‘ವಿಜಯನಗರವು ವಚನ ಸಂಬಂಧಿ ವಿದ್ವತ್ ಚಟುವಟಿಕೆಗಳ ಕೇಂದ್ರವಾಗಿತ್ತು’

ಹೊಸಪೇಟೆ:

ವಿಜಯನಗರ ಮಹಾವಿದ್ಯಾಲಯದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಡಾ. ಬಸವರಾಜ ಮಲಶೆಟ್ಟಿ ಮಾನವೀಯತೆಯ ವಿದ್ವಾಂಸರಾಗಿದ್ದರು ಎಂದು ಶರಣ ಚಿಂತಕರಾದ ಡಾ. ಎಸ್. ಶಿವಾನಂದ ಅಭಿಪ್ರಾಯಪಟ್ಟರು.

ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ವಿಜಯನಗರ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ಧ “ಡಾ. ಬಸವರಾಜ ಮಲಶೆಟ್ಟಿ ದತ್ತಿ” ನಿಧಿಯ ವಿಚಾರಗೋಷ್ಠಿಯಲ್ಲಿ ಸಮಾರೋಪ ನುಡಿಗಳನ್ನಾಡಿದರು.

 ಡಾ. ಬಸವರಾಜ ಮಲಶೆಟ್ಟಿಯವರ ಬದುಕು-ಸಾಹಿತ್ಯ ಎಂಬ ವಿಷಯದ ಮೇಲೆ ಡಾ. ಡಿ. ಬಸವರಾಜ ಹಾಗೂ ಹಂಪಿ ಪರಿಸರದ ವಚನ ಸಾಹಿತ್ಯ ಎಂಬ ವಿಷಯ ಕುರಿತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮರಿಯಮ್ಮನಹಳ್ಳಿಯ ಕನ್ನಡ ಪ್ರಾಧ್ಯಾಪಕ ಡಾ. ಮೌನೇಶ ಬಡಿಗೇರ, ವಚನ ಸಾಹಿತ್ಯ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ, ಧಾರ್ಮಿಕ ಮತ್ತು ರಾಜಕೀಯ ಪರಿಪ್ರೇಕ್ಷೆಯಿಂದ ವಿಜಯನಗರದ ಕಾಲದಲ್ಲಿ ಅದರಲ್ಲೂ ಪ್ರೌಢದೇವರಾಯನ ಕಾಲದಲ್ಲಿ ಬಹುಮುಖಿ ಅಧ್ಯಯನಕ್ಕೆ ಒಳಪಟ್ಟಿತು ಎಂದರು.

ವಚನ ಸಾಹಿತ್ಯ ಮತ್ತು ಶರಣ ಚಳುವಳಿಯನ್ನು ತಮ್ಮ ಕಾವ್ಯದ ವಸ್ತುವನ್ನಾಗಿ ಮಾಡಿಕೊಂಡು ಹರಿಹರ, ರಾಘವಾಂಕ, ಭೀಮಕವಿ, ಚಾಮರಸರು ಉತ್ಕೃಷ್ಟ ಕಾವ್ಯಗಳನ್ನು ರಚಿಸಿದರು. ಏಕೆ ಈ ಕವಿಗಳು ವಚನಕಾರರನ್ನು ವಚನಗಳನ್ನು ತಮ್ಮ ಕಾವ್ಯದ ವಸ್ತುವನ್ನಾಗಿಸಿಕೊಂಡರು ಎಂದರೆ ವಚನಗಳು ಹೇಳುವ ಸಾಮಾಜಿಕ ಪರವಾದ ಮಾತುಗಳು ಚಳುವಳಿಯ ಸ್ವರೂಪ ತಾಳುತ್ತವೆ. ಈ ಕಾರಣದಿಂದ ಇವು ಸುದೀರ್ಘ ಇತಿಹಾಸದೊಂದಿಗೆ ನಮ್ಮೊಂದಿಗೆ ಉಳಿದು ಬಂದಿವೆ.

15ನೇ ಶತಮಾನದ ಪೂರ್ವಾರ್ಧದಲ್ಲಿ ಪ್ರೌಢದೇವರಾಯನ ಆಶ್ರಯದಲ್ಲಿ ಲಕ್ಕಣದಂಡೇಶ, ಜಕ್ಕಣಾರ್ಯರಂತಹ ಅಧಿಕಾರಿಗಳ ಪ್ರೋತ್ಸಾಹ, ಬೆಂಬಲಗಳಿಂದ ವಚನ ಸಂಕಲನ, ವ್ಯಾಖ್ಯಾನ ಕಾರ್ಯಗಳು ನಡೆದವು. ವಿಜಯನಗರವು ವಚನ ಸಂಬಂಧಿಯಾದ ವಿದ್ವತ್ ಚಟುವಟಿಕೆಗಳಿಗೆ ಕೇಂದ್ರವಾಗಿತ್ತು. ಮೊದಲ ವಚನ ಸಂಕಲನಕಾರನಾದ ಮಹಾಲಿಂಗದೇವನ ಏಕೋತ್ತರ ಷಟಸ್ಥಲದಿಂದ ಹಿಡಿದು ನೂರೊಂದು ವಿರಕ್ತರು ಈ ಕಾಲದಲ್ಲಿ ವಚನ ಸಾಹಿತ್ಯದಲ್ಲಿ ಮಾಡಿದ ಕಾರ್ಯ ಅದ್ವಿತೀಯವಾದುದು.

