ಶಿಗ್ಗಾಂವಿ
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ಬಸವ ಮೀಡಿಯಾದ ಸುಜಾತ ಶೆಟ್ಟರ್ ಅವರ ಜೊತೆ ಸಂವಾದದಲ್ಲಿ ಶಿಗ್ಗಾಂವಿ ಜಾಗತಿಕ ಲಿಂಗಾಯತ ಮಹಾಸಭಾದ ವಿಜಯಲಕ್ಷ್ಮಿ ಕೌದಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
1) ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳಸಿಕೊಳ್ಳಬೇಕೆ? ಇದರಿಂದ ಲಿಂಗಾಯತ ಧರ್ಮದ ಹೋರಾಟ ಬಲವಾಗುತ್ತದೆಯೇ?
ರಾಜಕೀಯ ಪ್ರಜ್ಞೆ ಬಸವ ಅನುಯಾಯಿಗಳಿಗೆ ಬೇಕು. ಆದರೆ ಅದು ಪಕ್ಷಾತೀತವಾಗಿ ಇರಬೇಕು. ಬಸವಣ್ಣನವರ ತತ್ವ ಮತ್ತು ಸಿದ್ಧಾಂತದ ಅಡಿ ಕೆಲಸ ನಿರ್ವಹಿಸುವ ರಾಜಕಾರಣಿಯ ಜೊತೆ ಒಡನಾಟ ಬೆಳೆಸಿಕೊಳ್ಳಬೇಕು.
ಈಗಿರುವ ರಾಜಕಾರಣಿಗಳಿಗೆ ಮೊದಲು ಬಸವ ಪ್ರಜ್ಷೆಯನ್ನು ಮೂಡಿಸಬೇಕು. ಬಸವಣ್ಣ ಹೇಳಿದ ವಚನ “ಇವನಾರವ, ಇವನಾರವ, ಎಂದೆನಿಸದಿರಯ್ಯ, ಇವನಮ್ಮವ, ಇವನಮ್ಮವ ಎಂದೆನೆಸಿಯ್ಯ” ಎನ್ನುವಂತೆ ಜಾತಿವ್ಯವಸ್ಥೆಯನ್ನು ಹೊಗಲಾಡಿಸಿ, ಎಲ್ಲರೂ ಒಂದೇ ಜಾತಿ ಅದು ಮನುಷ್ಯ ಜಾತಿ ಎಂದು ಬಿಂಬಿಸುವ ರಾಜಕಾರಣ ಬರಬೇಕಾಗಿದೆ.
2) ಬಸವ ಸಂಘಟನೆಗಳಿಗೆ ಚುನಾವಣೆಗೆ ಸಂಬಂಧಿಸಿದ ತರಬೇತಿ ನೀಡಬೇಕೆ?
ತರಬೇತಿ ಅವಶ್ಯವಾಗಿ ಬೇಕು. ಬಸವಣ್ಣನ ಸಿದ್ದಾಂತ ಏನು ಎಂಬುದನ್ನು ಮೊದಲು ಮನದಟ್ಟು ಮಾಡಬೇಕು. ಮನೆಗಳಿಗೆ ಬೇಟಿ ನೀಡಬೇಕು ಅಥವಾ ಎಲ್ಲರನ್ನು ಒಂದು ಸ್ಥಳದಲ್ಲಿ ಸೇರಿಸಿ ತತ್ವವನ್ನು ಬಿತ್ತಬೇಕು. ಎಲ್ಲರಲ್ಲಿ ಆಳವಾಗಿ ಬಸವತತ್ವ ಪ್ರವೇಶವಾದರೆ ಮಾತ್ರ ನಾವು ರಾಜಕೀಯ ಪ್ರಜ್ಷೆಯನ್ನು ನೀಡಲು ಸಾಧ್ಯ.
3) ಈ ನಿಟ್ಟಿನಲ್ಲಿ ಬಸವ ಶಕ್ತಿ ಶಿಬಿರ, ಸಮಾವೇಶಗಳನ್ನು ಆಯೋಜಿಸಬೇಕೆ? ಇದರ ಸಾಧಕ ಬಾಧಕಗಳೇನು?
ನಮ್ಮಲ್ಲಿ ಮನೆಗಳಲ್ಲಿ ಮಹಾಮನೆ ಕಾರ್ಯಕ್ರಮಗಳು ನಡೆಸುತ್ತೇವೆ. ಅನೇಕರು ಸೇರುತ್ತಾರೆ, ಅಲ್ಲಿಗೆ ಬರುವರೆಲ್ಲಾ ಶಿಬಿರ, ಸಮಾವೇಶಕ್ಕೆ ಹಾಜರಾಗುತ್ತಾರೆ.
4) ನಿಮ್ಮ ಜಿಲ್ಲೆ, ತಾಲೂಕಿನಲ್ಲಿ ಬಸವ ಶಕ್ತಿ ಶಿಬಿರ, ಸಮಾವೇಶಗಳನ್ನು ಆಯೋಜಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ? ಹೇಗೆ ಕೈ ಜೋಡಿಸುತ್ತೀರಿ?
ಖಂಡಿತ ನೆರವು, ಸಹಕಾರ ನೀಡುತ್ತೇವೆ.
