ಇಂದಿನ ಭ್ರಷ್ಟ ರಾಜಕೀಯಕ್ಕೆ ಬಸವತತ್ವವೇ ದಿವ್ಯ ಔಷಧ: ಬಸವಲಿಂಗಪ್ಪ ಬಾದರ್ಲಿ

ಸಿಂಧನೂರು

ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.

ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.

ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಶಿಬಿರ, ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.

ಇಂದು ಸಿಂಧನೂರು ಬಸವ ಕೇಂದ್ರದ ಬಸವಲಿಂಗಪ್ಪ ಬಾದರ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳಸಿಕೊಳ್ಳಬೇಕೆ? ಯಾಕೆ?

ಬಸವ ಸಂಘಟನೆಗಳು ಹಾಗೂ ಅವುಗಳ ಸದಸ್ಯರು ರಾಜಕೀಯವಾಗಿ ಬೆಳೆಯಬೇಕು. ಕನಿಷ್ಠ ರಾಜಕೀಯ ಪ್ರಭಾವದಲ್ಲಿಯಾದರೂ ಇರಬೇಕು. ಇಂದಿನ ರಾಜಕೀಯವೆಂದರೆ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಗೋಸುಂಬೆತನ ಎನ್ನುವ ತಾತ್ಸಾರ ಭಾವನೆ ಬಂದುಬಿಟ್ಟಿದೆ. ಇವು ತೊಲಗದ ಹೊರತು ಶುಷ್ಕ ಸಮಾಜ ನಿರ್ಮಾಣ ಅಸಾಧ್ಯ.

ಇದಕ್ಕೆ ಬಸವಾದಿ ಶರಣರ ವಿಚಾರಗಳೇ ದಿವ್ಯ ಔಷಧ ಒಂದು ಕಡೆಯಾದರೆ, ಇನ್ನೊಂದು ಕಡೆ ಬಸವಧರ್ಮ ದೇಶಾದ್ಯಂತ, ವಿಶ್ವದಾದ್ಯಂತ ಪಸರಿಸಲು ರಾಜಕೀಯ ವ್ಯಕ್ತಿಗಳು ಮತ್ತು ಸರಕಾರದ ಪಾತ್ರ ಬಹಳ ಮುಖ್ಯ. ನಾವು ಒಂದು ಕ್ಷಣ ಇತಿಹಾಸದ ಕಡೆ ಗಮನಹರಿಸಿದರೆ ಸ್ಪಷ್ಟವಾಗಿ ಗೋಚರವಾಗುತ್ತದೆ.

ಭಾರತದ ಇತಿಹಾಸದಲ್ಲಿ ಸಮುದ್ರಗುಪ್ತ, ಕುಶಾನರ ದೊರೆ ಕಾನಿಷ್ಕ, ಮೌರ್ಯ ಚಕ್ರವರ್ತಿಗಳಾದ ಚಂದ್ರಗುಪ್ತ ಮೌರ್ಯ ಹಾಗೂ ಸಾಮ್ರಾಟ ಅಶೋಕ ಇವರೆಲ್ಲ ತಮ್ಮ ಆಡಳಿತದ ಅವಧಿಯಲ್ಲಿ ಬೌದ್ಧ ಧರ್ಮವನ್ನು ಭಾರತದ ಎಲ್ಲೆ ಮೀರಿ ಪಸರಿಸಿದ ಉದಾಹರಣೆ ಇದೆ. ಇವರುಗಳ ಪ್ರಭಾವದಿಂದಲೇ ಇಂದಿಗೂ ಬೌದ್ಧ ಧರ್ಮ ಪ್ರಪಂಚದಲ್ಲಿ ಅಲ್ಲಲ್ಲಿ ಉಳಿದುಕೊಂಡಿದೆ.

