ಗುರುವಿನಿಂದ ಅಜ್ಞಾನ, ದಾರಿದ್ರ್ಯ, ಬಡತನ ದೂರ: ಸಿದ್ಧರಾಮ ಸ್ವಾಮೀಜಿ

ಖಾನಾಪುರ:

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಉನ್ನತ ಸ್ಥಾನ ನೀಡಲಾಗಿದೆ. ಗುರು ಎಂದರೆ ದೇವರಿಗಿಂತಲೂ ಶ್ರೇಷ್ಠ ಎಂದು ನಮ್ಮ ಪೂರ್ವಜರು ತಿಳಿಸಿದ್ದಾರೆ.

ನಮ್ಮ ಲೌಕಿಕ ಬದುಕು ಹಸನಾಗಲು ಅಥವಾ ಆಧ್ಯಾತ್ಮಿಕ ಸಾಧನೆಯಲ್ಲಿ ನಾವು ಮುಂದುವರೆಯಲೂ ಗುರು ಅತ್ಯವಶ್ಯಕ. ಗುರುವಿನ ಮಾರ್ಗದರ್ಶನವಿಲ್ಲದೆ ಯಾರೂ ತಮ್ಮ ವ್ಯಕ್ತಿತ್ವ ಪರಿಪೂರ್ಣ ಗೊಳಿಸಿಕೊಳ್ಳಲು ಸಾಧ್ಯವಿಲ್ಲ.

ನಮ್ಮಲ್ಲಿನ ಅಜ್ಞಾನ, ದಾರಿದ್ರ್ಯ,  ಬಡತನ ದೂರವಾಗಲು ಲೌಕಿಕ ಬದುಕಿನಲ್ಲಿ ಗುರು ಅತ್ಯವಶ್ಯಕ ಎಂದು ಗದುಗಿನ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಶ್ರೇಷ್ಠ ಶಿಕ್ಷಕ ಚಂದ್ರಶೇಖರ ಹೊಸೂರ ಅವರ 30ನೇ ಪುಣ್ಯಸ್ಮರಣೆ ಹಾಗೂ ನಾಗನೂರು ರುದ್ರಾಕ್ಷಿ ಮಠದ ವತಿಯಿಂದ ಬೀಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಗುರುಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಶ್ರೀಗಳು, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ. ನಮ್ಮೆಲ್ಲರ ಬದುಕಿನಲ್ಲಿ ವಿದ್ಯಕಲಿಸಿದ ಗುರು ಹಾಗೂ ಜನ್ಮ ನೀಡಿದ ತಂದೆ-ತಾಯಿ ಎಂದೆಂದಿಗೂ ದೈವ ಸ್ವರೂಪ. ಅವರನ್ನು ಸದಾ ಗೌರವದಿಂದ ಕಾಣಬೇಕು.

ದೇವರನ್ನು ಕಾಣಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಅದಕ್ಕಾಗಿ ಇಡೀ ದೇಶವನ್ನೇ ಸುತ್ತುತ್ತೇವೆ. ಆದರೆ ದೇವರನ್ನು ಪ್ರತ್ಯಕ್ಷವಾಗಿ ನೋಡಿದ ಅವನೊಂದಿಗೆ ಮಾತನಾಡಿದ ನಿದರ್ಶನಗಳು ಎಲ್ಲೂ ಇಲ್ಲ. ನಿರ್ಗುಣ, ನಿರಾಕಾರ ಸ್ವರೂಪನಾದ ಕಾಣದ ದೇವರನ್ನು ಹುಡುಕಿ ನಾವೆಲ್ಲಾ ಬಳಲುತ್ತೇವೆ. ಇದರಿಂದ ದೇಹಕ್ಕೆ ದಣಿವಾಗುತ್ತದಯೆ ಹೊರತು ಅವನ ದರ್ಶನವಾಗುವುದಿಲ್ಲ. ಕಾರಣ ಕಾಣದ ದೇವರ ಸ್ವರೂಪವನ್ನು ಅರಿಯಲು ನಾವೆಲ್ಲರೂ ಗುರುವಿನ ಮೊರೆ ಹೋಗಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಬೀಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಜನತೆಗೆ ಆಧ್ಯಾತ್ಮಿಕ ಜ್ಞಾನ ಉಣಬಡಿಸಬೇಕೆಂಬ ಸದಾಶಯದಿಂದ ಇಲ್ಲಿ ಗುರುಭವನ ನಿರ್ಮಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇದರ ಮೂಲಕ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಸಾಗರೋಪಾದಿಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದ ನೇತ್ರತ್ವವನ್ನು ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮಿಗಳು, ಅವರೊಳ್ಳಿ ಬೆಳಕಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು ಹಾಗೂ ಕಮತೇನಟ್ಟಿಯ ಗುರುದೇವ ದೇವರು ವಹಿಸಿದ್ದರು.

ವೇದಿಕೆಯ ಮೇಲೆ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಲಿಂಗೈಕ್ಯ ಚಂದ್ರಶೇಖರ ಹೊಸೂರು ಅವರ ಸಹೋದ್ಯೋಗಿಗಳು ಹಾಗೂ ಐಎಫ್ಎಸ್ ಅಧಿಕಾರಿ ಗಿರೀಶ ಹೊಸೂರ ಅವರ ವಿದ್ಯಾ ಗುರುಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಇದಕ್ಕೂ ಮುನ್ನ ನಡೆದ ಅಯ್ಯಪ್ಪ ಮಂದಿರದಿಂದ ಗುರುಭವನದ ವರೆಗೆ ಜರುಗಿದ ಭವ್ಯ ಮೆರವಣಿಗೆ ಆಕರ್ಷಕವಾಗಿತ್ತು.

ಪ್ರಾರಂಭದಲ್ಲಿ ಹಿರಿಯ ಐಎಫ್ಎಸ್ ಅಧಿಕಾರಿ ಗಿರೀಶ ಹೊಸುರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಗೆ ರಾಜಶೇಖರ ಪಾಟೀಲ ನಿರೂಪಿಸಿ, ವಂದಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *