‘ಬಸವ ಶಕ್ತಿ ಮೂಲಕ ಲಿಂಗಾಯತರನ್ನು ಬಡಿದೆಬ್ಬಿಸಬೇಕಾಗಿದೆ‘
ಚಿತ್ರದುರ್ಗ
ಬಸವಣ್ಣನವರು ಹಾಗೂ ಆ ಕಾಲದ ಶರಣರು ತಮ್ಮ ನೈಜ ಅನುಭವದಿಂದ ಕಂಡುಕೊಂಡು ಬಿತ್ತಿದ ತತ್ವಾದರ್ಶಗಳಿಗೆ ಇಂದಿಗೆ ಸರಿಸುಮಾರು 900 ವರ್ಷಗಳು ಸಂದಿವೆ.
ಆದರೂ ಗುರು ಬಸವಣ್ಣನವರಿಂದ ಸ್ಥಾಪಿತವಾದ ವಿಶ್ವ ವ್ಯಾಪಿಯಾಗಬೇಕಾದ ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳು ಒಂದು ಸೀಮಿತ ಪ್ರದೇಶ ಹಾಗೂ ಜನರಿಗೆ ಮೀಸಲಾಗಿರುವುದು ತುಂಬಾ ವಿಪರ್ಯಾಸ.
ಆದರೆ ಅವರ ತತ್ವಾದರ್ಶಗಳು ಇಲ್ಲಿಯವರೆಗೂ ಜೀವಂತವಾಗಿ ಉಳಿದುಕೊಂಡು ಬಂದಿರುವುದರಿಂದಲೇ ಬಸವಭಕ್ತರ ಹಾಗೂ ಬಸವಪರ ಸಂಘಟನೆಗಳ ಆಸಕ್ತಿ ಕುಗ್ಗದೆ ಹೋರಾಟ ಮುನ್ನಡೆಯುತ್ತಿದೆ.
ಇಂದಿನ ದಿನಮಾನಗಳಲ್ಲಿ ನಾವುಗಳು ಎಷ್ಟೇ ಬಲಾಡ್ಯರಾಗಿದ್ದರೂ, ಹೋರಾಟದ ಕಿಚ್ಚು ನಮ್ಮನ್ನು ಎಷ್ಟೇ ಆವರಿಸಿಕೊಂಡಿದ್ದರೂ ಅದಕ್ಕೆ ತಕ್ಕ ಫಲ ದೊರೆತು ಲಿಂಗಾಯತ ಧರ್ಮದ ಅಸ್ತಿತ್ವ ಉಳಿಯಬೇಕಾದರೆ ರಾಜಕೀಯ ಶಕ್ತಿ, ಪ್ರಭಾವ ಅತಿ ಅಗತ್ಯ ಎಂಬುದೇ ನನ್ನ ಭಾವನೆ.
ದೇಶದ ಇತಿಹಾಸದಲ್ಲಿ ಎಲ್ಲಾ ಧರ್ಮಗಳು ರಾಜಕೀಯ ಪ್ರಾಬಲ್ಯವನ್ನು ಬಳಸಿಕೊಂಡೆ ಭದ್ರವಾಗಿ ನೆಲೆ ಕಂಡುಕೊಂಡಿವೆ. ಇಂದಿಗೂ ಕೂಡ ಇದಕ್ಕೆ ಹಲವು ನಿದರ್ಶನಗಳನ್ನು ಕೊಡಬಹುದು.
ಆದುದರಿಂದ ಬಸವಪರ ಸಂಘಟನೆಗಳು ಅತ್ಯಂತ ಜರೂರಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದರ ಜೊತೆಗೆ, ರಾಜಕೀಯ ಶಕ್ತಿ ಮತ್ತು ಪ್ರಭಾವಗಳನ್ನು ತೋರಲೇಬೇಕಾಗಿದೆ. ಹಾಗೆ ಆದಾಗ ಮಾತ್ರ ಬಸವ ಧರ್ಮ ಹೋರಾಟಕ್ಕೆ ಶಕ್ತಿ ವರ್ಧನೆಗೊಳ್ಳುತ್ತದೆ.
ಲಿಂಗಾಯತ ಧರ್ಮೀಯರು ಈಗಾಗಲೇ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಲ್ಲಿ ಸ್ಥಾನಮಾನಗಳನ್ನು ದೊರಕಿಸಿಕೊಂಡಿರುವುದರಿಂದ, ಧಾರ್ಮಿಕ ಪ್ರಜ್ಞೆ ಮತ್ತು ಸಂಘಟನೆಯ ಕೊರತೆ ಎದ್ದು ಕಾಣುತ್ತಿದೆ.
ಲಿಂಗಾಯತ ಧರ್ಮವನ್ನು ಹೇಳದಂತೆ ಹತ್ತಿಕ್ಕಲು ನಮ್ಮ ವಿರೋಧಿಗಳು ಬಹಿರಂಗವಾಗಿಯೇ ಪ್ರಯತ್ನಿಸುತ್ತಿದ್ದಾರೆ. ಇದು ಗೊತ್ತಿದ್ದೂ ನಮ್ಮ ಲಿಂಗಾಯತ ರಾಜಕಾರಣಿಗಳು ಅಧಿಕಾರದ ಆಸೆಗೆ ಇಡೀ ಸಮಾಜವನ್ನು ದಾರಿ ತಪ್ಪಿಸುವುದರೊಂದಿಗೆ ಧರ್ಮಭಂಜಕತನವನ್ನು ಮಾಡುವುದು ಎಷ್ಟರಮಟ್ಟಿಗೆ ಸರಿ ಎನ್ನುವ ಪ್ರಶ್ನೆಯನ್ನು ಬಸವಭಕ್ತರು ಮಾಡಿಕೊಳ್ಳಬೇಕಿದೆ.