ಅದೇ ರೀತಿ ಮುಸ್ಲಿಂ ದೊರೆಗಳಾದ ಅಕ್ಬರ್ ಮಹಾಶಯನಿಂದ ಹಿಡಿದು ಮೈಸೂರಿನ ಅರಸ ಟಿಪ್ಪು ಸುಲ್ತಾನನವರೆಗೆ ಬಂದಂತಹ ರಾಜರುಗಳು ತಮ್ಮ ಧರ್ಮವನ್ನು ಯಾವ ಎತ್ತರಕ್ಕೆ ಬೆಳೆಸಿದರು ಎಂಬುದು ತಿಳಿದು ಬರುತ್ತದೆ. ವಿಜಯನಗರದ ಅರಸ ಎರಡನೇ ಪ್ರೌಢದೇವರಾಯ ಹಾಗೂ ಕೆಳದಿಯ ಅರಸರು ಲಿಂಗಾಯತ ಧರ್ಮದ ಏಳಿಗೆಗಾಗಿ ಶ್ರಮಿಸಿದ್ದು ಕೂಡ ಪ್ರಶಂಶನಿಯವಾಗಿದೆ.

ಬಸವ ಪರ ಸಂಘಟನೆಗಳು ತಮ್ಮತನವನ್ನು ಬಿಡದೆ ಬೇರೆಯವರನ್ನು ಬಯ್ಯದೆ, ಅವಮಾನಿಸದೆ ಜಾಣ ನಡೆಯೊಂದಿಗೆ ಹೆಜ್ಜೆ ಹಾಕಬೇಕು. ಅವಕಾಶ ಸಿಕ್ಕಾಗ ಅಥವಾ ಸನ್ನಿವೇಶಗಳನ್ನು ಸೃಷ್ಟಿಸಿಕೊಂಡಾದರೂ ತತ್ವ ಪ್ರಸಾರ ಮಾಡಬೇಕು.

ಸಾಕ್ಷಾತ್ ಬಸವ ತಂದೆ ಬಿಜ್ಜಳನ ಪ್ರಧಾನಿಯಾಗಿ ಹೊಸ ಧರ್ಮಕ್ಕೆ ನಾಂದಿ ಹಾಡಲಿಲ್ಲವೇ?. ನಮ್ಮ ದೇಶದಲ್ಲಿ ಮತ್ತು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಸಾಮಾಜಿಕ ಹೋರಾಟಕ್ಕಾಗಿ ಹುಟ್ಟಿಕೊಂಡ ಸಂಘಟನೆಗಳು ರಾಜಕೀಯ ಪಕ್ಷವಾಗಿ ಬೆಳೆದು ಇಂದು ರಾಜ್ಯವನ್ನೇ ಆಳುತ್ತಿವೆ. ಆ ನಿಟ್ಟಿನಲ್ಲಿ ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕು.

2) ಇದಕ್ಕೆ ತರಬೇತಿಯ ಅಗತ್ಯವಿದೆಯೇ?

ಖಂಡಿತವಾಗಿಯೂ ತರಬೇತಿ ಮತ್ತು ಕಾರ್ಯಾಗಾರಗಳ ಅವಶ್ಯಕತೆ ಇದೆ. “ಬಸವ ತತ್ವ ಮತ್ತು ರಾಜಕೀಯ” ವಿಷಯವಾಗಿ ರಾಜಕೀಯದಲ್ಲಿ ಸಕ್ರಿಯವಾಗಿರುವವರಿಗೂ ಮತ್ತು ಬಸವ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿವವರಿಗೂ ತರಬೇತಿ ಮತ್ತು ಶಿಬಿರಗಳನ್ನು ಏರ್ಪಡಿಸಬೇಕು.

ರಾಜಕೀಯವೆಂದರೆ ವ್ಯವಹಾರವಲ್ಲ. ಅದೊಂದು ಸೇವೆಯ ಮಾರ್ಗ. ಜಾತಿ ಭಾವನೆ, ಅಸ್ಪೃಶ್ಯತೆಯ ಕರಾಳತೆ, ವರ್ಗ ಮತ್ತು ಲಿಂಗ ತಾರತಮ್ಯ ಇವೆಲ್ಲವುಗಳನ್ನು ತೊಡೆದು ಹಾಕಲು ರಾಜಕೀಯ ಶಕ್ತಿಯಿಂದ ಸ್ವಲ್ಪಮಟ್ಟಿಗಾದರೂ ಸಾಧ್ಯವಾಗುತ್ತದೆ.

