ಬೀದರ:
ಕಲ್ಯಾಣ ಕರ್ನಾಟಕ ಪ್ರತಿಷ್ಠಾನವು ಸೇಡಂ ತಾಲ್ಲೂಕಿನ ಬಿಜನಳ್ಳಿಯಿಂದ ಬಸವಕಲ್ಯಾಣದವರೆಗೆ “ಕಲ್ಯಾಣ ನಡಿಗೆ-ಹರಳಯ್ಯ ಜ್ಯೋತಿಯಾತ್ರೆ” ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ.
‘ಹರಳಯ್ಯ ದಂಪತಿ ಬಸವಣ್ಣನವರಿಗೆ ಚಮ್ಮಾವುಗೆ ಅರ್ಪಿಸಿದ ಸ್ಮರಣಾರ್ಥ ಈ ಕಾರ್ಯಕ್ರಮ ವಚನ ಸಾಹಿತ್ಯವನ್ನು ಮನೆ-ಮನೆಗೆ ತಲುಪಿಸುವ ಮಹತ್ವದ ಉದ್ದೇಶವನ್ನು ಹೊಂದಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಳೆಯುತ್ತಿರುವ ಮಕ್ಕಳಲ್ಲಿ ದೇಶಭಕ್ತಿ, ಸಂಸ್ಕಾರ, ಸಂಸ್ಕೃತಿ ಹಾಗೂ ಉನ್ನತ ಮೌಲ್ಯಗಳನ್ನು ಬೆಳೆಸುವುದು ಇದರ ಪ್ರಮುಖ ಗುರಿಯಾಗಿದೆ. ಎಲ್ಲರೂ ಎಲ್ಲರನ್ನೂ ಪ್ರೀತಿಸುವ ಹಾಗೂ ಗೌರವಿಸುವ “ವಿಶ್ವ ಕುಟುಂಬ” ಭಾವನೆಯನ್ನು ಜನಮನದಲ್ಲಿ ಬಿತ್ತುವುದು ಇದರ ಆಶಯವಾಗಿದೆ.
ದುರ್ಗುಣ ಮತ್ತು ದುಶ್ಚಟಗಳ ಭಿಕ್ಷೆಯನ್ನು ಕೇಳಿ ಜನರಲ್ಲಿ ಸದ್ಗುಣ ಮತ್ತು ಸನ್ನಡತೆಯ ದೀಕ್ಷೆ ನೀಡುವ ಸಂಕಲ್ಪವನ್ನು ಈ ಕಾರ್ಯಕ್ರಮ ಹೊತ್ತಿದ್ದು, 12ನೇ ಶತಮಾನದಲ್ಲಿ ಶರಣರು ತಮ್ಮ ಪ್ರಾಣ ತೆತ್ತು ನಮಗೆ ಬಿಟ್ಟು ಹೋದ ವಚನ ಸಾಹಿತ್ಯವನ್ನು ಮನೆ-ಮನಗಳಲ್ಲಿ ಹರಡುವ ಉದ್ದೇಶದಿಂದ ಬಸವಣ್ಣನವರ 20 ಸಾವಿರ ಕಿರುಹೊತ್ತಿಗೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇದರೊಂದಿಗೆ ಕೃಷಿ, ಪರಿಸರ, ಆರೋಗ್ಯ, ಸೌಹಾರ್ದತೆ ಹಾಗೂ ಭಾವೈಕ್ಯತೆ ಕುರಿತ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ.

