಲ್ಲಿ ಮಾತನಾಡಿದರು.

“ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕರಾದರೂ ಅದರಲ್ಲಿ ಏನೂ ವಿಶೇಷತೆಯಿಲ್ಲ. ನಿರಂತರವಾಗಿ ಕರ್ತವ್ಯ ಮಾಡುವದೇ ನಿಜವಾದ ಧರ್ಮ ಎಂದು ಪ್ರಾಚೀನ ವೇದ ಉಪನಿಷತ್ತುಗಳಲ್ಲಿ ಹೇಳಲಾಗಿದೆ. ಕಾಯಕ ಸಿದ್ದಾಂತದಂತೆ ದಾಸೋಹ ಸಿದ್ದಾಂತವನ್ನೂ ವೈದಿಕ ಧರ್ಮದಲ್ಲಿ ಹೇಳಲಾಗಿದೆ. ದಾಸೋಹ ಬಸವಣ್ಣ ಕೊಟ್ಟ ಅಂತ ಹೇಳ್ತೀವಿ ಆದರೆ ಅದರಲ್ಲಿ ಹೊಸದೇನೂ ಅಲ್ಲ,” ಎಂದು ಭಾರತಿ ಸ್ವಾಮಿ ಹೇಳಿದರು.

“ದೇವಾಲಯ ನಿರಾಕರಣೆ, ಬಯಲು, ಇಷ್ಟಲಿಂಗ ಕಲ್ಪನೆ – ಇವೆಲ್ಲಾ ವೇದ ಉಪನಿಷತ್ತುಗಳಲ್ಲಿವೆ. ಮೈತ್ರೇಯ ಉಪನಿಷತ್ತು ನಾನೇ ಪರಮಾತ್ಮ ಎಂದು ಪೂಜೆ ಮಾಡಿಕೊಳ್ಳಬೇಕು ಎಂದು ಹೇಳಿದೆ. ಬಸವಣ್ಣನಿಂದಲೇ ಇದು ಶುರುವಾಯ್ತು ಅನ್ನುವ ಭ್ರಾಂತಿ ಬೇಡ.

ವಚನಗಳು ವೇದ ಉಪನಿಷತ್ತುಗಳನ್ನು ಪರಿಷ್ಕರಿಸಿದವು. ಬಸವಣ್ಣ ವೇದ ಉಪನಿಷತ್ತುಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಕನ್ನಡದಲ್ಲಿ ವಿವರಿಸಿದ್ದರಿಂದ ಕ್ರಾಂತಿಕಾರಿ ಎನಿಸಿಕೊಂಡ,” ಎಂದು ಹೇಳಿದರು

ಲಿಂಗಾಯತ ಧರ್ಮ ಪ್ರತ್ಯೇಕ ಎನ್ನುವುದು ಸರಿ

ಬೌದ್ಧ, ಜೈನ ಧರ್ಮಗಳಂತೆ ಲಿಂಗಾಯತವೂ ಧರ್ಮವೇ. ಅದರ ಬಗ್ಗೆ ಚಕಾರವಿಲ್ಲ. ಆದರೆ ಲಿಂಗಾಯತ ಧರ್ಮ ಎಂದು ಹೇಳಿಕೊಂಡು ಹಿಂದೂ ಧರ್ಮ ಹೀಯಾಳಿಸುವುದು ಸರಿಯಲ್ಲ. ಲಿಂಗಾಯತ ಹೋರಾಟ ಮೀಸಲಾತಿಗಾಗಿ ನಡೆಯುತ್ತಿದೆ, ಎಂದು ಆರೋಪಿಸಿದರು.

ಸಮಾವೇಶದಲ್ಲಿ ಮಾತನಾಡಿದ ಆಂದೋಲಾ ಮಠದ ಸಿದ್ದಲಿಂಗ ಸ್ವಾಮೀಜಿ ಹಿಂದೂಗಳನ್ನು ಕೆಣಕಬೇಡಿ, ಹಿಂದೂಗಳನ್ನು ವಿರೋಧಿಸುವವರು ಭಾರತದ ನಾಗರಿಕರಾಗಿರಲು ಸಾಧ್ಯವಿಲ್ಲ, ಎಂದರು.

ಬಬಲೇಶ್ವರದಿಂದ ಆರಂಭವಾದ ಹಿಂದೂ ಸಮಾವೇಶ ಈಗ ಕಲ್ಯಾಣಕ್ಕೆ ಬಂದಿದ್ದು ಅತ್ಯಂತ ಹೆಮ್ಮೆಯ ವಿಷಯ.

ಒಬ್ಬ ಕಾಡಸಿದ್ದೇಶ್ವರ ಸ್ವಾಮಿಗಳ ಧ್ವನಿ ಅಡಗಿಸಬಹುದು ಆದರೆ ಇಲ್ಲಿ ಇರುವ ನೂರಾರು ಜನರು ಮಾತನಾಡಲು
ನಿಂತರೆ ಕಾಂಗ್ರೆಸ್‌ ಸರ್ಕಾರ ಧೂಳಿಪಟ ಆಗುತ್ತೆ, ಕಾಂಗ್ರೆಸ್ ಅಧಿಕಾರದಲ್ಲಿ ಇರೋಲ್ಲ ಎಂದು ಎಚ್ಚರಿಸಿದರು.

