ಬಸವತತ್ವ ಪಾಲಿಸಿ ಬದುಕಿದ ಭೀಮಣ್ಣ ಖಂಡ್ರೆ: ಮಲ್ಲಿಕಾರ್ಜುನ ಖರ್ಗೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಕೆಳವರ್ಗದವರನ್ನು ಮೇಲಕ್ಕೆ ತರಲು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವನ್ನು ಭೀಮಣ್ಣ ಖಂಡ್ರೆ ಮನಸಾರೆ ಪಾಲಿಸಿ ಬದುಕಿದರು, ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯಿಂದ ನಗರದ ಅರಮನೆ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ‘ಲೋಕನಾಯಕ ಲಿಂಗೈಕ್ಯ ಡಾ.ಭೀಮಣ್ಣ ಖಂಡ್ರೆ-ನುಡಿ ನಮನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಜೀವನದುದ್ದಕ್ಕೂ ಬಸವ ತತ್ವ ಪ್ರಚಾರ ಮಾಡಿ, ಅದರಂತೆಯೇ ನಡೆದವರು ಭೀಮಣ್ಣ ಖಂಡ್ರೆ. ಅವರ ಬದುಕು ಮತ್ತು ಅವರು ನಂಬಿದ ಬಸವ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕ, ಎಂದು ಖರ್ಗೆ ಹೇಳಿದರು.

ಖಂಡ್ರೆ ಅವರಿಗೆ ನುಡಿ ನಮನ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಭೀಮಣ್ಣ ಖಂಡ್ರೆ ಗಾಂಧೀಜಿ ಅವರಿಂದ ಪ್ರಭಾವಿತರಾಗಿ ಸ್ವಾತಂತ್ರ‍್ಯ ಹೋರಾಟದಲ್ಲಿ ಸಕ್ರಿಯರಾಗಿದ್ದಲ್ಲದೆ, ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದವರು. ಹೈದ್ರಾಬಾದ್ ಕರ್ನಾಟಕ ವಿಮೋಚನೆ ಮತ್ತು ಏಕೀಕರಣದ ಚಳವಳಿಯಲ್ಲಿ ಭಾಗವಹಿಸಿ, ಜನಪರ ಹೋರಾಟಗಾರರೆಂದೇ ಗುರುತಿಸಿಕೊಂಡಿದ್ದರು ಎಂದರು.

ಕರ್ನಾಟಕ ರತ್ನ

ಈ ವೇಳೆ, ಇತಿಹಾಸ ತಜ್ಞ ತಲಕಾಡು ಚಿಕ್ಕರಂರೇಗೌಡ ಸೇರಿ ಮತ್ತಿತರರು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಭೀಮಣ್ಣ ಖಂಡ್ರೆ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ನೀಡಬೇಕೆಂದು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಅವರು ಭೀಮಣ್ಣ ಖಂಡ್ರೆ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ನೀಡುವ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡುವುದಾಗಿ ಭರವಸೆ ನೀಡಿದರು.

ಹಾಸ್ಟೆಲ್ ನಿರ್ಮಾಣ

ಬಡ ಮಕ್ಕಳಿಗೆ ಬೆಂಗಳೂರಿನಲ್ಲಿ ಹಾಸ್ಟೆಲ್ ನಿರ್ಮಾಣ ಮಾಡುವ ಭೀಮಣ್ಣ ಖಂಡ್ರೆ ಅವರ ಕನಸು ನನಸಾಗಿಸಲು ಅಗತ್ಯ ಜಾಗ ಮಂಜೂರು ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

“ಇತ್ತೀಚೆಗೆ ಈಶ್ವರ್ ಖಂಡ್ರೆ ಅವರು ನನ್ನನ್ನು ಭೇಟಿ ಮಾಡಿ, ವೀರಶೈವ ಮಹಾಸಭಾ ವತಿಯಿಂದ ಬೆಂಗಳೂರಿನಲ್ಲಿ ಬಡ ಮಕ್ಕಳು, ಹೊರಗಡೆಯಿಂದ ಬಂದ ಮಕ್ಕಳಿಗೆ ಒಂದು ಹಾಸ್ಟೆಲ್ ವ್ಯವಸ್ಥೆ ಆಗಬೇಕು ಎಂಬುದು ನಮ್ಮ ತಂದೆಯವರ ಕನಸಾಗಿತ್ತು. ಅದಕ್ಕೆ ಬೇಕಾದ ಜಾಗ ಒದಗಿಸಿಕೊಡಬೇಕು ಎಂದು ತಿಳಿಸಿದರು. ಈ ಕೆಲಸವನ್ನು ನಮ್ಮ ಸರ್ಕಾರದ ವತಿಯಿಂದ ಮಾಡಿಕೊಡುತ್ತೇವೆ ಎಂದು ಈ ಭವ್ಯ ಸಭೆಯಲ್ಲಿ ತಿಳಿಸಲು ಬಯಸುತ್ತೇನೆ, ಎಂದು ಹೇಳಿದರು.