ಮೂಢನಂಬಿಕೆ ಮತ್ತು ಅನಿಷ್ಟ ಸಂಪ್ರದಾಯಗಳಿಂದ ಸಮಾಜ ಮುಕ್ತವಾಗಲು ರಾಜಕೀಯ ಪಕ್ಷ ಮತ್ತು ನಾಯಕರಿಗೆ ಬಸವ ತತ್ವದ ತಳಹದಿಯ ಮೇಲೆ ತರಬೇತಿಗಳನ್ನು ನೀಡಬೇಕು. ಅದರಲ್ಲಿ ಉದಯೋನ್ಮುಖ ಯುವ ರಾಜಕಾರಣಿಗಳ ಮನಃಪರಿವರ್ತಿಸಲು ಕಾರ್ಯಗಾರಗಳನ್ನು ಹಮ್ಮಿಕೊಳ್ಳಬೇಕು.

ನಾಡಿನ ಪರಮಪೂಜ್ಯರು ತಮ್ಮ ತಮ್ಮ ಪ್ರದೇಶಗಳಲ್ಲಿ ಜಾತ್ರೆಗಳನ್ನು ಮತ್ತು ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಆ ಸಂದರ್ಭಗಳಲ್ಲಿ ಆಯ್ದ ಪ್ರಭಾವಿ ರಾಜಕಾರಣಿಗಳಿಗೆ ಮತ್ತು ಬಸವ ಸಂಘಟನೆಯಲ್ಲಿದ್ದು ರಾಜಕೀಯವಾಗಿ ಗುರುತಿಸಿಕೊಂಡವರಿಗೆ ಮಾರ್ಗದರ್ಶನ ನೀಡುವ ಕೆಲಸವಾಗಬೇಕು. ಈ ಪ್ರಕ್ರಿಯೆ ನಾಡಿನ ನಾನಾ ಭಾಗಗಳಲ್ಲಿ ಒಂದಲ್ಲ ಒಂದು ಕಡೆ ನಡೆಯುತ್ತಲೇ ಇರಬೇಕು. ಹಾಗಾದರೆ ಒಂದಷ್ಟು ಸಮಾಜದಲ್ಲಿ ಸ್ವಾಸ್ಥ್ಯ ಬೆಳೆಯಲು ಸಹಕಾರಿಯಾಗುತ್ತದೆ.

3) ಬಸವಶಕ್ತಿ ಸಮಾವೇಶದ ರೂಪುರೇಷೆ ಬಗ್ಗೆ ನಿಮ್ಮ ಸಲಹೆ ಏನು?

ಬಸವ ಅಂದರೆನೇ ಶಕ್ತಿ! ಬಸವಳಿಯುವುದು ಅಂದರೆ ಶಕ್ತಿಗುಂದುವುದು ಎಂದು ಅರ್ಥ. ನಾವು ಬಸವಾನುಯಾಯಿಗಳು ಎನಿಸಿಕೊಂಡವರು ಯಾವತ್ತೂ ದಂಡಿಗೂ, ದಾಳಿಗೂ ಅಂಜದೆ ನಾಳೆ ಬಪ್ಪುದು ನಮಗಿಂದೇ ಬರಲಿ ಎನ್ನುವವರು. ಸದ್ಯ ನಾಡಿನಲ್ಲಿ ನಮ್ಮ ವಿರೋಧಿ ಅಲೆ ಎಬ್ಬಿಸಲು ಕೆಲ ಸಂಘಟನೆಯವರು ಮುಂದಾಗಿದ್ದಾರೆ.