ಚಿದಂಬರಾಶ್ರಮದ ಶಿವಕುಮಾರ ಸ್ವಾಮೀಜಿ ಅವರು “ವೈದಿಕ ಧರ್ಮಕ್ಕೆ ಬಸವಣ್ಣ ಬೈಯ್ದಿರುವದು ಮಕ್ಕಳಿಗೆ ತಂದೆ ತಾಯಿ ಬೈಯ್ದಂತೆ. ಜನರಲ್ಲಿ ಬೇಧ ಹುಟ್ಟಿಸುತ್ತಿರುವದು ಸರಿಯಲ್ಲ. ನಾವೆಲ್ಲ ಹಿಂದೂಗಳು.
ನಾನು ಹಿಂದೂ ಅಲ್ಲ ಅಂದ್ರೆ ಗೆಟ್ ಔಟ್. ಮುಸ್ಲಿಂಮರ, ಕ್ರಿಶ್ಚಿಯನ್ನರ ದೇಶಗಳಿವೆ ಅಲ್ಲಿಗೆ ಹೋಗಿ,” ಎಂದು ಹೇಳಿದರು.

ಕನ್ನೇರಿ ಶ್ರೀಗಳನ್ನು ಬಸವಕಲ್ಯಾಣದಲ್ಲಿ ಮೌನವಾಗಿಸಿ ಪ್ರತಿಯೊಬ್ಬನನ್ನು ಮಾತನಾಡಿಸುವಂಥ ಶಕ್ತಿ ತುಂಬಿದಂತಾಗಿದೆ. ಹಿಂದು ಧರ್ಮ ಉಳಿಸಿ ಬೆಳೆಸುವ ಕಾರ್ಯ ಇವತ್ತು ಆರಂಭವಾಗಿದೆ ಎಂದು ತಡೋಳಾ ಶಿವಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನೇರಿ ಸ್ವಾಮಿ, ಹವಾ ಮಲ್ಲಿನಾಥ ಮಹಾರಾಜರು, ಆಯೋಜಕ ಗುಂಡುರೆಡ್ಡಿ ಸೇರಿದಂತೆ ಹಲವಾರು ಶ್ರೀಗಳು, ಪ್ರಮುಖರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
4 Comments
  • ವೇದ ಉಪನಿಷತ್ತುಗಳಲ್ಲಿಯೇ ಕಾಯಕ, ದಾಸೋಹ, ಇಷ್ಠಲಿಂಗ ಪೂಜೆ ಇತ್ತೆಂದು ಹೇಳುವವರು ಬಸವಣ್ಣನವರು ಬರುವವರೆಗೆ ಜಾತಿ ಭೇದ, ಲಿಂಗ ಭೇದ, ವರ್ಣ ಭೇದ, ವರ್ಗ ಭೇದ, ಮೂಢ ನಂಬಿಕೆ, ದೇವರು ಧರ್ಮದ ಹೆಸರಿನಲ್ಲಿ ಶೋಷಣೆ ಇತ್ಯಾದಿ ಅನಿಷ್ಟಗಳು ಏಕೆ ತಾಂಡವ ಆಡುತ್ತಿದ್ದವು ಅನ್ನುವುದನ್ನು ಏಕೆ ವಿವರಿಸಲಿಲ್ಲ?
    ನಾವು ಹಿಂದುಗಳಲ್ಲದಿದ್ದರೆ ಭಾರತದಲ್ಲಿ ಇರಬಾರದೆಂದು ಹೇಳಿದ ಶಿವಕುಮಾರ ಸ್ವಾಮಿಗಳು ಕಾವಿ ಕೋಮುವಾದಿಗಳೇ ಆಗಿದ್ದಾರೆ.
    ಶ್ರೀ ಸಿದ್ಧಾರೂಢರಿಗೇ ಓಂ ನಮ ಶಿವಾಯ ಮಂತ್ರ ಪಠಿಸುವ ಹಕ್ಕನ್ನು ಪಟ್ಟಭದ್ರ ಹಿಂದುಗಳು ಪ್ರತಿಬಂಧಿಸಲು ಪ್ರಯತ್ನಿಸಿದ್ದನ್ನು ಅವರ ಅನುಗ್ರಹದಿಂದಲೇ ಬೆಳೆದ ಇವರು ಏಕೆ ಮರೆತಿದ್ದಾರೆ?