ಇಂತಹ ಎಲ್ಲ ವ್ಯವಸ್ಥಿತ ಪಿತೂರಿಗಳನ್ನ ಮೀರಿ ಮೇಲೆ ಬರಬೇಕೆಂದರೆ ರಾಜಕೀಯ ಪ್ರಜ್ಞೆ ಅತಿ ಅಗತ್ಯ. ಹಾಗಾಗಿ ನಮ್ಮ ಬಸವಪರ ಸಂಘಟನೆಗಳಿಗೆ ಈ ಕುರಿತಂತೆ ತರಬೇತಿ ನೀಡುವುದು ಅನಿವಾರ್ಯವಾಗಿದೆ. ಈ ಮೂಲಕ ಲಿಂಗಾಯತರನ್ನು ಬಡಿದೆಬ್ಬಿಸಬೇಕಾಗಿದೆ, ಜಾಗೃತರನ್ನಾಗಿ ಮಾಡಬೇಕಾಗಿದೆ. ಅದರಲ್ಲೂ ಇಂದಿನ ಯುವಪೀಳಿಗೆಯನ್ನು ಮುಂದಿನ ಹೋರಾಟಕ್ಕೆ ಸಿದ್ಧಗೊಳಿಸಬೇಕಾಗಿದೆ.
ಅನ್ಯ ಧರ್ಮ ಮತ್ತು ಮೌಡ್ಯ, ಕಂದಾಚಾರಗಳಿಂದ ಪ್ರಭಾವಿತರಾಗಿರುವ ನಮ್ಮ ಯುವಕರನ್ನು ಜಾಗೃತಗೊಳಿಸಲು ಬಸವಶಕ್ತಿ ಶಿಬಿರಗಳು ಹಾಗೂ ಸಮಾವೇಶಗಳನ್ನು ಕಡ್ಡಾಯವಾಗಿ ಆಯೋಜಿಸಬೇಕಿದೆ. ಆದರೆ ಈ ಶಿಬಿರ ಮತ್ತು ಸಮಾವೇಶಗಳು ಯಾರ ವಿರುದ್ಧವೂ ಆಗಿರದೆ ಕೇವಲ ನಮ್ಮ ತಪ್ಪಿನ ಅರಿವನ್ನು ಮೂಡಿಸುವುದೇ ಮುಖ್ಯ ಗುರಿಯಾಗಿರಬೇಕು. ಇಲ್ಲವಾದಲ್ಲಿ ಅನ್ಯತಾ ವಿರೋಧಿಗಳ ಬಾಯಿಗಳಿಗೆ ಆಹಾರವಾಗಬೇಕಾಗುತ್ತದೆ.
ಲಿಂಗಾಯತರು ತಮ್ಮ ಧಾರ್ಮಿಕ ಭಾವನೆಯನ್ನು ಆಂತರಿಕವಾಗಿ ವೃದ್ಧಿಗೊಳಿಸಿಕೊಳ್ಳುತ್ತಾ ಹೋಗುವುದು, ಸ್ವಾಭಿಮಾನ ಬೆಳೆಸಿಕೊಳ್ಳುವುದು. ಮತ್ತು ಆಚರಣೆಗೆ ತರುವುದು ಬಹಳ ಮುಖ್ಯ ಅನಿಸುತ್ತದೆ.
ಕರ್ನಾಟಕದಾದ್ಯಂತ ಸಾಧ್ಯವಾದರೆ ಹೊರ ರಾಜ್ಯದಲ್ಲೂ ಈ ಸಮಾವೇಶಗಳನ್ನು ಏರ್ಪಡಿಸುವ ಮೂಲಕ ಜನ ಜಾಗೃತಿಯನ್ನು ಉಂಟು ಮಾಡಬೇಕಿದೆ. ನಮ್ಮ ಜಿಲ್ಲೆಯಲ್ಲೂ ಕೂಡ ಸಾಕಷ್ಟು ಬಸವಭಕ್ತರಿದ್ದಾರೆ, ಬಸವ ಪರ ಸಂಘಟನೆಗಳು ಇದ್ದಾವೆ. ಅವರನ್ನೆಲ್ಲ ಒಗ್ಗೂಡಿಸುವುದರೊಂದಿಗೆ ಬಸವಶಕ್ತಿ ಶಿಬಿರ, ಸಮಾವೇಶಕ್ಕೆ ಅದರ ಯಶಸ್ವಿಗೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡುವುದರೊಂದಿಗೆ ಧರ್ಮದ ಸಂಘಟನೆಗೆ ಕೈಜೋಡಿಸಲು ಬದ್ಧರಾಗಿದ್ದೇವೆ.

ಜಯ ಬಸವ 👏🏻👍🏻