ವಿಗ್ರಹ ವಿವಾದ: ಹಡಪದ ಸಮಾಜಕ್ಕೆ ನ್ಯಾಯ ಒದಗಿಸಲು ಭಾಲ್ಕಿ ಸ್ವಾಮೀಜಿ ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವ ಕಲ್ಯಾಣ

ಅಪ್ಪಣ್ಣನವರ ಗವಿಯಲ್ಲಿ ಕೂರಿಸಿರುವ ಅನ್ಯ ಮೂರ್ತಿಗಳ ವಿರುದ್ಧ ಪ್ರತಿಭಟಿಸುತ್ತಿರುವ ಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘಕ್ಕೆ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದೇವರ ಬೆಂಬಲ ದೊರಕಿದೆ.

ಬುಧವಾರ ಮಾಧ್ಯಮಗಳಿಗೆ ಕಳಿಸಿದ ಪ್ರಕಟಣೆಯಲ್ಲಿ ಹಡಪದ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಸರ್ಕಾರವನ್ನು ಪೂಜ್ಯರು ಒತ್ತಾಯಿಸಿದ್ದಾರೆ.

“ಕಲ್ಯಾಣದಲ್ಲಿ ಇರುವ ಬಸವಣ್ಣನವರ ಅರಿವಿನ ಮನೆಯ ಪಕ್ಕದಲ್ಲಿರುವ ಗವಿಯನ್ನು ಹಡಪದ ಅಪ್ಪಣ್ಣನವರ ಗವಿಯೆಂದು ಗುರುತಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಅದನ್ನು ಬದಲಾಯಿಸಿರುವುದರಿಂದ ಹಡಪದ ಸಮಾಜಕ್ಕೆ ಅನ್ಯಾಯವಾಗಿದೆ.

ಅರಿವಿನ ಮನೆಯ ಪಕ್ಕದಲ್ಲಿರುವ ಹಡಪದ ಅಪ್ಪಣ್ಣನವರ ಗವಿಗೆ ರಕ್ಷಣೆ ಹಾಗೂ ಸಂವರ್ಧನೆ ಕಲ್ಪಿಸಿ ಹಡಪದ ಸಮಾಜಕ್ಕೆ ನ್ಯಾಯ ಒದಗಿಸಿ,” ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಮ್ಮ ಪ್ರಕಟಣೆಯಲ್ಲಿ ಬಸವಣ್ಣ ಹಾಗೂ ಹಡಪದ ಅಪ್ಪಣ್ಣ ಅವರ ಆಪ್ತ ಸಂಬಂಧವನ್ನು ಸ್ವಾಮೀಜಿ ಸ್ಮರಿಸಿಕೊಂಡಿದ್ದಾರೆ.

“ಬಸವಣ್ಣ ಹಾಗೂ ಹಡಪದ ಅಪ್ಪಣ್ಣ ಅವರ ಆಪ್ತ ಸಂಬಂಧ ಶರಣ ಚರಿತ್ರೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಬಸವಣ್ಣನವರು ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯಾಗಿ ಹೊಂದಿದ್ದರು ಎಂದು ಎಂದು ಚರಿತ್ರೆಕಾರರು ಉಲ್ಲೇಖಿಸಿದ್ದಾರೆ.

ಶರಣರ ಅನೇಕ ಪ್ರಸಂಗಗಳಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಮಹತ್ವದ್ದಾಗಿದೆ. ವಿಶೇಷವಾಗಿ ಅಲ್ಲಮಪ್ರಭು ಅವರು ಸೊನ್ನಲಿಯಿಂದ ಸಿದ್ಧರಾಮರನ್ನು ಕರೆದುಕೊಂಡು ಕಲ್ಯಾಣದ ಮಹಾಮನೆಗೆ ಆಗಮಿಸಿದ ಸಂದರ್ಭದಲ್ಲಿಯೂ ಹಡಪದ ಅಪ್ಪಣ್ಣನವರ ಪಾತ್ರ ‘ಶೂನ್ಯ ಸಂಪಾದನೆ’ಯಲ್ಲಿ ವಿವರಿಸಲಾಗಿದೆ.

ಬಸವಣ್ಣನವರು ಕಲ್ಯಾಣವನ್ನು ಬಿಟ್ಟು ಕೂಡಲಸಂಗಮಕ್ಕೆ ತೆರಳುವಾಗ ಅವರ ಜೊತೆ ಇದ್ದ ಏಕೈಕ ವ್ಯಕ್ತಿ ಹಡಪದ ಅಪ್ಪಣ್ಣನವರಾಗಿದ್ದರು. ಅಂದರೆ, ಎಲ್ಲಿ ಬಸವಣ್ಣನವರು ಇರುತ್ತಿದ್ದರೋ ಅಲ್ಲಿ ಇರುತ್ತಿದ್ದರೋ ಅಲ್ಲಿ ಅಪ್ಪಣ್ಣನವರು ಇದ್ದರು ಎಂಬುದನ್ನು ಇತಿಹಾಸ ತೋರಿಸುತ್ತದೆ. ಆದ್ದರಿಂದ ಸರ್ಕಾರ ಹಡಪದ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಪ್ಪಣ್ಣನವರ ಗವಿಯ ಅಭಿವೃದ್ಧಿಯ ಬೇಡಿಕೆಯನ್ನು ಮೊದಲಿನಿಂದಲೂ ಭಾಲ್ಕಿ ಸ್ವಾಮೀಜಿ ಬೆಂಬಲಿಸಿದ್ದಾರೆ.