  • ನನ್ನ ಇತಿಹಾಸ ಸಂಶೋಧನೆಯ ಪ್ರಕಾರ ‘ಲಿಂಗಾಯತ’ ಮತ್ತು ‘ವೀರಶೈವ’ ಎರಡೂ ಸಹ ಬೇರೆ ಬೇರೆ ಪಂಗಡಗಳು. ಲಿಂಗಾಯತ ಸಮುದಾಯ 12ನೇ ಶತಮಾನದಲ್ಲಿಯೇ ಬಸವಣ್ಣನವರಿಂದ ಸ್ಥಾಪಿಸಲ್ಪಟ್ಟಿದ್ದರೆ – ‘ವೀರಶೈವ’ ಈ ಉಗ್ರ ಶೈವಾಚಾರ್ಯ ಪಂಥದ ‘ವೀರ ಮಾಹೇಶ್ವರ ಸಂಘ’ದ ರೂಪಾಂತರ, ಇದರ ಅಸ್ತಿತ್ವ ಸುಮಾರು 13 ನೇ ಶತಮಾನ, ಹೋದ ಕಡೆಯಲ್ಲೆಲ್ಲ ದೇಶೀಯ ಪಂಥದವರ ಮೇಲೆ ಆಕ್ರಮಣ ನಡೆಸುತ್ತಾ ಬಂದಿದ್ದ ಈ ಪಂಥ, (ತಮಿಳುನಾಡಿನಲ್ಲಿ ಕಣ್ಣಪ್ಪನ ಪಂಥ ಆಂಧ್ರದಲ್ಲಿ ಸಿದ್ಧಪಂಥ) ಇಲ್ಲಿನ ಲಿಂಗಾಯತರ ಮೇಲೆಯೂ ಸವಾರಿ ಮಾಡಿದರು. ಶಿವ ಆರಾಧನೆಯ ಸಾಮಾನ್ಯ ಗುಣದಿಂದಾಗಿ, ಲಿಂಗಾಯತ ಮತ್ತು ವೀರ ಮಾಹೇಶ್ವರ ಸಂಘ ಸರಿಸುಮಾರು ಒಂದೇ ಎಂಬಂತಾಗಿ ಇವತ್ತು ಲಿಂಗಾಯತ ಮತ್ತು ವೀರಶೈವ ಪ್ರತ್ಯೇಕವಲ್ಲ ಬದಲಾಗಿ ಒಂದೇ ಪಂಗಡದ ಪರ್ಯಾಯ ಹೆಸರುಗಳು ಎಂಬಂತಾಗಿದೆ.
    — ಎಂ. ಎಂ. ಕಲಬುರ್ಗಿ

  • ದೇವದಾಸಿ ಪದ್ಧತಿ ಹುಟ್ಟುಕೊಂಡಿರುವುದು ನಿಮ್ಮ ಅಯೋಗ್ಯರ ಕಾಯಕ ಆಗಿತ್ತು. ಅಲ್ವಾ ಆರೂಡರೆ. ಇದೆಲ್ಲ ನಿಮ್ಮ ಸೋಗಲಾಡಿತನ. ಮಾತಿನ ಬಂಡವಾಳ ಹೂಡಿಕೆ ಮಾಡಲು ನೀವು ಅವಕಾಶಕ್ಕಾಗಿ ಕಾಯುತ್ತಿದ್ದೀರಿ

  • ಆ ರೂಢಿ ಬಿಡದೆ ಲಿಂಗಾಯತ ಹಿಡಿದು ಅದರ ಮೇಲೆ ಕಾಲಿಟ್ಟು ತುಳಿಯಲು ಹೊರಟ ಅರೂಢ ರಿಗೆ ಭಯ ಹುಟ್ಟಿದೆ ಅವರ ವೇದಾಂತ ಪ್ರೀತಿ ವಚನ ಮೇಲಿನ ದ್ವೇಷ ಎಲ್ಲವನ್ನು ಜನರು ನೋಡಿ ವಿರೋಧಿ ಮಾತನ್ನ ಆಡುತ್ತಿದ್ದಾರೆ ಎಂಬುದು ಗೊತ್ತಾಗುತ್ತೆ. ಬಸವ ಧರ್ಮದ ಒಪ್ಪಿಗೆ ಮಾತುಗಳು ಆಡುವದು ಮೀಸಲಾತಿಗೆ ಎಂದು ಹೇಳುವ ಒಳ್ಳೆ ಭಾವ ತೋರಿದ್ದಾರೆ. ಆದರೇ ಲಿಂಗಾಯತ ಧರ್ಮ ಜಾಗತಿಕ ಎಂದು ಒಪ್ಪುವುದಿಲ್ಲ. ಇವ್ರಿಗೆ ವೇದ ವೇ ಪ್ರಮಾಣ ವೈದಿಕ ರ ದೇವರು ಹೆಸರು ತಮ್ಮ ಹೊಟ್ಟೆ ತುಂಬಿಕೊಳ್ಳುವ ಮಾರ್ಗ ಎಂದು ತಿಳ್ಕೊಂಡು ನಡೆದ ಇಂದಿನ ಸ್ವಾಮಿ ವೇಷದಾರಿ ಮಾತುಗಳು ಎಲ್ಲರೂ ಆರೀತಿದ್ದಾರೆ. ಶರಣು 👏🏻👏🏻

Leave a Reply

Your email address will not be published. Required fields are marked *