ಗದಗ :
ಶರಣ ಹರ್ಡೇಕರ್ ಮಂಜಪ್ಪನವರು ಸತ್ಯ ಅಹಿಂಸೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದವರು. ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ಬಸವತತ್ವ ಪ್ರಸಾರಕ್ಕೆ ಹರ್ಡೇಕರ ಮಂಜಪ್ಪನವರ ಕೊಡುಗೆ ಬಹಳ ದೊಡ್ಡದು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೮೬ ನೆಯ ಶಿವಾನುಭವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಅಕ್ಷರ ಹಾಗೂ ಸಂಸ್ಕೃತಿಯ ಪ್ರತೀಕ ಹಡೇಕರ್ ಮಂಜಪ್ಪನವರು ಪತ್ರಿಕೆಯ ಮೂಲಕ ಸ್ವಾತಂತ್ರ್ಯ ಮತ್ತು ಧರ್ಮ ಜಾಗೃತಿ ಕೆಲಸ ಮಾಡಿದ್ದಾರೆ.
ಹಸ್ತ ನಿರ್ಮಿತ ಪತ್ರಿಕೆಗಳನ್ನು ಬರೆದು, ಸ್ವಾತಂತ್ರ್ಯ ಮತ್ತು ಧರ್ಮ ಜಾಗೃತಿಯ ವಿಷಯವನ್ನು ಪ್ರಚಾರ ಮಾಡುತ್ತಾ, ಯುವಕರಲ್ಲಿ ಸ್ವಾತಂತ್ರ್ಯದ ಬಗ್ಗೆ, ಬಡತನದ ನಿರ್ಮೂಲನೆಯ ಬಗ್ಗೆ ಹೋರಾಡಿದರು. ಮಕ್ಕಳ ಸಾಹಿತ್ಯವನ್ನು ಮೊಟ್ಟಮೊದಲು ಪ್ರಸ್ತುತ ಪಡಿಸಿದರು. ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಾರಿದರು.
ಬಸವಣ್ಣನವರ ಚರಿತ್ರೆಯನ್ನು ಹಿಂದಿಯಲ್ಲಿ ಬರೆದು ಗಾಂಧಿಯವರಿಗೆ ಓದಲು ಕೊಟ್ಟರು. ಬಸವಣ್ಣನವರ ತತ್ವಗಳನ್ನು ತಿಳಿದುಕೊಂಡು ಗಾಂಧೀಜಿಯವರು ಬಸವತತ್ವಕ್ಕೆ ಮಾರುಹೋಗಿದ್ದರು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.
ಉಪನ್ಯಾಸಕರಾಗಿ ಬಂದು ಗದಗ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಕಾಶ ಅಸುಂಡಿ ಮಾತನಾಡಿ, ೧೯೧೩ ರಲ್ಲಿ ಮೊಟ್ಟಮೊದಲು ಬಸವ ಜಯಂತಿ ಆಚರಣೆಯನ್ನು ಜಾರಿಗೆ ತಂದವರು ಮಂಜಪ್ಪನವರು. ಅಂದಿನಿಂದ ಬಸವತತ್ವ ಪ್ರಸಾರ ನಾಡಿನ ಮಠ ಮಾನ್ಯಗಳಲ್ಲಿ ಪ್ರಾರಂಭವಾಯಿತು. ಭಜನೆಗಳನ್ನು ನಡೆಸಿದರು, ನಾಡಿನ ಸೇವೆಗಾಗಿ ಮದುವೆಯಾಗದೇ ಸನ್ಯಾಸತ್ವ ಸ್ವೀಕರಿಸಿ, ಆಹಾರ ಉಡುಗೆ ತೊಡುಗೆಯಲ್ಲಿ ಬದಲಾವಣೆ ತಂದುಕೊಂಡರು.

ಲೋಕವೇ ನನ್ನ ಮನೆ, ವಿಶ್ವವೇ ನನ್ನ ಕುಟುಂಬ ಎಂಬ ಭಾವನೆ ತಾಳಿದರು. ಗಾಂಧೀಜಿಯವರ ಪ್ರಭಾವದಿಂದ, ಅವರಂತೆ ಬದುಕಿ ಬಾಳಿದರು. ಬಸವಣ್ಣನವರೆಂದರೆ ಎತ್ತಲ್ಲ ಎಂದು ಜಾಗೃತಿ ಮೂಡಿಸುತ್ತಾ, ನಿಜ ಬಸವತತ್ವದ ಪ್ರಸಾರ ಮಾಡಿದರು ಎಂದು ಹೇಳಿದರು.
ಆಯುರ್ವೇದ ಚಿಕಿತ್ಸಾ ತಜ್ಞರಾದ ಡಾ. ಪರವೀನ್ ನದಾಫ್ ಮಾತನಾಡಿ, ದೈಹಿಕ ಮತ್ತು ಮಾನಸಿಕ ಸಮತೋಲನದ ಸ್ಥಿತಿಯೇ ಆಧ್ಯಾತ್ಮ. ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯಭಾಗ್ಯ ಮಹತ್ವದ್ದು. ಆರೋಗ್ಯವಂತ ವ್ಯಕ್ತಿಯೇ ಅತೀ ಶ್ರೀಮಂತ. ಆಹಾರವೇ ಔಷಧವಾಗಬೇಕು. ಆರೋಗ್ಯದ ಕಡೆಗೆ ಎಲ್ಲರೂ ಗಮನಹರಿಸಬೇಕು. ಉತ್ತಮ ಚಟುವಟಿಕೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ವಚನ ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ನಡೆಸಿದರು. ಧಾರ್ಮಿಕ ಗ್ರಂಥ ಪಠಣವನ್ನು ಕೀರ್ತಿ ಹುಡೇದ ಹಾಗೂ ವಚನ ಚಿಂತನ ರತ್ನಾ ಪಾಟೀಲ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಡಾ. ಎನ್.ಬಿ. ನಿಂಬಣ್ಣನವರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶ್ರೀ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ೨೦೧೯ ಅವರು ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ ಹಾಗೂ ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು ಹಾಗೂ ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