ವಿವಾದದ ಹಿನ್ನಲೆ

ಅಪ್ಪಣ್ಣನವರ ಗವಿಯಲ್ಲಿ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯವರು ಅನ್ಯ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಫೆಬ್ರವರಿ 7 ನಗರ ಪೊಲೀಸ್ ಠಾಣೆಗೆ ದೂರು ನೀಡಿತ್ತು.

ಅದೇ ದಿನ ಪ್ರಾಧಿಕಾರಕ್ಕೆ ನೀಡಿದ ಮನವಿಯಲ್ಲಿ ಅನ್ಯ ಮೂರ್ತಿಗಳನ್ನು ತೆರವುಗೊಳಿಸದ್ದಿದ್ದರೆ ಹಡಪದ ಸಮಾಜದ ಬಂಧುಗಳು ಅರಿವಿನ ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಲಾಗಿತ್ತು.

ಆದರೆ ಪಂಚಕಮಿಟಿ ಅಧ್ಯಕ್ಷ ಬಸವರಾಜ ಕೋರಕೆ, “ಬಸವಣ್ಣನವರ ಅರಿವಿನ ಮನೆ ಮೊದಲಿನಿಂದಲೂ ಪಂಚಕಮಿಟಿ ವಶದಲ್ಲೇ ಇದೆ. ದಿನನಿತ್ಯದ ಪೂಜೆ, ಪುನಸ್ಕಾರ ನಾವೇ ಮಾಡಿಕೊಂಡು ಬರುತ್ತಿದ್ದೇವೆ. ದೇವಸ್ಥಾನದ ವಿದ್ಯುತ್ ಬಿಲ್ ನಾವೇ ಕಟ್ಟುತ್ತಿದ್ದೇವೆ. ಅಕ್ಕನ ಬಳಗದವರು ನಮ್ಮ ಗಮನಕ್ಕೆ ತಂದು ಅಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ,” ಎಂದು ಬಸವ ಮೀಡಿಯಾಕ್ಕೆ ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
2 Comments
  • ಅಲ್ಲಿ ಅಪ್ಪಣ್ಣನವರ ಮೂರ್ತಿ ಇಲ್ಲವೇ?
    ಅನ್ಯ ಮೂರ್ತಿಗಳು ಅಂದರೆ ಯಾವ ಮೂರ್ತಿಗಳು?
    ಲಿಂಗಾಯತ ಶರಣರ ಮೂರ್ತಿ ಗಳು ಆದರೆ ತೊಂದರೆ ಏನು?
    ಶೈವ ಮೂರ್ತಿಗಳೇ? ವೈಷ್ಣವ ಮೂರ್ತಿಗಳೇ? ಯಾವ ಮೂರ್ತಿಗಳು?

    ಮತ್ತೊಬ್ಬರ ಆಚರಣೆಗೆ ವಿರುದ್ಧ ವಾದ ಮೂರ್ತಿ, ಅಕ್ಕನ ಬಳಗದವರಾಗಲಿ ಸಮಿತಿ ಆಗಲಿ ಕುಳ್ಳಿರಿಸಿದ್ದು ತಪ್ಪು.
    ಅದನ್ನು ಸರಿ ಅನ್ನುವುದು ಮತ್ತೊಂದು ತಪ್ಪು

  • ಈ ಘಟನೆ ಸಂಪೂರ್ಣವಾಗಿ ಲಿಂಗಾಯತ ಸಮುದಾಯಕ್ಕೆ ಸಂಬಂದಿಸಿದುದೆಂದು ತಿಳಿದು ಸಮುದಾಯದೊಳಗಿರುವ ಎಲ್ಲಾ ಕಾಯಕಪಂಗಡಗಳನ್ನು ಗೌರವಯುತದಿಂದ ಸಮಾನವಾಗಿ ಕಾಣಬೇಕು. ಬಾಲ್ಕಿಶ್ರೀಗಳು ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರು.ಅವರು ಈ ಬಗ್ಗೆ ಬೇರೆಯವರ ಜವಾಬ್ದಾರಿಗೆ ಬಿಡುವುದು ಸರಿಯಲ್ಲ. ತಮ್ಮ ಮುಂದಾಳತ್ವದಲ್ಲಿ ಇತರ ಕಾಯಕ ಪಂಗಡಗಳಿಗೂ ನಂಬಿಕೆ ವಿಶ್ವಾಸ ಬರುವಂತೆ ಸಂಬಂದ ಪಟ್ಟವರನ್ನೆಲ್ಲ ಸೇರಿಸಿ ತಪ್ಪಾಗಿದ್ದರೆ ಅದನ್ನು ಸರಿಪಡಿಸಲೇ ಬೇಕು. ಅದಕ್ಕೆ ಎಲ್ಲಾ ಲಿಂಗಾಯತ ಸಂಘಟನೆಗಳು ಶ್ರೀ ಗಳ ಕೈಜೋಡಿಸ ಬೇಕು.

Leave a Reply

Your email address will not be published. Required fields are marked *