ಉದ್ಘಾಟನಾ ಸಮಾರಂಭವು ಫೆಬ್ರವರಿ 15 ಮಹಾಶಿವರಾತ್ರಿಯಂದು ಬಿಜನಳ್ಳಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಮುಂಜಾನೆ 11 ಗಂಟೆಗೆ ಯಾತ್ರೆಯ ಉದ್ಘಾಟನೆ ನಡೆಯಲಿದೆ. ಅಂದಿನಿಂದ ಆರಂಭವಾಗುವ ಕಲ್ಯಾಣ ನಡಿಗೆ ಸುಮಾರು 15 ಹಳ್ಳಿಗಳ ಮೂಲಕ ಸಾಗಲಿದೆ. ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮುಂಜಾನೆ ಲಿಂಗದೀಕ್ಷೆ, ಶಾಲಾ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಕಾರ್ಯಕ್ರಮಗಳು, ಕಲ್ಯಾಣ ನಡಿಗೆ, ಸಂಜೆ 6 ಗಂಟೆಗೆ ಉಪನ್ಯಾಸ, ರಾತ್ರಿ 8 ಗಂಟೆಗೆ ಬಳ್ಳಾರಿ ಜಿಲ್ಲೆಯ ಸಿರಿಗೇರಿಯ “ಧಾತ್ರಿ ಕಲಾ ತಂಡ”ದಿಂದ “ಕಲ್ಯಾಣ ಕ್ರಾಂತಿ” ನಾಟಕ ಪ್ರದರ್ಶನ ಇರುತ್ತದೆ.
ಈ ಯಾತ್ರೆಯು ಅನೇಕ ಹಳ್ಳಿಗಳ ಮೂಲಕ ಸಾಗುತ್ತ ಜನಜಾಗೃತಿ ಮೂಡಿಸಿ, ಮಾರ್ಚ್ 1, 2026 ರಂದು ಬಸವಕಲ್ಯಾಣದಲ್ಲಿ ಸಮಾರೋಪ ಹಾಗೂ “ಶರಣ ಸಂಸತ್” ಸಮಾವೇಶದೊಂದಿಗೆ ಪೂರ್ಣಗೊಳ್ಳಲಿದೆ. ಅಂದು ಬೆಳಿಗ್ಗೆ 10-30ರಿಂದ ಸಂಜೆ ರವರೆಗೆ ಬಸವ ಧರ್ಮಪೀಠ, ಮಹಾಮನೆ ಮಹಾಮಠ ಹಾಗೂ 108 ಅಡಿ ಬಸವ ಪುತ್ಥಳಿಯಿಂದ ಶೋಭಿಸುವ ಬಸವಕಲ್ಯಾಣದ ಆವರಣದಲ್ಲಿ ಭವ್ಯ ಕಾರ್ಯಕ್ರಮ ನಡೆಯಲಿದೆ.
770 ಅಮರ ಗಣಂಗಳಿಗೆ 770 ಶರಣ-ಶರಣೆಯರಿಂದ ಶರಣ ವಂದನೆ, ಶರಣಾರತಿ ಹಾಗೂ ವಚನ ಪಠಣ ಜರುಗಲಿವೆ. ಬಸವಾದಿ ಶರಣರು ಗೈದ ತ್ಯಾಗ, ನಡೆಸಿದ ಕಾರ್ಯ ಮತ್ತು ಅವರ ವಿಶ್ವೋನ್ನತ ವಿಚಾರಧಾರೆಗಳನ್ನು ವಚನಾಮೃತದ ಮೂಲಕ ಜನಮನದಲ್ಲಿ ಬಿತ್ತುವ ಮಹತ್ವದ ಪ್ರಯತ್ನವೇ ಕಲ್ಯಾಣ ನಡಿಗೆಯಾಗಿದೆ. ಈ ಸದುದ್ದೇಶದ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸುವಂತೆ ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಕೋರಿದೆ. ಗೋಷ್ಠಿಯಲ್ಲಿ ರಾಜೇಂದ್ರ ಜೊನ್ನಿಕೇರಿ, ಪಂಡಿತ ಬಾಳೂರೆ, ಧನರಾಜ ಭುಯ್ಯಾ, ಬಸವರಾಜ ಪಾಟೀಲ, ಮಲ್ಲಿಕಾರ್ಜುನ ಬುಕ್ಕಾ ಇದ್ದರು.

ತುಂಬಾ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವ ತಮಗೆ ಅನಂತ ಭಕ್ತಿಯ ಶರಣು ಶರಣಾರ್ಥಿಗಳು