ಕೊಪ್ಪಳ:
12ನೇ ಶತಮಾನದ ಮಹಾನ್ ಶರಣ ಮಡಿವಾಳ ಮಾಚಿದೇವರು 3 ಕೋಟಿಗೂ ಹೆಚ್ಚು ವಚನಗಳನ್ನು ರಚಿಸಿದವರು. ಅವರದು ಎಲ್ಲರಿಗೂ ಸ್ಪೂರ್ತಿಯಾಗುವ ವ್ಯಕ್ತಿತ್ವವಾಗಿತ್ತು ಎಂದು ಚಿತ್ರದುರ್ಗ ಸಂಸ್ಥಾನಮಠದ ಡಾ.ಬಸವಮಾಚಿದೇವ ಮಹಾಸ್ವಾಮಿ ಮಾತನಾಡಿದರು.
ಅವರು ಸೋಮವಾರ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಮಡಿವಾಳ ಮಾಚಿದೇವ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶರಣ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಚಿದೇವರು ತಮ್ಮ ಜೀವನದ ಮೂಲಕ ಸಮಾನತೆ, ಪರಿಶ್ರಮ ಮತ್ತು ಭಕ್ತಿಯ ಮಹತ್ವವನ್ನು ಸಾರಿದರು. ಜಾತಿ-ಮತ ಭೇದವಿಲ್ಲದೆ ದೇವರ ಮುಂದೆ ಎಲ್ಲರೂ ಸಮಾನರು ಎಂಬ ಸಂದೇಶವನ್ನು ನೀಡಿದರು.
ಮಾಚಯ್ಯ ಅವರು ಬಸವಣ್ಣನವರ ಅನುಭವ ಮಂಟಪದ ಶರಣರಲ್ಲಿ ಪ್ರಮುಖರಾಗಿದ್ದರು. ಅವರ ವಚನಗಳು ನಮ್ಮ ಜೀವನಕ್ಕೆ ಮಾರ್ಗದರ್ಶಕವಾಗಿವೆ. ಶ್ರಮವೇ ಶ್ರೇಷ್ಠ ಎಂಬ ತತ್ವವನ್ನು ಅವರು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಸಮಾಜದಲ್ಲಿ ಹಿಂದುಳಿದವರ ಪರವಾಗಿ ನಿಂತು ಸಮಾನ ಹಕ್ಕುಗಳಿಗಾಗಿ ಹೋರಾಡಿದರು ಎಂದು ಸ್ವಾಮೀಜಿ ಹೇಳಿದರು.

ತಮ್ಮ ವಚನಗಳ ಮೂಲಕ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಜನರಿಗೆ ತಿಳಿಸಿದರು. ಮಡಿವಾಳ ಮಾಚಿದೇವರು ಬಸವಣ್ಣನವರ ಬೆನ್ನೆಲುಬಾಗಿದ್ದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಸದಸ್ಯರಾದ ಜೆ.ಸಿ. ರಾಜಶೇಖರ ಬಳ್ಳಾರಿ ಅವರು ಮಾತನಾಡುತ್ತಾ, ಮಾಚಿದೇವರು “ಭಕ್ತಿಗಿಂತ ಕಾಯಕ ಶ್ರೇಷ್ಠ” ಎಂದು ಬಾಳಿದವರು. ಅವರು ಕಲ್ಯಾಣದಲ್ಲಿ ಶಿವಶರಣರ ಬಟ್ಟೆಗಳನ್ನು ಮಾತ್ರ ತೊಳೆಯುತ್ತಿದ್ದರು. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಅವರು ಸಾರಿದರು.
ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವವಿದೆ. ಹಾಗಾಗಿ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಉಜ್ವಲವಾಗಿ ರೂಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಜಿಲ್ಲಾಧಿಕಾರಿ ಆಪ್ತಸಹಾಯಕಿ ವಿಜಯಲಕ್ಷ್ಮಿ, ಶಿರಸ್ತೇದಾರ ಮಹಾವೀರ, ನಗರಸಭೆಯ ಮಾಜಿ ಅಧ್ಯಕ್ಷ ಅಜ್ಮದ್ ಪಟೇಲ್, ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಎಸ್.ಮಡಿವಾಳರ, ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಶರಣಪ್ಪ ಕುಣಿಕೇರಿ, ತಾಲೂಕು ಮಡಿವಾಳ ಯುವಕ ಸಂಘದ ಉಪಾಧ್ಯಕ್ಷ ಈರಣ್ಣ ಮಡಿವಾಳ, ತಾಲೂಕು ಪ್ರಧಾನ ಕಾರ್ಯದರ್ಶಿ ಅಮರೇಶ ಮಡಿವಾಳರ, ಸಮಾಜದ ಮುಖಂಡರಾದ ಎಮ್.ಕೆ.ಹನುಮಂತಪ್ಪ, ರಾಮಣ್ಣ, ಬಸವರಾಜ, ದುರಗೇಶ ಜಿ, ಹುಲಗಪ್ಪ ಜಿ, ಮಂಜುಳಾ, ಸಂಗಮೇಶ, ಬಾಬಣ್ಣ, ಫಕೀರಪ್ಪ, ಶಿವಪ್ಪ, ದ್ಯಾಮಣ್ಣ ಸೇರಿದಂತೆ ಸಮಾಜದ ಇತರೆ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

ಮೆರವಣಿಗೆ:
ಜಯಂತಿ ಅಂಗವಾಗಿ ನಗರದ ಶ್ರೀ ಗವಿಮಠದಿಂದ ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನದವರೆಗೆ ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು, ಸಮುದಾಯದ ಮುಖಂಡರು ಭಾಗವಹಿಸಿದ್ದರು.