ನೂರೊಂದು ವಿರಕ್ತರಲ್ಲಿ ಒಬ್ಬರಾದ ಕಲ್ಲುಮಠದ ಪ್ರಭುದೇವರ ‘ಲಿಂಗಲೀಲಾ ವಿಲಾಸ ಚಾರಿತ್ರ’ವನ್ನು ಶರಣ ಚಾರಿತ್ರ್ಯ ‘ವಚನಾಗಮ’ ಎಂದು ವ್ಯಾಖ್ಯಾನಿಸಿದ್ದಾರೆ. ವಿಜಯನಗರದ ವಿರೂಪಾಕ್ಷನ ಕಾಲದಲ್ಲಿದ್ದ ತೋಂಟದ ಸಿದ್ಧಲಿಂಗಯತಿ ಕಲ್ಯಾಣಕ್ಕೆ ಸೀಮಿತವಾಗಿದ್ದ ಅನುಭವ ಮಂಟಪವನ್ನು ತಾವು ಸಂಚರಿಸಿದಲ್ಲೆಲ್ಲ ಅನುಭವ ಮಂಟಪದ ಸಂಕಥನವೇ ಜರಗುವಂತೆ ಮಾಡಿದರು. ಈ ನಿಟ್ಟಿನಲ್ಲಿ ಶಿವಗಣಪ್ರಸಾದಿ ಮಹಾದೇವಯ್ಯ, ಹಲಗೆಯದೇವ, ಗುಮ್ಮಳಾಪುರದ ಸಿದ್ದಲಿಂಗಯತಿ, ಗೂಳೂರು ಸಿದ್ಧವೀರಣ್ಣೊಡೆಯ ಇವರು ಮಾಡಿದ ವಚನ ಸಾಹಿತ್ಯದ ಶೂನ್ಯ ಸಂಪಾದನಾ ಕಾರ್ಯ ಘನವಾದದ್ದು.

ಒಟ್ಟಿನಲ್ಲಿ 12ನೇ ಶತಮಾನದ ವಚನಕಾರರು ಮತ್ತು ವಚನಗಳನ್ನು ವಿಜಯನಗರ ಕಾಲದ ಕವಿಗಳಲ್ಲಿ ನಾವು ನೋಡಬಹುದು. ವಚನಕಾರರು ವಚನಗಳನ್ನು ರಚಿಸಿ ಶ್ರೇಷ್ಠರಾದಂತೆ ವಿಜಯನಗರ ಕಾಲದ ಕವಿಗಳು ವಚನಗಳ ಚರಿತ್ರೆ ನಿರ್ಮಾಣ ಕಾರ್ಯ, ಸಂಕಲನ, ಸಂಪಾದನಾ ಕಾರ್ಯಗಳನ್ನು ಮಾಡಿ ವಚನ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ ಎಂದು ಬಡಿಗೇರ ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ವಿಜಯನಗರ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಕೆ. ರವೀಂದ್ರನಾಥ ಅವರು ಮಾತನಾಡಿದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಘಟಕದ ಅಧ್ಯಕ್ಷರಾದ ಮಾವಿನಹಳ್ಳಿ ಬಸವರಾಜ, ಕೋರಿಶೆಟ್ಟಿ ಲಿಂಗಪ್ಪ, ಶಿವಾನಂದ ಕಿನ್ನಾಳ, ಗೊಗ್ಗ ಚನ್ನಬಸವರಾಜು, ಕಾಮರೆಡ್ಡಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

 ಕಾರ್ಯಕ್ರಮವನ್ನು ಆಡಳಿತ ಮಂಡಳಿ ಅಧ್ಯಕ್ಷರಾದ ಎನ್. ಮಲ್ಲಿಕಾರ್ಜುನ ಮೆಟ್ರಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಮಹಾಂತೇಶ ಆರಾಧ್ಯಮಠ ಅವರು ವಹಿಸಿದ್ದರು. ಡಾ. ಗಾದೆಪ್ಪ ಅವರು ಸ್ವಾಗತಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *