ಧಾರವಾಡ
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ಬಸವ ಮೀಡಿಯಾದ ಸುಜಾತ ಶೆಟ್ಟರ್ ಅವರ ಜೊತೆ ಸಂವಾದದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಹುಬ್ಬಳ್ಳಿ-ಧಾರವಾಡ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ನಡಕಟ್ಟಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?
ಬದ್ಧತೆಯುಳ್ಳ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಸಿಕೊಳ್ಳಬೇಕು. ನಿಜವಾದ ಶರಣ, ಲಿಂಗನಿಷ್ಠೆಯುಳ್ಳ, ನಿಜಾಚರಣೆ ಹೊಂದಿರುವವರು ಈ ಕೆಲಸ ಮಾಡಬೇಕು. ಆದರೆ ಬಸವ ಸಂಘಟನೆಗಳು ರಾಜಕೀಯ ಉದ್ದೇಶಕ್ಕೆ ಬಳಕೆಯಾಗದಂತೆ ಎಚ್ಚರವಹಿಸಬೇಕು.
ಇದಕ್ಕೆ ತರಬೇತಿಯ ಅಗತ್ಯವಿದೆಯೇ?
ಖಂಡಿತ ಅಗತ್ಯವಿದೆ. ಇದೊಂದು ಹೊಸ ಅನುಭವವಾಗಿರುವುದರಿಂದ ಸೂಕ್ತವಾದ ವಿವೇಚನೆ ಮೂಡಿಸಬೇಕಾಗಿದೆ. ಆದ್ದರಿಂದ ತರಬೇತಿಯ ಅಗತ್ಯವಿದೆ.
ಬಸವ ಶಕ್ತಿ ಸಮಾವೇಶದ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ
ರಾಜಕೀಯ, ಚುನಾವಣೆಗಳ ಬಗ್ಗೆ ಸರಿಯಾದ ಅರಿವು ಮೂಡಿಸುವಂತಹ ಪ್ರಯತ್ನ ನಡೆಯಬೇಕು.
ನಾವು ಬಸವತತ್ವ ಬಗ್ಗೆ ತಿಳಿಸಬೇಕೆಂದರೆ ಬರೀ ವಚನಗಳ ವಿಶ್ಲೇಷಣೆ ಮಾಡಿದರೆ ಸಾಲದು. ಅದರ ಜೊತೆಗೆ ಯೋಗಶಿಕ್ಷಣ, ಇಷ್ಟಲಿಂಗ ಪೂಜೆ ಹೀಗೆ ವಿವಿಧ ವಿಚಾರಗಳನ್ನೂ ತಿಳಿಸಬೇಕು.
ಅದೇ ರೀತಿಯ ವಿಸ್ತಾರವಾದ ಪ್ರಯತ್ನ ಇಲ್ಲೂ ನಡೆಯಬೇಕು.
ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತ್ತಿರಾ?
ನಮ್ಮಲ್ಲಿ ಅನೇಕ ಬಸವತತ್ವದ ಕಾರ್ಯಕ್ರಮಗಳು ನಡೆಯುತ್ತವೆ. ಬಸವಶಕ್ತಿ ಶಿಬಿರ, ಸಮಾವೇಶಗಳಿಗೆ ಖಂಡಿತ ಅನೇಕರು ಭಾಗವಹಿಸುತ್ತಾರೆ.
ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?
ಖಂಡಿತ ನೆರವಾಗುತ್ತೇನೆ. ಇಂತಹ ಸಮಾವೇಶಗಳು ಮೇಲಿಂದ ಮೇಲೆ ನಡೆಯಬೇಕು. ಇದರಿಂದ ಎಲ್ಲರಲ್ಲೂ ಶರಣಪ್ರಜ್ಞೆಯನ್ನು ಮೂಡಿಸಲು ಸಾಧ್ಯವಾಗುತ್ತದೆ.