ಅವರಿಗೆ ಪ್ರತಿರೋಧವಾಗಿ ಬಸವಾದಿ ಶರಣರ ಸಂದೇಶಗಳ ಸತ್ಯದರ್ಶನ ಮಾಡಿಸಲು ಬಸವಶಕ್ತಿ ಸಮಾವೇಶ ಅತ್ಯಂತ ಅಬ್ಬರವಾಗಿಯೇ ಮಾಡಲೇಬೇಕು. ಬಸವಶಕ್ತಿಯ ಸುನಾಮಿಗೆ ನಮ್ಮ ವಿರೋಧಿ ಗುಂಪು ಇಲ್ಲವಾಗಬೇಕು. ಅದಕ್ಕಾಗಿ ಬಸವ ತಂದೆಯ ಮಾರ್ಗದಲ್ಲಿ ಸಾಗಬೇಕು.

ಬಸವಣ್ಣನವರು ಉಳ್ಳವರತ್ತ ಹೋಗಲಿಲ್ಲ. ಅಂದಿನ ಮೇಲ್ಜಾತಿಯವರತ್ತ ಹೋಗಲಿಲ್ಲ. ಬದಲಾಗಿ ಈ ನಾಡಿನ ಬಹುಸಂಖ್ಯಾತರಾದ ತಳ ಸಮುದಾಯದತ್ತ ಹೋದರು. ಅವರ ಅಜ್ಞಾನ ಹಾಗೂ ಮನದ ಮೈಲಿಗೆ ತೊಳೆದು ಬದುಕಿನ ಅಸ್ಮಿತೆಯನ್ನು ತೋರಿಸಿಕೊಟ್ಟರು.

ಈಗಲೂ ಈ ನಾಡಿನಲ್ಲಿ ಬಸವಶಕ್ತಿ ಸಮಾವೇಶ ಯಶಸ್ವಿಯಾಗಬೇಕೆಂದರೆ ಈಗಿರುವ ಬಸವಾನುಯಾಯಿಗಳ ಜೊತೆಗೆ ಹಿಂದುಳಿದ, ದಲಿತ ಹಾಗೂ ಲಿಂಗಾಯತ ಉಪ ಪಂಗಡಗಳ ರಾಜ್ಯಮಟ್ಟದ ನಾಯಕರೊಂದಿಗೆ ನಾಲ್ಕಾರು ಪೂರ್ವ ಭಾವಿ ಸಭೆಗಳನ್ನು ಏರ್ಪಡಿಸಿ ಕಾರ್ಯಕ್ರಮದ ರೂಪರೇಷೆಗಳನ್ನು ತಯಾರು ಮಾಡಬೇಕು.

ಹಾಗೂ ಆಯಾ ಸಮುದಾಯಗಳ ಪೀಠಾಧಿಪತಿಗಳನ್ನು ಪೂರ್ವ ಭಾವಿ ಸಭೆಗಳಿಗೆ ಆಹ್ವಾನಿಸಿ ಅಭಿಪ್ರಾಯ ಸಂಘಟಿಸುವ ಜೊತೆಗೆ ಅವರ ಸಮುದಾಯವನ್ನು ಸಮಾವೇಶಕ್ಕೆ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು.

4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತ್ತಿರಾ?

ನಮ್ಮ ತಾಲೂಕಿನಿಂದ ಎಲ್ಲಾ ಬಸವಪರ ಸಂಘಟನೆಗಳ ಸರ್ವ ಸದಸ್ಯರ ಆದಿಯಾಗಿ ಕುಟುಂಬದ ಸದಸ್ಯರೊಂದಿಗೆ ಕನಿಷ್ಠ ನಾಲ್ಕನೂರರಿಂದ ಐದು ನೂರು ಜನ ಬಂದೇ ಬರುತ್ತೇವೆ.

5) ಸಮಾವೇಶ ಸಂಘಟಿಸಲು ನೆರವಾಗಲು ಆಸಕ್ತಿಯಿದೇಯೇ?

ನಾವು ಈ ಹಿಂದೆಯೂ ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸುವಲ್ಲಿ ಕೈಜೋಡಿಸಿದ್ದೇವೆ. ಮುಂದೆಯೂ ನಾನು ಮತ್ತು ನಮ್ಮ ಬಸವ ಬಂಧುಗಳು ನೂರಕ್ಕೆ ನೂರರಷ್ಟು ಸಂಘಟನೆಗೆ ಸಹಕರಿಸುತ್ತೇವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *