ಗುರುವಿನ ಆಯ್ಕೆಯಲ್ಲಿ ಜಾಗ್ರತೆ ವಹಿಸಿ: ಪ್ರಭುದೇವ ಸ್ವಾಮೀಜಿ ಸಲಹೆ

ಬೀದರ:

ಭಕ್ತರು ಗುರುವಿನ ಆಯ್ಕೆಯಲ್ಲಿ ಜಾಗ್ರತೆ ವಹಿಸಬೇಕು ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಸಲಹೆ ಮಾಡಿದರು.

ಇಲ್ಲಿಯ ಲಿಂಗಾಯತ ಮಹಾ ಮಠದಲ್ಲಿ ಸೋಮವಾರ ಆಯೋಜಿಸಿದ್ದ 272ನೇ ಶರಣ ಸಂಗಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ತಮ್ಮ ಪಾಂಡಿತ್ಯ ಮೆರೆಯುವ ಗುರುವಿನಿಂದ ಏನೂ ಉಪಯೋಗವಿಲ್ಲ. ನಮ್ಮನ್ನು ನಮಗೆ ಅರಿಯುವಂತೆ ಮಾಡಿ ಉದ್ಧರಿಸುವ ಗುರು ಬೇಕು ಎಂದು ಹೇಳಿದರು.

ಗುರು ಜ್ಞಾನಿ, ಅನುಭಾವಿ, ಕರುಣಾಮಯಿ ಹಾಗೂ ಬೋಧನಾ ಕಲೆ ಹೊಂದಿದವರಾಗಿರಬೇಕು ಎಂದು ತಿಳಿಸಿದರು.

ಮನುಷ್ಯ ಮನೆಯ ಕಸ ಹಾಗೂ ಮನದ ಕಸ ಮತ್ತೆ ಮತೆ ಸ್ವಚ್ಛಗೊಳಿಸುತ್ತಿರಬೇಕು. ಇಲ್ಲವಾದರೆ ಮನೆ ತಿಪ್ಪೆಗುಂಡಿ, ಮನಸ್ಸು ಗೊಂದಲದ ಗೂಡಾಗುತ್ತದೆ ಎಂದು ತಿಳಿಸಿದರು.

ಬೆಳೆವ ಭೂಮಿಯಲ್ಲೊಂದು ಪ್ರಳಯದ ಕಸ ಹುಟ್ಟಿ, ತಿಳಿಯಲೀಯದು, ಎಚ್ಚರಲೀಯದೆಂದು ಗುರು ಬಸವಣ್ಣನವರು ಎಚ್ಚರಿಸಿದ್ದಾರೆ. ಇಂತಹ ಕಳೆಯನ್ನು ತೆಗೆದು, ಹುಲುಸಾದ ಬೆಳೆ ಬೆಳೆಯಲು ಅಕ್ಕ ಅನ್ನಪೂರ್ಣತಾಯಿ ಅವರಂಥ ಮಹಾತ್ಮರು ಧರೆಗೆ ಬರುತ್ತಾರೆ. ಮನದ ಕೊಳೆ ಕಳೆಯಲು ಗುರುವಿನ ಮಾರ್ಗದರ್ಶನ ಅವಶ್ಯಕ ಎಂದು ಹೇಳಿದರು.

ಮಾಸ್ಟರ್ ಮೈಂಡ್ ತರಬೇತುಗಾರ್ತಿ ಶ್ರೀದೇವಿ ಹೂಗಾರ ಮಾತನಾಡಿ, ಹಿಂದೆ ಮನೆ ಮನೆಯಲ್ಲೂ ಶತಾಯುಷಿಗಳು ಇರುತ್ತಿದ್ದರು. ಈಗ ಶತಾಯುಷಿಗಳು ಕಾಣುವುದು ತೀರಾ ವಿರಳ ಎಂದು ತಿಳಿಸಿದರು.