ಪೂಜ್ಯರ, ಗಣ್ಯರ ನಮನ

ಜನಪರ ಕಾಳಜಿ ಇದ್ದ ಭೀಮಣ್ಣ ಖಂಡ್ರೆ ಅವರ ಬದುಕು ಅವಿಸ್ಮರಣೀಯ ಅಧ್ಯಾಯ. ಅವರ ಅಗಲಿಕೆಯಿಂದ ಸಮಾಜ ಒಬ್ಬ ಹಿರಿಯ ಮುತ್ಸದ್ದಿಯ ಮಾರ್ಗದರ್ಶನವನ್ನು ಕಳೆದುಕೊಂಡಿದ್ದೆವು
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಭೀಮಣ್ಣ ಖಂಡ್ರೆ ವ್ಯಕ್ತಿಯಲ್ಲ, ಸಮಾಜದ ಶಕ್ತಿಯಾಗಿದ್ದರು. ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಮತ್ತು ಔದ್ಯಮಿಕ ಕ್ಷೇತ್ರಕ್ಕೆ ಅವರ ಕೊಡುಗೆ ದೊಡ್ಡದು’ ಎಂದು ತಿಳಿಸಿದರು.

ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಫಲಾಹಾರ ಮಾಡುತ್ತಾ ಶತಾಯುಷಿಗಳಾಗಿ ಬದುಕಿದ್ದ ಭೀಮಣ್ಣ ಖಂಡ್ರೆ ಯೋಗಿಯಂತಿದ್ದರು. ಅವರು ರಾಜೀ ಮಾಡಿಕೊಂಡಿದ್ದರೆ ಮುಖ್ಯಮಂತ್ರಿಯೇ ಆಗಿರುತ್ತಿದ್ದರು. ಅವರು ಎಂದೂ ರಾಜೀ ಮಾಡಿಕೊಂಡವರಲ್ಲ. ಹೀಗಾಗಿಯೇ ತಮ್ಮ ಗುರುಗಳು ಅವರಿಗೆ ಲೋಕನಾಯಕ ಎಂದು ಬಿರುದು ನೀಡಿದ್ದರು’ ಎಂದರು.

ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸರ್ಕಾರ ಪ್ರಶಸ್ತಿ ನೀಡುವುದು ಸಾಮಾನ್ಯ ಆದರೆ, ಜನರೇ ನೀಡುವ ಪ್ರಶಸ್ತಿ ಅಪರೂಪದ್ದು. ಕರ್ನಾಟಕದ ಲೋಕನಾಯಕ ಎಂದು ಜನರಿಂದ ಪ್ರಶಸ್ತಿ ಪಡೆದ ಭೀಮಣ್ಣ ಖಂಡ್ರೆ ಹಿರಿಮೆ ಅಸಾಧಾರಣವಾದ್ದು’ ಎಂದು ಹೇಳಿದರು.

ಶಾಸಕರ ಭವನದಲ್ಲಿ ಕೊಠಡಿ ಸಿಗದಿದ್ದಾಗ ಮುಖ್ಯಮಂತ್ರಿ ಕುರ್ಚಿಯಲ್ಲೇ ಭೀಮಣ್ಣ ಖಂಡ್ರೆ ಕುಳಿತಿದ್ದರು. ಕೊಠಡಿ ನೀಡಲಾಗಿದೆ ಎಂದು ಘೋಷಿಸಿದ ಬಳಿಕವೇ ಎದ್ದಿದ್ದರು. ಯಾರಿಗೂ ಅಂಜುತ್ತಿರಲಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರೀಶ್ವರ ದೇಶೀಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ, ಭಾಲ್ಕಿಯ ಬಸವಲಿಂಗ ಪಟ್ಟದೇವರು ಸೇರಿದಂತೆ ನಾಡಿನ ಅನೇಕ ಮಠಾಧೀಶರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ವಿ. ಸೋಮಣ್ಣ, ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಎಂ.ವೀರಪ್ಪ ಮೊಯ್ಲಿ, ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಹಾಲಿ, ಮಾಜಿ ಸಚಿವರು, ಶಾಸಕರು, ಸಂಸದರು ಪಾಲ್ಗೊಂಡು ಭೀಮಣ್ಣ ಖಂಡ್ರೆ ಅವರಿಗೆ ನುಡಿ ನಮನ ಸಲ್ಲಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
1 Comment
  • ಹಾಗೆ ತನ್ನ ಸ್ವಾರ್ಥ ರಾಜಕೀಯ ಲಾಭಕ್ಕಾಗಿ , ಅಖಂಡ ಲಿಂಗಾಯತ ಧರ್ಮದಲಿ , ವೀರಶೈವ ದ ವಿಷ ಬೀಜ ಪದ ಜೋಡಿಸಿದ್ದು ತಪ್ಪು ಮಾಡಿದ್ದಾರೆ

Leave a Reply

Your email address will not be published. Required fields are marked *