ಸಿಂದಗಿ:
ಕಾಲಜ್ಞಾನವನ್ನು ಇಡೀ ಜಗತ್ತಿಗೆ ಪಸರಿಸಿ ಸಮಾನತೆಯ ದಾರಿಯನ್ನು ತೋರಿದ ಮಹಾನ್ ಚಿಂತಕ ಕೊಡೇಕಲ್ ಬಸವಣ್ಣ ಎಂದು ಪಿ.ವಿ. ಮಹಲಿನಮಠ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಕಾಲಜ್ಞಾನಿ ಕೊಡೇಕಲ್ ಬಸವಣ್ಣ” ವಿಷಯವಾಗಿ ಉಪನ್ಯಾಸ ನೀಡಿದರು.
12ನೇ ಶತಮಾನದ ವಚನ ಚಳುವಳಿಯ ಸಾಂಸ್ಕೃತಿಕ ಹಾಗೂ ಸಾಮಾಜಿಕ ಮಹತ್ವವನ್ನು ವಿಶ್ಲೇಷಿಸಿದ ಅವರು, ಸಂಸ್ಕೃತವನ್ನು ದೇವಭಾಷೆ ಎಂದು ಪರಿಗಣಿಸಿ ಪಂಡಿತವರ್ಗಕ್ಕೆ ಮಾತ್ರ ಸೀಮಿತಗೊಳಿಸಿದ್ದ ಕಾಲಘಟ್ಟದಲ್ಲಿ, ಶರಣರು ಅದನ್ನು ಜನಭಾಷೆಯ ಮೂಲಕ ಸಾಮಾನ್ಯ ಜನತೆಗೆ ತಲುಪಿಸಿದರು. ಇದು ಕೇವಲ ಸಾಹಿತ್ಯಿಕ ಪರಿವರ್ತನೆಯಲ್ಲ; ಸಾಮಾಜಿಕ ಸಮಾನತೆಯ ಘೋಷಣೆಯೂ ಆಗಿತ್ತು.
ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಚಳುವಳಿಯೇ ವಚನ ಸಾಹಿತ್ಯದ ಸುವರ್ಣಯುಗಕ್ಕೆ ನಾಂದಿ ಹಾಡಿತು ಎಂದು ಹೇಳಿದರು. ಕಲ್ಯಾಣದಿಂದ ಶರಣರು ನಿರ್ಗಮಿಸಿದ ನಂತರ ದಿಗ್ಗಿ ಸಂಗಮನಾಥ (ಶಹಾಪುರ) ಪ್ರದೇಶದಲ್ಲಿ ಅವರ ಉಪಸ್ಥಿತಿಯ ಗುರುತುಗಳಿವೆ. ನಂತರ ನಾಗಾವಿ (ಚಿತ್ತಾಪುರ ತಾಲೂಕು) ಪ್ರದೇಶದಲ್ಲಿ ಧರ್ಮಕಲ್ಯಾಣ ಎಂಬ ಉಲ್ಲೇಖಗಳು ದೊರೆಯುತ್ತವೆ. ಕಲ್ಯಾಣ ಬಸವಣ್ಣನಿಂದ ಮುಂದಿನ ಅವಧಿಯಲ್ಲಿ ಕೊಡೇಕಲ್ ಬಸವಣ್ಣನಾದ ಎಂಬ ಸಂಶೋಧನಾತ್ಮಕ ಪ್ರಸ್ತಾವನೆಗಳಿವೆ ಎಂದು ತಿಳಿಸಿದರು.

ಬಸವಣ್ಣನು ಕೊಡೇಕಲ್‌ನಲ್ಲಿ ಸುಮಾರು 12 ವರ್ಷ ವಾಸಿಸಿದ್ದಿರಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಇಂದಿಗೂ ಭಕ್ತರ ಮನೆಗಳಲ್ಲಿ ಸಂರಕ್ಷಿತವಾಗಿರುವ ವಚನಗಳ ಸಾಹಿತ್ಯ, ಸ್ಥಳೀಯ ಆಚರಣೆಗಳು ಹಾಗೂ ಪಾರಂಪರಿಕ ಸಾಕ್ಷ್ಯಗಳು ಈ ವಿಚಾರಕ್ಕೆ ಬೆಂಬಲ ನೀಡುತ್ತವೆ ಎಂದರು. ಈ ಕುರಿತು ಗಂಭೀರ ಸಂಶೋಧನೆ ನಡೆಯಬೇಕೆಂದು ಅಭಿಪ್ರಾಯಪಟ್ಟರು.
ಕೊಡೆ ಆಕಾರದ ಶಿಲೆಯಿಂದ ಈ ಪ್ರದೇಶಕ್ಕೆ ಕೊಡೇಕಲ್ ಎಂಬ ಹೆಸರು ಬಂದಿರುವುದು ಇತಿಹಾಸದ ವಿಶೇಷತೆಯಾಗಿದೆ. ಶಿವರಾತ್ರಿ ಸಂದರ್ಭದಲ್ಲಿ ವಚನ ಕಟ್ಟನ್ನು ತೆರೆದು ಕಡ್ಡಿ ಹಾಕಿ ಭವಿಷ್ಯ ತಿಳಿಯುವ ಕಾಲಜ್ಞಾನ ಸಂಪ್ರದಾಯ ಇಂದಿಗೂ ಆಚರಣೆಯಲ್ಲಿದೆ. ಯುಗಾದಿ ಸಂದರ್ಭದಲ್ಲಿ ನಡೆಯುವ ಗಂಧಲೇಖನದಲ್ಲಿ 18 ಜಾತಿಗಳಿಗೆ ಸಮಾನ ಅವಕಾಶ ಕಲ್ಪಿಸುವ ಪರಂಪರೆ, ಶರಣ ಚಳುವಳಿಯ ಸಮಾನತೆಯ ತತ್ತ್ವಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದರು.
ಕೊಡೇಕಲ್ ಬಸವಣ್ಣ ಕೇವಲ ಕಾಲಜ್ಞಾನಿ ಅಲ್ಲ; ಸಾಮಾಜಿಕ ಪರಿವರ್ತನೆಗೆ ದಿಕ್ಕು ತೋರಿದ ಧೀಮಂತ ಸಮಾಜ ಸುಧಾರಕ ಎಂದು ಪಿ.ವಿ. ಮಹಲಿನಮಠ ಅಭಿಪ್ರಾಯಪಟ್ಟರು.
ಸೊನ್ನಲಗಿ ಸಿದ್ದರಾಮರ ತತ್ವಚಿಂತನೆ:
ಕಾರ್ಯಕ್ರಮದಲ್ಲಿ ಇನ್ನೊರ್ವ ಉಪನ್ಯಾಸಕರಾದ ಅಶೋಕ ಬಿರಾದಾರ್ ಅವರು, ಸೊನ್ನಲಗಿ ಸಿದ್ದರಾಮರ ಜೀವನ ಮತ್ತು ಚಿಂತನೆಗಳ ಕುರಿತು ಉಪನ್ಯಾಸ ನೀಡಿದರು. 12ನೇ ಶತಮಾನದ ಶರಣ ಚಳುವಳಿಯಲ್ಲಿ ಸಿದ್ದರಾಮರ ಪಾತ್ರ ಅತ್ಯಂತ ಪ್ರಭಾವಶಾಲಿಯಾಗಿದೆ ಎಂದು ಹೇಳಿದರು.

ಭಕ್ತಿ ಮತ್ತು ಸಮಾಜಮುಖಿ ಚಿಂತನೆಗಳನ್ನು ಸಮನ್ವಯಗೊಳಿಸಿ, ವಚನಗಳ ಮೂಲಕ ಜನಸಾಮಾನ್ಯರಿಗೆ ಆಧ್ಯಾತ್ಮಿಕ ಜಾಗೃತಿ ಮೂಡಿಸಿದ ಮಹಾನ್ ಶರಣರಲ್ಲಿ ಸಿದ್ದರಾಮರು ಪ್ರಮುಖರು. ಅವರು ಸಮಾಜದಲ್ಲಿದ್ದ ಅಸಮಾನತೆ, ಅಂಧಶ್ರದ್ಧೆ ಮತ್ತು ಜಾತಿಭೇದಗಳ ವಿರುದ್ಧ ಧ್ವನಿಯೆತ್ತಿದ ಧೈರ್ಯಶಾಲಿ ಚಿಂತಕರಾಗಿದ್ದರು. “ಕಾಯಕವೇ ಕೈಲಾಸ”ಹಾಗೂ ದಾಸೋಹ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದು ವಿವರಿಸಿದರು.
ಸಿದ್ಧರಾಮರ ವಚನಗಳಲ್ಲಿ ಮಾನವೀಯ ಮೌಲ್ಯಗಳು, ಶುದ್ಧ ಭಕ್ತಿ ಹಾಗೂ ನೈತಿಕತೆ ಸ್ಪಷ್ಟವಾಗಿ ಪ್ರತಿಫಲಿಸುತ್ತವೆ. ಇಂದಿನ ಯುವಜನತೆ ಅವರ ಆದರ್ಶಗಳನ್ನು ಜೀವನದಲ್ಲಿ ಅನುಸರಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಶರಣಬಸವ ಜೋಗೂರ್ ಮಾತನಾಡಿ, ದತ್ತಿ ಉಪನ್ಯಾಸಗಳು ಶರಣರ ಬದುಕಿನ ಮೌಲ್ಯಗಳನ್ನು ಅರಿಯುವ ವೇದಿಕೆಯಾಗಿವೆ. ಶಿಕ್ಷಕರು ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ವಚನ ಸಾಹಿತ್ಯದ ಅಧ್ಯಯನದ ಮೂಲಕ ಜೀವನ ಮೌಲ್ಯಗಳನ್ನು ಅರಿತುಕೊಳ್ಳಬೇಕು. ವಚನಗಳಲ್ಲಿ ಬದುಕನ್ನು ರೂಪಿಸುವ ಶಕ್ತಿ ಅಡಗಿದೆ ಎಂದು ಹೇಳಿದರು.
ಉಪನ್ಯಾಸಕರಾದ ಸುಧಾಕರ ಚವ್ಹಾಣ, ವಿರೇಶ ಇವಣಿ ಸೇರಿದಂತೆ ಸುಜಾತಾ ಕಿಣಗಿ, ಪ್ರಸನ್ನ ಜೋಗುರ, ಪ್ರಶಾಂತ ಕುಲಕರ್ಣಿ, ಆರ್.ಎ. ಹಾಲಕೇರಿ, ಚೆನ್ನು ಕತ್ತಿ, ಭೋಧಕ-ಭೋಧಕೇತರ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