ದಿನೇ ದಿನೇ ಆಯುಷ್ಯ ಹಾಗೂ ಆರೋಗ್ಯ ಕ್ಷೀಣಿಸಲು ಅನ್ನಮಯಕೋಶ ನಿರ್ವಹಣೆ, ಸರಿಯಾದ ಆಹಾರ, ವಿಹಾರ, ಉಸಿರಾಟದ ಕೊರತೆಯೇ ಕಾರಣ ಎಂದು ಹೇಳಿದರು.

ಗಡಿಬಿಡಿಯ ಬದುಕಿನಲ್ಲಿ ಮನಸ್ಸು ಚಂಚಲವಾಗಿದೆ. ಬೇಡವಾದುದರತ್ತ ವಾಲುತ್ತಿದೆ. ಮನಸ್ಸು ಬೇಡವೆಂದದ್ದು ಮಾಡಲು ಶಕ್ತರಾದರೆ ಅದೇ ಯಶಸ್ಸು.

ಅಕ್ಕ ಅನ್ನಪೂರ್ಣ ತಾಯಿ ದೂರ ಹೋಗಿಲ್ಲ. ಅವರ ಚೈತನ್ಯ ಶಕ್ತಿ ನೂರಕ್ಕೆ ನೂರರಷ್ಟು ಕೆಲಸ ಮಾಡುತ್ತಿದೆ. ನಾನು ಮತ್ತೆ ಮತ್ತೆ ಎದ್ದು ನಿಲ್ಲುವಂತೆ ಮಾಡಿದ್ದು ಅಕ್ಕನವರ ಚೈತನ್ಯ ಎಂದು ತಿಳಿಸಿದರು.

ಉದ್ಘಾಟನೆ ನೇರವೇರಿಸಿದ ದಿ ಇನ್ಫಿನಿಟಿ ಶಾಲೆಯ ನಿರಂಜನ ಶೀಲವಂತ, ಸನ್ಮಾನ ಸ್ವೀಕರಿಸಿದ ಪುಸ್ತಕ ಸಂತೆಯ ರೂವಾರಿ ಗುರುನಾಥ ರಾಜಗೀರಾ ಮಾತನಾಡಿದರು.

ಲಿಂಗಾಯತ ಸೌಹಾರ್ದ ಸಹಕಾರಿ ನಿರ್ದೇಶಕ ಪ್ರಕಾಶ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸೈನಿಕ ಚಂದ್ರಕಾಂತ ಕಣಜೆ, ಸಾಹಿತಿ ರಮೇಶ ಮಠಪತಿ ಇದ್ದರು.

ನಿವೃತ್ತ ಮುಖ್ಯಶಿಕ್ಷಕ ರೇವಣಪ್ಪ ಮೂಲಗೆ ಹಾಗೂ ಪರುಷಕಟ್ಟೆ ಚನ್ನಬಸವಣ್ಣ ವಚನ ಗಾಯನ ಮಾಡಿದರು. ನೀಲಮ್ಮ ಬಳಗದ ಸಹೋದರಿಯರಾದ ಶ್ರೀದೇವಿ (ಸಿದ್ದಮ್ಮ) ಹಾಗೂ ಮಹಾದೇವಿ ಪ್ರಾರ್ಥನೆ ನಡೆಸಿಕೊಟ್ಟರು.

ಲಿಂಗಾಯತ ಮಹಾಮಠದ ಕಾರ್ಯದರ್ಶಿ ಚನ್ನಬಸಪ್ಪ ಹಂಗರಗಿ ಸ್ವಾಗತಿಸಿದರು. ಬಸವ ಚಿಕ್ಕಲಿಂಗೆ ನಿರೂಪಿಸಿದರು. ಚನ್ನಮ್ಮ ಮಹಾದೇವ ಪಾಟೀಲ ಗುರುಪೂಜೆ ಮಾಡಿದರು. ಮಹಾನಂದಾ ಮಾರುತಿ ಪಾಟೀಲ ನವಲಸಪುರ ಭಕ್ತಿ ದಾಸೋಹಗೈದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *